ಮುಂದಿನ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಗೆ 2023ರ ಮೇ 20ರಂದು ರಿಸಲ್ಟ್ ಸಿಕ್ಕಿದ್ದರೂ.. ಪ್ರಶ್ನೆಗಳು ಹಾಗೆಯೇ ಇವೆ. ಮುಂದಿನ ಸಿಎಂ ಯಾರು.. ಯಾರಾಗಬೇಕು ಎಂಬ ಪ್ರಶ್ನೆ. ಎಲ್ಲ ಒಳಪಟ್ಟು, ತಂತ್ರಗಳ ನಡುವೆ ಮತಕ್ಕೆ ಹಾಕುವ ಬಗ್ಗೆ, ಶಾಸಕರ ಅಭಿಪ್ರಾಯ ಸಂಗ್ರಹ ಮಾಡುವ ಬಗ್ಗೆಯೂ ಚರ್ಚೆಯಾಗುತ್ತಿದೆ. ವಿಶೇಷ ಎಂದರೆ.. ಇಲ್ಲಿ ಸಿದ್ದರಾಮಯ್ಯ ಬಣದವರು ಧ್ವನಿ ಮತಕ್ಕೆ ಜೈ ಎನ್ನುತ್ತಿದ್ದರೆ, ಡಿಕೆ ಬಣದವರು ಗೌಪ್ಯ ಮತದಾನಕ್ಕೆ ಓಕೆ ಎನ್ನುತ್ತಿದ್ದಾರೆ. ಇಷ್ಟಕ್ಕೂ ಡಿಕೆ ಶಿವಕುಮಾರ್ ಇಂಥಾದ್ದೊಂದು ಸಲಹೆ ಕೊಟ್ಟವರು ಯಾರು ಎಂದು ನೋಡಿದರೆ ಕುತೂಹಲವಾಗುವುದು ಸಹಜ.
ಸಿದ್ದರಾಮಯ್ಯ ಟೀಂನ ಬಹಿರಂಗ ಒತ್ತಾಯ :
ಸಿದ್ದರಾಮಯ್ಯ ಟೀಂನಲ್ಲಿರುವ ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಪರಮೇಶ್ವರ್, ಜಮೀರ್ ಅಹ್ಮದ್, ಎಚ್‌ಸಿ ಮಹದೇವಪ್ಪ.. ಮೊದಲಾದವರೆಲ್ಲ ಬಹಿರಂಗವಾಗಿ ಸಿದ್ದರಾಮಯ್ಯ ಅವರಿಗೆ ಶಾಸಕರ ಬೆಂಬಲ ಇದೆ ಎನ್ನುತ್ತಿದ್ದಾರೆ. ಕೆಎನ್ ರಾಜಣ್ಣ ಇನ್ನೂ ಒಂದು ಹೆಜ್ಜೆ ಮುಂದೆ ಸಿಎಂ ಆಯ್ಕೆ ಮಾಡುವುದು ಶಾಸಕರೇ ಹೊರತು, ಹೈಕಮಾಂಡ್ ಅಲ್ಲ. ಶಾಸಕರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಿ ಎನ್ನುತ್ತಿದ್ದಾರೆ. ಅಷ್ಟೇ ಯಾಕೆ.. ವಿಧಾನಸಭೆ ವಿಸರ್ಜನೆ ಮಾಡಿ, ಡಿಕೆ ನೇತೃತ್ವದಲ್ಲಿ ಎಲೆಕ್ಷನ್ನಿಗೆ ಹೋಗೋಣ ಎಂಬ ಚಾಲೆಂಜ್ʻನ್ನೂ ಹಾಕಿದ್ದಾರೆ.
ಡಿಕೆ ಟೀಂನಿಂದ ಗೌಪ್ಯ ಮತದಾನಕ್ಕೆ ಆಗ್ರಹ :
ಅದೇನೇ ತಿಪ್ಪರಲಾಗ ಹಾಕಿದರೂ.. ಡಿಕೆ ಶಿವಕುಮಾರ್ ಅವರ ಪರ ಗಟ್ಟಿಯಾಗಿ ನಿಂತಿರುವ ಶಾಸಕರ ಸಂಖ್ಯೆ 20 ದಾಟ್ತಾ ಇಲ್ಲ. ಈ ನಡುವೆ ಪದೇ ಪದೇ ಹೈಕಮಾಂಡ್ ಅಂತಿದ್ದ ಡಿಕೆ ಶಿವಕುಮಾರ್, ಇದ್ದಕ್ಕಿದ್ದಂತೆ ಗೌಪ್ಯ ಮತದಾನ ಕೇಳುತ್ತಿರುವುದು ವಿಶೇಷವಾಗಿದೆ.
ಡಿಕೆಗೆ ಗೌಪ್ಯ ಮತದಾನದ ಸಲಹೆ ಕೊಟ್ಟಿದ್ದು ತಟಸ್ಥ ಬಣದ ನಾಯಕರು..!
ಅಂದರೆ ತಾವು ಸಿದ್ದರಾಮಯ್ಯ ಪರ ಇಲ್ಲ, ಡಿಕೆ ಪರವೂ ಇಲ್ಲ. ಹೈಕಮಾಂಡ್ ಏನು ಹೇಳಿದರೆ.. ಅದನ್ನು ಫಾಲೋ ಮಾಡ್ತೇವೆ ಎನ್ನುತ್ತಿರುವ ನಾಯಕರು, ಡಿಕೆ ಶಿವಕುಮಾರ್ ಅವರಿಗೆ ಗೌಪ್ಯ ಮತದಾನದ ಸಲಹೆ ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಮೂಲ ಕಾಂಗ್ರೆಸ್ಸಿಗರು. ಸಿದ್ದರಾಮಯ್ಯ ವಲಸೆ ಬಂದವರು. ಸಿದ್ದು ಜೊತೆಯಲ್ಲಿರುವ ಜಮೀರ್, ಮಹದೇವಪ್ಪ, ಕೆಎನ್ ರಾಜಣ್ಣ, ಸತೀಶ್ ಜಾರಕಿಹೊಳಿ.. ಎಲ್ಲರೂ ಸಿದ್ದು ಪರಿವಾರದವರು. ಜನತಾ ದಳ ಮೂಲದವರು. ಇದು ಸಹಜವಾಗಿಯೇ ಮೂಲ ಕಾಂಗ್ರೆಸ್ಸಿಗರ ಕಣ್ಣು ಕೆಂಪಗಾಗಿಸಿದೆ. ಆದರೆ ಹೇಳೋಕೆ ಆಗಲ್ಲ. ಬಿಡೋ ಹಾಗೂ ಇಲ್ಲ.
ಧ್ವನಿ ಮತ ಆದರೆ ಹಾಲಿ ಸಿಎಂ ಆಗಿರುವ ಸಿದ್ದರಾಮಯ್ಯ ವಿರುದ್ಧ ಏನೂ ಮಾತನಾಡೋಕೆ ಆಗಲ್ಲ. ವಿರುದ್ಧವಾಗಿ ಕೈ ಎತ್ತೋಕೆ ಆಗಲ್ಲ. ರಿಜಿಸ್ಟರ್ ಆಗಿ ಬಿಡುತ್ತೇವೆ. ಗೌಪ್ಯ ಮತದಾನವಾದರೆ ಗೊಂದಲ ಇಲ್ಲ. ಯಾರು ಯಾರಿಗೆ ವೋಟ್ ಹಾಕಿದೆವು ಅನ್ನೋದು ಗೊತ್ತಾಗಲ್ಲ. ಹಾಗಾದರೆ ಮೂಲ ಕಾಂಗ್ರೆಸ್ಸಿಗರೆಲ್ಲ ನಿಮಗೇ ವೋಟ್ ಹಾಕ್ತಾರೆ ಎಂದು ಸಲಹೆ ಕೊಟ್ಟಿದ್ದಾರೆ.
ಗೌಪ್ಯ ಮತದಾನದಲ್ಲಿ ತಟಸ್ಥ ಶಾಸಕರ ಸೇಫ್ಟಿ ಗೇಮ್ ಕೂಡಾ ಇದೆ. ಯಾರು ಗೆಲ್ಲುತ್ತಾರೋ.. ಅವರಿಗೇ ಜೈ ಎನ್ನುವುದು, ನಾವು ನಿಮಗೇ ವೋಟ್ ಹಾಕಿದ್ದೋ ಎಂದು ಮ್ಯಾನೇಜ್ ಮಾಡುವ ಆಟವೂ ಇದೆ. ಇದಕ್ಕೆಲ್ಲ ಶನಿವಾರ ಕ್ಲೈಮಾಕ್ಸ್ ಆಗುವ ನಿರೀಕ್ಷೆ ಇದೆ.



