‘ಭೈರತಿ ರಣಗಲ್’ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಆರೋಗ್ಯ ಸಮಸ್ಯೆ ಎದುರಾಗಿದ್ದರೂ ಶಿವಣ್ಣ ಅದೆಲ್ಲವನ್ನೂ ಲೆಕ್ಕಿಸದೆ ಬಿಡುವಿಲ್ಲದೆ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿವಣ್ಣ ಇರುವ ಸ್ಥಿತಿಯಲ್ಲಿ ಬಹುಶ: ಬೇರೆ ಯಾರೇ ಇದ್ದರೂ ಅದು ಅವರನ್ನು ಕುಗ್ಗಿಸಿಬಿಡುತ್ತಿತ್ತೋ ಏನೋ.. ಆದರೆ, ಶಿವಣ್ಣ ಧೈರ್ಯಕ್ಕೆ ಚಿತ್ರರಂಗ ಅಷ್ಟೇ ಅಲ್ಲ. ಅವರ ಅಭಿಮಾನಿಗಳೂ ಶಾಕ್ ಆಗಿದ್ದಾರೆ. ಆದರೆ ಶಿವಣ್ಣ ಧೈರ್ಯ ನೋಡಿ ಉತ್ಸಾಹ ತುಂಬಿಕೊಂಡಿದ್ದಾರೆ. ಹಾಗಾದರೆ ಶಿವಣ್ಣ ಆರೋಗ್ಯ ಈಗ ಹೇಗಿದೆ..?
ಶಿವಣ್ಣ ತಮ್ಮ ದೈನಂದಿನ ಕೆಲಸವನ್ನು ಮಾಡುತ್ತಿದ್ದಾರೆ. ವಾಕಿಂಗ್, ಸಿನಿಮಾ ಆಕ್ಟಿವಿಟಿ ಯಾವುದನ್ನೂ ಬಿಟ್ಟಿಲ್ಲ. ಒಂದು ಕಡೆ ಭೈರತಿ ರಣಗಲ್ ಪ್ರಚಾರ, ದಿನ ದಿನವೂ ಸಂದರ್ಶನಗಳನ್ನು ಕೊಡುತ್ತಲೇ ಇರುವ ಶಿವರಾಜ್ ಕುಮಾರ್, ಶ್ರೀರಂಗಪಟ್ಟಣ, ತುಮಕೂರಿನಲ್ಲಿ ನಡೆದ ಕಾರ್ಯಕ್ರಮಗಳಿಗೂ ಹೋಗಿ ಬಂದಿದ್ದಾರೆ. ಝೀ ಕನ್ನಡಕ್ಕೆ ಮಾಡಿಕೊಡುತ್ತಿರುವ ಡಾನ್ಸ್ ಕರ್ನಾಟಕ ಡಾನ್ಸ್ ಶೋ ಮಿಸ್ ಮಾಡಿಲ್ಲ. ವಾರಕ್ಕೆ ಒಂದು ದಿನ ಆ ಕಾರ್ಯಕ್ರಮದ ಚಿತ್ರೀಕರಣ ಇರುತ್ತದೆ. ಅದನ್ನು ಮಿಸ್ ಮಾಡಿಲ್ಲ. ಇದರ ಜೊತೆ ಡೈಲಿ 8 ರಿಂದ 10ಕಿಮೀ ವಾಕಿಂಗ್ ಮಾಡ್ತಿದ್ದಾರಂತೆ.
ಚಿಕಿತ್ಸೆಯ ಹಂತದಲ್ಲಿಯೂ ಶಿವಣ್ಣ ವಾಕಿಂಗ್ ಅನ್ನು ಬಿಟ್ಟಿಲ್ಲ. ಈಗಲೂ ಸ್ನೇಹಿತರೊಂದಿಗೆ ಏಳೆಂಟು ಕಿಲೋ ಮೀಟರ್ ವಾಕಿಂಗ್ ಮಾಡುತ್ತಾರೆ. ಸುಸ್ತಾಗುತ್ತಿದೆ ಅಂತ ಅನಿಸಿದಾಗ ಮತ್ತೆ ಶಿವಣ್ಣ ವಾಪಸ್ ಬಂದು ಬಿಡುತ್ತಾರೆ. ಇದು ಶಿವಣ್ಣನ ವಿಲ್ ಪವರ್.
ಸೆಂಚುರಿ ಸ್ಟಾರ್‌ಗೆ ಈಗಾಗಲೇ ಎರಡು ಹಂತದ ಚಿಕಿತ್ಸೆ ನಡೆದಿದೆ. ಇನ್ನೂ ಎರಡು ಹಂತದ ಚಿಕಿತ್ಸೆ ನಡೆಯುತ್ತಿದೆ. ಈ ಟ್ರೀಟ್ಮೆಂಟ್ ಮುಗಿಯುತ್ತಿದ್ದಂತೆ ಶಿವಣ್ಣ ಶಸ್ತ್ರ ಚಿಕಿತ್ರೆಗೆ ಅಮೆರಿಕಗೆ ಹೋಗುತ್ತಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ. ಇಲ್ಲಿ ನಡೆಯುತ್ತಿರುವ ಚಿಕಿತ್ಸೆ ಹಾಗೂ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಅಮೆರಿಕ ವೈದ್ಯರೊಂದಿಗೆ ಮಾತಾಡಿದ್ದಾರೆ. ಅಲ್ಲಿನ ವೈದ್ಯರು ಶಸ್ತ್ರ ಚಿಕಿತ್ಸೆ ಬಗ್ಗೆ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಅಮೆರಿಕದ ವೈದ್ಯರೊಂದಿಗೆ ಮಾತಾಡಿದ್ದು, ” ನೀವು ಆರೋಗ್ಯವಾಗಿ ವಾಪಸ್ ಬರುತ್ತೀರ” ಎಂದು ಹೇಳಿದ್ದಾರಂತೆ. ಬೆಂಗಳೂರಿನಲ್ಲಿ ಶಿವಣ್ಣ ಅವರನ್ನು ನೋಡಿಕೊಳ್ತಿರೋದು ಡಾ.ಶಶಿಧರ್ ಹಾಗೂ ಡಾ.ಬಿಕೆ ಶ್ರೀನಿವಾಸ್ ಎಂಬ ಇಬ್ಬರು ವೈದ್ಯರು.
ಈ ಇಬ್ಬರೂ ಅಮೆರಿಕದ ವೈದ್ಯರ ಜೊತೆ ಸಂಪರ್ಕದಲ್ಲಿದ್ದಾರೆ. ಶಸ್ತ್ರ ಚಿಕಿತ್ಸೆಗೂ ಮುನ್ನ ಶಿವಣ್ಣನ ಆರೋಗ್ಯವನ್ನು ನಿಗಾ ಮಾಡುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಶಿವಣ್ಣ ಅವರಿಗೆ ಅನಾರೋಗ್ಯ ಇದೆ ಎಂದು ಗೊತ್ತಾಗುತ್ತಿದ್ದಂತೆ ಚಿತ್ರರಂಗದ ನಟ, ನಟಿ, ತಂತ್ರಜ್ಞರು ತಲ್ಲಣಗೊಂಡಿದ್ದಾರೆ. ಇಂತಹವರು ಕರೆ ಮಾಡಲಿಲ್ಲ ಎಂದು ಹೇಳೋ ಹಾಗೇ ಇಲ್ಲ. ಯಶ್ ಅವರಂತೂ ಟೆನ್ಷನ್ನಾಗಿದ್ದರು. ಡಾಲಿ ಧನಂಜಯ, ಸುದೀಪ್, ದುನಿಯಾ ವಿಜಯ್, ಉಪೇಂದ್ರ.. ಹೀಗೆ ಇಂತಹವರು ಕರೆ ಮಾಡಿಲ್ಲ ಎಂದು ಹೇಳುವಂತಿಲ್ಲ. ಕೆಲವರು ಖುದ್ದು ಮನೆಗೂ ಬಂದು ವಿಚಾರಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಗುಣಮುಖನಾಗುತ್ತಿದ್ದೇನೆ. ಜನವರಿ ಹೊತ್ತಿಗೆಲ್ಲ ವಾಪಸ್ ಬರ್ತೇನೆ. ಮತ್ತೆ ಶೂಟಿಂಗ್ ಶುರುವಾಗುತ್ತದೆ. ಈ ಪ್ರಾಬ್ಲಂ ಗೊತ್ತಾದ ನಂತರ 45 ಚಿತ್ರದ ಚಿತ್ರೀಕರಣವೂ ಆಗಿದೆ. ರವಿವರ್ಮ ಅವರು ಸ್ಟಂಟ್ ದೃಶ್ಯಗಳನ್ನು ಸ್ವಲ್ಪ ಬದಲಾಯಿಸೋಣ ಎಂದರೂ, ನೋ ಪ್ರಾಬ್ಲಂ ಮಾಡೋಣ ಎಂದು ಮಾಡಿದೆ. ಕೆಲಸದಲ್ಲಿ ಕಾಂಪ್ರಮೈಸ್ ಆಗಿಲ್ಲ. 45 ಕೂಡಾ ಚೆನ್ನಾಗಿ ಬಂದಿದೆ ಎಂದು ತಿಳಿಸಿದ್ದಾರೆ.
ಆದರೆ ಶಿವಣ್ಣ ಅವರ ಅನಾರೋಗ್ಯದ ಕಾರಣ ಉತ್ತರಕಾಂಡ ಚಿತ್ರದ ಚಿತ್ರೀಕರಣವನ್ನು ಸದ್ಯಕ್ಕೆ ಕೈಬಿಡಲಾಗಿದೆ ಎಂಬ ಸುದ್ದಿ ಇದೆ.



