ಸಿನಿಮಾ ಎಂದ ಮೇಲೆ ಅಲ್ಲಿ ಮೋಸ ಇದ್ದದ್ದೇ. ತೆರೆಯ ಮೇಲೆ ಬೊಂಬಾಟ್ ಭಾಷಣ ಬಿಗಿಯೋ ನಟ, ನಿರ್ಮಾಪಕರು.. ತೆರೆಯ ಹಿಂದೆ ಕೈ ಎತ್ತೋದೇ ಜಾಸ್ತಿ. ಕನ್ನಡದಲ್ಲಿ ಒಪ್ಪಿಕೊಂಡ ಸಂಭಾವನೆಯನ್ನು ಸರಿಯಾಗಿ ಕೊಟ್ಟ ಸಂಸ್ಥೆಗಳ ಸಂಖ್ಯೆ ಕಡಿಮೆ ಎಂದೇ ಹೇಳಬೇಕು. ಸಿನಿಮಾ ಸೋಲಲಿ.. ಗೆಲ್ಲಲಿ.. ಕೆಲವು ಸಂಸ್ಥೆಗಳು ಒಪ್ಪಿಕೊಂಡ ದುಡ್ಡಿಗೆ ಮೋಸ ಮಾಡಲ್ಲ. ರವಿಚಂದ್ರನ್ ಅವರ ಈಶ್ವರಿ, ಡಾ.ರಾಜ್ ಕುಟುಂಬದವರ ಸಂಸ್ಥೆಗಳು, ಜಯಣ್ಣ ಬ್ಯಾನರ್, ಹೊಂಬಾಳೆ.. ಮೊದಲಾದವರು ಅದಕ್ಕೆ ವಿಭಿನ್ನವಾಗಿ ನಿಲ್ಲುತ್ತಾರೆ. ನಟ ದರ್ಶನ್ ಅವರಿಗೆ ನಿರ್ಮಾಪಕರ ಮೇಲೆ ಡೌಟ್ ಬಂದರೆ.. ಎಲ್ಲರ ಸಂಭಾವನೆ ಕ್ಲಿಯರ್ ಆಗಿದೆ ಎಂದು ಗೊತ್ತಾದ ಮೇಲೆಯೇ ಡಬ್ಬಿಂಗ್ ಮಾಡ್ತಾರೆ. ಹೀಗಾಗಿ ಅವರು ನಟಿಸಿದ ಚಿತ್ರಗಳಲ್ಲಿ ಮೋಸವಾಗುವುದು ಕಡಿಮೆ. ಉಳಿದಂತೆ.. ಮೋಸ ಹೋಗುವವರೇ ಹೆಚ್ಚು.
ಕನ್ನಡ ಚಿತ್ರರಂಗ ನಡೆಯುವುದು ನಂಬಿಕೆಯ ಮೇಲೆ. ಇಲ್ಲಿ ಅಗ್ರಿಮೆಂಟ್ಸ್, ಕಾಂಟ್ರ್ಯಾಕ್ಟ್ ಪೇಪರ್ಸ್ ಕಡಿಮೆ. ಫೈನಾನ್ಷಿಯರುಗಳನ್ನು ಬಿಟ್ಟರೆ.. ಉಳಿದವರು ಕೈ ಎತ್ತೋದೇ ಜಾಸ್ತಿ. ಅಂತಹ ಅನುಭವ ಬ್ಯಾಂಗಲ್ ಬಂಗಾರಿ ಸಂಜನಾ ಆನಂದ್ ಅವರಿಗೂ ಆಗಿದೆಯಂತೆ. ಪ್ರಕಾಶ್ ಬೆಳವಾಡಿ ಹೇಳಿದ್ದದ್ದು ಸುಳ್ಳಲ್ಲ.
ʻಬ್ಯಾಂಗಲ್ ಬಂಗಾರಿʼಗೆ 10 ಲಕ್ಷಕ್ಕೆ ನಾಮ..!
ಸಂಜನಾ ಆನಂದ್ ಐಟಿ ಉದ್ಯೋಗದಲ್ಲಿದ್ದವರು. ಅದನ್ನು ಬಿಟ್ಟು ಸಿನಿಮಾವನ್ನೇ ನಂಬಿಕೊಂಡು ನಟಿಯಾಗಬೇಕು ಎಂದು ಬಂದವರು. ಅಂತಹವರಿಗೆ ಒಬ್ಬ ಸಿನಿಮಾ ಮಾಡಿದ್ದಾನಂತೆ. ಅದೂ ಸಿನಿಮಾ ಮಾಡ್ತಿದ್ದೇನೆ ಎಂದವರಿಗೆ ಹಣ ಕೊಟ್ಟು ಮೋಸ ಹೋಗಿದ್ದಾರಂತೆ ಸಂಜನಾ.
ಆರಂಭದಲ್ಲಿ ನಟಿಸಿದ್ದ ಸಿನಿಮಾವೊಂದಕ್ಕೆ, ಸಿನಿಮಾ ಮುಗಿದ ಮೇಲೆ ಪೇಮೆಂಟ್ ಕೊಡಲಿಲ್ಲ ಎಂದಿದ್ದಾರೆ ಸಂಜನಾ. ಆಗ ನನ್ನ ಬಳಿಯೂ ಹಣ ಇರಲಿಲ್ಲ, ಐಟಿ ಕೆಲಸಕ್ಕೂ ಗುಡ್‌ಬೈ ಹೇಳಿದ್ದೆ ಎಂದಿರುವ ಸಂಜನಾ, ನಾನು ಮುಂಚೆಯೇ ಹಣ ತಗೊಂಡು ಅಗ್ರಿಮೆಂಟ್ ಮಾಡಿಕೊಳ್ಳಬೇಕಿತ್ತು. ಕೋವಿಡ್ ಸಮಯ ಆದ ಕಾರಣ ನನ್ನ ಬಳಿಯೂ ಹಣ ಇರಲಿಲ್ಲ. ಐಟಿ ಕೆಲಸ ಮಾಡುತ್ತಿದ್ದಾಗ 10 ಲಕ್ಷ ಸೇವಿಂಗ್ಸ್ ಇತ್ತು. ನಾನು ಸಿನಿಮಾ ಮಾಡಬೇಕು, ಕಷ್ಟ ಅಂದಿದಕ್ಕೆ ಆ ಹಣ ಕೊಟ್ಟೆ. ಆದರೆ ವಾಪಸ್ ಕೇಳಿದಾಗ ಕೊಡಲ್ಲ ಏನಿವಾಗ? ಅಂದ್ರು. ಅದು ಕೂಡ ಕೋವಿಡ್ ಟೈಮ್‌ನಲ್ಲಿ.. ಎಂದು ಹೇಳಿಕೊಂಡಿದ್ದಾರೆ ಸಂಜನಾ ಆನಂದ್.
ಅಂದ ಹಾಗೆ ಸಂಜನಾ ಆರಂಭದ ದಿನಗಳಲ್ಲಿ ನಟಿಸಿದ್ದ ಚಿತ್ರಗಳನ್ನು ನೆನಪು ಮಾಡಿಕೊಳ್ಳಿ. ಏಕೆಂದರೆ..ಸಂಜನಾ ತಮಗೆ ಮೋಸ ಮಾಡಿದ ನಟನ ಹೆಸರು ಹೇಳೋದಿಲ್ಲ.
ಸದ್ಯಕ್ಕೆ ಅವರ ರಿಲೀಸ್ ಆಗಿರುವ ಎಕ್ಕ ಭರ್ಜರಿ ಹಿಟ್ ಆಗಿದೆ. ಯುವರಾಜ್ ಕುಮಾರ್ ಅವರಿಗೆ ಸಕ್ಸಸ್ ಕೊಟ್ಟಿದೆ. ಫ್ಯಾನ್ಸ್ ʻಬ್ಯಾಂಗಲ್ ಬಂಗಾರಿʼ ಜಪ ಮಾಡ್ತಿದ್ದಾರೆ. ಈ ನಡುವೆಯೇ ಸಂಜನಾ ಆನಂದ್ ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಎಕ್ಕ ಚಿತ್ರದ ಫುಲ್ ಪೇಮೆಂಟ್ ಬಂದಿದೆ.
ಇನ್ನೊಬ್ಬ ನಟನ ಬಗ್ಗೆಯೂ ಹೇಳ್ಕೊಂಡಿದ್ದಾರೆ. ನಾನು ಒಬ್ಬ ನಟರ ಜೊತೆ ನಟಿಸಿದೆ. ಅವರ ಜೊತೆ ನಟಿಸೋಕೆ ಒಪ್ಪಿದಾಗ.. ಅಯ್ಯೋ.. ಅವರ ಜೊತೆನಾ.. ಅದು ಸೇಫ್ ಅಲ್ಲ ಎಂದೆಲ್ಲ ಹೇಳಿದ್ರು. ಆದರೂ ನಟಿಸಿದೆ. ಹಾಗೇನೂ ಇರಲಿಲ್ಲ. ನನಗೆ ಆ ಸಿನಿಮಾದಲ್ಲಿ ಒಳ್ಳೆಯ ಅನುಭವವಾಯ್ತು. ತುಂಬಾ ಗೌರವಯುತವಾಗಿ ನಡೆದುಕೊಂಡರು ಎಂದಿರುವ ಅವರು.. ಅವರ ಹೆಸರನ್ನೂ ಹೇಳಿಕೊಂಡಿಲ್ಲ.
ಕನ್ನಡದಲ್ಲಿ ಒಬ್ಬ ನಟನ ಜೊತೆ ನಟಿಸುವ ನಟಿಯರ ಬಗ್ಗೆ ಆತ ಸೇಫ್ ಅಲ್ಲ ಎಂಬ ಮಾತು ಚಾಲ್ತಿಯಲ್ಲಿದೆ. ಈಗ ಸಂಜನಾ ನಟಿಸಿರುವ ಅಷ್ಟೂ ಚಿತ್ರಗಳ ಹೀರೋ ಯಾರು.. ಇಂಡಸ್ಟ್ರಿಯಲ್ಲಿ ಆ ಕೆಟ್ಟ ಹೆಸರು ಪಡೆದಿರುವ ನಟ ಈ ಲಿಸ್ಟಿನಲ್ಲೇ ಇದ್ಧಾರೆ. ಹುಡುಕುವುದು…ಗುರುತಿಸುವುದು ನಿಮಗೇ ಬಿಟ್ಟಿದ್ದು.
ಅಂದಹಾಗೆ ಸಂಜನಾ ಇದುವರೆಗೆ ನಟಿಸಿರುವ ಚಿತ್ರಗಳು ಇವು. ಕೆಮಿಸ್ಟ್ರಿ ಆಫ್ ಕರಿಯಪ್ಪ. ಕುಷ್ಕ, ಸಲಗ,
ಶೋಕಿವಾಲ, ವಿಂಡೋ ಸೀಟ್, ರಾಯಲ್ ಹಾಗೂ ಎಕ್ಕ.
ನಡುವೆ ಒಂದು ತೆಲುಗು ಸಿನಿಮಾದಲ್ಲೂ ನಟಿಸಿದ್ದಾರೆ.



