ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಕ್ಷಣ ದವರೆಗೆ ಯಾವುದೇ ಒಪ್ಪಂದ ಆಗಿಲ್ಲ. ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಒಪ್ಪಂದ ನಡೆದಿಲ್ಲ ಇಂಥಾದ್ದೊಂದು ಹೇಳಿಕೆ ಕೊಟ್ಟಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ಚನ್ನಪಟ್ಟಣ ತಮ್ಮದು ಹಾಗೂ ತಮ್ಮ ಪಕ್ಷಕ್ಕೆ ಸೇರಿದ್ದು ಎಂಬ ಸಂದೇಶ ಕೊಟ್ಟಿದ್ದಾರೆ. ಅತ್ತ ಬಿಜೆಪಿಯಲ್ಲಿ ಸಿಪಿ ಯೋಗೇಶ್ವರ್ ಕಸರತ್ತು ಮುಗಿದಿಲ್ಲ. ಸಿಪಿ ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಮಂಡ್ಯ ಮಾಡೆಲ್ ಸೂತ್ರ ಮುಂದಿಟ್ಟಿದ್ದಾರೆ.
ಏನಿದು ಮಂಡ್ಯ ಮಾಡೆಲ್ ಸೂತ್ರ..?
ಚನ್ನಪಟ್ಟಣದಲ್ಲಿ ಜಿಲ್ಲಾಧ್ಯಕ್ಷ ಆನಂದ್ ಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಗಿದ್ದು, ಯೋಗೇಶ್ವರ್‌ಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗಿದೆ. ಬಿಜೆಪಿ ಮುಖಂಡ ಪ್ರಶಾಂತ್ ಗೌಡ ಅವರಂತೂ ಮಂಡ್ಯವನ್ನು ನಾವು ಜೆಡಿಎಸ್‌ಗೆ ಬಿಟ್ಟುಕೊಟ್ಟಿರಲಿಲ್ಲವೇ? ಅದೇ ರೀತಿ ಈಗ ಚನ್ನಪಟ್ಟಣದಲ್ಲಿ ನಮ್ಮ ಪಕ್ಷದವರಿಗೆ ಟಿಕೆಟ್ ನೀಡಲಿ ಎಂದು ಆಗ್ರಹಿಸಿದ್ದಾರೆ. ಇಷ್ಟಕ್ಕೂ ಮಂಡ್ಯ ಮಾಡೆಲ್ ಸೂತ್ರ ಏನೆಂದರೆ ಇತ್ತೀಚೆಗೆ ಮುಗಿದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಕುಮಾರಸ್ವಾಮಿ ಅವರಿಗೆ ಬಿಟ್ಟುಕೊಟ್ಟಿತ್ತು.
ಆ ಕ್ಷೇತ್ರದಲ್ಲಿ ಗೆದ್ದಿದ್ದವರು ಸುಮಲತಾ ಅಂಬರೀಷ್. ಪಕ್ಷೇತರರಾಗಿ ಗೆದ್ದಿದ್ದರಾದರೂ, ಚುನಾವಣೆ ಹೊತ್ತಿನಲ್ಲಿ ಸುಮಲತಾ ಬಿಜೆಪಿ ಸೇರಿದ್ದರು. ಹೀಗಿದ್ದರೂ, ಜೆಡಿಎಸ್‌ನ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರವನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು. ಅಷ್ಟೇ ಅಲ್ಲ, ಕೋಲಾರ ಕ್ಷೇತ್ರವನ್ನೂ ಅಷ್ಟೇ. ಬಿಜೆಪಿ ಗೆದ್ದಿತ್ತು. ಬಿಜೆಪಿಯ ಸಂಸದರಿದ್ದರೂ, ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿತ್ತು. ಹೀಗಾಗಿ ಚನ್ನಪಟ್ಟಣವನ್ನು ತಮಗೇ ಬಿಟ್ಟುಕೊಡಿ ಎನ್ನುವುದು ಬಿಜೆಪಿ ಕಾರ್ಯಕರ್ತರ ಆಗ್ರಹ.
ಇನ್ನೊಂದು ಕಡೆ ಜೆಡಿಎಸ್ ಸಭೆಗಳು ಕನಕಪುರ ತಾಲೂಕಿನ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ನಡೆದಿವೆ. . ಕಾರ್ಯಕರ್ತರು, ಮುಖಂಡರ ಜೊತೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಸಭೆ ನಡೆಸಿದ್ದು, ಸೂಕ್ತ ಅಭ್ಯರ್ಥಿ ಯಾರು ಎಂಬುದನ್ನು ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ ಪಡೆದೇ ತೀರ್ಮಾನಿಸಲಾಗುತ್ತದೆ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ವಾದವೇನು..?
ಲೋಕಸಭೆ ಚುನಾವಣೆಗೆ ನಾನೇ ಸಿ.ಪಿ.ಯೋಗೇಶ್ವರ್ ಹೆಸರು ಸೂಚಿಸಿದ್ದೆ. ಚುನಾವಣೆ ನಡೆವ 2 ತಿಂಗಳ ಮುಂಚೆಯೇ ಬೆಂಗಳೂರು ಗ್ರಾಮಾಂತರದಿಂದ ಯೋಗೇಶ್ವರ್ ಅವರಿಗೆ ಸ್ಪರ್ಧೆ ಮಾಡುವಂತೆ ಹೇಳಿದ್ದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿ ಆದರೂ ಗೆಲ್ಲುವ ಅವಕಾಶ ಇದೆ. ಈ ಅವಕಾಶವನ್ನು ಏಕೆ ಕಳೆದುಕೊಳ್ಳುತ್ತಿರಾ? ನೀವೇ ನಿಂತು ಕೊಳ್ಳಿ ಎಂದು ಸಿಪಿವೈಗೆ ಹೇಳಿದ್ದೆ. ಆದರೆ, ನಂತರ ದೆಹಲಿಯಲ್ಲಿ ಗೃಹ ಸಚಿವರು ಡಾ. ಮಂಜುನಾಥ್ ಅವರನ್ನು ಒಪ್ಪಿಸು ವಂತೆ ಹೇಳಿದರು. ಅಮಿತ್ ಶಾ ಅವರ ಮಾತಿಗೆ ನಾನು ತಲೆಬಾಗಿ, ಮಂಜುನಾಥ್ ಅವರನ್ನು ಬಿಜೆಪಿ ಯಿಂದ ಅಭ್ಯರ್ಥಿ ಮಾಡಿದೆ ಎಂದಿದ್ದಾರೆ. ಅಲ್ಲದೆ ಯೋಗೇಶ್ವರ್ ಅವರಿಗೆ ಕ್ಷೇತ್ರಕ್ಕೆ ಹೋಗಿ ನಮ್ಮ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತ ಹೇಳಿದ್ದೆ. ಇದು ಪ್ರಾರಂಭಿಕ ಹಂತವಾಗಿದ್ದು, ಹೊರಗಡೆ ಚರ್ಚೆ ಮಾಡಬೇಡಿ ಎಂದು ಹೇಳಿದ್ದೆ. ಉಪಚುನಾವಣೆಗೆ ನಮ್ಮಲ್ಲೂ ಅಭ್ಯರ್ಥಿ ಹಾಕಬೇಕು, ಬೇಡ ಎಂಬ ಚರ್ಚೆಗಳು ನಡೆಯುತ್ತಿವೆ. ನೀವು ನಿಲ್ಲ ಬೇಕು ಅಂತಿದ್ದರೆ ನಮ್ಮ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಅಂತಾ ತಿಳಿಸಿದ್ದೆ. ಅವರು ಯಾವ ರೀತಿ ನಡೆದುಕೊಂಡಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಹತ್ತಿರ ಅವರು ಮಾತನಾಡಿಲ್ಲ ಎಂದಿದ್ದಾರೆ.
ಇನ್ನೊಂದೆಡೆ ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ್ ಹಿಡಿತ ಇದೆ. ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿರುವುದು ತಪ್ಪಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈಗ ಚನ್ನಪಟ್ಟಣದಲ್ಲಿ ಯಾರು ನಿಲ್ತಾರೆ..? ಮಂಡ್ಯ, ಕೋಲಾರ ಸೂತ್ರ ಇಟ್ಟುಕೊಳ್ತಾರೋ.. ಅಥವಾ ಯಾರು ಗೆದ್ದಿದ್ದರೋ.. ಅವರ ಪಕ್ಷಕ್ಕೇ ಅಭ್ಯರ್ಥಿ ಹಾಕುವಂತೆ ಹೇಳ್ತಾರೋ.. ಕಾದು ನೋಡಬೇಕಿದೆ.



