ಬಿಜೆಪಿ (BJP) ಮತ್ತು ಜೆಡಿಎಸ್ (JDS) ಮೈತ್ರಿ ಅಧಿಕೃತವಾದಾಗಿನಿಂದ ಕಾಂಗ್ರೆಸ್ ನಾಯಕರು ನೋಡಿ.. ನೋಡಿ.. ದೇವೇಗೌಡ್ರು (HD Devegowda) ಜಾತ್ಯತೀತರಲ್ಲ. ಅವರು ಕೋಮುವಾದಿಗಳ (comunal) ಜೊತೆ ಹೋಗ್ಬಿಟ್ರು. ಜೆಡಿಎಸ್ ತನ್ನ ಹೆಸರಿನಿಂದ ಜಾತ್ಯತೀತ ಪದವನ್ನ ತೆಗೆದು ಹಾಕಲಿ. ಕುಮಾರಸ್ವಾಮಿಯಿಂದಾಗಿ ಜೆಡಿಎಸ್, ಬಿಜೆಪಿ ಜೊತೆ ಹೋಗ್ತಾ ಇದೆ ಎಂದೆಲ್ಲ ಟೀಕಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರಿಂದ ಹಿಡಿದು, ಈಗಿನ್ನೂ ರಾಜಕೀಯಕ್ಕೆ ಕಾಲಿಟ್ಟವರಿಂದಲೂ ಟೀಕೆಗಳ ಸುರಿಮಳೆಯಾಗುತ್ತಿದೆ. ಇದಕ್ಕೆಲ್ಲ ದೇವೇಗೌಡ ಮತ್ತು ಕುಮಾರಸ್ವಾಮಿ (HD Kumaraswamy) ಉತ್ತರ ಕೊಡುತ್ತಿದ್ದರೂ, ಇದೀಗ ರೇವಣ್ಣ ಕೂಡಾ ಆ ಲಿಸ್ಟಿಗೆ ಸೇರಿಕೊಂಡಿದ್ದಾರೆ.
ಮುಸಲ್ಮಾನರಿಗೆ (Muslim reservation) ಎಲ್ಲಾ ಸವಲತ್ತು ಕೊಟ್ಟಿದ್ದು ದೇವೇಗೌಡ್ರು. ಅಲ್ಪಸಂಖ್ಯಾತರಿಗೆ ರಿಸರ್ವೇಶನ್ ಕೊಟ್ಟಿದ್ದು ದೇವೇಗೌಡ್ರು. 60 ವರ್ಷದ ಕಾಂಗ್ರೆಸ್ ಕೊಡುಗೆ ಏನು ಅಂತಾ ಹೇಳಬೇಕು. 2ಎ, 2 ಬಿ, ಕ್ಯಾಟೆಗರಿ – 1 (2A, 2B, Categary -1), ರಾಜ್ಯದಲ್ಲಿ ಮಹಿಳೆಯವರಿಗೆ ಮೀಸಲಾತಿ ಕೊಟ್ಟವರು ದೇವೇಗೌಡ್ರು. ನಾವು ಯಾವ ಪಾರ್ಟಿಗೆ ಹೋದ್ರೆ ಇವರಿಗೇನು ಹೊಟ್ಟೆಉರಿ ಅಂತ ಕಾಂಗ್ರೆಸ್ಸಿಗರ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ (HD Revanna) ಹರಿಹಾಯ್ದಿದ್ದಾರೆ.
ಅದೇನೋ ನಿಜ, ಮುಸ್ಲಿಮರಿಗೆ ಮೀಸಲಾತಿ ಸಿಕ್ಕಿದ್ದು ದೇವೇಗೌಡರ ಕಾಲದಲ್ಲೇ. 2ಎ, 2 ಬಿ, ಕ್ಯಾಟೆಗರಿ – 1, ರಾಜ್ಯದಲ್ಲಿ ಮಹಿಳೆಯವರಿಗೆ ಮೀಸಲಾತಿ ಸಿಕ್ಕಿದ್ದೂ ದೇವೇಗೌಡರ ಕಾಲದಲ್ಲೇ. ಆದರೆ ರಾಜಕೀಯ ಚದುರಂಗದಾಟದಲ್ಲಿ ದೇವೇಗೌಡರಿಗೆ ಈ ವಿಷಯಗಳಲ್ಲಿ ಸಿಕ್ಕಬೇಕಾದ ಕ್ರೆಡಿಟ್ ಸಿಕ್ಕೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಅದಕ್ಕೆ ಸ್ವಯಂ ದೇವೇಗೌಡರು ಮಾಡಿಕೊಂಡ ಪ್ರಮಾದಗಳೂ ಕಾರಣ ಎನ್ನುವುದೂ ಕೂಡಾ ಅಷ್ಟೇ ಸತ್ಯ. ಆದರೆ ಈಗ ಅದೆಲ್ಲ ಕ್ರೆಡಿಟ್ನ್ನೂ ತೆಗೆದುಕೊಳ್ಳೋಕೆ ಸಾಹಸ ಮಾಡುವಂತಾಗಿದೆ.
ಬೆಳಗ್ಗೆ ಎದ್ರೆ ದೇವೇಗೌಡ್ರು, ಕುಮಾರಣ್ಣ ಅಂತಾರೆ. ನಿಮಗ್ಯಾಕ್ರಿ ನಾವ್ ಯಾರ್ ಜೊತೆಯಲ್ಲಾದ್ರೂ ಹೋಗ್ತೇವೆ, ಇವರಿಗ್ಯಾಕ್ರಿ. ನಿಮ್ಮದು ನೋಡ್ಕಳಿ, ಪಾರ್ಲಿಮೆಂಟ್ ನಲ್ಲಿ 45 ಕ್ಕೆ ಬಂದಿದೆ. ಹಾಗಾಗಿಯೇ ಈಗ ಎಲ್ಲರನ್ನೂ ಹೋಗಿ ತಬ್ಬಿಕೊಳ್ತಾರೆ. ಅದ್ಯಂತದೋ ಐಎನ್ ಡಿಐಎ ಅಂತಾ ಮಾಡ್ಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಮಾನ ಮರ್ಯಾದೆ ಇದ್ರೆ, ಗೌರವ ಇದ್ರೆ. ನಾವು ಯಾರ ಮನೆ ಬಾಗಿಲಿಗೆ ಹೋದ್ರೆ ಇವರಿಗೇನು ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ನಾನು ಬದುಕಿರೋವರೆಗೂ ಹಾಸನ ಜಿಲ್ಲೆಯ ಅಲ್ಪಸಂಖ್ಯಾತರ ಜೊತೆ ಇರ್ತೇನೆ. ಈ ಜಿಲ್ಲೆಯೊಳಗೆ ಒಂದು ವೀರಶೈವ ಸಮಾಜಕ್ಕೆ ಒಂದು ಸೀಟ್ ಕೊಡಲಿಲ್ಲ. ಶಾಮನೂರು ಶಿವಶಂಕರಪ್ಪ ಸುಮ್ಮನೆ ಏನೂ ಇಲ್ಲದೇ ಹೇಳ್ತಾರಾ. ಪಾಪ ಅವರು ಎಷ್ಟು ನೋವನ್ನ ನುಂಗಿಕೊಂಡಿದ್ದಾರೆ. ಅವರು ಮನಸ್ಸು ಮಾಡಿದ್ರೆ ಇಷ್ಟೆ ಒಳಗೆ ಕೇಂದ್ರ ಸಚಿವರಾಗ್ತಾ ಇದ್ರು ಅಂತ ಶಾಮನೂರು ಶಿವಶಂಕರಪ್ಪ ಅವರ ಪರ ರೇವಣ್ಣ ಬ್ಯಾಟ್ ಬೀಸಿದ್ದಾರೆ.
ಈ ದೇಶದಲ್ಲಿ ಕಾಂಗ್ರೆಸ್ ಈ ದುಸ್ಥಿತಿಗೆ ಬರೋದಕ್ಕೆ ಹಲವಾರು ಕಾರಣಗಳಿವೆ. ಗಾಂಧೀಜಿ ಕಟ್ಟಿದಂತಹ ಕಾಂಗ್ರೆಸ್ ಆಗಿ ಈಗ ಉಳಿದಿಲ್ಲ. ಈ ರಾಷ್ಟ್ರದಲ್ಲಿ ಪ್ರಧಾನಿ ಹುದ್ದೆಯನ್ನೇ ತೊರೆದು ಬಂದವರು ಯಾರಾದ್ರೂ ಇದ್ರೆ ಅದು ದೇವೇಗೌಡ್ರು. ಅವರಿಗೆ ಭಯ ಶುರುವಾಗಿದೆ, ಜನಕ್ಕೆ ಎಷ್ಟು ದಿನ ಸುಳ್ಳನ್ನ ಹೇಳೋದಕ್ಕೆ ಆಗುತ್ತೆ. ಮುಸಲ್ಮಾನರ ಬಗ್ಗೆ ಮತಾಡೋಕ್ಕೆ ಯಾವ ನೈತಿಕತೆ ಇದೆ. ಒಂದಲ್ಲ ಒಂದು ದಿನ ಮುಸ್ಲಿಮರು ಕಾಂಗ್ರೆಸ್ ಅನ್ನ ತಿರಸ್ಕಾರ ಮಾಡೋ ದಿನ ಬಂದೇ ಬರುತ್ತೆ ಅಂತ ಹೇಳಿದ್ದಾರೆ ರೇವಣ್ಣ.



