ಶ್ರೀದೇವಿ ಭೈರಪ್ಪ. ಪುನೀತ್ ಅವರಿಗೆ ಚಿಕ್ಕ ಮಾವನಾಗಬೇಕು. ಅವರು ಯುವರಾಜ್ ಕುಮಾರ್ ಧರ್ಮಪತ್ನಿ. ಆದರೆ ಈಗ ಶ್ರೀದೇವಿ ಭೈರಪ್ಪ, ಯುವರಾಜ್ ಕುಮಾರ್ ಅವರ ಜೊತೆಗಿನ ದಾಂಪತ್ಯದಿಂದ ಬಿಡುಗಡೆ ಕೋರಿದ್ದಾರೆ. ಅದು ಡಿವೋರ್ಸ್ ಹಂತದಲ್ಲಿದೆ. ಆದರೆ ಪುನೀತ್ ಅವರ ಜೊತೆಗಿನ ಬಾಂಧವ್ಯ, ಅವರು ಕಲಿಸಿಕೊಟ್ಟ ಪಾಠಗಳು ಯಾವುದನ್ನೂ ಶ್ರೀದೇವಿ ಮರೆತಿಲ್ಲ. ಮಿಸ್ ಯೂ ಅಪ್ಪು ಅಣ್ಣ.. ಎನ್ನುತ್ತಲೇ ಒಬ್ಬ ಸ್ತ್ರೀದ್ವೇಷಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಶ್ರೀದೇವಿ ಬೈರಪ್ಪ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಕೈಮೇಲೆ ಅಪ್ಪು ಹೆಸರಿನ ಹಚ್ಚೆಯೂ ಇದೆ. ಒಂದು ಸುದೀರ್ಘ ಪತ್ರವನ್ನೂ ಬರೆದಿರುವ ಶ್ರೀದೇವಿ ಭೈರಪ್ಪ
ʻʻಅಕ್ಟೋಬರ್ 29, 2021ರಂದು ನಿಮ್ಮನ್ನು ಕಳೆದುಕೊಂಡು ಇಡೀ ಕರುನಾಡು ಸ್ತಬ್ಧವಾಗಿತ್ತು. 2 ಲಕ್ಷಕ್ಕೂ ಹೆಚ್ಚು ಜನ ನಿಮ್ಮ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ನಾನು ಅಷ್ಟೇ 48 ಗಂಟೆಗಳ ಕಾಲ ಆಘಾತದಿಂದ ಹೊರಬಂದಿರಲೇ ಇಲ್ಲ. ಆ ದಿನ ಇವತ್ತು ಮರುಕಳಿಸಿದೆ. ಪುನೀತ್ ರಾಜ್ ಕುಮಾರ್ ಸದಾ ಖುಷಿ, ಸಂತೋಷ, ನಗುವನ್ನೇ ಹಂಚುತ್ತಿದ್ದವರು. ಯಾವ ವಿಷಯವೇ ಆಗಿರಲಿ, ಸಣ್ಣ ಅಥವಾ ದೊಡ್ಡ ವಿಚಾರವಾಗಲಿ ನಿಮ್ಮ ಮಾರ್ಗದರ್ಶನ ಸರಿಯಾಗಿಯೇ ಇರುತ್ತಿತ್ತು.
ಹೊಸ ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳನ್ನು ಕಲಿಯುವ ಉತ್ಸಾಹವೂ ಇರುತ್ತಿತ್ತು. ಅಪ್ಪು ಅವರ ಈ ಮಾತು ಪಾಲಿಸಿದ್ದಕ್ಕೆ ಈ ವರ್ಷ ನನ್ನನ್ನು ನಾನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಹುಡುಗಿಯರು ಮತ್ತು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರವಾಗಿರಬೇಕು ಎಂದು ನೀವು ಯಾವಾಗಲು ಸಲಹೆ ನೀಡುತ್ತಿದ್ದಿರಿ. ಅದಕ್ಕೆ ಪಾರ್ವತಮ್ಮ ರಾಜ್‌ಕುಮಾರ್ ಅವರ ಉದಾಹರಣೆ ಕೊಟ್ಟು ಆಕೆಯ ರೀತಿ ಇರಿ ಎಂದು ಹೇಳುತ್ತಿದ್ದೀರಿ. ಆಗ ನನಗೆ ಅರ್ಥವಾಗಿರಲಿಲ್ಲ ಆದರೆ ಈಗ ಅರ್ಥವಾಗಿದೆ. ನಾನು ನನ್ನ ಜೀವನದಲ್ಲಿ ಕಷ್ಟ ಹಾಗೂ ದೊಡ್ಡ ಪಾಠಗಳನ್ನು ಕಲಿತಿದ್ದೇನೆ. ಸ್ತ್ರೀದ್ವೇಷಿಯಾದವರು ನನ್ನ ಜೀವನದ 10 ವರ್ಷದ ಸಮಯ, ವೃತ್ತಿ ಬದುಕು ಎಲ್ಲವನ್ನು ಕಿತ್ತುಕೊಂಡಿದ್ದಾರೆ. ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಲೇಬೇಕು. ಇದು ನನ್ನ ಪ್ರಾಮಿಸ್.
ಕಾಯಕವೇ ಕೈಲಾಸ, ಪ್ರತಿಯೊಬ್ಬರನ್ನು ಗೌರವಿಸಿ, ನಿಮ್ಮವರ ಮುಂದೆ ಅದನ್ನ ಪ್ರದರ್ಶಿಸಿ ಎಂದು ನೀವು ಕಲಿಸಿದ್ದೀರಿ. ನಿಮ್ಮ ಮಾತುಗಳ ಪ್ರೇರಣೆಯಿಂದ ನಾನು ಗ್ರಾಜುಯೇಷನ್ ಮುಗಿಸಿದ್ದೇನೆ. ಹಾರ್ವರ್ಡ್ ಡಿಗ್ರಿ ಅದಕ್ಕಿಂತಲೂ ವಿಶೇಷವಾಗಿದೆ.
– ಡಾ. ಪುನೀತ್ ರಾಜ್‌ಕುಮಾರ್ ನನ್ನ ಹೀರೋ. ಎಂದು ಬರೆದುಕೊಂಡಿದ್ದಾರೆ.
ಪುನೀತ್ ಅವರ ಹಳೆಯ ವಿಡಿಯೋ, ಫೋಟೋ ಹಂಚಿಕೊಂಡು ʻʻನಾನು ಬಾಲ್ಯದಿಂದಲೂ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದನ್ನ ಇಷ್ಟ ಪಡುತ್ತಿದ್ದೆ. ಆದರೆ ಕಳೆದ 3 ವರ್ಷಗಳಿಂದ ಅದು ಸಾಧ್ಯವಾಗಿಲ್ಲ. ಅಪ್ಪು ಅಣ್ಣ.. ನಿಮ್ಮ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ನೋಡುತ್ತಿದ್ದ ಆನಂದ, ಖುಷಿ ಈಗಲೂ ನೆನಪಾಗುತ್ತದೆ. ಆ ದಿನಗಳು ಮತ್ತೆ ಬರಲು ಸಾಧ್ಯವೇ ಇಲ್ಲ. ಮಿಸ್ ಯೂ ಅಪ್ಪು ಅಣ್ಣ.. ನಿಮ್ಮ ಅಭಿಮಾನಿ ಎಂದೂ ಬರೆದುಕೊಂಡಿದ್ದಾರೆ.
ಶ್ರೀದೇವಿ ಅವರು ಹೇಳಿರುವ ಆ ಸ್ತ್ರೀ ದ್ವೇಷಿ ಯಾರು..? ಶ್ರೀದೇವಿ ಅವರ 10 ವರ್ಷದ ಬದುಕನ್ನು ಕಿತ್ತುಕೊಂಡವರು ಯಾರು? ಅವರು ಪಾಠ ಕಲಿಸೋಕೆ ಹೊರಟಿರೋದು ಯಾರಿಗೆ..? ಅದು ಕೆಲವರಿಗೆ ಅರ್ಥವಾಗುತ್ತದೆ. ಆದರೆ ಯಾರೂ ಹೆಸರು ಹೇಳಲ್ಲ. ಅದು ವಿಚಿತ್ರ.



