ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಧಾನಸಭೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್. ಅಶೋಕ್ ಅವರ ನಡುವಿನ ಮುಸುಕಿನ ಗುದ್ದಾಟ ಹೊಸದಲ್ಲ. ಇದನ್ನು ಶುರು ಮಾಡಿದ್ದು ಯಾರು ಎಂದು ನೋಡಿದರೆ.. ಅನುಮಾನವೇ ಇಲ್ಲದೆ ಅಶೋಕ್ ಅವರ ಹೆಸರು ಮೊದಲಿಗೆ ಬರುತ್ತದೆ. ಅದನ್ನು ಶಾಂತವಾಗಿ ನಿಭಾಯಿಸಬಹುದಾಗಿದ್ದರೂ.. ಕಡ್ಡಿಯನ್ನು ಗುಡ್ಡ ಮಾಡಿದ ಖ್ಯಾತಿ ವಿಜಯೇಂದ್ರ ಅವರಿಗೆ ಸಲ್ಲುತ್ತದೆ. ಹೀಗಾಗಿ.. ಇಬ್ಬರ ನಡುವೆ ಇನ್ನೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ.
ವಿಜಯೇಂದ್ರ ಅವರ ಚಲನವಲನಗಳ ಮೇಲೆ ಅಶೋಕ್ ಮತ್ತು ಅಶೋಕ್ ಅವರ ಚಲನವಲನಗಳ ಮೇಲೆ ವಿಜಯೇಂದ್ರ ಹದ್ದುಗಣ್ಣಿಟ್ಟು ಕುಳಿತಿದ್ದಾರೆ. ವಿಜಯೇಂದ್ರ-ಅಶೋಕ್ ಮಧ್ಯೆ ಹುಲ್ಲುಕಡ್ಡಿ ಇಟ್ಟರೂ ‘ಧಗ್’ ಅಂತ ಹೊತ್ತಿ ಉರಿಯುವ ಪರಿಸ್ಥಿತಿ ಇದೆ. ಇದನ್ನ ಬಿಜೆಪಿಯ ಎರಡೂ ಬಣದ ನಾಯಕರೂ ಒಪ್ಪುತ್ತಾರೆ. ಅಂತಹ ಅಶೋಕ್ ವಿರುದ್ಧ ವಿಜಯೇಂದ್ರ ಗರಂ ಆಗಿರುವುದು ಹೊಸ ಬೆಳವಣಿಗೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇತ್ತೀಚೆಗೆ ಅಮಿತ್ ಶಾ ಅವರಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಒಂದು ಹೊಸ ದೂರು ಕೊಟ್ಟಿದ್ದಾರೆ. ಅರ್ಥಾತ್.. ಕಿವಿಗೆ ಹಾಕಿದ್ದಾರೆ. “ಹೀಗೆಲ್ಲ ಆದರೆ ನಾನು ಕೆಲಸ ಮಾಡುವುದು ಹೇಗೆʼʼ ಎಂದಿದ್ದಾರೆ.
ಕಬಿನಿ ಬ್ಯಾಕ್ ವಾಟರ್ ಪಾರ್ಟಿ ಸೀಕ್ರೆಟ್
ಇದು ನಡೆದಿದ್ದು ಕಬಿನಿ ಬ್ಯಾಕ್ ವಾಟರ್ ಪಾರ್ಟಿಯಲ್ಲಿ. ವಿಜಯೇಂದ್ರ ಅವರದ್ದೊಂದು ಸೀಕ್ರೆಟ್ ಆರ್ಮಿ ಅಶೋಕ್ ಬೆನ್ನ ಹಿಂದೆ ಬಿದ್ದಿದೆ. ಅವರು ತಂದಿರುವ ಸುದ್ದಿಯ ಪ್ರಕಾರ.. ಆರ್.ಅಶೋಕ್ ಅವರು ಕಬಿನಿ ಜಲಾಶಯದ ಬಳಿ ಒಂದು ಪಾರ್ಟಿ ಮಾಡಿದ್ದಾರೆ. ಆ ಪಾರ್ಟಿಯಲ್ಲಿ ಚಿಕ್ಕಮಗಳೂರು, ಮಂಗಳೂರು ಮತ್ತು ಬೆಂಗಳೂರಿನ ಕೆಲ ಶಾಸಕರಿದ್ದರಂತೆ. ಆ ಶಾಸಕರ ಬಳಿ ʻʻಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಳಿಯುವುದು ಪಕ್ಕಾ. ಅಮಿತ್ ಶಾ ಅವರೇ ನನ್ನ ಬಳಿ ಇದನ್ನು ಹೇಳಿದ್ದಾರೆ. ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ಅವರ ಸ್ಥಾನಕ್ಕೆ ನನ್ನ ಆಪ್ತರು ಬರಲಿದ್ದಾರೆ. ಈಗಿನ ಸ್ಥಿತಿಯಲ್ಲಿ ವಿಧಾನಸಭೆಗೆ ಚುನಾವಣೆ ನಡೆದರೆ ಪಕ್ಷ ಅಧಿಕಾರಕ್ಕೆ ಬರುವುದು 100% ಗ್ಯಾರಂಟಿ. ಹೀಗೆ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ವಿಜಯೇಂದ್ರ ಅವರೇ ಅಧ್ಯಕ್ಷರಾಗಿದ್ದರೆ ಸಿಎಂ ಪೋಸ್ಟಿಗೆ ಟ್ರೈ ಮಾಡುತ್ತಾರೆ. ಅವರ ನೇತೃತ್ವದ ಚುನಾವಣೆ ಗೆದ್ದರೆ ಸಹಜವಾಗಿ ಅವರ ಬೇಡಿಕೆಗೆ ಶಕ್ತಿ ದೊರೆಯುತ್ತದೆ. ಹಾಗಾಗಬಾರದು ಎಂದರೆ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ನ್ಯೂಟ್ರಲ್ ಆಗಿರುವವರು ಬರಬೇಕು. ಆಗ ಸಿಎಂ ಹುದ್ದೆಗೇರಲು ನಮಗೂ ಶಕ್ತಿ ದೊರೆಯುತ್ತದೆʼ ಎಂದಿದ್ದಾರಂತೆ. ಅಮಿತ್ ಶಾ ಅವರಿಗೆ ಹೋಗಿರುವುದು ಇದೇ ದೂರು.
ಅಶೋಕ್ ಅವರ ವಿರುದ್ಧ ವಿಜಯೇಂದ್ರ ಕಂಪ್ಲೇಂಟು ರವಾನಿಸಿದ ನಂತರ ಅಮಿತ್ ಶಾ ಅವರು ಕ್ರಮ ಕೈಗೊಳ್ಳುವ ಮಾತನಾಡಿದ್ದಾರೆ. ಇದಾದ ನಂತರ ವಿಜಯೇಂದ್ರ ಅವರ ಕ್ಯಾಂಪಿಗೆ ಬಂದ ಸಂದೇಶವೆಂದರೆ, ಕಳೆದ ವಾರ ತಮ್ಮನ್ನು ಭೇಟಿ ಮಾಡಿದ ಅಶೋಕ್ ಅವರಿಗೆ ಅಮಿತ್ ಶಾ ಕಿರಿಕಿರಿ ಮಾಡಿದ್ದಾರೆ. ನಾಯಕತ್ವದ ವಿರುದ್ಧ ಮಾತನಾಡಬಾರದು ಎಂದು ಎಚ್ಚರಿಸಿದ್ದಾರೆ. ಯಾವಾಗ ಅಮಿತ್ ಶಾ ಈ ಎಚ್ಚರಿಕೆ ನೀಡಿದರೋ ಆಗ ಅಶೋಕ್, ‘ನಾನು ಅಂಥ ಮಾತುಗಳನ್ನೇ ಆಡಿಲ್ಲ’ ಅಂತ ಸಮಜಾಯಿಷಿ ನೀಡಿದ್ದಾರೆ. ಅರ್ಥಾತ್, ಅಮಿತ್ ಶಾ ಅವರು ನೀಡಿದ ಎಚ್ಚರಿಕೆಯಿಂದ ಅಶೋಕ್ ಎಚ್ಚೆತ್ತುಕೊಂಡಿದ್ದಾರೆ.
ಒಟ್ಟಿನಲ್ಲಿ ಬಿಜೆಪಿಯ ನಾಯಕರು ತಮ್ಮ ತಮ್ಮಲ್ಲೇ ಒಬ್ಬರನ್ನೊಬ್ಬರು ನಂಬುತ್ತಿಲ್ಲ. ಹೀಗಿರುವಾಗ.. ಅವರನ್ನು ಜನ ನಂಬಬೇಕು ಎಂದರೆ ಹೇಗೆ..



