ಸಚಿವ ಚಲುವರಾಯಸ್ವಾಮಿಗೆ ಕಪಾಳಮೋಕ್ಷ ಮಾಡಿದ್ರಂತೆ. ಅದು ನಡೆದದ್ದು ಒಂದು ಹೋಟೆಲ್ಲಿನಲ್ಲಂತೆ. ಅಲ್ಲಲ್ಲ.. ಮದುವೆಯ ಕಾರ್ಯಕ್ರಮದಲ್ಲಂತೆ. ಅದೂ ಅಲ್ಲ, ಎಂಗೇಜ್ʻಮೆಂಟ್ ನಡೀತಿತ್ತಂತೆ. ಅಲ್ಲಿ ಹೊಡೆದಾಟ ಆಯ್ತಂತೆ.. ಚೆಲುವರಾಯ ಸ್ವಾಮಿಗೆ ಅವರು ಕಪಾಳಕ್ಕೆ ನಾಲ್ಕು ಬಾರಿಸಿದ್ರಂತೆ. ಇವರು, ಇವರ ಕಡೆಯವರೆಲ್ಲ ಸೇರಿಕೊಂಡು ನೆಲ್ಲಕ್ಕೆ ಹಾಕಿ ಸಮಾ ಬಡಿದ್ರಂತೆ. ಹೀಗೆಯೇ ಕಥೆಗಳು ಶುರುವಾಗಿವೆ. ಮುಂದುವರೆಯುತ್ತಲೇ ಇವೆ. ಇಷ್ಟಕ್ಕೂ ಇದೆಲ್ಲ ಘಟನೆ ಬಗ್ಗೆ ಮಾತನಾಡೋಕೆ ಓಂಕಾರ ಹಾಕಿದ್ದು ಮಾತ್ರ ಕೇಂದ್ರ ಸಚಿವ ಕುಮಾರಸ್ವಾಮಿ. ಅಂದಹಾಗೆ ಆರೋಪಗಳ ಪ್ರಕಾರ ಚಲುವರಾಯ ಸ್ವಾಮಿಗೆ ಹೊಡೆದವರ ಕೀಲಾರ ಜಯರಾಂ. ಹೊಡೆಸಿಕೊಂಡವರು ಚಲುವರಾಯ ಸ್ವಾಮಿ.
ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದೇನು..?
ಹುಣಸೂರಿನ ಹೋಟೆಲ್‌ವೊಂದರಲ್ಲಿ ಸಚಿವ ಚಲುವರಾಯಸ್ವಾಮಿ ಮತ್ತು ಮಾಜಿ ಎಂಎಲ್‌ಸಿ ಕಿಲಾರ ಜಯರಾಮ್ ನಡುವೆ ವರ್ಗಾವಣೆ ಹಣಕಾಸಿನ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ಈ ವೇಳೆ ಕೃಷಿ ಸಚಿವರ ಮೇಲೆ ಮಾಜಿ ಎಂಎಲ್‌ಸಿ ಹಲ್ಲೆ ಮಾಡಿದ್ದರು ಎಂಬ ವಿಚಾರವನ್ನು ಕುಮಾರಸ್ವಾಮಿ ಬಹಿರಂಗ ಮಾಡಿದ್ದರು. ಸಚಿವರ ಮೇಲೆ ಹಲ್ಲೆ ನಡೆಯುವಂತಹ ಸ್ಥಿತಿ ರಾಜ್ಯದಲ್ಲಿ ಉದ್ಭವವಾಗಿದೆ ಎಂದು ಲೇವಡಿ ಮಾಡಿದ್ದರು.
ಚಲುವರಾಯ ಸ್ವಾಮಿ ಕೊಟ್ಟ ಸ್ಪಷ್ಟನೆ ಏನು..?
ನಾನು ಎಂಗೇಜ್ಮೆಂಟ್ ಹೋಗಿದ್ದೆ. ಅಲ್ಲೇನು ಗಲಾಟೆ ನಡೆದಿಲ್ಲ, ಜಯರಾಮ್ ಗೆ ನೀವು ಕೇಳಿ. ಅಂಥಾದ್ದೇನು ನಡೆದಿಲ್ಲ, ವರ್ಗಾವಣೆ ವಿಚಾರರ ಇಟ್ಟುಕೊಂಡು ಅವರು ಬಂದಿಲ್ಲ. ಚಪಲಕ್ಕೆ ಹೇಳುತ್ತಾರೋ ಗೊತ್ತಿಲ್ಲ . ಅಂತಹದ್ದೇನಾದ್ರೂ ಇದ್ರೆ, ಸಾಕ್ಷಿ ಇದ್ರೆ ಕುಮಾರಸ್ವಾಮಿಗೆ ಹಾಕೋದಕ್ಕೆ ಹೇಳಿ. ಸಿದ್ದಲಿಂಗೇಗೌಡ ದುಡ್ಡಿನ ವಿಚಾರ ಹೇಳೋದಕ್ಕೆ ಹೇಳಿ ಮೊದಲು ಎಂದಿದ್ದಾರೆ. ಚಲುವರಾಯಸ್ವಾಮಿ ಪ್ರಕಾರ ಘಟನೆ ನಡೆದೇ ಇಲ್ಲ. ನಡೆದದ್ದು ಮದುವೆ ಅಥವಾ ಮತ್ಯಾವುದೋ ಕಾರ್ಯಕ್ರಮ ಅಲ್ಲ, ನಿಶ್ಚಿತಾರ್ಥ. ಆದರೆ ಅಲ್ಲಿ ಹೊಡೆದಾಟದಂತಹ ಘಟನೆ ನಡೆದಿಲ್ಲ.
ಮಾಜಿ ಸಚಿವ ಪುಟ್ಟರಾಜು ಪ್ರಕಾರ..
ಚಲುವರಾಯಸ್ವಾಮಿ, ಕೀಲಾರ ಜಯರಾಂ ಬಡಿದಾಡಿಕೊಂಡ್ರು. ಅಂದು ಪುಟ್ಟರಾಜು ಸಹ ನಿಶ್ಚಿತಾರ್ಥ ಕಾರ್ಯಕ್ರಮದ ಸ್ಟೇಜ್ ಮೇಲಿದ್ದರು. ʻʻಇದಕ್ಕಿದ್ದಂತೆ ರೂಮ್‌ನಲ್ಲಿ ಕಿರುಚಾಟ ಕೇಳಿಬಂತು. ಒಳಗಿನಿಂದ ನನ್ನ ಬನ್ನಿ ಬನ್ನಿ ಎಂದು ಕೂಗ್ತಾ ಇದ್ರು. ಒಳಗಡೆ ಚಲುವರಾಯಸ್ವಾಮಿ, ಕೀಲಾರ ಜಯರಾಂ ನಡುವೆ ಜಗಳ ನಡೀತಿತ್ತು. ಜಯರಾಮಣ್ಣ ಮೊದಲು ಚಲುವರಾಯ ಸ್ವಾಮಿಗೆ ಹೊಡೆದರು. ಈಗ ಜಯರಾಮ ಅಣ್ಣನನ್ನ ಕೆಳಗೆ ಹಾಕ್ಕೊಂಡು ತುಳಿಯುತ್ತಿದ್ದಾರೆ. ಬಂದು ಬಿಡಿಸಿ, ಬೇಗ ಬನ್ನಿ ಇಲ್ಲದಿದ್ರೆ ಸಾಯಿಸಿಬಿಡ್ತಾರೆ ಅಂತಾ ಕೂಗಿದ್ರು. ಆಗ ನಾನು ಹೋಗಿ ನೋಡಿದ್ರೆ.. ಏನಿಲ್ಲ.. ಅವರನ್ನು ಕಳಿಸಿದ್ದೋ ಬಿಡಿ ಅಂತಾ ಹೇಳಿದ್ರು. ಇದು ಸುಳ್ಳು ಎಂದ್ರೆ ಬನ್ನಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಪ್ರಮಾಣ ಮಾಡೋಣ. ಜಗಳ ನಡೆದೇ ಇಲ್ಲ ಎಂದು ಜಯರಾಮಣ್ಣ ಆಣೆ ಮಾಡಲಿʼʼ ಎಂದು ಚಾಲೆಂಜ್ ಮಾಡಿದ್ದಾರೆ ಪುಟ್ಟರಾಜು.
ಘಟನೆ ನಡೆದಿದ್ದು ಶಾಸಕ ಬಂಡಿಸಿದ್ದೇಗೌಡರ ಮಗಳ ನಿಶ್ಚಿತಾರ್ಥದಲ್ಲಿ. ಅಲ್ಲಿ ಕೀಲಾರ ಜಯರಾಮ್ ಮತ್ತು ಚೆಲುವರಾಯ ಸ್ವಾಮಿ ಮಧ್ಯೆ ವಾಗ್ವಾದ ನಡೆದಿದ್ದನ್ನು ಕೆಲವರು ಕಣ್ಣಾರೆ ಕಂಡವರಿದ್ದಾರೆ. ಆದರೆ ಹೊಡೆದಾಟ ನಡೆದದ್ದನ್ನು ನೋಡಿಲ್ಲ ಅಂತಾರೆ. ಆದರೆ ಇಬ್ಬರೂ ನಾಯಕರ ಬೆಂಬಲಿಗರು ಮಾತ್ರ ಹೊಡೆದಾಡಿಕೊಂಡರು ಅಂತಾರೆ. ಇಲ್ಲ.. ಇಲ್ಲ.. ಕಿವಿಯಿಂದ ಕೇಳಬಾರದ ಮಾತುಗಳಲ್ಲಿ ಬೈದಾಡಿಕೊಂಡ್ರು ಅಷ್ಟೇ ಅಂತಾರೆ.
ಆದರೆ.. ಘಟನೆ ನಿಜನಾ ಸಾರ್ ಅಂದ್ರೆ ಕೀಲಾರ ಜಯರಾಮ್ ಹೇಳೋದು ಇಷ್ಟೇ. ನಾನು ನಿಶ್ಚಿತಾರ್ಥಕ್ಕೆ ಹೋಗಿದ್ದೆ. ಯಾವ ವಾಗ್ವಾದವೂ ನಡೆದಿಲ್ಲ. ನಾನು ಸಚಿವರಿಗೆ ನಮಸ್ಕಾರ ಮಾಡಿ ಬಂದೆ.. ಅಷ್ಟೇ ಅಂತಾರೆ.
ತಾತ್ಪರ್ಯ ಏನೆಂದರೆ ಹೊಡೆದೆ ಅಥವಾ ಹೊಡೆಸಿಕೊಂಡೆ ಎಂದು ಬಹಿರಂಗವಾಗಿ ಯಾರೂ ಹೇಳ್ಕೊಳ್ಳಲ್ಲ. ಏಕೆಂದರೆ ರಾಜಕೀಯದಲ್ಲಿ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ.



