ಬಿಜೆಪಿ ಶಾಸಕ ಮುನಿರತ್ನ ಅವರು ಮೊದಲು ಅರೆಸ್ಟ್ ಆಗಿದ್ದು ಅಟ್ರಾಸಿಟಿ ಕೇಸಿನಲ್ಲಿ. ಆದರೆ ಮತ್ತೊಮ್ಮೆ ಜೈಲು ಸೇರಿರುವುದು ಹನಿಟ್ರ್ಯಾಪ್ ಕೇಸಿನಲ್ಲಿ. ಮುನಿರತ್ನ ತಮ್ಮನ್ನು ಹೆದರಿಸಿ, ಬೆದರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದರು. ಬೇರೆ ಬೇರೆಯವರನ್ನು ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎನ್ನುವ ಆರೋಪ ಮಾಡಿರುವ ಮಹಿಳೆ, ಈಗ ಅದಕ್ಕಿಂತಲೂ ಸ್ಪೋಟಕವಾದ ಮತ್ತೊಂದು ಆರೋಪ ಮಾಡಿದ್ದಾರೆ.
ಬಿಜೆಪಿ ಶಾಸಕ ಮುನಿರತ್ನ ಅವರು ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ್ದರು ಎಂದು ಹೇಳಿದ್ದಾರೆ. ಸರ್ಕಾರ ನನಗೆ ಸೂಕ್ತ ಭದ್ರತೆ ಕಲ್ಪಿಸಿದರೆ ಆ ಮಾಜಿ ಮುಖ್ಯಮಂತ್ರಿಗಳ ಹೆಸರು ಬಹಿರಂಗಪಡಿಸುತ್ತೇನೆ ಮತ್ತು ಹನಿಟ್ರ್ಯಾಪ್‌ಗೆ ಸಂಬಂಧಿಸಿದ ವಿಡಿಯೋ ಗಳನ್ನು ಬಿಡುಗಡೆ ಮಾಡುತ್ತೇನೆ ಎಂದೂ ಹೇಳಿದ್ದಾರೆ. ‘ ಮುನಿರತ್ನ ಅವರು ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿಯೇ ಸಚಿವರಾಗಿದ್ದರು. ಹನಿಟ್ರ್ಯಾಪ್‌ನ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದರು,” ಎಂದು ಆರೋಪಿಸಿದ್ದಾರೆ ಸಂತ್ರಸ್ತೆ ಎನ್ನಲಾಗಿರುವ ಆ ಮಹಿಳೆ.
ಮುನಿರತ್ನ ಅವರು ಸಂಬಂಧಿಕ ಸುಧಾಕರ್ ಮೂಲಕ ಮಾಜಿ ಮುಖ್ಯಮಂತ್ರಿಗಳ ಹನಿಟ್ರ್ಯಾಪ್ ಮಾಡಿಸಿದ್ದರು. ಇದರ ವಿಡಿಯೋಗಳು ನನ್ನ ಬಳಿ ಇವೆ. ನನ್ನ ಬಳಿ ಸಾಕಷ್ಟು ದಾಖಲೆಗಳಿವೆ. ಎಸ್‌ಐಟಿಗೆ ಕೊಡಲು ಸಿದ್ಧವಿದ್ದೇನೆ ಎನ್ನುವ ಆ ಮಹಿಳೆ ʻʻಭದ್ರತೆ ವಿಷಯದಲ್ಲಿ ಸರ್ಕಾರ ಸ್ಪಷ್ಟನೆ ಕೊಟ್ಟಿಲ್ಲ. ನನಗೆ ಜೀವ ಬೆದರಿಕೆ ಇರುವ ಕಾರಣಕ್ಕೆ ಈವರೆಗೆ ಆ ಮಾಜಿ ಮುಖ್ಯಮಂತ್ರಿಗಳ ಹೆಸರು ಬಹಿರಂಗಪಡಿಸಿಲ್ಲ,” ಎಂದು ಹೇಳಿದ್ದಾರೆ.
ಮುನಿರತ್ನ ಅವರ ಬಳಿ ಯಾವುದೇ ಸುದ್ದಿ ವಾಹಿನಿಗಳ ಬಳಿಯೂ ಇಲ್ಲದಂತಹ ಸುಧಾರಿತ ತಂತ್ರಜ್ಞಾನದ ಕ್ಯಾಮೆರಾಗಳಿವೆ. ಅವರು ನಮ್ಮಂಥವರ ಅಸಹಾಯಕತೆ ಬಳಸಿಕೊಳ್ತಾರೆ. ನಮ್ಮಂತಹವರ ಮೂಲಕ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವುತ್ತಾರೆ ರಾಸಲೀಲೆಯ ವಿಡಿಯೋ ಮಾಡಿಸ್ತಾರೆ. ಕೆಲ ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಎಸಿಪಿ, ಇನ್‌ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನಗೆ ಹಾಗೂ ಮುನಿರತ್ನ ಅವರಿಗೆ ಸುಳ್ಳು ಪತ್ತೆ ಪರೀಕ್ಷೆ (ಬ್ರೈನ್ ಮ್ಯಾಪಿಂಗ್) ಮಾಡಿಸಿದರೆ ಸತ್ಯ ಬಯಲಾಗುತ್ತದೆ ಎನ್ನುವುದು ಈ ಮಹಿಳೆಯ ಮಾತು.
ಆದರೆ ಮಾಜಿ ಸಿಎಂ ಅವರ ಹನಿಟ್ರಾಪ್ ಮಾಡಿದ್ದು ನಾನಲ್ಲ. ಅದಕ್ಕೆ ಬೇರೆಯವರನ್ನು ಬಳಸಿಕೊಂಡರು. ಆ ಐದಾರು ಮಂದಿ ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಸುಮ್ಮನಾಗಿದ್ದಾರೆ. ಅವರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲಾಸತ್ಯ ಬಯಲಾಗುತ್ತದೆ ಎನ್ನುವ ಮಹಿಳೆ ʻಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು 10 ನಿಮಿಷ ಕಾಲಾವಕಾಶ ಕೊಡಲಿ. ಅವರೊಂದಿಗೆ ಹತ್ತೇ ಹತ್ತು ನಿಮಿಷ ಮಾತನಾಡಬೇಕು. ಅವರ ಬಳಿ ಕೆಲ ಮಾಹಿತಿ ಹಂಚಿಕೊಳ್ಳಬೇಕು. ಇಷ್ಟೆಲ್ಲ ಆದರೂ ಮುನಿರತ್ನ ಅವರನ್ನೇಕೆ ತಮ್ಮ ಪಕ್ಷದಲ್ಲಿ ಇಟ್ಟುಕೊಂಡಿದ್ದೀರಿʼʼ ಎಂದು ಕೇಳಬೇಕಿದೆ ಅಂತಾರೆ.
ಈಗ ಎಲ್ಲರನ್ನೂ ಕಾಡುತ್ತಿರುವುದು ಒಂದೇ ಪ್ರಶ್ನೆ. ಆ ಇಬ್ಬರು ಮಾಜಿ ಸಿಎಂ ಯಾರು..? ಮಾಜಿ ಸಿಎಂ ಯಾರು ಎಂಬ ಪ್ರಶ್ನೆ ಬಂದರೆ ಮುನಿರತ್ನ ಮಿನಿಸ್ಟರ್ ಆಗಿದ್ದುದು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವಧಿಯಲ್ಲಿ. ಅವರೇ ಇಬ್ಬರಾ..? ಗೊತ್ತಿಲ್ಲ. ಮುನಿರತ್ನ ಪ್ರಬಲರಾಗಿದ್ದು ಸಿದ್ದರಾಮಯ್ಯ ಸಿಎಂ ಆಗಿದ್ದಾಗ (ಆಗ ಮುನಿರತ್ನ ಕಾಂಗ್ರೆಸ್ಸಿನಲ್ಲಿದ್ದರು). ಪಕ್ಷಾಂತರ ಮಾಡಿದ್ದು ಕುಮಾರಸ್ವಾಮಿ ಸಿಎಂ ಆಗಿದ್ದಾಗ.. ಹಾಗಾದರೆ.. ಯಾರು ಆ ಇಬ್ಬರು ಮಾಜಿ ಸಿಎಂ..?



