ಒಂದು ಘಟನೆ ಹೀರೋ ಆಗಿದ್ದ ವ್ಯಕ್ತಿಯನ್ನೇ ವಿಲನ್ ಮಾಡಿಸುತ್ತೆ. ವಿಲನ್ ಆದವನು ಹೀರೋ ಆಗಿಬಿಡ್ತಾನೆ. ಹಾಗಂತ ಬಿಜೆಪಿ ಸಂಸದ ಪ್ರತಾಪ್ ಸಿಂಹ ಎಲ್ಲರೂ ಮೆಚ್ಚುವ ಹೀರೋ ಏನೂ ಆಗಿರಲಿಲ್ಲ. ಆದರೆ ಏನೆಲ್ಲ ವಿರೋಧ, ಟೀಕೆಗಳಿದ್ದರೂ ಮೈಸೂರು-ಬೆಂಗಳೂರು ಹೈವೇ ಮೂಲಕ ಪ್ರತಾಪ್ ಅವರಿಗೆ ಬೇರೆಯದೇ ಹೆಸರು ಬಂದಿದ್ದಂತೂ ನಿಜ. ಆದರೆ ಈಗ ಪಾಸ್ ಕೊಟ್ಟು ಪಾಪಿಯಾಗಿ ಹೋಗಿದ್ದಾರೆ ಪ್ರತಾಪ್ ಸಿಂಹ.
ಈಗ ಇವರ ವಿರುದ್ಧ ನಿಂತವರು ಯಾರೆಲ್ಲ ಎಂದು ನೋಡಿದರೆ.. ಪಟ್ಟಿ ಉದ್ದ ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹಾಗೂ ಎನ್ʻಡಿಎಯೇತರ ಪಕ್ಷಗಳ ಶಾಸಕರು, ಸಂಸದರು ಪ್ರತಾಪ್ ಸಿಂಹ ವಿರುದ್ಧವೇ ಇದ್ದಾರೆ. ಪ್ರಕಾಶ್ ರೈ, ಕಿಶೋರ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಾಪ್ ಸಿಂಹ ಅವರನ್ನೇಕೆ ಅರೆಸ್ಟ್ ಮಾಡಬಾರದು, ವಜಾ ಮಾಡಬಾರದು ಎನ್ನುತ್ತಿದ್ಧಾರೆ.
ಇನ್ನು ಪರ ಇರುವವರು ಕೇವಲ ಬಿಜೆಪಿಯವರು ಮಾತ್ರ. ಬಿಜೆಪಿ ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಮಾತ್ರವೇ ಪ್ರತಾಪ್ ಸಿಂಹ ಪರ ಇದ್ಧಾರೆ.
ಪಾಸ್ ಕೊಟ್ಟಿದ್ದು ನನ್ನ ಕಚೇರಿ ಎಂದು ಮೊದಲು ಹೇಳಿದ್ದೇ ಪ್ರತಾಪ್ ಸಿಂಹ : ಸ್ಮೋಕ್ ಬಾಂಬ್ ವಿಷಯ ಗೊತ್ತಾಗುತ್ತಿದ್ದಂತೆಯೇ ಪಾಸ್ ಕೊಟ್ಟಿದ್ದು ತನ್ನ ಕಚೇರಿಯಿದ ಮೊದಲು ಹೇಳಿದ್ದು ಪ್ರತಾಪ್ ಸಿಂಹ. ಆ ಮಾತನ್ನೇ ಸಂಸದ ಡ್ಯಾನಿಷ್ ಅಲಿ ಕೂಡಾ ಹೇಳಿದ್ದು. ಕಳೆದ ಅಧಿವೇಶನದ ಸಮಯದಲ್ಲಿ ಹೊಸ ಸಂಸತ್ ವೀಕ್ಷಣೆ ನೆಪದಲ್ಲಿ ಎರಡು ಬಾರಿ ಮನೋರಂಜನ್ ಪಾಸ್ ಪಡೆದಿದ್ದ. ಪಾಸ್ ಪಡೆದು ವೀಕ್ಷಕರ ಗ್ಯಾಲರಿಯವರೆಗೂ ಇರುವ ಭದ್ರತಾ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದ. ಸುದೀರ್ಘ ಅಧ್ಯಯನ ಮಾಡಿದ ಮನೋರಂಜನ್ ದಾಳಿ ನಡೆಸಲು ಸ್ಕೆಚ್ ರೂಪಿಸಿ ಮತ್ತೆ ಪಾಸ್ ನೀಡುವಂತೆ ಮನವಿ ಮಾಡಿದ್ದ. ಮೊದಲಿಗೆ ಪಾಸ್ ನೀಡಲು ಪ್ರತಾಪ್ ಸಿಂಹ ಕಚೇರಿ ನಿರಾಕರಿಸಿತ್ತು. ಪದೇ ಪದೇ ಪಾಸ್ ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಲಾಗಿತ್ತು. ಆದರೆ ಮೈಸೂರಿನ ಆಪ್ತ ಸಹಾಯಕರ ಮೂಲಕ ಒತ್ತಡ ಹೇರಿ ದೆಹಲಿಯಲ್ಲಿರುವ ಪ್ರತಾಪ್ ಸಿಂಹರ ಕಚೇರಿಯಿಂದ ಪಾಸ್ ಪಡೆದಿದ್ದ.



