ರಿಯಲ್ ಸ್ಟಾರ್ ಉಪೇಂದ್ರ, ಹೀರೋ ಬದಲು ಪೋಷಕ ನಟನಾಗುವ ಹಾದಿ ಹಿಡಿದಿದ್ದಾರೆಯೇ.. ಯುಐ ಸೋಲಿನ ನಂತರ ಉಪೇಂದ್ರ, ಹೀರೋ ಆಗುವುದನ್ನು ಬಿಟ್ಟು ಹೊರನಡೆಯುತ್ತಿದ್ದಾರೆಯೇ.. ಹೀಗೊಂದು ಪ್ರಶ್ನೆ ಮೂಡಿಸಿರುವುದು ಉಪೇಂದ್ರ ಅವರ ಹೊಸ ಹೆಜ್ಜೆ. ಉಪ್ಪಿ ಈಗ ಪೋಷಕ ನಟನೋ.. ಖಳನಟನೋ ಆಗುವುದಕ್ಕೆ ರೆಡಿಯಾಗಿದ್ದಾರೆ. ಅದೂ ತೆಲುಗಿನಲ್ಲಿ.
ಉಪೇಂದ್ರ ಅವರಿಗೆ ಪರಭಾಷೆಯ ಸಿನಿಮಾಗಳು ಹೊಸದೇನಲ್ಲ. ಇದೀಗ ತಾನೇ ತಮಿಳಿನಲ್ಲಿ ರಜನಿಕಾಂತ್ ಜೊತೆ ಕೂಲಿ ಚಿತ್ರವನ್ನು ಕಂಪ್ಲೀಟ್ ಮಾಡಿರುವ ಉಪೇಂದ್ರ ಈಗ ತೆಲುಗಿಗೆ ಹಾರುತ್ತಿದ್ದಾರೆ. ತೆಲುಗಿನಲ್ಲಿ ರಾಮ್ ಪೊತಿನೇನಿ ಅಭಿನಯದ ಹೊಸ ಚಿತ್ರದಲ್ಲಿ ಉಪೇಂದ್ರ ನಟಿಸುತ್ತಿದ್ದಾರೆ.
ತೆಲುಗಿನನ ಆ ಚಿತ್ರದಲ್ಲಿ ಉಪ್ಪಿ ಅವರದ್ದು ಸೂರ್ಯ ಕುಮಾರ್ ಹೆಸರಿನ ಪಾತ್ರ. ʻಅಂದನಿವಾಡು.. ಅಂದರಿವಾಡ.. ಮನ ಸೂರ್ಯಕುಮಾರ್ʼ ಎಂದು ಪೋಸ್ಟರ್ ಹಾಕುವ ಮೂಲಕ ಉಪೇಂದ್ರ ಎಂಟ್ರಿಯನ್ನು ಅಧಿಕೃತವಾಗಿ ಘೋಷಿಸಿದೆ ತೆಲುಗು ಸಿನಿಮಾ. ಚಿತ್ರಕ್ಕಿನ್ನೂ ಟೈಟಲ್ ಫೈನಲ್ ಆಗಿಲ್ಲ. ಅಂದಹಾಗೆ ಇದು ಮೈತ್ರಿ ಮೂವಿ ಮೇಕರ್ಸ್ ಸಿನಿಮಾ. ಸಿನಿಮಾದ ನಾಯಕಿ ಭಾಗ್ಯಶ್ರೀ ಬೋರ್ಸೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ.
ಈ ಹಿಂದೆ ತೆಲುಗಿನಲ್ಲಿ ನಾಯಕ ಹಾಗೂ ನಿರ್ದೇಶಕರಾಗಿ ಗೆದ್ದಿರುವ ಉಪ್ಪಿ, ಹೀರೋ ಆಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ.. ಕನ್ನಡದ ಹೀರೋಗಳು ಅದ್ಯಾಕೋ ಏನೋ.. ತೆಲುಗು, ತಮಿಳು ಚಿತ್ರಗಳಲ್ಲಿ ಪೋಷಕ ಅಥವಾ ಖಳನಟರ ರೋಲ್ʻಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತೆಲುಗಿನಲ್ಲಿ ನೀತೋನೇ ಉಂಟಾ, ಒಕೇಮಾಟ, ಕನ್ಯಾದಾನಂ, ರಾ.. ಮೊದಲಾದ ಚಿತ್ರಗಳಲ್ಲಿ ಹೀರೋ ಆಗಿಯೂ ಗೆದ್ದಿದ್ದ ಉಪ್ಪಿ, ಈಗ ಪೋಷಕ ಪಾತ್ರಗಳಿಗೆ ಒಪ್ಪುತ್ತಿರುವುದು ಏಕೆ..? ದುನಿಯಾ ವಿಜಯ್, ಶಿವಣ್ಣ ಅವರೂ ಇದೇ ಹಾದಿಯಲ್ಲಿದ್ದಾರೆ.
ಉಪೇಂದ್ರ ಮಗ ಈಗ ಹೀರೋ..!
ಇದೇ ವೇಳೆ ಉಪೇಂದ್ರ ಅವರ ಮಗ ಆಯುಷ್ ಹೀರೋ ಆಗುತ್ತಿದ್ದಾರೆ. ಚಿತ್ರರಂಗಕ್ಕೆ ಲಾಂಚ್ ಆಗುವುದಕ್ಕೆ ರೆಡಿಯಾಗಿದ್ದಾರೆ. ಉಪೇಂದ್ರ ಪುತ್ರನಿಗೆ ʻಮೊದಲ ಸಲʼ ಡೈರೆಕ್ಟರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಲಾಂಚ್ʻನ್ನು ಅಧಿಕೃತವಾಗಿ ಘೋಷಿಸಲು ಮೇ 12ರವರೆಗೆ ಕಾಯ್ದು, ಸ್ಕ್ರಿಪ್ಟ್ ಪೂಜೆ ಮಾಡಲಾಗಿದೆ. ಅಂದು ಆಯುಷ್ ಉಪೇಂದ್ರ 21ನೇ ಹುಟ್ಟುಹಬ್ಬಕ್ಕೆ ಕಾಲಿಟ್ಟ ದಿನ. ಮಂತ್ರಾಲಯಕ್ಕೆ ತೆರಳಿ ಉಪೇಂದ್ರರ ಇಡೀ ಕುಟುಂಬ ಪೂಜೆ ಸಲ್ಲಿಸಿತ್ತಲ್ಲ.. ಆ ದಿನ ಆಯುಷ್ ಉಪೇಂದ್ರ ರಂಗ ಪ್ರವೇಶಕ್ಕೆ ಸಿದ್ಧತೆ ನಡೆದಿವೆ.
ಆಯುಷ್ ನಟಿಸುತ್ತಿರುವ ಚಿತ್ರದ ಡೈರೆಕ್ಟರ್ ಪುರುಷೋತ್ತಮ್. ‘ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಮೊದಲ ಸಲ’ ಚಿತ್ರಕ್ಕೆ ನಿರ್ದೇಶನ ಮಾಡಿದ್ದ ಪುರುಷೋತ್ತಮ್. ಯಶ್, ಭಾಮಾ, ರಂಗಾಯಣ ರಘು ಹಾಗೂ ತಾರಾ ಅಭಿನಯದ ಚಿತ್ರ ಯಶ್ ವೃತ್ತಿ ಜೀವನದ ಒಂದೊಳ್ಳೆ ಲವ್ ಸ್ಟೋರಿ ಇದ್ದ ಸಿನಿಮಾ. ಇದೀಗ ಪುರುಷೋತ್ತಮ್ ಅವರ ಈ ಸಿನಿಮಾದಲ್ಲಿಯೂ ಲವ್ ಸ್ಟೋರಿಯೇ ಇರಲಿದೆ. ತಮ್ಮ ಮಗನ ಮೊದಲ ಸಿನಿಮಾದಲ್ಲಿರೋದು ಲವ್ ಸ್ಟೋರಿ ಅನ್ನೋದನ್ನೂ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ.
ಉಪೇಂದ್ರ ಅವರ ನೆಚ್ಚಿನ ಕ್ಯಾಮರಾಮನ್ ಹೆಚ್. ಸಿ. ವೇಣು ಈ ಚಿತ್ರಕ್ಕೆ ಕ್ಯಾಮೆರಾ ಕೆಲಸ ಮಾಡಲಿದ್ದರೆ, ಉಪೇಂದ್ರ ಅವರ ಮೈಸೂರಿನ ಗೆಳೆಯರೊಬ್ಬರು ಬಂಡವಾಳ ಹೂಡುತ್ತಿದ್ದಾರೆ.
ಸ್ಟಾರ್ ಮಕ್ಕಳು ಹೀರೋ ಆಗುವುದು ಹೊಸದೇನಲ್ಲ. ಆದರೆ ಸ್ಟಾರ್ ಮಕ್ಕಳ ಜವಾಬ್ದಾರಿಗಳೇ ಬೇರೆ ಇರುತ್ತವೆ. ಉಪೇಂದ್ರ ಹೀರೋ ಕಂ ಡೈರೆಕ್ಟರ್ ಆಗಿ ದೊಡ್ಡ ಹೆಸರು ಮಾಡಿದ್ದಾರೆ. ಪ್ರಿಯಾಂಕಾ ಕೂಡಾ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀಗಿರುವಾಗ ತಂದೆ-ತಾಯಿ ಇಬ್ಬರೂ ಸ್ಟಾರ್ ಆಗಿರುವಾಗ ಮಕ್ಕಳನ್ನು ಅವರಿಗೆ ಹೋಲಿಸಿ ನೋಡುವುದು ಸಾಮಾನ್ಯ. ಆಯುಷ್ ಉಪೇಂದ್ರ ಮೇಲೆ ದೊಡ್ಡ ಜವಾಬ್ದಾರಿಯೂ ಇದೆ.
ವಿಶೇಷ ಎಂದರೆ ಉಪೇಂದ್ರ ವಿಲನ್/ಪೋಷಕ ನಟನಾಗಿ ಹಿಂಬಡ್ತಿ ಪಡೆಯುತ್ತಿರುವ ಹೊತ್ತಿನಲ್ಲೇ ಮಗ ಹೀರೋ ಆಗುತ್ತಿದ್ದಾರೆ.