ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಪವಿತ್ರಾ ಗೌಡ & ಗ್ಯಾಂಗ್‌ಗೆ ರೇಣುಕಾಸ್ವಾಮಿ ಅವರ ತಾಯಿಯ ಹೇಳಿಕೆಗಳೇ ವರವಾಗುವ ಸಾಧ್ಯತೆ ತೋರುತ್ತಿದೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವುದರಿಂದ ಡಿಸೈಡ್ ಮಾಡುವುದು ಸಾಧ್ಯವಿಲ್ಲ. ಕೋರ್ಟ್ ತೀರ್ಪು ಹೀಗೆಯೇ ಬರುತ್ತದೆ ಎಂದು ಹೇಳುವುದು ತಪ್ಪಾಗುತ್ತದೆ.ಆದರೆ, ರೇಣುಕಾಸ್ವಾಮಿ ಅವರ ತಾಯಿ ರತ್ನಪ್ರಭ ಅವರು ನೀಡಿರುವ ಎರಡು ಹೇಳಿಕೆಗಳು ದರ್ಶನ್ & ಗ್ಯಾಂಗ್‌ಗೆ ಪ್ಲಸ್ ಆಗುವ ಸಾಧ್ಯತೆ ಇದೆ. ಇದರ ಸೂಚನೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರಿಗೂ ಗೊತ್ತಾಗಿದೆ.
ವಿಚಾರಣೆ ವೇಳೆ, ರೇಣುಕಾಸ್ವಾಮಿ ತಾಯಿ ರತ್ನಪ್ರಭ ಕ್ರಾಸ್ ಎಕ್ಸಾಮೀನೇಷನ್ ಎದುರಿಸಿದ್ದಾರೆ. ಅಂದರೆ ಪಾಟೀಸವಾಲು. ಆಗ ನೀಡಿರುವ ಹೇಳಿಕೆಗಳು ದರ್ಶನ್‌ಗೆ ವರವಾಗುತ್ತಿವೆ ಎನ್ನಲಾಗಿದೆ. ಇಷ್ಟಕ್ಕೂ ರತ್ನಪ್ರಭ ಅವರು ಗೊಂದಲಮಯವಾಗಿ ನೀಡಿರುವ ಹೇಳಿಕೆಗಳೇನು ಎಂದರೆ..
ರೇಣುಕಾಸ್ವಾಮಿ ಸಿಮ್, ಮೊಬೈಲ್ ಹಾಗೂ ಕಾಲ್ ಗಳ ಬಗ್ಗೆ ಗೊತ್ತಿಲ್ಲ ಎಂದಿರುವುದು. ಮತ್ತೊಂದು ರೇಣುಕಾಸ್ವಾಮಿ ಮೊಬೈಲ್ ನಂಬರ್ ಗೊತ್ತಿಲ್ಲ ಎಂದಿರುವುದು. ತನಿಖೆ ವೇಳೆ ಪೊಲೀಸರ ಎದುರು ಮಗನ ಮೊಬೈಲ್ ನಂಬರ್ ಗುರುತಿಸಿದ್ದ ರತ್ನಪ್ರಭ ಅವರು, ಈಗ ಮಗನ ಮೊಬೈಲ್ ನಂಬರ್ ಗೊತ್ತೇ ಇಲ್ಲ ಎಂದಿರುವುದು ಸಮಸ್ಯೆಯಾಗಿದೆ.
ಪೊಲೀಸ್ ತನಿಖೆ ವೇಳೆ ಮೊಬೈಲ್ ನಲ್ಲಿ ಸೇವ್ ಆಗಿದೆ ಅಂತ ಹೇಳಿಕೆ ನೀಡಿದ್ದ ರತ್ನಪ್ರಭ, ಮೊಬೈಲ್ ನಲ್ಲಿನ ನಂಬರ್ ನೋಡಿ ಇದೇ ನಂಬರ್ ಅಂತ ಕನ್ಫರ್ಮ್ ಮಾಡಿ ಪೊಲೀಸರಿಗೆ ಹೇಳಿದ್ದರು.ಆದರೆ, ಕೋರ್ಟ್ ಕ್ರಾಸ್ ಎಕ್ಸಾಮಿನೇಷನ್ ಮಾಡುವಾಗ ನನಗೆ ಮೊಬೈಲ್ ನಂಬರ್ ಗೊತ್ತಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಹೀಗಾಗಿ ಈ ಸಾಕ್ಷಿಯನ್ನು ಪರಿಗಣಿಸಬೇಡಿ ಎಂದು ಎಸ್‌ಪಿಪಿ ಪ್ರಸನ್ನ ಕುಮಾರ್ ಅರ್ಜಿ ಹಾಕಿದ್ದಾರೆ. ತದ್ವಿರುದ್ಧ ಸಾಕ್ಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮೃತನ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲಾಗುವುದು ಎಂದು ತನಿಖಾಧಿಕಾರಿಗಳ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕ್ರಾಸ್ ಎಕ್ಸಾಮಿನೇಷನ್ ವೇಳೆ ದರ್ಶನ್ ಪರ ಡಿಫೆನ್ಸ್ ಲಾಯರ್ ಸಿವಿ ನಾಗೇಶ್, ಪವಿತ್ರಾ ಗೌಡ ಪರ ವಕೀಲ ಬಾಲನ್ ಅವರ ಪಾಟೀಸವಾಲಿನಲ್ಲಿ ರತ್ನಪ್ರಭಾ ಅವರು ಮಗನ ಮೊಬೈಲ್ ನಂಬರ್ ಗೊತ್ತಿಲ್ಲ ಎಂದಿರುವ ಹೇಳಿಕೆ ದರ್ಶನ್ ಪರವಾಗಲಿದೆ. ದರ್ಶನ್ ಪರ ವಕೀಲರು ಪ್ರಕರಣದಲ್ಲಿ ಪೊಲೀಸರು ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ ಎಂದು ಹೇಳುತ್ತಿರುವುದಕ್ಕೆ ಇದು ಪುಷ್ಠಿ ನೀಡಲಿದೆ.
ಕೋರ್ಟಿನಲ್ಲಿ ಪ್ರತಿಕೂಲ ಸಾಕ್ಷಿ ಅಂದರೆ Hostile witness ಎಂದು ಆದರೆ ಅದು ಪ್ರಾಸಿಕ್ಯೂಷನ್‌ಗೆ ಹಿನ್ನಡೆ ಎಂದರ್ಥ. ರತ್ನಪ್ರಭಾ ಅವರನ್ನು Hostile witness ಎಂದು ಪರಿಗಣಿಸುವ ನಿಟ್ಟಿನಲ್ಲಿ ಎಸ್‌ಪಿಪಿ ಮನವಿ ಮಾಡಿದ್ದಾರೆ ಎಂದರೆ, ಅದು ಯಾವ ರೀತಿ ಡ್ಯಾಮೇಜ್ ಮಾಡಬಹುದು ಎಂದು ಊಹಿಸಬಹುದು.ಸಾಮಾನ್ಯವಾಗಿ ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ, ಪ್ರಾಸಿಕ್ಯೂಷನ್ ವಕೀಲರೇ ಪಾಟೀ ಸವಾಲು ಮಾಡುವುದಿಲ್ಲ. ಹೀಗಿದ್ದರೂ ಪ್ರಸನ್ನ ಕುಮಾರ್, ಪಾಟೀ ಸವಾಲಿಗೆ ಅನುಮತಿ ಕೇಳಿದ್ದಾರೆ. ಆದರೆ, ಡಿಫೆನ್ಸ್ ವಕೀಲರು ಕೋರ್ಟಿನಲ್ಲಿ ಮಾತಿನ ಚಾತುರ್ಯತೆ ತೋರಿಸಿ, ರತ್ನಪ್ರಭ ಅವರಿಂದ ಗೊಂದಲಮಯ ಹೇಳಿಕೆ ನೀಡುವಂತೆ ಮಾಡಿರಬಹುದು. ಹೀಗಾಗಿ ಪಾಟೀ ಸವಾಲು ಮಾಡುತ್ತಿದ್ದಾರೆ, ಅಷ್ಟೇ ಎಂಬ ವಾದವೂ ಬರುತ್ತಿದೆ.
ದರ್ಶನ್, ಪವಿತ್ರಾ ಗೌಡ ಸೇರಿ ಜೈಲಿನಲ್ಲಿರುವ ಪ್ರಕರಣದ ಏಳು ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಜಾಮೀನು ಮೇಲಿರುವ ರಾಘವೇಂದ್ರ ಹೊರತುಪಡಿಸಿ ಉಳಿದೆಲ್ಲ 9 ಆರೋಪಿಗಳು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಎಸ್‌ಪಿಪಿ ಮತ್ತು ದರ್ಶನ್ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಐ.ಪಿ.ನಾಯ್ಕ್ ಅವರು ಪ್ರಕರಣದ ಮುಂದಿನ ವಿಚಾರಣೆಯನ್ನು 2026ರ ಜ.5ಕ್ಕೆ ನಿಗದಿಪಡಿಸಿದ್ದಾರೆ.



