ಒಂದು ಸಿನಿಮಾ ಮಾಡುವುದಕ್ಕೆ ಎಷ್ಟು ಖರ್ಚಾಗುತ್ತದೆ.. ಹತ್ತಿಪ್ಪತ್ತು ಲಕ್ಷಕ್ಕೆ ಸಿನಿಮಾ ಮಾಡುವವರೂ ಇರ್ತಾರೆ. ಹತ್ತಿಪ್ಪತ್ತು ಕೋಟಿಗೆ ಸಿನಿಮಾ ಮಾಡೋವ್ರೂ ಇದ್ದಾರೆ. ಆದರೆ.. ಒಂದು ರೂಪಾಯಿಗೆ ಸಿನಿಮಾ ಮಾರೋವ್ರು ಸಿಕ್ಕಲ್ಲ. ಈಗ ಅದೂ ಆಗಿದೆ. ಕೇವಲ ಒಂದೇ ಒಂದು ರೂಪಾಯಿಗೆ ಸಿನಿಮಾ ಒಂದರ ಟಿವಿ ರೈಟ್ಸ್ ಸೇಲ್ ಆಗಿದೆ.
ಕನ್ನಡದಲ್ಲಿ ಸಿನಿಮಾಗಳನ್ನು ನೋಡುವುದಕ್ಕೆ ಜನ ಬರುತ್ತಿಲ್ಲ. ಥಿಯೇಟರಿಗೂ ಬರುತ್ತಿಲ್ಲ. ಅದಕ್ಕೆ ತಕ್ಕಂತೆ ಅತ್ತ ಟಿವಿಯವರೂ ಸಿನಿಮಾ ಕೊಂಡುಕೊಳ್ಳುತ್ತಿಲ್ಲ. ಒಂದಾನೊಂದು ಕಾಲದಲ್ಲಿ ಮುಹೂರ್ತದ ದಿನವೇ ಸಿನಿಮಾ ಟಿವಿ ರೈಟ್ಸ್ ಖರೀದಿಗೆ ಫುಲ್ ಪೇಮೆಂಟ್ ಕೊಡ್ತಿದ್ದ ಖಾಸಗಿ ಟಿವಿ ಚಾನೆಲ್ಲುಗಳು, ಈಗ ಸ್ಟಾರ್ ಹೀರೋಗಳನ್ನೇ ತಗೋಬೇಕೋ ಬೇಡವೋ.. ಎಂಬ ಬಗ್ಗೆ ಆಲೋಚನೆ ಮಾಡುತ್ತಿವೆ.
ಸಿನಿಮಾ ಹಿಟ್ ಆದರೆ ಮಾತ್ರ ನೋಡೋಣ ಎನ್ನುತ್ತಿವೆ. ಇದರ ಮಧ್ಯೆ ಇತ್ತೀಚೆಗೆ ರಿಲೀಸ್ ಅಗಿದ್ದ ಸಿನಿಮಾವೊಂದನ್ನು ಟಿವಿ ಚಾನೆಲ್ ಒಂದು ಕೇವಲ 1 ರೂಪಾಯಿ ಕೊಟ್ಟು ಖರೀದಿ ಮಾಡಿದೆ. ಅನುಮಾನ ಬೇಡ. ನಾವು ಬರೆದಿದ್ದು ಸರಿಯಾಗಿಯೇ ಇದೆ. ನೀವು ಓದಿದ್ದು ಕೂಡಾ ಸರಿಯಾಗಿಯೇ ಇದೆ. 1 ರೂ. ಅಂದ್ರೆ, ಒಂದು ರೂ. ಅಷ್ಟೇ. ಜನರಂತೂ ಥಿಯೇಟರಿಗೆ ಬಂದು ನೋಡಲಿಲ್ಲ. ಟಿವಿಯಲ್ಲಾದರೂ ನೋಡಲಿ ಎಂಬ ಆಸೆಯೊಂದಿಗೆ ಸಿನಿಮಾವನ್ನು ಸೇಲ್ ಮಾಡಿದ್ದಾರೆ ಸಿನಿಮಾ ಪ್ರೊಡ್ಯೂಸರು.
ಯಾವುದು ಆ ಸಿನಿಮಾ.. ಯಾವುದು ಟಿವಿ ಚಾನೆಲ್..?
ಆ ಸಿನಿಮಾ ಯಾವುದು.. ಹೀರೋ ಯಾರು.. ನಿರ್ದೇಶಕ ಯಾರು.. ಖರೀದಿಸಿದ ಟಿವಿ ಚಾನೆಲ್ ಯಾವುದು.. ಈ ಎಲ್ಲ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲ. 1 ರೂ.ಗೆ ಸಿನಿಮಾ ಸೇಲ್ ಆಗಿರುವುದಂತೂ ಸತ್ಯ. ಆದರೆ ಸ್ಪಷ್ಟವಾಗಿ ಹೇಳೋಕೆ ಸಾಧ್ಯವಿಲ್ಲ. ಬೇಕಿದ್ದರೆ ಕ್ಲೂ ಕೊಡುತ್ತೇವೆ.
ಈ ಸಿನಿಮಾ ಕಳೆದ ವರ್ಷ ರಿಲೀಸ್ ಆಗಿತ್ತು. ಮಲೆನಾಡು ಪರಿಸರದಲ್ಲಿ ಚಿತ್ರಿತವಾಗಿರುವ ಸಿನಿಮಾ. ಈ ಸಿನಿಮಾ ಬಗ್ಗೆ ಸ್ಟಾರ್ ನಟರೆಲ್ಲ ಹಾಡಿ ಹೊಗಳಿದ್ದರು. ಸ್ಟಾರ್ ನಟರೊಬ್ಬರು ಈ ಚಿತ್ರವನ್ನು ದಯವಿಟ್ಟು ಗೆಲ್ಲಿಸಿ ಎಂದು ಪ್ರಚಾರ ಮಾಡಿದ್ದರು. ಥಿಯೇಟರಿಗೆ ಬಂದು ಸಿನಿಮಾ ನೋಡಿ ಬೆನ್ನು ತಟ್ಟಿದ್ದರು. ಈ ಸಿನಿಮಾಗೊಂದು ಪ್ರಶಸ್ತಿಯೂ ಬಂದಿದೆ. ನಿರ್ಮಾಪಕರು ಈ ಸಿನಿಮಾವನ್ನು ಗೆಲ್ಲಿಸಲೇಬೇಕು ಎಂದು ಹಠ ತೊಟ್ಟಿದ್ದರು. ಇತ್ತೀಚೆಗಷ್ಟೇ ಒಟಿಟಿಗೆ ಬಂದಿದ್ದ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಅಂದಹಾಗೆ ಈ ಸಿನಿಮಾವನ್ನು ಖರೀದಿ ಮಾಡಿರುವುದು ಬಣ್ಣ ಬಣ್ಣದ ಚಾನೆಲ್. ಅಷ್ಟೇ.
ಹಳೇ ಮಾಡೆಲ್ ಮತ್ತೆ ಶುರು..?
ಮೊದಲಿಗೆ ಟಿವಿ ಚಾನೆಲ್ಲುಗಳಲ್ಲಿ ಸ್ಲಾಟ್ʻಗಳನ್ನು ಸೇಲ್ ಮಾಡುವ ಪ್ರಕ್ರಿಯೆ ಜಾರಿಯಲ್ಲಿತ್ತು. ಅಂದರೆ ಒಂದು ಅಥವಾ ಅರ್ಧ ಗಂಟೆ ಸ್ಲಾಟ್ʻನ್ನು ಮಾರುವುದು. ಟಿವಿಯವರು ಯಾರೋ ಒಬ್ಬರಿಗೆ ಅರ್ಧ ಗಂಟೆ ಸ್ಲಾಟ್ ಕೊಟ್ಟರು ಎಂದರೆ, ಆ ಅರ್ಧ ಗಂಟೆಯಲ್ಲಿ ಅವರು ತಮಗೆ ಬೇಕಾದ ಪ್ರೋಗ್ರಾಂ ಹಾಕಿಕೊಳ್ಳಬಹುದು. ಆ ಸ್ಲಾಟ್ʻಗೆ ಜಾಹೀರಾತುದಾರರನ್ನು ಕರೆತರುವುದು ಕೂಡಾ ಅವರದ್ದೇ ಕೆಲಸ. ಲಾಭ ಬಂದರೆ ಸ್ಲಾಟ್ ಪಡೆದುಕೊಂಡವರಿಗೆ ಹೋಗುತ್ತದೆ. ಲಾಸ್ ಆದರೂ ಅವರದ್ದೇ. ದೂರದರ್ಶನದಲ್ಲಿ ಮಾತ್ರವೇ ಲಭ್ಯವಿದ್ದ ಈ ಸಿಸ್ಟಂ, ಸದ್ಯಕ್ಕೆ ಉದಯ ಟಿವಿಯಲ್ಲಿ ಈಗಲೂ ಭಾಗಶಃ ಜಾರಿಯಲ್ಲಿದೆ.



