ಭೈರತಿ ರಣಗಲ್. ಇದೇ ನವೆಂಬರ್ 15ಕ್ಕೆ ರಿಲೀಸ್ ಆಗ್ತಿರೋ ಶಿವಣ್ಣ ಅಭಿನಯದ ಸಿನಿಮಾ. ಇದು 2017 ರಲ್ಲಿ ರಿಲೀಸ್ ಆಗಿದ್ದ ಮಫ್ತಿ ಚಿತ್ರದ ಪ್ರೀಕ್ವೆಲ್. ಅಂದರೆ ಭೈರತಿ ರಣಗಲ್ ಎಂಬ ವ್ಯಕ್ತಿ ಡಾನ್ ಆಗಿದ್ದೇಕೆ ಅನ್ನೋ ಕಥೆ ಹೇಳ್ತಾರೆ ಭೈರತಿ ರಣಗಲ್ ಸಿನಿಮಾದಲ್ಲಿ.
ಮಫ್ತಿ ಚಿತ್ರದಲ್ಲಿ ಹೀರೋ ಆಗಿದ್ದವರು ಶ್ರೀಮುರಳಿ. ಅವರು ಅಂಡರ್ ಕವರ್ ಸಿಬಿಐ ಆಫೀಸರ್ ʻಗಣʼನ ಪಾತ್ರ ಮಾಡಿದ್ದರು. ಶಾನ್ವಿ ಶ್ರೀವಾತ್ಸವ ಹೀರೋಯಿನ್. ಆದರೆ ಮಫ್ತಿ ಚಿತ್ರಕ್ಕೆ ಲುಂಗಿಯಿಟ್ಟು ಬರುವ ಭೈರತಿ ರಣಗಲ್ ಪಾತ್ರವೇ ಹೈಲೈಟ್ ಆಗಿತ್ತು. ಚಿತ್ರದ ಕಥೆಯಲ್ಲಿ ಭೈರತಿ ರಣಗಲ್ ಅವರಿಗೆ ತಂಗಿ ಇರುತ್ತಾಳೆ. ಆಕೆಯ ಹೆಸರು ವೇದವತಿ. ಆ ಪಾತ್ರದಲ್ಲಿ ಛಾಯಾಸಿಂಗ್ ನಟಿಸಿದ್ದರು.
ಮಫ್ತಿಯ ಆರಂಭದಲ್ಲಿ ಛಾಯಾಸಿಂಗ್ ಎಂದರೆ ಭೈರತಿ ರಣಗಲ್ ಹೆದರುತ್ತಾನೇನೋ ಎನ್ನುವಂತೆ ತೋರಿಸಲಾಗುತ್ತದಾದರೂ, ಅದು ಭಯ ಅಲ್ಲ ಅನ್ನೋದು ಗೊತ್ತಾಗುತ್ತದೆ. ವೇದವತಿ, ಭೈರತಿಯ ತಂಗಿಯಾಗಿರುತ್ತಾಳೆ. ಆಕೆಯ ಗಂಡನನ್ನು ಭೈರತಿ ರಣಗಲ್ ಕೊಂದಿರುತ್ತಾನೆ. ಹೀಗಾಗಿ ತಂಗಿಯ ವೈಧವ್ಯಕ್ಕೆ ನಾನೇ ಕಾರಣನಾದೆ ಎಂಬ ತಪ್ಪಿತಸ್ಥ ಭಾವನೆ ಭೈರತಿಯದ್ದಾದರೆ, ಅಣ್ಣನೇ ತನ್ನ ಗಂಡನನ್ನು ಕೊಂದ ಎನ್ನುವ ಆಕ್ರೋಶ ತಂಗಿ ವೇದವತಿಯದ್ದು. ಮಫ್ತಿ ಚಿತ್ರದಲ್ಲಿ ವ್ಹಾವ್ ಎನಿಸುವ ದೃಶ್ಯಗಳಲ್ಲಿ ಶಿವಣ್ಣ-ಛಾಯಾ ಸಿಂಗ್ ಜುಗಲ್ಬಂದಿಯೂ ಇದೆ. ಇಬ್ಬರೂ ಕಣ್ಣುಗಳಲ್ಲೇ ಮಾತನಾಡ್ತಾರೆ. ಆದರೆ ಭೈರತಿ ರಣಗಲ್ ಕುರಿತು ಇದುವರೆಗೆ ಬಂದ ಟೀಸರ್, ಹಾಡುಗಳಲ್ಲಿ ಛಾಯಾಸಿಂಗ್ ಪಾತ್ರ ಅರ್ಥಾತ್ ವೇದವತಿಯ ನೆರಳೂ ಇಲ್ಲ.
ಹಾಗಾದರೆ ಭೈರತಿ ರಣಗಲ್ ಚಿತ್ರದಲ್ಲಿ ನರ್ತನ್ ಹೇಳೋ ಕಥೆ ಯಾರದು..? ಇದೇ ಈಗ ಎಲ್ಲರಲ್ಲೂ ಕಾಡುತ್ತಿರೋ ಕುತೂಹಲ. ಹಾಗೆ ನೋಡಿದರೆ ಮಫ್ತಿ ಚಿತ್ರದಲ್ಲಿ ಇದ್ದ ಶ್ರೀಮುರಳಿ, ಶಾನ್ವಿ ಶ್ರೀವಾತ್ಸವ, ದೇವರಾಜ್, ವಸಿಷ್ಠ ಸಿಂಹ ಯಾರೂ ಈ ಚಿತ್ರದಲ್ಲಿಲ್ಲ. ಆದರೆ ಇವರೆಲ್ಲರೂ ಭೈರತಿ ರಣಗಲ್ ಜೊತೆಯಲ್ಲೇ ಇರುತ್ತಾರೆ. ಶತ್ರುಗಳಾಗಿ.. ಮಿತ್ರರಾಗಿ ಇರುತ್ತಾರೆ. ಇದೂವರೆಗೂ ಅವರ ಪಾತ್ರ ರಿವೀಲ್ ಆಗಿಲ್ಲ.
ಹಾಗಾದರೆ ನರ್ತನ್ ಹೇಳುತ್ತಿರೋ ಕಥೆ ಏನು..? ಕೇವಲ ಲಾಯರ್ ಪಾತ್ರಧಾರಿಯಾಗಿದ್ದ ಭೈರತಿ ರಣಗಲ್, ಅನ್ಯಾಯದ ವಿರುದ್ಧ ಸಿಡಿದೇಳುವ ಕಥೆಯನ್ನಷ್ಟೇ ಹೇಳ್ತಿದ್ದಾರಾ.. ಕುತೂಹಲವಂತೂ ಇದೆ.
ಗೀತಾ ಪಿಕ್ಚರ್ಸ್ ಮೂಲಕ ನಿರ್ಮಾಣವಾಗಿರುವ ಭೈರತಿ ರಣಗಲ್ ಸಿನಿಮಾ, ಆಗಸ್ಟ್ ೧೫ಕ್ಕೆ ರಿಲೀಸ್ ಆಗುತ್ತಿದೆ. ಶಿವಣ್ಣ ಎದುರು ರುಕ್ಮಿಣಿ ವಸಂತ್ ನಾಯಕಿಯಾಗಿದ್ದಾರೆ. ತಂಗಿ ವೇದವತಿ ಛಾಯಾ ಸಿಂಗ್ ಮಿಸ್ಸಿಂಗ್. ಜೊತೆಗೆ, ಅವಿನಾಶ್, ದೇವರಾಜ್, ಗೋಪಾಲ ಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸೂಚನೆಯಂತೂ ಇದೆ. ಆದರೆ ಇದುವರೆಗೆ ಟೀಸರ್ ಅಥವಾ ಹಾಡಿನಲ್ಲಿ ಕಾಣಿಸಿಕೊಂಡಿಲ್ಲ. ನವೆಂಬರ್ 15ಕ್ಕೆ ರಾಜ್ಯಾದ್ಯಂತ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.



