ಬೆಳವಡಿ ಮಲ್ಲಮ್ಮ. ಛತ್ರಪತಿ ಶಿವಾಜಿಯ ಸೈನ್ಯವನ್ನೇ ಸೋಲಿಸಿದ್ದ ವೀರರಾಣಿ. ಶಿವಾಜಿ, ಬೆಳವಡಿಯ ಹಸುಗಳನ್ನು ಕದ್ದೊಯ್ಯಲು ಬಂದಿದ್ದಾಗ ಯುದ್ಧವಾಯಿತು. ಆ ಯುದ್ಧದಲ್ಲಿ ಶಿವಾಜಿಯ ಸೈನ್ಯ ಸೋತು ಹೋಯಿತು ಎನ್ನುವುದು ಒಂದು ಕಥೆ. ಇನ್ನೊಂದು ಕಥೆಯ ಪ್ರಕಾರ ಯುದ್ಧ ನಡೆಯುವಾಗ ಶಿವಾಜಿಗೆ ತಾನು ಯುದ್ಧ ಮಾಡುತ್ತಿರುವುದು ಬೆಳವಡಿ ಮಲ್ಲಮ್ಮನ ವಿರುದ್ಧ ಎಂದು ಗೊತ್ತಿರಲಿಲ್ಲ. ಬೆಳವಡಿ ಮಲ್ಲಮ್ಮನೇ ಎದುರು ಬಂದಾಗ ತಂಗಿಯ ಎದುರು ತಾನು ಕೈ ಎತ್ತಬಾರದಿತ್ತು ಎಂದು ಶಿವಾಜಿಯೇ ಶರಣಾದ ಎನ್ನುವುದು ಮತ್ತೊಂದು ಕಥೆ. ಕಥೆ ಏನೇ ಇರಲಿ.. ಇದೀಗ ಶಿವಾಜಿಯ ಕುಟುಂಬ ಎಲ್ಲಿದೆಯೋ.. ಹೇಗಿದೆಯೋ. ಗೊತ್ತಿಲ್ಲ. ಆದರೆ ಮಲ್ಲಮ್ಮನ ಕುಟುಂಬ ಸಿಕ್ಕಿದೆ.
ಅಂದಹಾಗೆ ಮಲ್ಲಮ್ಮನ ಕುಟುಂಬದ ಬಗ್ಗೆ ಹುಡುಕಿ ವರದಿ ಮಾಡಿರುವುದು ಈಟಿವಿ ನ್ಯೂಸ್ ಭಾರತ್.
ಮಲ್ಲಮ್ಮನ ವಂಶಸ್ಥರು ಇಂದಿನ ಬೈಲಹೊಂಗಲ ತಾಲ್ಲೂಕಿನ ನಯಾನಗರದ ಹಿರೇಮುಳಕೂರ ಗ್ರಾಮದಲ್ಲಿ ವಾಸವಾಗಿದ್ದಾರೆ. ಮಲಪ್ರಭಾ ನದಿಯಲ್ಲಿ ಅವರ ಬಹಳಷ್ಟು ಜಮೀನು ಮುಳುಗಡೆಯಾಗಿದ್ದು, ಅಳಿದುಳಿದ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಬದುಕುತ್ತಿದ್ದಾರೆ. ವಾಡೆ, ಅರಮನೆ ಎಲ್ಲವನ್ನು ಮಲಪ್ರಭೆ ಆಹುತಿ ಪಡೆದಿದ್ದಾಳೆ.
ಮಡಿವಾಳಪ್ಪ ದೇಸಾಯಿ. ಈ ಕುಟುಂಬದ ಹಿರಿಯ. “ನಾವು ಬೆಳವಡಿ ಸಂಸ್ಥಾನದ ನಿಜವಾದ ವಂಶಜರು. ಮುಳಕೂರಿಗೆ ಬಂದು ನೆಲೆಸುವ ರಾಜಾ ಬೊಮ್ಮಪ್ಪ ದೇಸಾಯಿ ಅವರಿಂದ ನಮ್ಮ ಮನೆತನ ಮುಂದುವರಿದಿದೆ. ನಮಗೆ ಸಂಬಂಧಿಸಿದ ಜಾಗದಲ್ಲೇ ಮಲ್ಲಮ್ಮನವರ ಸಮಾಧಿ ಇದೆ. ಈಗ ಸದ್ಯಕ್ಕೆ ಅದು ಮುಳುಗಡೆಯಾಗಿದೆ. ನೀರು ಕಡಿಮೆಯಾದಾಗ ನಾವು ಪೂಜೆ ಮಾಡಿ ಬರುತ್ತೇವೆ. ಅಲ್ಲಿಯೇ ವೀರಭದ್ರೇಶ್ವರ ದೇವಸ್ಥಾನವೂ ಇದೆ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಮಲ್ಲಮ್ಮ, ಗಂಡು ಮಕ್ಕಳಿಗೆ ಮಲ್ಲಿಕಾರ್ಜುನ(ಮಲ್ಲಪ್ಪ) ಅಂತಾ ಹೆಸರಿಟ್ಟುಕೊಂಡು ಬಂದಿದ್ದೇವೆ” ಎಂದು ವಿವರಣೆ ಕೊಡುತ್ತಾರೆ.
ಹೆಳವರ ಕಡೆಯ ವಂಶಾವಳಿ, ಆಗಿನ ಕಾಲದ ತಲವಾರುಗಳು ಈಗಲೂ ಮನೆಯಲ್ಲಿವೆಯಂತೆ. ಬಹುತೇಕ ದಾಖಲೆಗಳು ಸವದತ್ತಿ ತಾಲ್ಲೂಕಿನ ಹೂಲಿ ಬ್ರಹ್ಮನ್ಮಠದಲ್ಲಿವೆ ಎನ್ನುವ ಮಲ್ಲಮ್ಮನ ಕುಟುಂಬ ನೀವೇನು ಆಸ್ತಿ-ಪಾಸ್ತಿ ಕೊಡುವುದು ಬೇಡ. ನಮ್ಮಲ್ಲಿ ಹರಿಯುತ್ತಿರುವ ಮಲ್ಲಮ್ಮನ ರಕ್ತಕ್ಕೆ ಗೌರವ ಕೊಡಿ. ಸ್ವಾಭಿಮಾನದ ಬದುಕನ್ನು ಪ್ರೋತ್ಸಾಹ ನೀಡಿ ಎನ್ನುತ್ತಾರೆ.
ಸದ್ಯಕ್ಕೆ ಈ ಕುಟುಂಬದ ಇರುವಿಕೆಯ ಬಗ್ಗೆ ಹುಡುಕಾಟಕ್ಕೆ ಕಾರಣವಾಗಿದ್ದು ಛಾವಾ ಸಿನಿಮಾ. ಹಿಂದಿಯಲ್ಲಿ ರಿಲೀಸ್ ಆಗಿರುವ ಛಾವಾ ಸಿನಿಮಾ, ಮರಾಠರಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತಿದೆ. ಇದೇ ವೇಳೆ ಕರ್ನಾಟಕದಲ್ಲಿ ಶಿವಾಜಿಯನ್ನು ಒಬ್ಬ ದನಗಳ ಕಳ್ಳ, ಲೂಟಿಕೋರ, ಬೆಳವಡಿ ಮಲ್ಲಮ್ಮನ ಎದುರು ಸೋತು ಓಡಿ ಹೋದವನು. ಅವನು ರಾಜನೇ ಅಲ್ಲ ಎಂಬ ವಾದ ಬರುತ್ತಿವೆ. ಹೀಗಾಗಿಯೇ ಈಗೇನಾದರೂ ಆ ಬೆಳವಡಿ ಮಲ್ಲಮ್ಮನ ವಂಶಜರು ಸಿಕ್ಕುತ್ತಾರೆಯೇ ಎಂದು ಹುಡುಕಿ ಹೊರಟವರಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಅವರ ವಂಶಜರೇ ಕಣ್ಣಿಗೆ ಬಿದ್ದಿದ್ದಾರೆ. ಇಂತಾದ್ದೊಂದು ವರದಿ ಮಾಡಿದ ಈಟಿವಿ ಭಾರತ್ ನ್ಯೂಸ್ ಚಾನೆಲ್ಲಿಗೆ (ಯೂಟ್ಯೂಬ್ ಚಾನೆಲ್) ಧನ್ಯವಾದ ಹೇಳುತ್ತಿದ್ದಾರೆ ಕನ್ನಡಿಗರು. ಆದರೆ ಈ ಕುಟುಂಬದವರ ಬಳಿ ಶಿವಾಜಿಯ ಜೊತೆಯಲ್ಲಿ ಆದ ಯುದ್ಧದ ಬಗ್ಗೆ ಸ್ಪಷ್ಟ ದಾಖಲೆಗಳಿಲ್ಲ. ಶತಶತಮಾನಗಳ ಹಿಂದೆ ನಡೆದ ಯುದ್ಧದ ಬಗ್ಗೆ ಇವರಿಗೂ ಕೂಡಾ ಪುಸ್ತಕಗಳನ್ನು ಓದಿಯೇ ಗೊತ್ತು.



