2025ರಲ್ಲಿಯೂ ವರ್ಷಕ್ಕೆ 12 ತಿಂಗಳುಗಳೇ ಇದ್ದರೂ ಗೃಹಲಕ್ಷ್ಮಿ ಅಧಿಕೃತ ಲೆಕ್ಕದಲ್ಲಿ ಫೆಬ್ರವರಿ ಮತ್ತು ಮಾರ್ಚ್ ಮಿಸ್ ಆಗಿತ್ತು. ಅಂದರೆ ಕಳೆದ ವರ್ಷ ರಾಜ್ಯ ಸರ್ಕಾರ ಆ ಎರಡು ತಿಂಗಳನ್ನು ಲೆಕ್ಕದಿಂದ ಎಗರಿಸಿ, ಕಾಗದದಲ್ಲಿ ಮಾತ್ರ ತೋರಿಸಿ ಹಣ ನೀಡದೆ ತಪ್ಪಿಸಿಕೊಂಡಿತ್ತು. ಇದು ವಿಧಾನಸಭೆ ಅಧಿವೇಶನದಲ್ಲಿಯೂ ಚರ್ಚೆಯಾಗಿ, ಸರ್ಕಾರ ತಪ್ಪಾಗಿದೆ ಎಂದು ಒಪ್ಪಿಕೊಂಡು ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗದ ಒದ್ದಾಡಿತ್ತು. ಇದೀಗ ಆ ಬಾಕಿ ಲಕ್ಷ್ಮಿಯ ಅಪ್ ಡೇಟ್ ಬಂದಿದೆ.
ಈ ಕುರಿತು ಮಾತನಾಡಿರುವ ಲಕ್ಷ್ಮೀ ಹೆಬ್ಬಾಳ್ಕರ್ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಪಾವತಿಯಾಗಿಲ್ಲ. ಆರ್ಥಿಕ ಇಲಾಖೆಯಿಂದ ಹಣ ಬಂದ ಕೂಡಲೇ ಫಲಾನುಭವಿಗಳ ಖಾತೆಗೆ ಹಣ ಪಾವತಿಸಲಾಗುವುದು ಎಂದು ಹೇಳಿದ್ದಾರೆ. ಆರ್ಥಿಕ ಇಲಾಖೆಗೆ ಹಣ ಬಿಡುಗಡೆಗೆ ತಿಳಿಸಲಾಗಿದೆ. ಮುಖ್ಯಮಂತ್ರಿ ಕೂಡ ಈ ಕುರಿತು ಭರವಸೆ ನೀಡಿದ್ದಾರೆ. ಆರ್ಥಿಕ ಇಲಾಖೆಯಿಂದ ಹಣ ಬಂದ ಕೂಡಲೇ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಪಾವತಿಸಲಾಗುವುದು ಎಂದು ಹೇಳಿದ್ದಾರೆ.
ಫೆಬ್ರವರಿ, ಮಾರ್ಚ್ ತಿಂಗಳ ಹಣ ನೀಡದೆಯೇ ನಂತರದ ತಿಂಗಳುಗಳ ಹಣ ನೀಡಿದ್ದು ಹೇಗೆ ಎಂಬ ಮೂಲ ಪ್ರಶ್ನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರ ಕೊಟ್ಟಿಲ್ಲ. ಇದೇ ವೇಳೆ ಬಿಪಿಎಲ್ ಪಡಿತರ ಚೀಟಿ ರದ್ದಾದ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಯೋಜನೆ ಅಡಿ ಸಹಾಯಧನ ಸ್ಥಗಿತಗೊಳಿಸಲಾಗುವುದು. ಗೃಹ ಲಕ್ಷ್ಮೀ ಯೋಜನೆ ಅಡಿ ಹಿಂದೆ ಎಪಿಎಲ್, ಬಿಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿದ ಮನೆ ಯಜಮಾನಿಯರಿಗೆ ಸಹಾಯಧನ ನೀಡಲಾಗುತ್ತಿದೆ. ಆದರೆ, ಇದೀಗ ಕುಟುಂಬದಲ್ಲಿ ಯಾರದರೂ ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಗೃಹ ಲಕ್ಷ್ಮೀ ಸಹಾಯಧನ ನೀಡುವುದಿಲ್ಲ ಎಂದು ಅಪ್ ಡೇಟ್ ಮಾಡಿದ್ದಾರೆ.
ಪಡಿತರ ಚೀಟಿ ಆಧರಿಸಿ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಹಣ ಪಾವತಿಸಲಾಗುತ್ತಿದೆ. ಆಹಾರ ಇಲಾಖೆ ನಿಯಮ ಪಾಲಿಸದ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದ್ದು, ಬಿಪಿಎಲ್ ಪಡಿತರ ಚೀಟಿ ರದ್ದಾದ ಕುಟುಂಬಗಳ ಯಜಮಾನಿಯರಿಗೆ ಗೃಹ ಲಕ್ಷ್ಮೀ ಸಹಾಯಧನ ಸ್ಥಗಿತಗೊಳಿಸಲಾಗಿದೆ. ಆಹಾರ ಇಲಾಖೆಯಿಂದ ದಾಖಲೆಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
ಅಲ್ಲಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಹಣ ಈಗಲೇ ಬರುವುದು ಅಸಾಧ್ಯ. ವಿಶೇಷ ಎಂದರೆ ತಮ್ಮ ಖಾತೆಗೆ ಬಂದಿದ್ದು ಯಾವ ತಿಂಗಳ ಹಣ ಎಂಬ ಬಗ್ಗೆ ಗೃಹಲಕ್ಷ್ಮಿ ಫಲಾನುಭವಿಗಳಿಗೂ ಮಾಹಿತಿ ಇಲ್ಲ. ಕೆಲವರಿಗೆ ಬರುತ್ತದೆ, ಕೆಲವರಿಗೆ ಬರುತ್ತಿಲ್ಲ. ನಮ್ಮ ಅಕೌಂಟಿನಲ್ಲೇ ಏನೋ ಪ್ರಾಬ್ಲಂ ಇರಬೇಕು ಎಂದು ಅಂದುಕೊಂಡರೆ ಹಾಗೆ ಇರಲ್ಲ. ರಿಯಾಲಿಟಿ ಚೆಕ್ ಮಾಡಿದರೆ ಅಕ್ಕಪಕ್ಕದಲ್ಲೇ ಮನೆ ಇರುವ ಇಬ್ಬರಿಗೆ ಬೇರೆ ಬೇರೆ ತಿಂಗಳು ಹಣ ಬರುತ್ತದೆ. ಈ ತಿಂಗಳು ಅವರಿಗೆ ಬಂದರೆ, ಇವರಿಗೆ ಮಿಸ್. ಮುಂದಿನ ತಿಂಗಳು ಇವರಿಗೆ ಬಂದರೆ ಅವರಿಗೆ ಮಿಸ್. ಹೀಗಾಗಿ ಫಲಾನುಭವಿಗಳಲ್ಲೂ ಗೊಂದಲ ಇದೆ.



