ರಾಧಿಕಾ ಕುಮಾರಸ್ವಾಮಿ. ಇತ್ತೀಚೆಗಷ್ಟೇ 38ನೇ ವರ್ಷದ ಹುಟ್ಟುಹಬ್ಬ ಸೆಲಬ್ರೇಟ್ ಮಾಡಿರೋ ನಟಿ. ಶಿವಣ್ಣ ಜೊತೆ ನಟಿಸಿರುವ ಒಂದೆರಡು ಸಿನಿಮಾ ಬಿಟ್ಟರೆ ರಾಧಿಕಾ ಕುಮಾರಸ್ವಾಮಿ ಬಹುತೇಕ ನಟಿಸಿದ್ದು ಗ್ಲಾಮರಸ್ ಪಾತ್ರಗಳಲ್ಲಿ. ಇಂತಹ ರಾಧಿಕಾ ಕುಮಾರಸ್ವಾಮಿ ಮಹಿಳಾ ಅಘೋರಿಯಾಗಿ ನಟಿಸಿದ್ಧಾರೆ. ಭೈರಾದೇವಿ ಚಿತ್ರದಲ್ಲಿ. ವಿಶೇಷವೆಂದರೆ ಈ ಚಿತ್ರದಲ್ಲಿ ರಾಧಿಕಾ ಅವರದ್ದು ಅಘೋರಿಯ ಪಾತ್ರ. ನಟಿಯೊಬ್ಬರು ಅಘೋರಿ ಪಾತ್ರ ಮಾಡುತ್ತಿರುವುದು ಇದೇ ಮೊದಲು. ಹೀಗಾಗಿ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ.
ಏಕೆಂದರೆ ಇದುವರೆಗೆ ಬಾಲಿವುಡ್ ಸೇರಿದಂತೆ ಯಾವ ಚಿತ್ರಗಳಲ್ಲೂ ಮಹಿಳಾ ಅಘೋರಿಗಳ ಚಿತ್ರಣ ಇಲ್ಲ. ಹಾಗಂತ ಅಘೋರಿಗಳಲ್ಲಿ ಮಹಿಳೆಯರು ಇಲ್ಲ ಎಂದರ್ಥವಲ್ಲ. ಅಘೋರಿಗಳಲ್ಲಿ ಮಹಿಳೆಯನ್ನು ಶಕ್ತಿ ಎಂದೇ ಪರಿಗಣಿಸುತ್ತಾರೆ. ಅಘೋರಿಗಳು ಹೆಣ್ಣನ್ನು ಸಂಭೋಗಕ್ಕೆ ಮಾತ್ರವೇ ಬಳಸುವುದಿಲ್ಲ. ಕೇವಲ ಶಕ್ತಿ ಸಂಚಯನಕ್ಕಾಗಿಯೇ ಬಳಸುವುದಿಲ್ಲ. ಹಾಗೆ ನೋಡಿದರೆ ಅಘೋರಿಗಳ ಸಂಭೋಗ ಸಮಾಧಿಗೆ ಇರುವ ಕಥೆಗಳು ಬಹುತೇಕ ಕಪೋಲ ಕಲ್ಪಿತವೇ.
ಅಘೋರಿಗಳಲ್ಲಿ ಹೆಣ್ಣನ್ನು ಯೋಗಿನಿ ಎಂದೇ ಭಾವಿಸುತ್ತಾರೆ. ಪೂಜಿಸುತ್ತಾರೆ. ಹೆಣ್ಣು ಎಂದರೆ ಅಘೋರಿಗಳ ಪಾಲಿಗೆ ಸರ್ವೇಶ್ವರಿ. ಆಕೆಗೆ ಶಿವನನ್ನೇ ಸೃಷ್ಟಿಸಿದವಳು ಎಂಬ ನಂಬಿಕೆ. ಅಂತಹ ಅಘೋರಿಗಳು ಯೋಗಿನಿ ಅಥವಾ ಸರ್ವೇಶ್ವರಿಗೆ ಪೂಜಿಸುವುದಷ್ಟೇ ಅಲ್ಲ, ತಾವೇ ಶಿವನಾಗಬೇಕು ಎಂದು ತಪಸ್ಸು ಮಾಡುವವರು. ಅಂತಹ ಅಘೋರಿಗಳ ಮಧ್ಯೆ, ಸಾಮಾನ್ಯವಾಗಿ ಹೆಣ್ಣು ಅಘೋರಿಗಳು ಕಾಣಿಸುವುದು ಕಷ್ಟ. ನಾನು ಆ ಬಗ್ಗೆ ಹೆಚ್ಚು ತಿಳಿದುಕೊಂಡು ಈ ಸಿನಿಮಾ ಮಾಡಿದ್ದೇನೆ. ರಾಧಿಕಾ ಕುಮಾರಸ್ವಾಮಿ ಅವರು ಹೆಣ್ಣು ಅಘೋರಿ ಪಾತ್ರದಲ್ಲಿ ನಟಿಸಿದ್ದಾರೆ. ‘ಭೈರಾದೇವಿ’ ಸಿನಿಮಾವನ್ನು ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ನಿರ್ಮಾಣ ಮಾಡಲಾಗಿದೆ. ಮೂರು ಭಾಷೆಗಳಲ್ಲೂ ಪ್ರತ್ಯೇಕವಾಗಿ ಶೂಟಿಂಗ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಶೀಜೈ.
ಅಸಲಿಗೆ, ನಂಗೆ ಸ್ಮಶಾನ ಅಂದ್ರೆನೇ ಭಯ. ಆದರೂ ಈ ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ಸ್ಮಶಾನದಲ್ಲೇ ನಡೆದಿದೆ. ನನ್ನ 20 ವರ್ಷಗಳ ವೃತ್ತಿ ಬದುಕಿನಲ್ಲಿ ‘ಭೈರಾದೇವಿ’ ತುಂಬ ವಿಭಿನ್ನವಾದ ಸಿನಿಮಾ. ಚಿತ್ರದ ಕ್ರೆಡಿಟ್ ಸಂಪೂರ್ಣವಾಗಿ ನಿರ್ದೇಶಕ ಶ್ರೀಜೈ ಅವರಿಗೇ ಸಲ್ಲಬೇಕು ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ಭೈರಾದೇವಿ ಚಿತ್ರಕ್ಕೆ ಪ್ರೊಡ್ಯೂಸರ್ ಕೂಡಾ ಅವರೇ. . ‘ಭೈರಾದೇವಿ’ ಸಿನಿಮಾವು ರಿಲೀಸ್‌ಗೆ ಸಿದ್ದವಾಗಿದ್ದು, ಶೀಘ್ರದಲ್ಲೇ ರಿಲೀಸ್ ಡೇಟ್ ಘೋಷಣೆ ಮಾಡುತ್ತೇವೆ’ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.
ರಾಧಿಕಾ ನಟನೆಯ ಮತ್ತೊಂದು ಸಿನಿಮಾ ‘ಅಜಾಗ್ರತ’ ಕನ್ನಡದ ಜೊತೆಗೆ ಒಟ್ಟು ಏಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಶಶಿಧರ್ ಎಂಬುವರು ನಿರ್ದೇಶಿಸುತ್ತಿರುವ ಅಜಾಗ್ರತ ಚಿತ್ರ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಈಗಾಗಲೇ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ.



