ಯುವ ರಾಜ್ ಕುಮಾರ್ ಜೊತೆ ನಟಿಸುತ್ತಿರುವಾಗ ಹೊಸ ಹೀರೋ ಜೊತೆ ನಟಿಸುತ್ತಿದ್ಧೇನೆ ಎಂದು ಅನ್ನಿಸಲೇ ಇಲ್ಲ. ಅವರು ಆ ಪಾತ್ರಕ್ಕೆ ಎಷ್ಟು ತರಬೇತಿ ಪಡೆದುಕೊಂಡು ಬಂದಿದ್ದರೆ.. ಅಚ್ಚರಿಯಾಗುತ್ತಿತ್ತು ಎಂದಿದ್ದಾರೆ ಸಪ್ತಮಿ ಗೌಡ. ಯುವ ಚಿತ್ರಕ್ಕೆ ಅವರೇ ಹೀರೋಯಿನ್. ಪಾತ್ರದ ಹೆಸರು ಸಿರಿ. ಯುವನ ಯುವರಾಣಿ.
ಸಪ್ತಮಿ ಗೌಡ. ಸೂರಿ ಹುಡುಕಿದ ಪ್ರತಿಭೆ. ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಬೋಲ್ಡ್ ಕ್ಯಾರೆಕ್ಟರ್, ಕಾಂತಾರದ ಲೀಲಾ ಪಾತ್ರ, ವ್ಯಾಕ್ಸಿನ್ ವಾರ್ ಚಿತ್ರದ ವಿಜ್ಞಾನಿಯಾಗಿ ನಟಿಸಿ ಗೆದ್ದ ಸಪ್ತಮಿ ಗೌಡ ಈಗ ಕಾಲೇಜ್ ಸ್ಟೂಡೆಂಟ್ ಆಗಿದ್ಧಾರೆ. ಯುವ ಚಿತ್ರದಲ್ಲಿ ಸಪ್ತಮಿ ಸಿರಿ ಪಾತ್ರದಲ್ಲಿ ನಟಿಸುತ್ತಿದ್ಧಾರೆ. ಹಾಗೆ ನೋಡಿದರೆ.. ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಮಾಡಬೇಕಿದ್ದ ಪಾತ್ರವನ್ನು, ಸ್ಟಾರ್ ನಟಿಯಾದ ಮೇಲೆ ಮಾಡುತ್ತಿದ್ಧಾರೆ.
ನನ್ನದು ಎಂಜಿನಿಯರಿಂಗ್ ಸ್ಟೂಡೆಂಟ್ ಪಾತ್ರ. ಹೇರ್ ಸ್ಟೈಲ್, ಮೇಕಪ್ ಎಲ್ಲವೂ ಚೇಂಜ್. ಮಧ್ಯಮ ವರ್ಗದಿಂದ ಬಂದ ಕಾಲೇಜು ಹುಡುಗಿ. ಇರೋದೇ ಹಾಗಿದ್ದರಿಂದ ದೊಡ್ಡ ಸವಾಲೇನೂ ಆಗಲಿಲ್ಲ. ಅಲ್ಲದೆ ನಾನೂ ಓದಿದ್ದು ಎಂಜಿನಿಯರಿಂಗ್ ಎನ್ನುವ ಸಪ್ತಮಿಗೆ ಯುವನ ಜೊತೆ ಶಕ್ತಿಯಾಗಿ ನಿಲ್ಲುವ ಪಾತ್ರ ಇದೆ.
ಒಂದು ಸಿನಿಮಾಗೆ ಯಾವತ್ತೂ ನಿರ್ದೇಶಕರೇ ಮುಖ್ಯ. ನಾವೆಲ್ಲ ಅವರು ಹೇಳಿದಂತೆ ಮಾಡುತ್ತೇವೆ. ಯುವ ರಾಜ್ ಕುಮಾರ್ ಹೊಸಬರೇನೋ ಹೌದು. ಒಂದೊಮ್ಮೆ ನಾನೂ ಹೊಸ ನಟಿಯೇ ಆಗಿದ್ದೆನಲ್ಲವೇ.. ಎನ್ನುವ ಸಪ್ತಮಿ ಗೌಡ ಅವರಿಗೆ ಯುವ ಪಾತ್ರಕ್ಕಾಗಿ ತರಬೇತಿ ಪಡೆದು ಬಂದ ರೀತಿ ಬೆರಗುಗೊಳಿಸಿದೆಯಂತೆ.
ಅಂದಹಾಗೆ ಸಪ್ತಮಿ ಗೌಡ ಅವರಿಗೆ ಯುವ ಚಿತ್ರದಲ್ಲಿ ಗಟ್ಟಿ ಪಾತ್ರವಿದೆಯಾದರೂ.. ಸ್ಕ್ರೀನ್ ಸ್ಪೇಸ್ ಕಡಿಮೆ ಇದೆ ಎಂದು ಹೇಳಿದ್ಧಾರೆ ಸಂತೋಷ್ ಆನಂದರಾಮ್. ಇನ್ನು ಸಪ್ತಮಿ ಗೌಡ ಅವರು ಯುವ ರಿಲೀಸ್ ಸಂಭ್ರಮದ ನಡುವೆಯೇ ತೆಲುಗಿನಲ್ಲಿ ತಮ್ಮುಡು ಚಿತ್ರದಲ್ಲಿಯೂ ನಟಿಸುತ್ತಿದ್ಧಾರೆ.
ಇನ್ನು ಕಾಂತಾರ 1 ಚಿತ್ರದಲ್ಲಿ ನಟಿಸುತ್ತೀರಾ ಎಂಬ ಪ್ರಶ್ನೆಗೆ ಕಾಂತಾರ ನನ್ನದು. ನಾನು ಎಷ್ಟೇ ಸಿನಿಮಾದಲ್ಲಿ ನಟಿಸಿದರೂ.. ಕಾಂತಾರದ ಮೇಲಿನ ಪ್ರೀತಿ ಹೋಗೋದಿಲ್ಲ. ಬೇರೆಯವರು ಅದನ್ನು ತೆಗೆದುಕೊಳ್ಳೋಕೆ ಬಿಡೋದೂ ಇಲ್ಲ. ಇದನ್ನು ಅಸೂಯೆ ಎಂದು ಬೇಕಾದರೂ ಅನ್ನಿ. ಸ್ವಾರ್ಥಿ ಎಂದಾದರೂ ಎನ್ನಿ. ಕಾಂತಾರ ನನ್ನ ಸಿನಿಮಾ ಎಂದಿದ್ದಾರೆ ಸಪ್ತಮಿ ಗೌಡ.
ಕಾಂತಾರದ ಮೂಲಕ ಸ್ಟಾರ್ ನಟಿಯಾಗಿರುವ ಸಪ್ತಮಿ ಗೌಡ ಈಗಾಗಲೇ ನಾನಾ ಪಾಟೇಕರ್, ಅನುಪಮ್ ಖೇರ್ ಅವರಂತಹ ದಿಗ್ಗಜರ ಜೊತೆ ನಟಿಸಿರುವ ನಟಿ. ಕನ್ನಡದಲ್ಲಿ ರಿಷಬ್ ಶೆಟ್ಟಿ ಮತ್ತು ಸೂರಿಯವರ ಜೊತೆ ಕೆಲಸ ಮಾಡಿದ್ದ ಪ್ರತಿಭೆ. ಆದರೆ ಸಂತೋಷ್ ಆನಂದ್ ರಾಮ್ ಅವರ ವರ್ಕಿಂಗ್ ಸ್ಟೈಲ್ ಬೇರೆ. ಆದರೆ ತಮ್ಮ ಕಲಾವಿದರಿಂದ ಏನನ್ನು ಬಯಸುತ್ತೇನೆ. ಹೇಗೆ ನಟಿಸಬೇಕು ಅನ್ನೋದರ ಬಗ್ಗೆ 100% ಕ್ಲಾರಿಟಿ ಇರುವ ಡೈರೆಕ್ಟರ್ ಎಂದಿದ್ದಾರೆ ಸಪ್ತಮಿ ಗೌಡ.
ಯುವ ಇದೇ ಮಾರ್ಚ್ 28ಕ್ಕೆ ರಿಲೀಸ್ ಆಗುತ್ತಿದೆ.



