ʻಕವಿರತ್ನ ಕಾಳಿದಾಸʼ ಸಿನಿಮಾ ನೆನಪಾದರೆ ಸಾಕು.. ಡಾ.ರಾಜ್ ಅವರ ಜೊತೆ ಕಾಳಿ ಮಾತೆಯೂ ನೆನಪಾಗುತ್ತಾಳೆ. ಮಾಣಿಕ್ಯ ವೀಣಾ.. ಉಪಲಾಲಯಂತೀಂ.. ಹಾಡನ್ನು ಕೇಳಿದ.. ನೋಡಿದ ಪ್ರೇಕ್ಷಕರಿಗೆ ಕಣ್ಣ ಮುಂದೆ ಬರುವ ಪಾತ್ರ ಎಂದರೆ ಅದು ಕಾಳಿಮಾತೆ. ಕವಿರತ್ನ ಕಾಳಿದಾಸ ಸಿನಿಮಾ ಒಂದು ತೂಕವಾದರೆ.. ಈ ಹಾಡಿನದ್ದೇ ಒಂದು ತೂಕ. ತ್ರಿಶೂಲದಲ್ಲಿ ಕಾಳಿದಾಸನ ನಾಲಗೆ ಮೇಲೆ ಓಂ ಬರೆಯುವ ಆ ದೃಶ್ಯವನ್ನು ಪ್ರೇಕ್ಷಕರು ಮರೆಯಲು ಸಾಧ್ಯವೇ ಇಲ್ಲ.
ಒಂದೇ ದೃಶ್ಯದಲ್ಲಿ ಪೆದ್ದ, ಮುಗ್ಧ, ಭಕ್ತಿ, ಪಾಂಡಿತ್ಯ.. ಎಲ್ಲವನ್ನೂ ಕಣ್ಣಲ್ಲೇ ತೋರಿಸಿ ಬಿಡುತ್ತಾರೆ ಡಾ.ರಾಜ್. ಆ ದೃಶ್ಯದಲ್ಲಿ ಅಣ್ಣಾವ್ರ ಭಕ್ತಿ, ಅಭಿನಯದಷ್ಟೇ ಇಷ್ಟವಾಗುವುದು ಕಾಳಿ ಮಾತೆಯ ಪಾತ್ರಧಾರಿ. ಸಾಕ್ಷಾತ್ ದೇವತೆಯಂತೆಯೇ ಕಾಣುವ ನಳಿನಿ, ಆ ಪಾತ್ರ ಮಾಡಿದಾಗ ನಳಿನಿ ಇನ್ನೂ ಹೈಸ್ಕೂಲು ವಿದ್ಯಾರ್ಥಿ. ಈಗ ಅದೇ ನಳಿನಿ ಅವರಿಗೆ 59 ವರ್ಷ ವಯಸ್ಸು. ಅವರೀಗ ಒಂದು ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ್ದಾರೆ.
ಕವಿರತ್ನ ಕಾಳಿದಾಸದ ಕಥೆ : ಕವಿರತ್ನ ಕಾಳಿದಾಸ ಚಿತ್ರದ ಟೈಟಲ್ ಕಾರ್ಡಿನಲ್ಲಿ ನಳಿನಿ ಅವರ ಹೆಸರು ಆನಂದಿ ಎಂದು ಇದೆ. ಸಿನಿಮಾದಲ್ಲಿ ದೇವಿಯ ಪಾತ್ರಕ್ಕೆ ಯಾರು ಎಂದು ಹುಡುಕುತಿದ್ದಾಗ.. ಆಕಸ್ಮಿಕವಾಗಿ ಸೆಟ್ಟಿಗೆ ಹೋದ ಹುಡುಗಿಯಲ್ಲಿ ಕಾಳಿಮಾತೆಯನ್ನು ಗುರುತಿಸಿದ್ದು ಪಾರ್ವತಮ್ಮ. ಒಂದು ಪಾತ್ರ ಇದೆ ಮಾಡುತ್ತೀಯಾ.. ಎಂದಾಗ ನಳಿನಿ ಅವರ ಜೊತೆ ಇದ್ದ ತಾಯಿ ಅದಕ್ಕೇನೂ ಮಾಡ್ತಾಳೆ.. ಡಾ.ರಾಜ್ ಸಿನಿಮಾ.. ಸಣ್ಣ ಪಾತ್ರವಾದರೂ ಓಕೆ ಎಂದರಂತೆ. ಆದರೆ.. ಡಾ.ರಾಜ್ ಆಕೆಯ ಕಾಲು ಮುಟ್ಟಿ ನಮಸ್ಕರಿಸುತ್ತಾರೆ ಎಂದು ಕೇಳಿದ ನಳಿನಿಯವರ ತಾಯಿ ʻ ಡಾ.ರಾಜ್ ನನ್ನ ಮಗಳು ಕಾಲು ಮುಟ್ಟುವುದಾದರೆ.. ಬೇಡ. ತಮ್ಮ ಮಗಳು ಸಿನಿಮಾ ಮಾಡದಿದ್ರೂ ಪರವಾಗಿಲ್ಲʼ ಎಂದಿದ್ದರಂತೆ. ಕೊನೆಗೂ ಪಾರ್ವತಮ್ಮ, ಡಾ. ರಾಜ್, ನಿರ್ದೇಶಕ ರೇಣುಕಾಶರ್ಮ ಎಲ್ಲರೂ ಮನವೊಲಿಸಿದ್ದರಂತೆ. ಡಾ.ರಾಜ್ ಅವರಂತೂ ನಾನು ನಮಸ್ಕರಿಸುವುದು ನಿಮ್ಮ ಮಗಳಿಗೆ ಅಲ್ಲ. ಸಾಕ್ಷಾತ್ ಕಾಳಿ ಮಾತೆಗೆ ಎಂದು ಒಪ್ಪಿಸಿದ್ದರಂತೆ.
ನನಗಿನ್ನೂ ಆಗ ಚಿಕ್ಕ ವಯಸ್ಸು. ಅದೆಲ್ಲ ಭಾವನೆ ಅರ್ಥವಾಗಿರಲಿಲ್ಲ. ಏನೂ ಗೊತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು ನಳಿನಿ. ಅಂತಹ ನಳಿನಿ ಈಗ ದೇವಸ್ಥಾನವೊಂದರಲ್ಲಿ ಭಿಕ್ಷೆ ಬೇಡಿದ್ದಾರೆ. ಹಾಗಂತ ನಳಿನಿ ಪಡಬಾರದ ಕಷ್ಟಕ್ಕೆ ಸಿಲುಕಿದ್ದಾರೆ. ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದಾರೆ ಎಂದರ್ಥವಲ್ಲ. ಅವರಿಗೆ ಪತಿ, ಮಕ್ಕಳು ಇಲ್ವಾ..? ಪಾಪ.. ಎಂದು ಕೊರಗುವ ಅಗತ್ಯವೂ ಇಲ್ಲ. ಇದು ನಳಿನಿ ಅವರೇ ಕಟ್ಟಿಕೊಂಡಿದ್ದ ಹರಕೆ. ನಳಿನಿ ಅವರು ದೈವಭಕ್ತೆ. ಅದರಲ್ಲೂ ಕರುಮಾರಿಯಮ್ಮ ಎಂದರೆ ನಳಿನಿ ಅವರಿಗೆ ಅದೇನೋ ವಿಶೇಷ ಪ್ರೀತಿ. ಒಂದ್ಸಲ ಕನಸಿನಲ್ಲಿ ಕರುಮಾರಿಯಮ್ಮ ಬಂದು ನನಗಾಗಿ ಏನು ಮಾಡ್ತೀಯ ಎಂದು ಕೇಳಿದ್ದಳಂತೆ. ಸೆರಗೊಡ್ಡಿ ಭಿಕ್ಷೆ ಬೇಡುತ್ತೇನೆ ಎಂದು ಕನಸಿನಲ್ಲಿಯೇ ಹೇಳಿದ್ದರಂತೆ ನಳಿನಿ. ಅದಕ್ಕಾಗಿ ನಳಿನಿ ಕರುಮಾರಿಯಮ್ಮ ದೇವಸ್ಥಾನದಲ್ಲಿ ಭಿಕ್ಷೆ ಬೇಡಿದ್ದಾರೆ ನಳಿನಿ.
“ಕರುಮಾರಿಯಮ್ಮನಿಗಾಗಿ ನಾನು ಸೆರಗೊಡ್ಡಿ ಭಿಕ್ಷೆ ಬೇಡಿದೆ. ಅದು ಕೂಡ ಆಕೆ ಹೇಳಿದಂತೆ ಮಾಡಿದ್ದು. ನಂಬಿದವರನ್ನು ಆಕೆ ಎಂದಿಗೂ ಕೈಬಿಡಲ್ಲ. ನನ್ನ 13ನೇ ವಯಸ್ಸಿನಿಂದಲೂ ನಾನು ಆಕೆಯನ್ನು ಆರಾಧಿಸುತ್ತಿದ್ದೇನೆ. ನನ್ನ ಇಷ್ಟದ ದೈವ ಕರುಮಾರಿಯಮ್ಮ ನನ್ನ ಕನಸ್ಸಿನಲ್ಲಿ ಬಂದು ನೀನು ನನಗಾಗಿ ಏನು ಮಾಡ್ತೀಯಾ ಎಂದು ಕೇಳಿದಳು. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ನನ್ನ ಸೆರಗೊಡ್ಡಿ ಭಿಕ್ಷೆ ಬೇಡಿ ಕೈಲಾದ ಕಾಣಿಕೆ ಕೊಡ್ತೀನಿ ಎಂದೆ. ಅದರಂತೆ ಇಲ್ಲಿಗೆ ಬಂದು ಸೇವೆ ಮಾಡಿದೆ” ಎಂದು ನಟಿ ನಳಿನಿ ಹೇಳಿದ್ದಾರೆ.
ನಳಿನಿ ಅವರು ರಾಮರಾಜನ್ ಎಂಬುವವರನ್ನು ಮದುವೆಯಾಗಿದ್ದರು. ರಾಮರಾಜನ್ ಎಂದೇ ಖ್ಯಾತರಾಗಿರುವ ಅವರ ಪೂರ್ತಿ ಹೆಸರು ಕುಮರೇಸನ್ ರಾಮಯ್ಯ. ನಟ, ನಿರ್ದೇಶಕ ಹಾಗೂ ರಾಜಕಾರಣಿ. ನಳಿನಿ ಅವರಿಗೆ ಅರುಣಾ, ಅರ್ಜುನ್ ಎಂಬ ಅವಳಿ ಜವಳಿ ಮಕ್ಕಳಿದ್ದಾರೆ. ಅಣ್ಣಾಡಿಎಂಕೆ ಪಕ್ಷದಲ್ಲಿ ಸಂಸದರಾಗಿದ್ದರು. ಆದರೆ ಈಗ ನಳಿನಿ ಮಕ್ಕಳ ಜೊತೆ ಇದ್ದಾರೆ. ಡಿವೋರ್ಸ್ ಆಗಿದೆ.



