ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ಎಂದರೆ.. ಮಿನಿಮಮ್ ಮೂರು ವರ್ಷ ಎನ್ನುವುದು ಫಿಕ್ಸ್ ಆಗಿ ಹೋದಂತಿದೆ. ಅವರು ಯಾವುದೇ ಸಿನಿಮಾ ಮಾಡಲಿ.. ಹೇಳಿದ ಸಮಯಕ್ಕೆ ಚಿತ್ರೀಕರಣ ಮುಗಿಯಲ್ಲ. ಪ್ರೊಡಕ್ಷನ್ ಕೆಲಸ ಮುಗಿಯಲ್ಲ. ಬಿಡುಗಡೆಯ ಮಾತಂತೂ ದೂರವೇ ಉಳೀತು. ಧ್ರುವ ಸರ್ಜಾ ಅವರ ಟ್ರ್ಯಾಕ್ ರೆಕಾರ್ಡ್ ಹಾಗೇ ಇದೆ.
ಧ್ರುವ ಸರ್ಜಾ ಅವರ ಅದ್ಧೂರಿ, ಭರ್ಜರಿ, ಬಹದ್ದೂರ್, ಪೊಗರು ಮತ್ತು ಮಾರ್ಟಿನ್. ಯಾವುದೇ ಸಿನಿಮಾ ತೆಗೆದುಕೊಂಡರೂ.. ಯಾವ್ಯಾವುದೋ ಸಮಸ್ಯೆ ಉದ್ಭವವಾಗಿ ಸಿನಿಮಾ ಲೇಟ್ ಆಗುತ್ತಲೇ ಹೋಗುತ್ತದೆ. ಈಗ ಕೆಡಿಯ ಸರದಿ.
ಈ ಚಿತ್ರಕ್ಕೆ ಜೋಗಿ ಪ್ರೇಮ್ ಡೈರೆಕ್ಟರ್. KVN ನಂತಹ ಶ್ರೀಮಂತ ಬ್ಯಾನರ್ ಹಣ ಹೂಡಿದೆ. ಆದರೆ.. ಕಳೆದ ವರ್ಷವೇ ರಿಲೀಸ್ ಆಗಬೇಕಿದ್ದ ಸಿನಿಮಾ, ಈ ವರ್ಷವೂ ರಿಲೀಸ್ ಆಗುವುದು ಡೌಟ್. ಕೆಡಿ ಚಿತ್ರದ ಎರಡು ಸಾಂಗ್ ರಿಲೀಸ್ ಆಗಿವೆ. ಹಾಡುಗಳು ಸೂಪರ್ ಹಿಟ್ ಆಗಿವೆ. ಟೀಸರ್ ಹೊರಬಿದ್ದಿದೆ. ಆದರೆ.. ಕಳೆದ ವರ್ಷವೇ ರಿಲೀಸ್ ಮಾಡ್ತೇವೆ ಎನ್ನುತ್ತಿದ್ದ ಚಿತ್ರತಂಡ, ಈಗ ಸದ್ದೇ ಇಲ್ಲ.
ಏನಾಗಿದೆ.. ಎನ್ನುವುದಕ್ಕೆ ಕೆಡಿ ಚಿತ್ರತಂಡ ಉತ್ತರ ಕೊಡಲ್ಲ. ಮಾತು ಬೆಳ್ಳಿ.. ಮೌನ ಬಂಗಾರ ಅಂತಾ ಸಿನಿಮಾವನ್ನೇ ರಿಲೀಸ್ ಮಾಡ್ತಾರಾ.. ಅಂದ್ರೆ.. ಅದನ್ನೂ ಮಾಡಲ್ಲ. 2024ರ ಡಿಸೆಂಬರ್ ಅಂತ್ಯಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ, 2025ಕ್ಕೂ ಬರಲ್ಲ ಎನ್ನುವುದಕ್ಕೆ ಕಾರಣಗಳಿವೆ.
ಅಕ್ಟೋಬರ್ 02ಕ್ಕೆ ಕಾಂತಾರ ಬಂದರೆ.. ಡಿಸೆಂಬರಿನಲ್ಲಿ ಶಿವಣ್ಣ, ಉಪ್ಪಿ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ 45 ಹಾಗೂ ದರ್ಶನ್ ಅಭಿನಯದ ಡೆವಿಲ್ ಡೇಟ್ ಫಿಕ್ಸ್ ಆಗಿದೆ. ಮಾರ್ಟಿನ್ ಚಿತ್ರದ ರಿಲೀಸ್ ವೇಳೆಯೂ ಇಂಥದ್ದೇ ಎಡವಟ್ಟಾಗಿತ್ತು. ಕಾಯಿಸಿ.. ಕಾಯಿಸಿ ರಿಲೀಸ್ ಆಗುವ ವೇಳೆ ಭೈರತಿ ರಣಗಲ್ ಎದುರಾಗಿತ್ತು. ಕೊನೆಗೆ ಭೈರತಿ ರಣಗಲ್ ಚಿತ್ರದ ಬಿಡುಗಡೆ ಮುಂದೂಡಿದ್ದರು.
ಸಿನಿಮಾವೊಂದು ಕ್ರೇಜ್ ಸೃಷ್ಟಿಸಿ.. ಕೊನೆಗೆ ಕ್ರೇಜ್ ಡೌನ್ ಆಗುವವರೆಗೂ ಕಾಯ್ದು.. ಸಿನಿಮಾವನ್ನು ರಿಲೀಸ್ ಮಾಡೋದೇ ಧ್ರುವ ಸರ್ಜಾ ಸಿನಿಮಾಗಳ ಯೋಜನೆಯಾ.. ಗೊತ್ತಿಲ್ಲ. ಧ್ರುವ ಸರ್ಜಾ ಅವರೇ ಹೇಳಬೇಕು.



