ನನ್ನದೇ ಒರಿಜಿನಲ್ ಜೆಡಿಎಸ್ ಎನ್ನುವ ಮೂಲಕ ಜೆಡಿಎಸ್ʻನ್ನು ಮತ್ತೊಮ್ಮೆ ಇಬ್ಭಾಗದತ್ತ ಕೊಂಡೊಯ್ಯುತ್ತಿದ್ದ ಸಿಎಂ ಇಬ್ರಾಹಿಂ, ಪಕ್ಷದಲ್ಲಿರ್ತಾರಾ ಇರಲ್ವಾ ಎನ್ನುವುದು ನಿರ್ಧಾರವಾಗುವ ಸಮಯ ಹತ್ತಿರವಾಗಿದೆ. ಇತ್ತೀಚೆಗೆ ನಡೆದ ಎಲೆಕ್ಷನ್ನಿನಲ್ಲಿ ಜೆಡಿಎಸ್ ಹೀನಾಯ ಸೋಲು ಕಂಡಿದ್ದರ ಹಿನ್ನೆಲೆಯಲ್ಲಿ ಈಗಾಗಲೇ ರಾಜೀನಾಮೆ ನೀಡಿದ್ದರು ಇಬ್ರಾಹಿಂ. ರಾಜೀನಾಮೆಯನ್ನು ದೇವೇಗೌಡರು ಸ್ವೀಕರಿಸಿರಲಿಲ್ಲ. ಇದೀಗ ಜೆಡಿಎಸ್ ನಿರ್ಣಾಯಕ ಘಟ್ಟಕ್ಕೆ ಬಂದಿದೆ.
ನಮ್ಮದೇ ವೊರಿಜಿನಲ್ ಜೆಡಿಎಸ್. ಬೇಕಾದರೆ ಕುಮಾರಸ್ವಾಮಿ ಅವರನ್ನೂ ಉಚ್ಚಾಟನೆ ಮಾಡಬಹುದು. ಆ ಅಧಿಕಾರ ನನ್ನ ಬಳಿ ಇದೆ ಎಂದಿದ್ದರು ಸಿಎಂ ಇಬ್ರಾಹಿಂ.ಈ ಹಿನ್ನೆಲೆಯಲ್ಲಿ ಜಿಟಿ ದೇವೇಗೌಡ ಕೋರ್ ಕಮಿಟಿಯ ಸಭೆ ಕರೆದಿದ್ದಾರೆ. ಕೋರ್ ಕಮಿಟಿಯ ಅಧ್ಯಕ್ಷ ಜಿಟಿ ದೇವೇಗೌಡ. ಈ ಕಮಿಟಿಯಲ್ಲಿ ದೇವೇಗೌಡರ ಕುಟುಂಬದ ಯಾರೊಬ್ಬರೂ ಇಲ್ಲ ಎನ್ನುವುದು ವಿಶೇಷ. ಹೀಗಾಗಿ ಈ ಸಭೆಯಲ್ಲಿ ಇಬ್ರಾಹಿಂ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಕುಮಾರಸ್ವಾಮಿ, ನಿಖಿಲ್, ಇಬ್ರಾಹಿಂ ವಜಾ ಸುದ್ದಿ ಸುಳ್ಳು
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರ ಸುಳ್ಳು. ಅಷ್ಟೇ ಅಲ್ಲ, ಇಬ್ರಾಹಿಂ ಅವರನ್ನು ದೇವೇಗೌಡರು ವಜಾ ಮಾಡಿದ್ದಾರೆ ಎನ್ನುವ ವರದಿಯೂ ಸುಳ್ಳು. ಪತ್ರವೂ ಸುಳ್ಳು.ಈ ಸಂಬಂಧ ಸಿಎಂ ಇಬ್ರಾಹಿಂ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನನ್ನ ಲೆಟರ್ ಹೆಡ್ ಹಾಗೂ ಸಹಿ ಒಳಗೊಂಡಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಯುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಪತ್ರವೊಂದು ಹರಿದಾಡುತ್ತಿದೆ. ಇದರಿಂದ ನನಗೆ ಹಾಗೂ ಪಕ್ಷದ ಪದಾಧಿಕಾರಿಗಳಿಗೆ ಮುಜುಗರವಾಗಿದೆ. ದುಷ್ಕರ್ಮಿಗಳು ಈ ನಕಲಿ ಪತ್ರ ಹರಿಬಿಡುವ ಮುಖಾಂತರ ಪಕ್ಷ, ನನ್ನ ಘನತೆ ಹಾಗೂ ಸ್ಥಾನಮಾನಕ್ಕೆ ಹಾನಿ ಮಾಡಿದ್ದಾರೆ. ಈ ನಕಲಿ ಪತ್ರ ಸೃಷ್ಟಿಸಿದ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ’ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೋರಿದ್ದಾರೆ.



