ತಿರುಪತಿ ತಿಮ್ಮಪ್ಪನ ಮಹಾಪ್ರಸಾದ ಎಂದು ಭಾವಿಸಿ ತಿನ್ನುವ ತಿರುಪತಿ ಲಡ್ಡಿನಲ್ಲಿ ದನ, ಹಂದಿ ಮಾಂಸದ ಕೊಬ್ಬು ಬಳಸಲಾಗಿದೆ ಎನ್ನುವುದು ಭಕ್ತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾಂಸಾಹಾರಿಗಳೂ ಕೂಡಾ ದನದ ಮಾಂಸವನ್ನು ಕೈಯಲ್ಲಿಯೂ ಮುಟ್ಟುವವರಲ್ಲ. ಅಂತಾದ್ದರಲ್ಲಿ ಈ ರೀತಿಯ ಘಟನೆ ನಡೆದಿರುವುದು ಕೋಟ್ಯಂತರ ಭಕ್ತರಲ್ಲಿ ಆಘಾತ ಮೂಡಿಸಿದೆ. ತಿರುಪತಿಗೆ ಹೋಗಿ ಬಂದವರು ಲಡ್ಡುಗಳನ್ನು ತಮ್ಮ ತಮ್ಮ ಮನೆಗಳ ಅಕ್ಕ ಪಕ್ಕದಲ್ಲಿರುವ ದೇವಸ್ಥಾನಗಳಿಗೇ ಕೊಡುತ್ತಿದ್ದಾರಂತೆ. ಇದು ಇನ್ನೊಂದು ಸಮಸ್ಯೆ.
ಈ ರೀತಿಯ ಘಟನೆ ನಡೆದಿದ್ದು ಅಲ್ಲೊಮ್ಮೆ ಇಲ್ಲೊಮ್ಮೆ ಅಲ್ಲ. ಸುಮಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ತಿಂಗಳಿಗೆ ಒಮ್ಮೆ ಹೋಗುವವರು ಕೂಡಾ ತಿರುಪತಿ ಲಡ್ಡುಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸಿ ತರುತ್ತಾರೆ. ತಾವೂ ಸೇವಿಸಿ, ಅಕ್ಕಪಕ್ಕದ ಗೆಳೆಯರು, ನೆಂಟರಿಷ್ಟರಿಗೂ ಹಂಚುತ್ತಾರೆ. ತಿರುಪತಿ ಪ್ರಸಾದವನ್ನು ಒಬ್ಬರೇ ತಿನ್ನಬಾರದು ಎನ್ನುವುದು ನಂಬಿಕೆ. ಹೀಗಿರುವಾಗಲೇ ಈ ರೀತಿಯ ವಿಷಯ ಬೆಳಕಿಗೆ ಬಂದಿದೆ. ತಾವು ಇಷ್ಟೂ ದಿನ ತಿಂದದ್ದು ಅಪವಿತ್ರ ಲಡ್ಡು ಎನ್ನುವುದು ಭಕ್ತರಿಗೆ ಗೊತ್ತಾಗಿದೆ.
ತಿರುಪತಿ ಲಡ್ಡು ತಿಂದ ಭಕ್ತರು ಏನು ಮಾಡಬೇಕು..?
ದೈವಜ್ಞ ಸೋಮಯಾಜಿ ಅವರ ಪ್ರಕಾರ ಆತಂಕಗೊಳ್ಳುವುದು ಬೇಕಿಲ್ಲ. ಏಕೆಂದರೆ ಮಾಡಿದವರಿಗೆ ಇದು ಗೊತ್ತಿದ್ದೇ ಆಗಿರಬಹುದಾದ ಪ್ರಮಾದ. ಆದರೆ ಭಕ್ತರು ಅರಿವೇ ಇಲ್ಲದೆ ಸೇವಿಸಿದ್ದಾರೆ. ಯಾರಿಗೂ ಕೂಡಾ ತಾವು ತಿಂದ ತಿರುಪತಿ ಪ್ರಸಾದದಲ್ಲಿ ದನದ ಕೊಬ್ಬು, ಹಂದಿಯ ಕೊಬ್ಬಿನ ಅಂಶ, ಮೀನಿನ ಎಣ್ಣೆಗಳಂತಹ ʻಪ್ರಸಾದದಲ್ಲಿ ಅಪವಿತ್ರʼ ಎಂದು ನಂಬಿರುವ ವಸ್ತಗಳಿವೆ ಎನ್ನುವುದು ಗೊತ್ತಿಲ್ಲ. ಹೀಗಿರುವಾಗ ಭಕ್ತರಿಗೆ ಯಾವ ಪಾಪವೂ ಅಂಟುವುದಿಲ್ಲ. ದೋಷವೂ ತಗುಲುವುದಿಲ್ಲ. ಲಡ್ಡು ತಿಂದವರು ಪಾಪಪ್ರಜ್ಞೆಯಿಂದ ನರಳಬೇಕಾದ್ದೂ ಇಲ್ಲ.
ಪಂಚಗವ್ಯ ಸೇವಿಸಿ ಪಾಪಪ್ರಜ್ಞೆಯಿಂದ ಹೊರಬನ್ನಿ ಎನ್ನುತ್ತಾರೆ ಸೋಮಯಾಜಿ. ಪಂಚಗವ್ಯ ಎಂದರೆ ಹಸುವಿನ ಗಂಜಲ (ಗೋಮೂತ್ರ), ಸಗಣಿ, ಮೊಸರು, ತುಪ್ಪ ಹಾಗೂ ಹಾಲು ಬಳಸಿ ಮಾಡಿರುವ ಪವಿತ್ರ ತೀರ್ಥ. ದರ್ಬೆಯನ್ನು ಬಳಸಿ ಮಾಡಲಾಗಿರುವ ಈ ಪಂಚಗವ್ಯವನ್ನು ವೇದ ಮಂತ್ರ ಗೊತ್ತಿದ್ದರೆ ವೇದ ಮಂತ್ರ ಪಠಿಸುತ್ತಾ ಸೇವಿಸಿ. ವೇದ ಮಂತ್ರ ಗೊತ್ತಿಲ್ಲದವರು ತಮ್ಮ ಇಷ್ಟದೇವರ ಧ್ಯಾನ ಮಾಡುತ್ತಾ ಸೇವಿಸಿ. ಅಲ್ಲಿಗೆ ಪಾಪ ತೊಳೆದು ಹೋಗುತ್ತದೆ ಎಂದಿದ್ದಾರೆ ದೈವಜ್ಞ ಸೋಮಯಾಜಿ.
ಅಲ್ಲದೆ ತೀರ್ಥ ಸ್ನಾನ ಮಾಡಬಹುದು ಅಂದರೆ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವ ಮೂಲಕ ಅಥವಾ ಕುಷ್ಮಾಂಡ ಹೋಮ ಮಾಡುವುದರ ಮೂಲಕವೂ ಶುದ್ಧಿಯಾಗಬಹುದು.
ಸೋಮಯಾಜಿಗಳೂ ಸೇರಿದಂತೆ ನಾಡಿನ ಹಲವು ಧಾರ್ಮಿಕ ತಜ್ಞರು ಅಚಾತುರ್ಯದಿಂದ ಆಗಿರುವ ಪ್ರಮಾದವಾಗಿದ್ದರೆ, ಗೊತ್ತಿಲ್ಲದೆ ಆಗಿರುವ ತಪ್ಪಾಗಿದ್ದರೆ ಏನೂ ಆಗಲ್ಲ. ಆದರೆ ಉದ್ದೇಶಪೂರ್ವಕವಾಗಿಯೇ ಮಾಡಿದ್ದರೆ, ಧಾರ್ಮಿಕ ನಂಬಿಕೆಗಳನ್ನು ಘಾಸಿ ಮಾಡುವುದಕ್ಕೋಸ್ಕರವೇ ಈ ಕೃತ್ಯ ಎಸಗಿದ್ದರೆ ಆ ಪಾಪಕ್ಕೆ ಕ್ಷಮೆ ಇಲ್ಲ.
ರಾಜ್ಯದ ಎಲ್ಲ ಮುಜರಾಯಿ ದೇಗುಲಗಳಲ್ಲಿ ಪ್ರಸಾದಕ್ಕೆ ನಂದಿನಿ ತುಪ್ಪ ಮಾತ್ರ ಬಳಕೆಗೆ ಸರ್ಕಾರ ಆದೇಶ : ಮುಜರಾಯಿ & ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆಯ ಮೇರೆಗೆ ಸುತ್ತೋಲೆ ಹೊರಡಿಸಿರುವ ಧಾರ್ಮಿಕ ದತ್ತಿ ಇಲಾಖೆ, ದೇವಸ್ಥಾನದ ಸೇವೆಗಳಿಗೆ, ದೀಪಗಳಿಗೆ, ಪ್ರಸಾದ ತಯಾರಿಕೆ ಮತ್ತು ದಾಸೋಹ ಭವನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕದ ದತ್ತಿ ಇಲಾಖೆಯ ದೇವಸ್ಥಾನಗಳಿಗೆ ಮಾತ್ರ ಇದು ಅನ್ವಯವಾಗಲಿದೆ. ಮುಜರಾಯಿ ದೇವಸ್ಥಾನಗಳನ್ನು ಹೊರತುಪಡಿಸಿದ ದೇಗುಲಗಳಲ್ಲಿಯೂ ನಂದಿನಿ ತುಪ್ಪವನ್ನು ಮಾತ್ರವೇ ಬಳಸುವಂತೆ ಸಲಹೆ ನೀಡಲಾಗಿದೆ.
ಕೊಬ್ಬಿನ ಅಂಶ ಬಳಕೆ ಸತ್ಯ : ಟಿಟಿಡಿ
ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಅನ್ನೋದನ್ನು ಟಿಟಿಡಿ ಒಪ್ಪಿಕೊಂಡಿದೆ. ಲಡ್ಡುಗೆ ಬಳಸಲಾಗಿರುವ ಕಚ್ಚಾವಸ್ತುಗಳ ಲ್ಯಾಬ್ ವರದಿ ಬಯಲಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ್ದ ಟಿಟಿಡಿ ಎಕ್ಸಿಕ್ಯೂಟಿವ್ ಅಧಿಕಾರಿ ಶ್ಯಾಮಲಾ ರಾವ್, ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಬಳಸಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ. ತಿರುಪತಿಯಲ್ಲಿ ತಯಾರಾಗುವ ಲಡ್ಡುವಿಗೆ ಬಳಸುವ ತುಪ್ಪದ ಮಾದರಿ ಪರೀಕ್ಷೆ ನಡೆಸಲಾಗಿದೆ. ಆ ತುಪ್ಪದಲ್ಲಿ ಮೀನಿನ ಎಣ್ಣೆ, ಪಾಮ್ ಆಯಿಲ್ ಪತ್ತೆಯಾಗಿದೆ. ಅಚ್ಚರಿ ಏನಂದ್ರೆ.. ದನದ ಮಾಂಸದಿಂದ ತೆಗೆದ ಕೊಬ್ಬು, ಹಂದಿ ಮಾಂಸದ ಪದರದಿಂದ ತೆಗೆದ ಬಿಳಿ ಕೊಬ್ಬು ತುಪ್ಪದಲ್ಲಿ ಇರುವುದು ಕೂಡ ಬೆಳಕಿಗೆ ಬಂದಿದೆ.



