ಈ ಹಿಂದೆ ಒಂದು ವಾಟ್ಸಾಪ್ ಖಾತೆಯನ್ನು ಒಂದು ಫೋನ್ ಜೊತೆಗೆ ಕಂಪ್ಯೂಟರ್ನಲ್ಲಿ ಮಾತ್ರ ಲಾಗಿನ್ ಮಾಡಬಹುದಾಗಿತ್ತು. ಎರಡು ಫೋನ್ಗಳನ್ನು ಹೊಂದಿರುವ ವಾಟ್ಸಾಪ್ ಗ್ರಾಹಕರು ಏಕಕಾಲದಲ್ಲಿ ಒಂದೇ ಖಾತೆಯನ್ನು ತೆರೆಯಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗೆ ತಾನೇ ವಾಟ್ಸಾಪ್ ಅಪ್ʻಡೇಟ್ ಆಗಿ, ಒಂದೇ ವಾಟ್ಸಪ್ ಸಂಖ್ಯೆಯನ್ನು ನಾಲ್ಕು ಮೊಬೈಲುಗಳಲ್ಲಿ ಬಳಸುವುದಕ್ಕೆ ಅವಕಾಶ ಕೊಟ್ಟಿತ್ತು. ಅದನ್ನೂ ಮೀರಿ ಇನ್ನೂ ಮುಂದೆ ಹೋಗಿರುವ ವಾಟ್ಸಪ್, ಒಂದೇ ಮೊಬೈಲಿನಲ್ಲಿ ಎರಡು ವಾಟ್ಸಪ್ ಬಳಸುವುದಕ್ಕೆ ಅವಕಾಶ ಕೊಟ್ಟಿದೆ.
ಬಳಕೆದಾರರು ಎರಡನೇ ಖಾತೆಯನ್ನು ಹೊಂದಿಸಲು ಬಯಸಿದರೆ, ಅವರಿಗೆ ಪ್ರತ್ಯೇಕ ಫೋನ್ ಸಂಖ್ಯೆ ಮತ್ತು ಸಿಮ್ ಕಾರ್ಡ್ (ಅಥವಾ ಬಹು-ಸಿಮ್ ಅಥವಾ ಇ-ಸಿಮ್ ಸ್ವೀಕರಿಸುವ ಫೋನ್) ಅಗತ್ಯವಿದೆ ಎಂದು ಕಂಪನಿ ಹೇಳಿದೆ. ಇದರರ್ಥ ಈ ವೈಶಿಷ್ಟ್ಯವು ಡ್ಯುಯಲ್-ಸಿಮ್ ಫೋನ್ಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಸ್ಸೋ.. ಎರಡು ಸಿಮ್ ಇರುವ ಮೊಬೈಲ್ʻಗಳಲ್ಲಿ ಈ ಫೀಚರ್ ಬಳಸಿಕೊಳ್ಳಬಹುದು. ಎರಡೂ ಸಿಮ್ ಆಕ್ಟಿವ್ ಆಗಿರಬೇಕಷ್ಟೇ. ಯಾಕಂದ್ರೆ, ಒನ್ ಟೈಮ್ ಪಾಸ್ಕೋಡ್ ಸ್ವೀಕರಿಸಲು ಬಳಕೆದಾರರಿಗೆ ಸಿಮ್ ಕಾರ್ಡ್ ಅಗತ್ಯ ಇದೆ. ಬಳಕೆದಾರರು ತಮ್ಮ ಎರಡನೇ ಖಾತೆಯನ್ನು ಬೇರೆ ಸಾಧನದಲ್ಲಿ ಪ್ರವೇಶಿಸಲು ಅನುಮತಿಸಲು ವಾಟ್ಸಾಪ್ ಈ ಕೋಡ್ಗಳನ್ನು ಎಸ್‌ಎಂಎಸ್ ಮೂಲಕ ಕಳುಹಿಸುತ್ತದೆ.
ಯಾರಿಗೆಲ್ಲ ಅನುಕೂಲ..?
ಆಫೀಸು ಮತ್ತು ಪರ್ಸನಲ್ ವಿಷಯಗಳನ್ನು ಏಕಕಾಲಕ್ಕೆ ಮ್ಯಾನೇಜ್ ಮಾಡುವವರಿಗೆ, ಮನೆಯ ಕಡೆ ವ್ಯವಹರಿಸುವಾಗ ಆಫೀಸಿನ ಕಿರಿಕಿರಿ ಬೇಡ, ಆಫೀಸಿನಲ್ಲಿರುವ ಮನೆಯ ಕಿರಿಕಿರಿ ಬೇಡ ಎನ್ನುವವರಿಗೆ ಈ ಫೀಚರ್ ಲಾಭವಾಗಲಿದೆ. ಜಸ್ಟ್ ಸ್ವಿಚ್ ಆನ್ ಮಾಡಿಕೊಂಡರೆ ಸಾಕು. “ಇಂದು, ನಾವು ಒಂದೇ ಸಮಯದಲ್ಲಿ ಎರಡು ವಾಟ್ಸಾಪ್ ಖಾತೆಗಳನ್ನು ಲಾಗ್ ಇನ್ ಮಾಡುವ ಸಾಮರ್ಥ್ಯವನ್ನು ಪರಿಚಯಿಸುತ್ತಿದ್ದೇವೆ. ನಿಮ್ಮ ಕೆಲಸ ಮತ್ತು ವೈಯಕ್ತಿಕ ಖಾತೆಗಳ ನಡುವೆ ಬದಲಾಯಿಸಲು ಸಹಾಯಕವಾಗಿದೆ. ಇದರಿಂದ ನೀವು ಇನ್ಮುಂದೆ ಪ್ರತಿ ಬಾರಿ ಲಾಗ್ಔಟ್ ಮಾಡುವ ಅಗತ್ಯವಿಲ್ಲ, ಎರಡು ಫೋನ್ಗಳನ್ನು ಕೊಂಡೊಯ್ಯಬೇಕು ಅಥವಾ ತಪ್ಪು ಸ್ಥಳದಿಂದ ಸಂದೇಶ ಕಳುಹಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ” ಎಂದು ಮಾರ್ಕ್ ಜುಕರ್ಬರ್ಗ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಈ ಫೀಚರ್ ಮೂಲಕ ಪದೇ ಪದೇ ಲಾಗೌಟ್ ಆಗಿ ಲಾಗ್ ಇನ್ ಆಗುವ ಸಮಯವೂ ಉಳಿಯುತ್ತದೆ. ಹೆಚ್ಚು ಹೆಚ್ಚು ಫೋನ್ ಹೊಂದುವ ಅಗತ್ಯ ಇಲ್ಲ. ವಾಟ್ಸಪ್ ನೀಡಿರುವ ಈ ಸ್ಚಿಚಿಂಗ್ ಸೌಲಭ್ಯ ಬಳಕೆದಾರರಿಗೆ ಸಹಾಯ ಮಾಡಲಿದೆ.
ಇನ್ನು ಒಂದೇ ವಾಟ್ಸಪ್ ನಂಬರ್‌ನ್ನು 4 ಮೊಬೈಲ್ ಫೋನ್ʻಗಳಲ್ಲಿ ಬಳಸವುದುಕ್ಕೂ ಕೆಲವು ನಿಯಮಗಳಿವೆ. ಎರಡನೇ ಫೋನ್ನಲ್ಲಿ ನಿಮ್ಮ ವಾಟ್ಸಾಪ್ ಖಾತೆ 14 ದಿನಗಳ ಕಾಲ ಲಾಗಿನ್ ಇರುತ್ತದೆ. ಅಂದರೆ, ನಿಮ್ಮ ಫೋನ್ನಲ್ಲಿ ನಿಮ್ಮ ವಾಟ್ಸಾಪ್ ಖಾತೆಯು ಕಳೆದ 14 ದಿನಗಳಲ್ಲಿ ಒಮ್ಮೆಯಾದರೂ ಇಂಟರ್ನೆಟ್ಗೆ ಸಂಪರ್ಕ ಹೊಂದಿರಬೇಕು. ಒಂದು ವೇಳೆ ಅದು ನಿಷ್ಕ್ರಿಯವಾಗಿದ್ದರೆ, ಉಳಿದ ಮೂರು ಸಾಧನಗಳಲ್ಲಿ ನಿಮ್ಮನ್ನು ವಾಟ್ಸಾಪ್ ನಿಂದ ಲಾಗ್ ಔಟ್ ಮಾಡಲಾಗುತ್ತದೆ. ಜೊತೆಗೆ ನಿಮ್ಮ ವಾಟ್ಸಾಪ್ ಖಾತೆಗೆ ಲಿಂಕ್ ಮಾಡಲಾದ ಸಾಧನಗಳ ಬಗ್ಗೆ ಯಾವಾಗಲೂ ಪರಿಶೀಲಿಸುತ್ತಿರಿ.



