ರಾಜ್ಯದಲ್ಲಿ ಹಲವು ನಾಯಕರು ದ್ವೇಷ ಭಾಷಣ ಮಾಡಿದ ಆರೋಪ ಎದುರಿಸ್ತಾ ಇದ್ದಾರೆ. ಆ ಲಿಸ್ಟ್ ತೆಗೆದರೆ ಸ್ವಲ್ಪ ದೊಡ್ಡದೇ ಇರಬಹುದು. ಸದ್ಯಕ್ಕೆ ರಾಜ್ಯದಲ್ಲಿ ಬಸನ ಗೌಡ ಪಾಟೀಲ ಯತ್ನಾಳ್, ಪ್ರತಾಪ್ ಸಿಂಹ, ಚಕ್ರವರ್ತಿ ಸೂಲಿಬೆಲೆ, ಪುನೀತ್ ಕೆರೆಹಳ್ಳಿ.. ಇತರರನ್ನು ದ್ವೇಷ ಭಾಷಣಕಾರರು ಎಂದು ಕಾಂಗ್ರೆಸ್ ಪರಿಗಣಿಸಿದೆ. ಅದಕ್ಕಾಗಿಯೇ ಜಾರಿಗೆ ತರಲು ಹೊರಟಿರುವ ಕಾಯ್ದೆ ಕೇವಲ ಭಾಷಣಕಾರರನ್ನಷ್ಟೇ ಅಲ್ಲ, ಅದಕ್ಕೆ ಚಪ್ಪಾಳೆ ತಟ್ಟಿದವರನ್ನೂ ಬಿಡೋದಿಲ್ಲ. ಕಾನೂನಿನ ಮಾಹಿತಿ ನೋಡಿದರೆ ಹಾಗೆಯೇ ಅನಿಸುತ್ತಿರುವುದಕ್ಕೆ ಕಾರಣಗಳಿವೆ.
ಕಾಯಿದೆ ಪ್ರಕಾರ..
ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯಗಳನ್ನು ನಿಂದಿಸುವುದು ತಪ್ಪು. ಅದು ಈಗಲೂ ಇದೆ. ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮ ಸ್ಥಳ, ಭಾಷೆ, ರೆಸಿಡೆನ್ಸ್, ಅಂಗವೈಕಲ್ಯ ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವುದು ಅಪರಾಧ. ಸರಿ. ತಪ್ಪು ಸಾಬೀತಾದರೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ 5 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಪ್ರಕ್ರಿಯೆಯೂ ಒಂದು ಹಂತಕ್ಕೆ ಓಕೆ.
ಆದರೆ ಸಮಸ್ಯೆ ಇರುವುದು ಎಲ್ಲಿ ಎಂದರೆ..
ದ್ವೇಷ ಭಾಷಣವನ್ನು ಉತ್ತೇಜಿಸುವಂತೆ ಉದ್ದೇಶಪೂರ್ವಕವಾಗಿ ಪ್ರಕಟಿಸುವವರು, ಪ್ರಚಾರ ಮಾಡುವವರು, ಸಮರ್ಥಿಸುವವರನ್ನ ಶಿಕೆಗೆ ಗುರಿಪಡಿಸಲು ಅವಕಾಶ ನೀಡಲಾಗಿದೆ. ದತ್ತಾಂಶ, ಸಂದೇಶ, ಪಠ್ಯ ಚಿತ್ರಗಳು, ಧ್ವನಿ, ಧ್ವನಿ, ಸಂಕೇತಗಳು, ಕಂಪ್ಯೂಟರ್ ಪ್ರೋಗ್ರಾಂಗಳು ಸಾಫ್ಟ್‌ವೇರ್ ಮತ್ತು ಡೇಟಾಬೇಸ್‌ಗಳು ಅಥವಾ ಮೈಕ್ರೋಫಿಲ್ಡ್ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದ ವ್ಯಾಪ್ತಿಗೆ ಒಳಪಡಿಸುವ ಸಾಧ್ಯತೆ ಇದೆ. ಟಿವಿ ನ್ಯೂಸ್ ಚಾನೆಲ್‌ಗಳು, ಟೆಲಿಕಾಂ ಸೇವಾ ಪೂರೈಕೆದಾರರು, ನೆಟ್ವರ್ಕ್ ಸೇವಾ ಪೂರೈಕೆದಾರರು, ಇಂಟರ್ನೆಟ್ ಸೇವಾ ಪೂರೈಕೆದಾರರು, ವೆಬ್‌ಹೋಸ್ಟಿಂಗ್ ಸೇವಾ ಪೂರೈಕೆದಾರರು, ಸಾಮಾಜಿಕ ಮಾಧ್ಯಮ ವೇದಿಕೆಗಳು, ಸರ್ಚ್ ಇಂಜಿನ್‌ಗಳು ಆನ್‌ಲೈನ್ ಪಾವತಿ ಸೈಟ್‌ಗಳು, ಆನ್‌ಲೈನ್-ಹರಾಜು ಸೈಟ್‌ಗಳು, ಆನ್‌ಲೈನ್-ಮಾರುಕಟ್ಟೆಗಳು ಮತ್ತು ಸೈಬರ್ ಕೆಫೆಗಳನ್ನೂ ಇದರ ವ್ಯಾಪ್ತಿಗೆ ಬರಲಿದೆ.
ಸಮಸ್ಯೆ ತೋರುತ್ತಿರುವುದೇ ಇಲ್ಲಿ. ನ್ಯೂಸ್ ಚಾನೆಲ್ಲುಗಳು ಯಾವುದನ್ನು ಪ್ರಸಾರ ಮಾಡಬೇಕು.. ಯಾವುದನ್ನು ಪ್ರಸಾರ ಮಾಡಬಾರದು ಎಂದು ಸರ್ಕಾರ ನಿರ್ಬಂಧಿಸುವುದಾದರೆ.. ವಾಕ್ ಸ್ವಾತಂತ್ರ್ಯ ಎಲ್ಲಿದೆ.. ಸಂವಿಧಾನದ ಮೂಲ ಆಶಯಕ್ಕೇ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎನಿಸುತ್ತಲ್ಲವೇ. ಚಾನೆಲ್ಲುಗಳಲ್ಲಿ ಯಾರಾದರೂ ದ್ವೇಷ ಭಾಷಣ ಮಾಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಓಕೆ.
ಆದರೆ ಚಾನೆಲ್ಲಿನ ವಿರುದ್ಧವೇ ಕ್ರಮ ಎಂದರೆ ಹೇಗೆ..?
ಇನ್ನು ನೆಟ್ ವರ್ಕ್ ಪೂರೈಕೆದಾರರನ್ನು ಕಾನೂನಿನ ವ್ಯಾಪ್ತಿಗೆ ಸೇರಿಸಿದರೆ ನೆಟ್ ವರ್ಕ್ ಬಂದ್ ಮಾಡಬೇಕಷ್ಟೇ. ಕೇಬಲ್ ನೆಟ್ ವರ್ಕ್ ಕೊಟ್ಟವರು, ಇಂಟರ್ ನೆಟ್ ಕನೆಕ್ಟ್ ಮಾಡಿದವರೂ ಕೂಡಾ ಈ ಕಾನೂನಿನ ವ್ಯಾಪ್ತಿಗೆ ಎಂದರೆ.. ಸರ್ಕಾರಕ್ಕೆ ಭಯ ಹುಟ್ಟಿಸುವ ಐಡಿಯಾ ಮಾತ್ರ ಇದೆ. ಕಾನೂನು ಜಾರಿಗೆ ತರುವ ಮನಸ್ಸಿಲ್ಲ ಎಂದೇ ಅರ್ಥ. ಇಷ್ಟಕ್ಕೂ ದ್ವೇಷ ಭಾಷಣ ಎನ್ನುವುದನ್ನು ಹೇಗೆ ಅರ್ಥೈಸುತ್ತೀರಿ ಎಂಬುದರ ಬಗ್ಗೆ ಸಾವಿರ ಸಾವಿರ ವ್ಯಾಖ್ಯಾನಗಳಿವೆ. ನಾವೊಬ್ಬರೇ ಸಂವಿಧಾನ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕಾಂಗ್ರೆಸ್ ಸರಿಯಾದ ಹೆಜ್ಜೆ ಇಡುತ್ತಿಲ್ಲ ಎನ್ನುವುದಂತೂ ಸ್ಪಷ್ಟ.



