ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ, ಸರ್ಪಶಾಂತಿ, ನಾಗಾರಾಧನೆಗಳು ನಡೆದಿವೆ. ಕಳೆದ ಕೆಲವು ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸಮಸ್ಯೆಗಳು ಬೆಂಬಿಡದೆ ಕಾಡುತ್ತಿವೆ. ಹೀಗಾಗಿಯೇ ಕಲಾವಿದರ ಸಂಘ ಹೋಮ ಹವನ ಮಾಡಿಸಿದ್ದು, ಈ ವೇಳೆ ನಾಗದೇವರು ಹೇಳಿರುವ ಮಾತುಗಳು ಅಚ್ಚರಿ ಮೂಡಿಸಿವೆ.
ನಾಗದರ್ಶನದ ವೇಳೆ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ನಾಗದರ್ಶಕ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಾಗದೇವರು ತಪ್ಪುಗಳ ಪಟ್ಟಿ ಕೊಟ್ಟಿದ್ದು, ಎಚ್ಚರಿಕೆಯನ್ನೂ ಹೇಳಿದೆ. ʻʻನಿಮ್ಮಲ್ಲಿ ಒಗ್ಗಟ್ಟು ಇದೆಯಾ..? ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ. ನನ್ನನ್ನು ಭಯಪಟ್ಟು ಪೂಜಿಸಬೇಡಿ ಪ್ರೀತಿಯಿಂದ ಗೆಲ್ಲಿ, ಈ ಜಾಗದ ಪಾವಿತ್ರ್ಯ ಹಾಳು ಮಾಡಬೇಡಿ ಎಂದು ಹೇಳಿದೆ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೆಯುತ್ತಿದ್ದವು, ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ, ಅದು ಸರಿಯಲ್ಲ, ಇದನ್ನೆಲ್ಲಾ ಸರಿಪಡಿಸಿಕೊಳ್ಳಿ, ದೊಡ್ಡ ಕೆಲಸಗಳು ಆಗಬೇಕು ಹಿಂದೆ ನಡೆದಿರುವಂತೆ ಎಲ್ಲಾ ಹಿರಿಯರು ಇಲ್ಲಿ ಸೇರುವಂತೆ ಆಗಬೇಕು, ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ದಿನ ಇಲ್ಲಿ ದೀಪ ಬೆಳಗಿಸಿ, ಶತ್ರುನಾಶ, ಅಪಕೀರ್ತಿ ಎಲ್ಲವೂ ದೂರವಾಗುತ್ತೆ. ನನ್ನ ಕೋಪಕ್ಕೆ ಬಲಿಯಾಗಬೇಡಿ, ನಾನು ಹೇಳಿದಂತೆ ಮಾಡಿ ಇಲ್ಲವಾದರೆ ನನ್ನ ಕೋಪಕ್ಕೆ ಗುರಿ ಆಗ್ತೀರಾʼʼ ಎನ್ನುವುದು ನಾಗದೇವರು ಕೊಟ್ಟಿರುವ ಎಚ್ಚರಿಕೆ.
ಅಂದರೆ ಕಲಾವಿದರ ಸಂಘದ ಕಟ್ಟಡ ಇರುವ ಜಾಗದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿದ್ದವು. ಈಗ ಅದಕ್ಕೆ ವಿರುದ್ಧವಾಗಿ ಅಧರ್ಮ ಕೆಲಸಗಳು ನಡೆಯುತ್ತಿವೆ ಎಂಬ ಅರ್ಥನಾ..? ಕೆಲವರ ಪ್ರಕಾರ ಕಲಾವಿದರ ಸಂಘದ ಕಟ್ಟಡ ಇದ್ದ ಜಾಗದಲ್ಲಿ ಮೊದಲು ನಾಗಬನ ಇತ್ತು ಎಂಬ ಮಾತಿದೆ. ಹೀಗಾಗಿಯೇ.. ನಾಗದೋಷ ತಟ್ಟಿದೆ. ಸೂಕ್ತ ಶಾಂತಿಯನ್ನೂ ಮಾಡಿಲ್ಲ. ಅಲ್ಲದೆ ಕಟ್ಟಡದಲ್ಲಿ ನಡೆಯುವ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಮದ್ಯಮಾಂಸದ ಹೊಳೆಯೇ ಹರಿಯುತ್ತದೆ. ಒಟ್ಟಿನಲ್ಲಿ ಧರ್ಮ ಒಪ್ಪದ ರೀತಿಯ ಚಟುವಟಿಕೆಗಳು ನಡೆಯುತ್ತವೆ. ನಾಗದೇವರು ಈ ಕುರಿತೇ ಎಚ್ಚರಿಕೆ ಕೊಟ್ಟಿದೆಯಾ..?
ಅವರೆಲ್ಲ ಸ್ಟಾರ್ ನಟ, ನಟಿ, ನಿರ್ದೇಶಕ, ತಂತ್ರಜ್ಞರು ಬರಲೇ ಇಲ್ಲ..!
ಜೊತೆಗೆ ಒಗ್ಗಟ್ಟಾಗಿ ಬಂದರೆ ಎಲ್ಲರಿಗೂ ಲಾಭವಿದೆ ಎನ್ನುವ ನಾಗದೇವರ ಮಾತು ಒಪ್ಪುವಂತಹುದೇ. ಆದರೆ.. ಚಿತ್ರರಂಗಕ್ಕಾಗಿ ನಡೆದ ಹೋಮದಲ್ಲಿ ಸ್ಟಾರ್ ನಟ, ನಿರ್ದೇಶಕ, ತಂತ್ರಜ್ಞರು ಬರಲೇ ಇಲ್ಲ. ನಾಗದರ್ಶನ ವೇಳೆ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಆಗ ನಾಗದರ್ಶನದ ನಂತರ ನಾಗದರ್ಶಕ ಪ್ರಶ್ನೆಗೆ ಈ ಉತ್ತರ ಬಂದಿದೆ. ದೊಡ್ಡಣ್ಣ, ಜಗ್ಗೇಶ್, ವೆಂಕಟೇಶ್ ಮುಂದೆ ತಪ್ಪುಗಳ ದೊಡ್ಡ ಪಟ್ಟಿಯನ್ನೇ ಕೊಟ್ಟಿದ್ದಾರೆ. ಆದರೆ.. ಹಿರಿಯ ನಟರಾದ ಶಿವಣ್ಣ, ರವಿಚಂದ್ರನ್, ಸುದೀಪ್, ಯಶ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಗಣೇಶ್, ವಿಜಯ್, ಉಪೇಂದ್ರ, ಧ್ರುವ ಸರ್ಜಾ, ಶ್ರೀಮುರಳಿ ಅವರಂತಹ ಸ್ಟಾರ್ ನಟರಾಗಲೀ, ಅನಂತ ನಾಗ್, ಶ್ರೀನಾಥ್, ಶ್ರೀನಿವಾಸ ಮೂರ್ತಿ, ರಮೇಶ್ ಭಟ್, ಭಾರತಿ ವಿಷ್ಣುವರ್ಧನ್, ಬಿ.ಸರೋಜಾದೇವಿ (ಅವರ ಸಲಹೆಯ ಮೇರೆಗೇ ನಡೆದ ಪೂಜೆ ಎಂದು ಹೇಳಲಾಯ್ತು), ಸುಧಾರಾಣಿ, ಶೃತಿ, ಮಾಲಾಶ್ರೀ, ಹಂಸಲೇಖ.. ಹೀಗೆ ಹಿರಿಯರೂ ಬರಲಿಲ್ಲ. ಯೋಗರಾಜ್ ಭಟ್, ಸೂರಿ, ಅರ್ಜುನ್ ಜನ್ಯ, ಹರಿಕೃಷ್ಣ, ಪ್ರಶಾಂತ್ ನೀಲ್ ಮೊದಲಾದವರೂ ಇರಲಿಲ್ಲ. ದೊಡ್ಡ ದೊಡ್ಡ ನಿರ್ಮಾಪಕರೂ ಇರಲಿಲ್ಲ. ಯಾಕೆ..?
ದರ್ಶನ್ ಬಿಡುಗಡೆಗಾಗಿಯೇ ಹೋಮ ಎಂಬ ಕಾರಣಕ್ಕೆ ಬರಲಿಲ್ಲವಾ..?
ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಹೋಮ ಹವನ ಮಾಡಿದೆ. ಆದರೆ.. ಈ ಹೋಮದ ಬಗ್ಗೆ ಅಪಸ್ವರಗಳೂ ಕೇಳಿ ಬಂದಿವೆ. ಒಳ್ಳೆಯ ಸಿನಿಮಾ ಮಾಡಿ, ಒಳ್ಳೆಯ ಕಥೆ ಮಾಡಿ ಎಂಬ ವಾದಗಳು ಒಂದೆಡೆಯಾದರೆ, ನಟ ದರ್ಶನ್ ಅವರಿಗಾಗಿ ನಡೆದ ಹೋಮವಾಗಿದ್ದರೆ ಬರುತ್ತಲೇ ಇರಲಿಲ್ಲ ಎಂಬ ವಾದಗಳೂ ಕೇಳಿ ಬಂದಿವೆ.
ದರ್ಶನ್ʻಗಾಗಿ ನಡೆದ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ ಎಂದಿರುವ ನಟ ಜಗ್ಗೇಶ್ ಹಾಗಾಗಿದ್ದರೆ ಅದು ಬೇರೆಯದೇ ತಿರುವು ಪಡೆದುಕೊಳ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ನಡೆದಿರುವ ಪೂಜೆ. ಅಪಾರ್ಥ ಮಾಡಿಕೊಳ್ಳಬೇಡಿ ಎಂದಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ ಎಂದಿದ್ದಾರೆ ನಟ ಜಗ್ಗೇಶ್.
ಇದೇ ವೇಳೆ ಹಿರಿಯ ನಟಿ ಗಿರಿಜಾ ಲೋಕೇಶ್ ದರ್ಶನ್ ಅವರಿಗಾಗಿ ಪೂಜೆ ಮಾಡಿದರೆ ತಪ್ಪೇನು ಎಂದರೆ, ನಟಿ ಜ್ಯೋತಿ ಸೇರಿದಂತೆ ಕೆಲವರು ಇದು ದರ್ಶನ್ ಅವರ ಬಿಡುಗಡೆಯನ್ನೂ ಸೇರಿಸಿ ನಡೆಸುತ್ತಿರುವ ಹೋಮ ಎಂದಿದ್ದಾರೆ.
ಮಾಜಿ ಸಂಸದೆಯೂ ಆಗಿರುವ ಸುಮಲತಾ ಅವರ ಪ್ರಕಾರ ಹೋಮ ಹವನದಿಂದ ಯಾರಿಗೂ ಸಮಸ್ಯೆ ಇಲ್ಲ.. ಅಲ್ಲವಾ ಎಂದು ಪ್ರಶ್ನಿಸಿದ್ದಾರೆ. ಹೋಮ, ಹವನದಲ್ಲಿ ಭಾಗಿಯಾದ ನಟ ಅಭಿಷೇಕ್ ಅಂಬರೀಶ್, ಧನ್ವೀರ್ ಹಾಗೂ ಚಿಕ್ಕಣ್ಣ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ.
ಇನ್ನು ಹೋಮದ ನೇತೃತ್ವ ವಹಿಸಿದ್ದ ರಾಕ್ ಲೈನ್ ವೆಂಕಟೇಶ್ ʻಇದು ನಟ ದರ್ಶನ್ ಅವರ ಬಿಡುಗಡೆಗಾಗಿ ನಡೆದ ಹೋಮ ಅಲ್ಲ. ದರ್ಶನ್ಗಾಗಿ ಪೂಜೆ ಮಾಡಬೇಕು ಅಂದರೆ 100 ದೇವಾಲಯದಲ್ಲಿ ಪೂಜೆ ಮಾಡಿಸ್ತೀನಿ. ಇಲ್ಲೇ ಪೂಜೆ ಮಾಡಬೇಕೆಂದು ನನಗೇನೂ ಇಲ್ಲ. ದರ್ಶನ್ಗೋಸ್ಕರ ಪೂಜೆ ಮಾಡಲಾಗುತ್ತಿದೆ ಎಂದುಕೊಂಡಿದ್ದರೆ ಅದು ತಪ್ಪು. ಇದು ಅವರಿಗಾಗಿ ಅಲ್ಲ, ಚಿತ್ರರಂಗದ ಅಭಿವೃದ್ಧಿಗಾಗಿ ಮಾಡಲಾಗಿದೆʼ ಎಂದು ಹೇಳಿದ್ದಾರೆ.
ಆದರೆ ಬಹುತೇಕ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರೆಲ್ಲ ಇದು ದರ್ಶನ್ ಅವರಿಗಾಗಿಯೇ ನಡೆದ ಹೋಮ, ಪೂಜೆ ಎಂಬ ಕಾರಣಕ್ಕಾಗಿಯೇ ಬರಲಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.
ನಾಗದರ್ಶನದ ವಿಶೇಷತೆ ಏನು..?
ನಾಗದೇವರ ದರ್ಶನ ನೀಡಿದ ವಾಸುದೇವಾಚಾರ್ಯ ಅವರು ಹೇಳಿದಂತೆ ನಾಗ ಅಂತ ಹೇಳಿದ್ರೆ ಭೂಮಿಯೇ ನಾಗರ ಖಂಡ. ಕನ್ನಡದಲ್ಲಿ ಇದು ನನ್ನ ಜಾಗ ಅಂತ ತುಳುವಿನಲ್ಲಿ ನಾಗರಖಂಡ ಅಂತಾರೆ. ನಾಗ ಪಾತಾಳದಲ್ಲಿದ್ದು, ಇಡೀ ನಮ್ಮ ಪರಿಸರವನ್ನ ಪ್ರಕೃತಿಯನ್ನು, ಸುತ್ತವರಿಸಿಕೊಂಡು, ಅವರ ಚೈತನ್ಯವನ್ನು ವಿಶೇಷವಾಗಿ ಇಟ್ಟುಕೊಂಡ ಕಾರಣ, ನಾಗದೇವರಿಗೆ ಇನ್ನಷ್ಟು ಮಹತ್ವ. ಉದಾಹರಣೆ ಒಂದು ಈಶ್ವರ ದೇವಸ್ಥಾನಕ್ಕೆ ಹೋಗಿ. ಅವರ ತಲೆ ಮೇಲೆ ಪ್ರಭಾವಳಿಗಳ ಚಿತ್ರಗಳಿರುತ್ತವೆ. ಈಶ್ವರನಲ್ಲಿ ನೋಡಿ ಜಡೆಯ ಮೇಲೆ ಸರ್ಪ ಇರುತ್ತೆ. ದೈವ ದೇವರುಗಳ ಮೈಮೇಲೆ ನೋಡಿ. ಎಲ್ಲ ನಾಗರ ಚಿತ್ರಗಳೇ ಇರುತ್ತವೆ. ತುಳುವಿನಲ್ಲಿ ನಾಗದೇವರನ್ನು ಹೆಡ್ಡತ್ತಿನಾರ ಅಂತಾರೆ. ಅದರ ಅರ್ಥ ಒಳ್ಳೆಯದು ಅಂತಾ ಅಷ್ಟೆ.
ನಾವು ನಾಗರ ಭೂಮಿಯಲ್ಲಿದ್ದೇವೆ ಅದರ ವಾರಸದಾರರು ನಾಗದೇವರು. ಮುಂದೆ ನಮಗೆ ತೊಂದರೆ ಬರದೇ ಇರಲಿ ಅಂತ. ಚರ್ಮವ್ಯಾಧಿ, ದೃಷ್ಟಿದೋಷ, ಸಂತಾನ ಸಮಸ್ಯೆ, ಮಾನಸಿಕ ಸಮಸ್ಯೆ, ಆರ್ಥಿಕ ಸಂಕಷ್ಟ, ವಿವಾಹ ಪ್ರತಿಬಂಧಕ ದೋಷ ಹೀಗೆ ಅನೇಕ ದೋಷಗಳಿರುತ್ತವೆ. ಅವುಗಳು ಇಂತಹ ಪೂಜೆಗಳಿಂದ ನಿವಾರಣೆಯಾಗುತ್ತವೆ. ಏನಾದರೂ ಸಂಶಯ ಇದ್ದರೆ ದೈವದ ದರ್ಶನ ಮಾಡಿಸಿದರೆ, ಪರಿಹಾರ ದೊರೆಯಬಹುದು. ದರ್ಶನ್ ತಪ್ಪು ಮಾಡಿದ್ದಾನೆ. ಅದಕ್ಕೆ ಶಿಕ್ಷೆಯಾಗಲಿ. ಅದನ್ನು ಬಿಟ್ಟು ಆತನ ಬಿಡುಗಡೆಗಾಗಿ ಪ್ರಾರ್ಥಿಸಿ, ಪೂಜೆ, ಹೋಮ ಮಾಡಿಸಿದರೆ.. ನಮಗೆ ಒಳ್ಳೆಯದಾಗಲ್ಲ ಕಣ್ರಿ ಎಂದಿದ್ದಾರಂತೆ.



