ಚನ್ನಪಟ್ಟಣ ಚುನಾವಣೆಯಲ್ಲಿ ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಸಿಪಿ ಯೋಗೇಶ್ವರ್ ಅವರಿಗೆ ಇಬ್ಬರು ಪತ್ನಿಯರು. ಯೋಗೇಶ್ವರ್ ಅವರ ಮೊದಲ ಪತ್ನಿಯ ಹೆಸರು ಮಂಜುಳಾ. ಎರಡನೇ ಪತ್ನಿಯ ಹೆಸರು ಶೀಲಾ. ಶೀಲಾ ಯೋಗೇಶ್ವರ್ ಪುತ್ರ ಧ್ಯಾನ್. ಮಂಜುಳಾ ಯೋಗೇಶ್ವರ್ ಅವರಿಗೆ ಇಬ್ಬರು ಮಕ್ಕಳು. ಪುತ್ರಿ ನಿಶಾ ಯೋಗೇಶ್ವರ್ ಮತ್ತು ಪುತ್ರ ಶ್ರವಣ್ ಯೋಗೇಶ್ವರ್. ಈಗ ಈ ಇಬ್ಬರ ನಡುವಿನ ಕುಟುಂಬದ ಕದನ ಬೀದಿಗೆ ಬಂದಿದೆ.
ಚನ್ನಪಟ್ಟಣ ಉಪಚುನಾವಣೆಗೆ ಕಾಂಗ್ರೆಸ್ನಿಂದ ಸಿ.ಪಿ. ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಲಾಗಿದೆ. ಈ ವೇಳೆ ತಂದೆಯ ವಿರುದ್ಧ ಅವರ ಮಗಳು ನಿಶಾ ಯೋಗೇಶ್ವರ್ ದಿನಕ್ಕೊಂದು ವಿಡಿಯೋ ರಿಲೀಸ್ ಮಾಡುತ್ತಿದ್ದಾರೆ. ಈ ಮೂಲಕ ಅವರು ಅಪ್ಪನ ಗೆಲುವಿಗೆ ಅಡ್ಡಿಯಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.
ವಿಡಿಯೋ ಮೂಲಕ ದಿನಕ್ಕೊಂದು ಸ್ಫೋಟಕ ಸುದ್ದಿ ಹೊರಹಾಕುತ್ತಿರುವ ಯೋಗೇಶ್ವರ್ ಅವರಿಗೆ ಮಗಳು ನಿಶಾ ಅವರೇ ಒಂದು ರೀತಿಯಲ್ಲಿ ಶತ್ರು. ನಮ್ಮ ಕುಟುಂಬದ ಗುಟ್ಟನ್ನು ರಟ್ಟು ಮಾಡುತ್ತೇನೆ. ನನ್ನ ತಂದೆಯಿಂದ ನಾನು ಸಾಕಷ್ಟು ಅವಮಾನ ಅನುಭವಿಸಿದ್ದೇನೆ. ನಾನು 13 ವರ್ಷದವಳಿದ್ದಾಗ ನನ್ನ ತಂದೆ ಬೇರೊಂದು ಸಂಸಾರವನ್ನು ಕಟ್ಟಿಕೊಂಡಿದ್ದನ್ನು ಪತ್ರಿಕೆಗಳ ಮೂಲಕ ತಿಳಿದುಕೊಂಡೆ. ನನಗೆ ಅದನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಿರೋ ನಿಶಾ, ಕಳೆದ ಬಾರಿ ಇದೇ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅವರ ಪರ ಪ್ರಚಾರ ಮಾಡಿದ್ದರು. ನಿಶಾ ಅವರಷ್ಟೇ ಅಲ್ಲ, ಮೊದಲ ಪತ್ನಿ ಮಂಜುಳಾ ಮತ್ತು ಅವರ ಮಗ ಶ್ರವಣ್ ಕೂಡಾ ಪ್ರಚಾರ ಮಾಡಿದ್ದರು. ಅಫ್ʻಕೋರ್ಸ್ ಎರಡನೇ ಪತ್ನಿ ಶೀಲಾ ಮತ್ತು ಅವರ ಮಗ ಧ್ಯಾನ್ ಕೂಡಾ ಯೋಗೇಶ್ವರ್ ಅವರ ಪರ ಪ್ರಚಾರ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಎಲ್ಲವೂ ತಿರುಗಾಮುರುಗಾ ಆಗಿದೆ.
ಚನ್ನಪಟ್ಟಣ ಚುನಾವಣೆ ಹಿಂದೆ ಸಿಡಿ ಕಥೆ ಹೊರಬಂದಿದೆ. ಡಿಕೆ ಶಿವಕುಮಾರ್ ಅವರು ತಮ್ಮ ತಂದೆಯನ್ನು ಬ್ಲಾಕ್ ಮೇಲ್ ಮಾಡಿ ಪಕ್ಷಕ್ಕೆ ಕರೆದುತಂದಿದ್ದಾರೆ. . ಮಗಳ ಸಿಡಿ ಬಳಿಸಿಕೊಂಡು ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಿ ಪಿ ಯೋಗೇಶ್ವರ್ ಅವರನ್ನ ಕರೆ ತಂದಿದ್ದಾರೆ ಎಂದು ಡಿ ಕೆ ಶಿವಕುಮಾರ್ ಮೇಲೆ ಆರೋಪ ಇದೆ ಎಂದು ಖುದ್ದು ನಿಶಾ ಯೋಗೇಶ್ವರ್ ಅವರು ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಸರ್ ನೀವು ಯಾವುದಕ್ಕೂ ಹೆದರುವುದು ಬೇಡ, ನಿಮ್ಮ ಬಳಿ ಸಿಡಿ ಇದ್ರೆ ಹಿಂಜರಿಯದೇ ಸಿಡಿ ಬಿಡುಗಡೆ ಮಾಡಿ ಸರ್ ಎಂದು ನಿಶಾ ಯೋಗೇಶ್ವರ್, ಡಿಕೆ ಶಿವಕುಮಾರ್ ಅವರಿಗೆ ಮನವಿ ರೀತಿಯಲ್ಲಿಯೇ ಚಾಲೆಂಜ್ ಮಾಡಿದ್ದಾರೆ. ನನ್ನ ಅಗ್ನಿ ಪರೀಕ್ಷೆ ನಡೆಯುತ್ತಿದೆ. ಆ ಸಿಡಿ ಇಲ್ಲ ಎನ್ನುವುದಾದ್ರೆ ಅದನ್ನು ಸಹ ಜನರಿಗೆ ಬಂದು ತಿಳಿಸಿ ಸರ್. ಇದು ದೊಡ್ಡ ಆರೋಪ ನಿಮ್ಮ ಮೇಲಿದೆ. ನೀವು ದೊಡ್ಡವರು ಸರ್, ನಿಮ್ಮಲ್ಲಿ ಸಿಡಿ ವಿಷಯ ಮಾಮೂಲಿ, ಆದರೆ ನೀವು ಹೆಣ್ಣು ಮಕ್ಕಳನ್ನು ಇಂತಹ ವಿಷಯನ್ನ ಎಳೆಯುತ್ತಿದೀರಾ ಎಂದು ನನಗೆ ಶಾಕ್ ಆಗುತ್ತಿದೆ. ಡಿ ಕೆ ಶಿವಕುಮಾರ್ ಸರ್, ನೀವು ಒಬ್ರು ತಂದೆ. ನಿಮಗೂ ಹೆಣ್ಣು ಮಕ್ಕಳಿದ್ದಾರೆ. ಸರ್, ನಮ್ಮ ಪೀಳಿಗೆಗೆ ಸ್ಪಷ್ಟತೆ ಬೇಕು. ಆ ಸ್ಪಷ್ಟತೆಯನ್ನ ನೀವೇ ಕೊಡಿ ಸರ್. ನನ್ನ ಸಿಡಿ ನಿಜವಾಗಿಯೂ ನಿಮ್ಮ ಬಳಿ ಇದ್ರೆ, ಯಾವುದೇ ಯೋಚನೆ ಮಾಡದೇ ಬಿಡುಗಡೆ ಮಾಡಿ. ನಿಮ್ಮ ಉತ್ತರಕ್ಕೆ ನಾನು ಕಾಯುತ್ತಿರುತ್ತೇನೆ ಎಂದು ನಿಶಾ ಯೋಗೇಶ್ವರ್ ಹೇಳಿದ್ದಾರೆ.
ಇದಕ್ಕೆಲ್ಲ ಉತ್ತರ ನೀಡಿರುವ ಡಿಕೆ ಶಿವಕುಮಾರ್ ನಿಶಾ ಯೋಗೇಶ್ವರ್ ಆರೋಪಕ್ಕೆ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ʻʻನಿಶಾ ಯೋಗೇಶ್ವರ್ ಆಪಾದನೆ ಸತ್ಯಕ್ಕೆ ದೂರವಾದದ್ದು, ನಿಶಾ ಯೋಗೇಶ್ವರ್ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿವೆʼʼ ಎಂದಿದ್ದಾರೆ.
ಇದಕ್ಕೊಂದು ಇತಿಹಾಸವೂ ಇದೆ. ಕಳೆದ ಲೋಕಸಭೆ ಚುನಾವಣೆಗೆ ಮೊದಲು ನಿಶಾ ಯೋಗೇಶ್ವರ್ ಅವರು ಕುಮಾರಕೃಪಾದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒಮ್ಮೆ ಭೇಟಿ ಮಾಡಿದ್ದರು. ಆಗ ಡಿಕೆಶಿ, ತಂದೆ-ಮಗಳ ವಿಚಾರದಲ್ಲಿ ತಾನು ತಲೆ ಹಾಕುವುದಿಲ್ಲ. ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿಗೆ ಒಳಗಾಗಲು ಬಯಸುವುದಿಲ್ಲ. ನಿಮ್ಮ ತಂದೆಯ ಜೊತೆ ಮಾತನಾಡಿ ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದರು. ಇದೀಗ ಮತ್ತೊಮ್ಮೆ ಚುನಾವಣೆ ಸಂದರ್ಭದಲ್ಲಿ ಈ ರೀತಿಯ ವಿವಾದ ಸೃಷ್ಟಿಯಾಗಿದೆ.



