ಮೋದಿ, ಟ್ರಂಪ್, ನಾನು ಒಂದಾದರೆ ಪ್ರಜಾಪ್ರಭುತ್ವಕ್ಕೆ ಆತಂಕವೇ..? ಹೀಗಂತ ಪ್ರಶ್ನೆ ಮಾಡಿರೋದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ. ಎಡಪಂಥೀಯ ನಾಯಕರ ವಿರುದ್ಧ ಇಟಲಿ ಪ್ರಧಾನಿ ಮೆಲೋನಿ ಆಕ್ರೋಶ ವ್ಯಕ್ತಪಡಿಸಿದ್ದು, ನಾನು, ಮೋದಿ, ಟ್ರಂಪ್‌ರಂತ ಬಲಪಂಥೀಯ ನಾಯಕರು ಒಂದಾದರೆ ಏನು ಸಮಸ್ಯೆ..? ಪ್ರಜಾಪ್ರಭತ್ವಕ್ಕೇ ಆತಂಕ ಇದೆ ಎಂದು ಹುಯಿಲು ಹಬ್ಬಿಸುವುದೇಕೆ..? ಎಂದು ಎಡಪಂಥೀಯ ನಾಯಕರಿಗೆ, ಚಿಂತಕರಿಗೆ ಇಟಲಿ ಪ್ರಧಾನಿ ಮೆಲೋನಿ ಪ್ರಶ್ನೆ ಮಾಡಿದ್ದಾರೆ.
ʻʻಟ್ರಂಪ್ ಗೆಲುವಿನಿಂದ ಎಡಪಂಥೀಯ ನಾಯಕರಿಗೆ ಆತಂಕ ಶುರುವಾಗಿದೆ. ಸುಳ್ಳುಗಳನ್ನು ಜನ ನಂಬುತ್ತಿಲ್ಲ ಎನ್ನುವುದೇ ಎಡಪಂಥೀಯರ ಆತಂಕ. ನಾವು ಒಟ್ಟಿಗೇ ಮಾತನಾಡಿದರೆ ಪ್ರಜಾಪ್ರಭುತ್ವಕ್ಕೇ ಧಕ್ಕೆ ಎನ್ನುತ್ತಾರೆ. ಈ ಹಿಂದೆ ಕ್ಲಿಂಟನ್, ಟೋನಿ ಬ್ಲೇರ್ ಒಂದಾದಾಗ ಅವರನ್ನು ಮುತ್ಸದ್ಧಿಗಳು ಎಂದಿದ್ದರು. ಅವರು ಎಡಪಂಥೀಯ ನೆಟ್ ವರ್ಕ್ ರಚಿಸಿ ಜನಪ್ರಿಯಗೊಂಡಿದ್ದರು. ಈ ನೆಟ್‌ವರ್ಕ್ ಜಾಗತಿಕವಾಗಿ ಬಲಪಂಥೀಯ ನಾಯಕರನ್ನು ಟೀಕಿಸುವುದು ಮತ್ತು ಎಡಪಂಥವನ್ನು ಪ್ರಚಾರ ಮಾಡುವುದನ್ನು ಕಾಯಕ ಮಾಡಿಕೊಂಡಿತ್ತು. ಆದರೀಗ ಪರಿಸ್ಥಿತಿ ಬದಲಾಗಿದ್ದು, ಜಾಗತಿಕ ಎಡ ಉದಾರವಾದಿ ಚಿಂತಕರ ನಿರೂಪಣೆಗಳನ್ನು ಜನರು ನಂಬುತ್ತಿಲ್ಲ. ಎಡಪಂಥೀಯರ ಇಂತಹ ಸುಳ್ಳು ಸುದ್ದಿಗಳು ನಮಗೆ ಅಭ್ಯಾಸವಾಗಿ ಹೋಗಿದೆʼʼ ಎಂದು ಎಡಪಂಥೀಯರ ವಿರುದ್ಧ ಕಿಡಿ ಕಾರಿದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕಿಡಿಕಾರಿದ್ದಾರೆ.
ವಾಷಿಂಗ್ಟನ್‌ನಲ್ಲಿ ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್‌ನಲ್ಲಿ ಹೇಳಿಕೆ ನೀಡಿರುವ ಮೆಲೋನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಡಪಂಥೀಯರ ಹೊಟ್ಟೆಉರಿ ವಿರುದ್ಧ ಸಿಡಿದೆದ್ದಿದ್ದಾರೆ.
ಭಾರತದಲ್ಲಿ ಪ್ರಧಾನಿ ಮೋದಿ ಅವರ ಸರ್ಕಾರ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು, ಇಟಲಿಯಲ್ಲಿ ತಮ್ಮ ಸರ್ಕಾರ ಅಸ್ತಿತ್ವದಲ್ಲಿರುವುದು, ಡೊನಾಲ್ಡ್ ಟ್ರಂಪ್ ಅವರು ವೈಟ್‌ಹೌಸ್‌ಗೆ ಮರಳಿದ ನಂತರ ಎಡಪಂಥೀಯರು ಆತಂಕಗೊಂಡಿದ್ದಾರೆ.
ನಾವು ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ, ನಮ್ಮ ದೇಶವನ್ನು ಪ್ರೀತಿಸುತ್ತೇವೆ ಮತ್ತು ಗಡಿಗಳನ್ನು ಭದ್ರಗೊಳಿಸುತ್ತೇವೆ, ಉದ್ಯಮ ಹಾಗೂ ಹಸಿರು ಎಡಪಂಥೀಯರ ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಹಾಗೂ ನಮ್ಮ ಕೌಟುಂಬಿಕ ಬದುಕನ್ನು ಕಾಪಾಡುತ್ತೇವೆ ಎಂದು ಜನ ನಮಗೆ ಮತಹಾಕುತ್ತಾರೆ. ನಾವು ಎಚ್ಚರವಾದದ ವಿರುದ್ಧ ಹೋರಾಡುತ್ತೇವೆ ಮತ್ತು ಸಾಮಾನ್ಯ ತಿಳಿವಳಿಕೆಯ ಪರವಾಗಿದ್ದೇವೆ ಎಂದು ಇದೇ ವೇಳೆ ಹೇಳಿದ್ದಾರೆ.
‘ಬ್ರದರ್ಸ್ ಆಫ್ ಇಟಲಿ’ ಪಕ್ಷದ ನಾಯಕಿಯಾಗಿರುವ ಜಾರ್ಜಿಯಾ ಮೆಲೋನಿ, ಕಳೆದ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಏಕೈಕ ಯೂರೋಪ್ ಒಕ್ಕೂಟದ ಮುಖ್ಯಸ್ಥರಾಗಿದ್ದರು.
ಜಾಗತಿಕ ಮಟ್ಟದಲ್ಲಿ ನಾವು ಇಂದು ಬಲಪಂಥೀಯ ನಾಯಕರ ಏಳಿಗೆಯನ್ನು ಗುರುತಿಸುತ್ತಿದ್ದೇವೆ. ಇದರಿಂದ ಎಡಪಂಥೀಯ ವಿಚಾರಧಾರೆಯ ಚಿಂತಕರು ಭಯಭೀತರಾಗಿದ್ದಾರೆ. ಹೀಗಾಗಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಜಾಗತಿಕ ಬಲಪಂಥೀಯ ನಾಯಕರಿಂದ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ. ಎಂಬ ಸುಳ್ಳು ನಿರೂಪಣೆಯನ್ನು ಹರಿಬಿಡುತ್ತಿದ್ದಾರೆ..” ಎಂದು ಜಾರ್ಜಿಯಾ ಮೆಲೋನಿ ಹರಿಹಾಯ್ದರು.



