ಅಘೋರಿಗಳ ಮೂಲಕ ಯಾಗ ಮಾಡಿಸ್ತಾ ಇದ್ದಾರಂತೆ. ಅದರ ಹೆಸರು ಶತ್ರುಭೈರವಿ ಯಾಗ. ಅದಕ್ಕಾಗಿ ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳನ್ನು ಬಲಿ ಕೊಡ್ತಿದ್ದಾರಂತೆ. ಇಂಥಾದ್ದೊಂದು ಮಾತನ್ನು ಹೇಳಿದ್ಧಾರೆ ಡಿಕೆ ಶಿವಕುಮಾರ್. ಡಿಕೆಶಿ, ರಾಜ್ಯ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ. ಈ ಯಾಗ ಮಾಡಿಸ್ತಾ ಇರೋದು ಯಾರಂತ ಅವರಿಗೆ ಗೊತ್ತಿದೆ. ಅದರೆ.. ಹೇಳ್ತಿಲ್ಲ.
ಈ ಬಗ್ಗೆ ಖಚಿತ ಮಾಹಿತಿಯಿದೆ. ಯಾರು ಮಾಡುತ್ತಿದ್ದಾರೆ ಎಂಬುದೂ ಸಹ ತಿಳಿದಿದೆ. ಅವರ ಪ್ರಯತ್ನ ಮಾಡಲಿ. ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ನಂಬಿಕೆ ಅವರದ್ದು. ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ ಎಂದಿರುವ ಡಿಕೆ, ಅದಕ್ಕೆಲ್ಲ ತಲೆ ಕೆಡಿಸಿಕೊಂಡಿಲ್ಲ. ಆದರೆ.. ಡಿಕೆಶಿ ಕೂಡಾ ಇಂತಹ ಯಾಗ, ದೇವರು, ಧರ್ಮ.. ಇವನ್ನೆಲ್ಲ ನಂಬುವವರೇ. ಸ್ವತಃ ಅವರೇ ಇಂತಹ ಯಾಗ ಮಾಡಿಸಿರುವ ಬಗ್ಗೆ ಯಾರಿಗೂ ಮಾಹಿತಿ ಇಲ್ಲವಾದರೂ.. ಇಂತಹ ಯಾಗ, ಯಜ್ಞಗಳಿಗೆ ತಲೆ ಕೆಡಿಸಿಕೊಂಡಿದ್ದನ್ನು ನೋಡಿದವರಿದ್ಧಾರೆ. ಏಕೆಂದರೆ.. ಸ್ವತಃ ಡಿಕೆ ಅಂತಹವುಗಳನ್ನು ನಂಬುತ್ತಾರೆ.
ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರಕ್ಕಾಗಿ ‘ಶತ್ರು ಭೈರವಿ ಯಾಗ’, ‘ರಾಜಕಂಟಕ’, ‘ಮಾರಣ ಮೋಹನ ಸ್ತಂಭನ ಯಾಗ’ ಪ್ರಯೋಗ ನಡೆಸಲಾಗುತ್ತಿದೆ. ಈ ಯಾಗವನ್ನು ಯಾರು ಮಾಡಿಸುತ್ತಿದ್ದಾರೆ ಎಂಬ ಎಲ್ಲ ಮಾಹಿತಿಯೂ ನನಗಿದೆ ಎಂದಿರೋ ಡಿಕೆ ಶಿವಕುಮಾರ್, ಈ ಯಾಗವನ್ನು ಅಘೋರಿಗಳ ಮೂಲಕ ಮಾಡಿಸ್ತಿದ್ಧಾರೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಘೋರಿಗಳ ಮೂಲಕ ಈ ಯಾಗ ಮಾಡಿಸಲಾಗುತ್ತಿದೆ. ಅದಕ್ಕಾಗಿ ಪಂಚ ಬಲಿ ನೀಡಲಾಗುತ್ತಿದೆ. ಕೆಂಪು ಬಣ್ಣದ 21 ಮೇಕೆ, 3 ಎಮ್ಮೆ, ಕಪ್ಪು ಬಣ್ಣದ 21 ಕುರಿ ಹಾಗೂ 5 ಹಂದಿಗಳನ್ನು ಬಲಿ ನೀಡುತ್ತಿದ್ಧಾರೆ. ಇದೊಂದು ಮಾಂತ್ರಿಕ ಯಾಗ ಎಂದಿದ್ಧಾರೆ ಡಿಕೆ.
ಶತ್ರು ಭೈರವಿ ಯಾಗ ಎಂದರೇನು ಗೊತ್ತೇ..?
ಈ ಯಾಗ ಮಾಡಿಸಿದಾಗ..ಅದು ಯಶಸ್ವಿಯಾದರೆ.. ಶತ್ರುವಿನ ತಲೆ ಕೆಡಬಹುದು. ಅಂದರೆ.. ಮಾತಿಗೂ.. ವರ್ತನೆಗೂ ಸಂಬಂಧ ಇಲ್ಲದೇ ಹೋಗಬಹುದು. ಅಂತಿಮವಾಗಿ ಸಾವೂ ಸಂಭವಿಸಬಹುದು. 9 ದಿನಗಳ ಕಾಲ ರಾತ್ರಿಯಿಂದ ಬೆಳಗಿನ ಜಾವದವರೆಗೆ ಅಘೋರಿಗಳು ಈ ಯಾಗ ಮಾಡುತ್ತಾರೆ. ಇದು ಮಾಟ, ಮಂತ್ರದಂತಹ ಕ್ಷುದ್ರ ಶಕ್ತಿಗಳ ಪ್ರಯೋಗದ ಯಾಗ. ಹೆಚ್ಚುಕಮ್ಮಿ ಆದರೆ ಇದನ್ನು ಮಾಡಿಸುವವರೂ ಕಷ್ಟಕ್ಕೆ ಸಿಲುಕುತ್ತಾರೆ. ಹೌದು, ಸ್ವಲ್ಪವೇ ಸ್ವಲ್ಪ ಹೆಚ್ಚೂ ಕಮ್ಮಿ ಆದರೂ.. ಈ ಯಾಗ ಮಾಡಿಸುವವರೇ ಸಮಸ್ಯೆಗೆ ಸಿಲುಕುತ್ತಾರೆ.
ಶತ್ರು ಭೈರವಿ ಯಾಗವನ್ನು ಶತ್ರು ಮರ್ದನ ಯಾಗ ಅಥವಾ ವಿಷ ಯಾಗ ಎಂದೂ ಕರೆಯಲಾಗುತ್ತದೆ. ಶತ್ರುವಿನ ಬುದ್ಧಿಯ ಮೇಲೆ ಪರಿಣಾಮ ಬೀರುವುದು ಮತ್ತು ಶತ್ರು ಮರಣ ಹೊಂದುವಂತೆ ಮಾಡಲು ಈ ಯಾಗವನ್ನು ಮಾಡಿಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯರನ್ನು ಆಹ್ವಾನ ಮಾಡಿ ಯಾಗ ಮಾಡಿಸಲಾಗುತ್ತದೆ. ಈ ಯಾಗದ ಪ್ರಯೋಗ ಮೊದಲು ಪ್ರಾಣಿಗಳ ಮೇಲೆ ನಡೆಯುತ್ತದೆ.
ಅನಂತರ ಅದನ್ನು ಶತ್ರುವಿನ ಮೇಲೆ ಪ್ರಯೋಗಿಸಲಾಗುತ್ತದೆ. ಈ ಯಾಗದ ಹೋಮಕ್ಕೆ ವಿಷಯುಕ್ತ ಕಸರಕ ಮರದ ಚಕ್ಕೆ, ಹಂದಿ, ಎಮ್ಮೆಯ ತುಪ್ಪ ಸೇರಿ ಕ್ಷುದ್ರ ಪ್ರಯೋಗಕ್ಕೆ ಬಳಸುವ ಇನ್ನಿತರ ವಸ್ತುಗಳನ್ನು ಬಳಸಲಾಗುತ್ತದೆ.
ಈ ಯಾಗವನ್ನು 9 ದಿನಗಳ ಕಾಲ ರಾತ್ರಿ 11ರಿಂದ ಬೆಳಗಿನ ಜಾವದವರೆಗೆ ನಡೆಸಲಾಗುತ್ತದೆ. ಈ ಯಾಗವನ್ನು ಸಾಮಾನ್ಯ ಪುರೋಹಿತರು, ತಾಂತ್ರಿಕರು ಮಾಡದೆ ಕಪಾಲಿಕರು, ಮಾಂತ್ರಿಕರು ಸೇರಿದಂತೆ ಅಘೋರಿಗಳು ಮಾತ್ರ ಮಾಡುತ್ತಾರೆ. ಈ ಯಾಗದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಮಾಡಿಸುವವರು, ಮಾಡುವ ಮಾಂತ್ರಿಕರಿಗೂ ಹಾನಿ ಸಂಭವಿಸುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ, ಈ ಪ್ರಯೋಗವನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ 6 ತಿಂಗಳಿನಿಂದ 1 ವರ್ಷದಲ್ಲಿ ಅದರ ಪರಿಣಾಮ ಉಂಟಾಗಲಿದೆ ಎಂಬ ನಂಬಿಕೆಯಿದೆ.



