ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಮೊದಲು ಸಂಧಾನಕರರಾಗಿ ಹೋದವರು ಕೆಜೆ ಜಾರ್ಜ್. ಆನಂತರ.. ಅದೆಲ್ಲ ಇಲ್ಲ ಎಂದುಬಿಟ್ಟರು. ಅದಾದ ನಂತರ ಬಿಕೆ ಹರಿಪ್ರಸಾದ್ ಅವರನ್ನು ದೆಹಲಿಗೆ ಕರೆಸಿಕೊಂಡರು ರಾಹುಲ್ ಗಾಂಧಿ. ಇದರ ಮಧ್ಯೆ ಪ್ರಿಯಾಂಕ್ ಖರ್ಗೆ ಅವರನ್ನೂ ದೆಹಲಿಗೆ ಕರೆಸಿಕೊಂಡಿದೆ. ವಿಶೇಷ ಎಂದರೆ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರೂ, ರಾಹುಲ್ ಗಾಂದಿ ಪ್ರಿಯಾಂಕ್ ಮೂಲಕ ಮಾಹಿತಿ ತರಿಸಿಕೊಂಡಿರುವುದು. ದೆಹಲಿಗೆ ಹೋಗಿ ಬಂದ ಪ್ರಿಯಾಂಕ್ ಒಂದು ಸಂದೇಶವನ್ನಂತೂ ಹೊತ್ತು ತಂದಿದ್ದಾರೆ.
ಮಂಗಳವಾರ ದೆಹಲಿ ಹಾಗೂ ಬೆಂಗಳೂರಿನಲ್ಲಿ ನಡೆದಿರುವ ಕೆಲ ಬೆಳವಣಿಗೆಗಳು ಈ ತಿಂಗಳ ಕೊನೆ ಅಥವಾ ಡಿಸೆಂಬರ್ ತಿಂಗಳ ಫಸ್ಟ್ ವೀಕ್ ಏನೋ ಆಗಲಿದೆ ಎಂಬ ಸೂಚನೆ ಕೊಡ್ತಿವೆ. ಏನೋ ಎಂದರೆ ಅಧಿಕಾರ ಬದಲಾವಣೆಯೂ ಆಗಬಹುದು.. ಅಥವಾ ಯಶಸ್ವಿ ಸಂಧಾನವೂ ಆಗಬಹುದು. ಮೂಲಗಳ ಪ್ರಕಾರ, ರಾಜ್ಯ ನಾಯಕರ ಈ ಕದನ ವಿಚಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಮುಟ್ಟಿದೆ.
ಸೋನಿಯಾ ನವೆಂಬರ್ 28ಕ್ಕೆ ದೆಹಲಿ ರೀಚ್ ಆಗಲಿದ್ದಾರೆ. ಹಾಗೆಂದು ಅವರೇನೂ ವಿದೇಶದಲ್ಲಿ ಇಲ್ಲ. ಬಹುಶಃ ಹಿಮಾಚಲ ಪ್ರದೇಶದಲ್ಲಿರಬಹುದು. ನ.29ರ ಬಳಿಕ ರಾಹುಲ್ ಗಾಂಧಿ ರೊಚ್ಚಿಗೆದ್ದಿರುವ, ತಟಸ್ಥವಾಗಿರುವ ಎಲ್ಲರನ್ನೂ ಒಂದು ವೇದಿಕೆಗೆ ಕರೆಯುವ ನಿರೀಕ್ಷೆ ಇದೆ. ಇದರ ನಡುವೆ ನಡೆದಿರುವುದೇ ಪ್ರಿಯಾಂಕ್ ಖರ್ಗೆ ಟಾಕ್.
ರಾಹುಲ್ ಗಾಂಧಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ದೆಹಲಿಯಲ್ಲಿ ಸುಮಾರು ಒಂದು ತಾಸಿಗೂ ಹೆಚ್ಚಿನ ಕಾಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡಿದ್ದಾರೆ. ರಾಹುಲ್ ಭೇಟಿ ನಂತರ ನಗರಕ್ಕೆ ಆಗಮಿಸಿದ ಪ್ರಿಯಾಂಕ್ ಖರ್ಗೆ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದು, ಈ ವೇಳೆ ಹೈಕಮಾಂಡ್ ಸಂದೇಶವನ್ನು ಉಭಯ ನಾಯಕರಿಗೂ ರವಾನಿಸಿದರು ಎನ್ನಲಾಗುತ್ತಿದೆ.
ಇದರ ಬೆನ್ನಲ್ಲೇ ಸಿದ್ದರಾಮಯ್ಯ ಅವರ ಆಪ್ತ ಸಚಿವ ಜಮೀರ್ ಅಹಮದ್ ಖಾನ್ ಅವರು ಮೊದಲು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ನಂತರ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ. ಇದರರ್ಥ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ನಡುವೆ ಅಭಿಪ್ರಾಯ ವಿನಿಮಯ ಸಂದೇಶ ನಡೆಯುತ್ತಿದೆ. ಆದರೆ ಅದು ನೇರವಾಗಿ ಅಲ್ಲ, ಪೋಸ್ಟ್ ಮ್ಯಾನ್‌ಗಳ ಮಾದರಿ ನಾಯಕರ ಮೂಲಕ ನಡೆದಿದೆ. ಆದರೆ, ವಿನಿಮಯಗೊಂಡ ಸಂದೇಶವೇನು ಎಂಬುದು ಮಾತ್ರ ಗೌಪ್ಯವಾಗಿದೆ.
ಈ ಬೆಳವಣಿಗೆಯೂ ಹೈಕಮಾಂಡ್ ರಾಜ್ಯಾಧಿಕಾರ ಬಿಕ್ಕಟ್ಟಿಗೆ ಸಂಧಾನ ರೂಪಿಸುವ ಮನಸ್ಥಿತಿ ಮುಟ್ಟಿರುವುದು ಹಾಗೂ ಇದನ್ನರಿತ ಉಭಯ ಬಣಗಳು ಹೈಕಮಾಂಡ್ ನಡುವಿನ ಚರ್ಚೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ಸ್ಪಷ್ಟವಾಗಿ ಗೋಚರವಾಗುವಂತೆ ಮಾಡಿದೆ. ಆದರೆ, ಹೈಕಮಾಂಡ್ ಯಾವ ರೀತಿಯ ಸಂಧಾನ ಸೂತ್ರ ಮಂಡಿಸಬಹುದು. ಆ ಸೂತ್ರಕ್ಕೆ ಉಭಯ ನಾಯಕರ ಪ್ರತ್ರಿಕ್ರಿಯೆ ಹೇಗಿರುತ್ತದೆ ಎಂಬುದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.
ಇದರ ನಡುವೆ ಸೀನಿಯರ್ ಖರ್ಗೆ ಮೂಲಕ ಡಿಕೆ ಶಿವಕುಮಾರ್, ರಾಹುಲ್ ಗಾಂಧಿ ಅವರಿಗೆ ಒಂದು ಸಂದೇಶ ರವಾನಿಸಿದ್ದಾರೆ. ಆದರೆ.. ಅದರಲ್ಲಿ ಹೊಸ ಅಂಶಗಳೇನೂ ಇಲ್ಲ ಎನ್ನಲಾಗಿದೆ. ಅಂದರೆ.. ಹೈಕಮಾಂಡಿಗೆ ಗೊತ್ತಿರುವ ಮಾಹಿತಿಯನ್ನೇ ಮತ್ತೊಮ್ಮೆ ನೆನಪಿಸಿ ಕಳಿಸಿದ್ದಾರಂತೆ ಡಿಕೆ ಶಿವಕುಮಾರ್.



