ಬಿಜೆಪಿ ರಾಜ್ಯಾಧ್ಯಕ್ಷರ ಕುರಿತಂತೆ ಬಿಜೆಪಿ ರೆಬಲ್ಸ್ ಮಾಡುತ್ತಿರುವ ಟೀಕೆಗಳಿಗೆ ಬ್ರೇಕ್ ಬಿದ್ದಿಲ್ಲ. ಯತ್ನಾಳ್ ಮಾದರಿಯ ಹೇಳಿಕೆಗಳು ಬರುತ್ತಿಲ್ಲ ಎನ್ನವುದು ಬಿಟ್ಟರೆ.. ಮಿಕ್ಕ ಯಾವುದೂ ನಿಂತಿಲ್ಲ. ಹೀಗಾಗಿಯೇ ದೆಹಲಿಯ ಸೂಚನೆ ಮೇರೆಗೆ RSS ಮಧ್ಯಪ್ರವೇಶವಾಗಿದೆ. ಬಿಜೆಪಿ ಶಾಸಕ ಡಾ. ಅಶ್ವಥ್ ನಾರಾಯಣ್ ಅವರ ಬೆಂಗಳೂರು ನಿವಾಸದಲ್ಲಿ ಬಿಜೆಪಿ ನಾಯಕರ ಸಭೆಯೇನೋ ನಡೆದಿದೆ. ಆದರೆ ಆ ಸಭೆ ಹೇಗಿರಬೇಕು ಎಂಬ ಸೂಚನೆ ಕೊಟ್ಟ ಆರ್ ಎಸ್ ಎಸ್ ನಾಯಕರಾರೂ, ಸಭೆಗೆ ಹೋಗಿಲ್ಲ. ಸಮನ್ವಯ ಸಭೆ ನಡೆಸಿ, ಗೊಂದಲ ಬಗೆಹರಿಸಿಕೊಳ್ಳಿ ಎಂದು ಸಂದೇಶ ಕೊಟ್ಟಿದೆ RSS.
ಮೂಲಗಳ ಪ್ರಕಾರ ಆರ್ ಎಸ್ ಎಸ್ ಸೂಚನೆ ಮೇರೆಗೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಬಂದಿದ್ದರು. ಕಳೆದ ಬಾರಿಯ ಸಭೆಗೂ ಅರವಿಂದ ಲಿಂಬಾವಳಿಗೆ ಆಹ್ವಾನ ಇತ್ತೆನ್ನಲಾಗಿದ್ದು, ಬೆಂಗಳೂರಿನಲ್ಲಿ ಇರದ ಕಾರಣ ಲಿಂಬಾವಳಿ ಗೈರಾಗಿದ್ದರು. ವಿಜಯೇಂದ್ರ ನಾಯಕತ್ವವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಲಿಂಬಾವಳಿ ನೇರವಾಗಿ ಹೇಳಿದ್ದಾರೆ ಎನ್ನಲಾಗಿದೆ. ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಕೇವಲ ಯತ್ನಾಳ್ ಮೇಲೇ ಏಕೆ ಕ್ರಮ ಎಂದು ಪ್ರಶ್ನಿಸಿದ್ಧಾರೆ ಎನ್ನಲಾಗಿದೆ. ಆದರೆ, ಅದಕ್ಕೆ RSS ನಾಯಕರೂ ಒಪ್ಪಿಲ್ಲವಂತೆ. ರೇಣುಕಾಚಾರ್ಯ ಅಳತೆ ಮೀರಿ ಮಾತನಾಡಿದ್ದರು ನಿಜ. ಆದರೆ, ಆಗ ಹಿರಿಯ ನಾಯಕರು ಮೌನವಾಗಿದ್ದರು. ಸುಮಾರು ದಿನಗಳ ಕಾಲ ಮೌನವಾಗಿ ಕುಳಿತಿದ್ದಾಗ.. ರೇಣುಕಾಚಾರ್ಯ ಅವರು ಪಕ್ಷದ ಅಧ್ಯಕ್ಷರ ಪರ ಮಾತನಾಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡರೆ.. ಬಹಿರಂಗವಾಗಿ ಸಮರ್ಥನೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರಂತೆ. ಬಹುತೇಕ ರೇಣುಕಾಚಾರ್ಯ ಅವರಿಗೆ ಮೇಲ್ನೋಟಕ್ಕಾದರೂ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಡಲಾಗಿದೆಯಂತೆ. ಆದರೆ, ಅದಿನ್ನೂ ಅಂತಿಮವಾಗಿಲ್ಲ.
ಇನ್ನು ಆರ್ ಅಶೋಕ್ ಅವರ ಸ್ಥಾನಮಾನಕ್ಕೆ ಕಂಟಕ ಎದುರಾಗಿದೆ ಎನ್ನಲಾಗಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಹುದ್ದೆಯಿಂದ ಅಶೋಕ್ ಅವರನ್ನು ತೆರವುಗೊಳಿಸಲಾಗುತ್ತಿದ್ದು, ಅವರ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರಂತೆ. ಅದಕ್ಕೆ ಕಾರಣ ಕುಮಾರಸ್ವಾಮಿ. ಹೇಗಿದ್ದರೂ.. ಒಕ್ಕಲಿಗರ ಲೀಡರ್ ಆಗಿ ನಾನಿದ್ದೇನೆ. ಒಬಿಸಿಯವರಿಗೆ ಅವಕಾಶ ಕೊಡಿ ಎಂದು ಸಲಹೆ ಮಾಡಿದ್ದಾರೆ ಕುಮಾರಸ್ವಾಮಿ. ಇದು ದೆಹಲಿ ನಾಯಕರಿಗೂ ಒಪ್ಪಿತವಾಗಿದೆ. ಹೀಗಾಗಿಯೇ ಪಕ್ಷದ ವೇದಿಕೆಯೆಲ್ಲೇ ಎರಡು ಮೂರು ಕಾರ್ಯಕ್ರಮಗಳು ನಡೆದರೂ, ದೆಹಲಿಗೆ ಹೋಗಿ ಬಂದ ಬಳಿಕ ವಿಧಾನಸಭೆ ವಿಪಕ್ಷ ನಾಯಕ ಅಶೋಕ್ ಬೆಂಗಳೂರಿನಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲ್ಲ. ಬದಲಾಗಿ ಮೈಸೂರಿನಲ್ಲಿ ತುರ್ತು ಪರಿಸ್ಥಿತಿ ಕುರಿತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು ಆರ್ ಎಸ್ ಎಸ್ ಎಂಟ್ರಿ ನಂತರವೂ ರಾಜ್ಯ ಬಿಜೆಪಿ ಭಿನ್ನಮತ ಮುಗಿದಿಲ್ಲ. ಬಿಜೆಪಿಯ ತಂತ್ರಗಾರ ಎನ್ನಿಸಿಕೊಂಡಿರುವ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಶುಕ್ರವಾರ ರಾತ್ರಿಯಿಡೀ ವಿಜಯೇಂದ್ರ ಜೊತೆ ಮಾತುಕತೆ ಮಾಡಿದ್ದಾರೆ. ಒಂದೂವರೆ ಗಂಟೆಗೂ ಹೆಚ್ಚು ಕಾಲ ಯಾದವ್ ಜೊತೆ ಖಾಸಗಿ ಹೋಟೆಲ್ನಲ್ಲಿ ಚರ್ಚೆ ನಡೆಸಿದ್ದಾರೆ. ಇದೆಲ್ಲದರ ನಡುವೆ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವ ಮೊದಲು ನಿಮ್ಮ ನಿಮ್ಮ ವ್ಯತ್ಯಾಸ ಸರಿಪಡಿಸಿಕೊಳ್ಳಿ ಎಂಬ ಆರ್ಎಸ್ಎಸ್ ನಿರ್ದೇಶನ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆಯೋ ಏನೋ..



