ಜಾಕಿ ರಿಲೀಸ್ ತುಂಬಾ ದಿನಗಳೇನೂ ಇಲ್ಲ. ಪುನೀತ್ ಅವರ ಹಳೆಯ ಸಿನಿಮಾವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳೋಕೆ ಅಭಿಮಾನಿ ದೇವರುಗಳು ಕಾಯ್ತಿದ್ಧಾರೆ. ಚಿತ್ರದ ಬಗ್ಗೆ ಚಿತ್ರತಂಡದವರೆಲ್ಲ ಪ್ರಮೋಷನ್ ಮಾಡ್ತಿದ್ದಾರೆ. ಹೀಗಿರುವಾಗಲೇ.. ಪುನೀತ್ ಅವರ ಚಿತ್ರಕ್ಕೆ ಕೆಲಸ ಮಾಡಿ ಹೆಸರು ತಂದುಕೊಟ್ಟಿದ್ದ ಫೈಟ್ ಮಾಸ್ಟರ್ಸ್ ಜಗಳ ಬೀದಿಗೆ ಬಿದ್ದಿದೆ.
ಡಿಫರೆಂಟ್ ಡ್ಯಾನಿ. ಕನ್ನಡದ ಖ್ಯಾತ ಸಾಹಸ ನಿರ್ದೇಶಕ. ಯಾವುದೇ ಸ್ಟಂಟ್ ದೃಶ್ಯವನ್ನು ಡಿಫರೆಂಟ್ ಆಗಿ ಕಂಪೋಸ್ ಮಾಡ್ತಾರೆ ಅನ್ನೋ ಕಾರಣಕ್ಕಾಗಿಯೇ ಡಿಫರೆಂಟ್ ಡ್ಯಾನಿ ಎಂದು ಹೆಸರಿಟ್ಟುಕೊಂಡವರು. ಅದೇ ಹೆಸರಲ್ಲಿ ಫೇಮಸ್ ಆದವರು.
ರವಿ ವರ್ಮ. ಇವರೂ ಸಾಹಸ ನಿರ್ದೇಶಕರೇ. ಕನ್ನಡದಲ್ಲಷ್ಟೇ ಅಲ್ಲ, ಹಿಂದಿ, ತೆಲುಗು, ತಮಿಳಿನಲ್ಲೂ ಫೇಮಸ್ ಆಗಿರೊ ಸ್ಟಂಟ್ ಮಾಸ್ಟರ್.
ಈಗ ಇವರಿಬ್ಬರ ಜಗಳ ಬೀದಿಗೆ ಬಂದಿದೆ. ರವಿ ವರ್ಮಾ ಅವರ ವಿರುದ್ಧ ಡ್ಯಾನಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ಧಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘಕ್ಕೂ ದೂರು ಕೊಟ್ಟಿದ್ಧಾರೆ.
ಡಿಫರೆಂಟ್ ಡ್ಯಾನಿ ಪ್ರಕಾರ ಜಾಕಿ ಚಿತ್ರದ ಬೆಂಕಿ ಫೈಟ್ ಇದ್ಯಲ್ಲ.. ಆ ಸಾಹಸವನ್ನು ಕಂಪೋಸ್ ಮಾಡಿದ್ದು ಡ್ಯಾನಿ ಅವರಂತೆ. ಇದೇ ವಿಷಯ ಹೇಳಿದ್ದ ಡ್ಯಾನಿ, ‘ರವಿ ವರ್ಮಾ, ನನ್ನ ಕೆಲಸವನ್ನು ತನ್ನ ಕೆಲಸ ಎಂದು ಹೇಳಿಕೊಂಡು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಅವನೊಬ್ಬ ಸುಳ್ಳುಗಾರ ಎಂದು ಟೀಕಿಸಿದ್ದರು. ಆ ಫೈಟ್ ಕಂಪೋಸ್ ಮಾಡಿದ್ದು ರವಿವರ್ಮ ಎಂದು ನಂಬಿಕೊಂಡ ಪ್ರಭುದೇವ, ಇಂಪ್ರೆಸ್ ಆಗಿ ತಮ್ಮ ಸಿನಿಮಾಗಳಲ್ಲಿ ಚಾನ್ಸ್ ಕೊಟ್ಟರು. ಅದು ರವಿವರ್ಮ ಅವರನ್ನು ಎಲ್ಲಿಗೋ ಕರೆದುಕೊಂಡು ಹೋಯಿತು ಎನ್ನುವ ಡ್ಯಾನಿ.. ನನಗೆ ಪ್ರಭುದೇವ ಸಿಕ್ಕಿಲ್ಲ, ಸಿಕ್ಕರೆ ಖಂಡಿತ ಈ ವಿಷಯ ಕೇಳುತ್ತೇನೆ. ರವಿವರ್ಮಾ, ನನ್ನ ಕೆಲಸ ತೋರಿಸಿ, ಸುಳ್ಳು ಹೇಳಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಿದ್ದರು.
ಅದನ್ನು ರವಿವರ್ಮ ಕೂಡಾ ಒಪ್ಪಿಕೊಳ್ತಾರೆ. ಅಂದರೆ ಜಾಕಿ ಸಿನಿಮಾದಲ್ಲಿ ಬರೋ ಬೆಂಕಿ ಫೈಟ್ ಹಾಗೂ ಮೈಗೆ ಬಣ್ಣ ಹಚ್ಚಿಕೊಂಡು ಮಾಡೋ ಫೈಟ್ ಎರಡನ್ನೂ ಕಂಪೋಸ್ ಮಾಡಿದ್ದು ಡ್ಯಾನಿ. ಆ ಎರಡು ಫೈಟ್ ಬಿಟ್ಟರೆ ಮಿಕ್ಕೆಲ್ಲ ಫೈಟ್ಗಳನ್ನು ನಾನು ಮಾಡಿದ್ದೇನೆ. ಆದರೆ ನಾನು ಎಲ್ಲಿಯೂ ಸಹ ಆ ಎರಡು ಫೈಟ್ ನಾನು ಮಾಡಿದ್ದೇನೆ ಎಂದು ಹೇಳಿಕೊಂಡಿಲ್ಲ. ಇಡೀ ಸಿನಿಮಾಗೆ ಫೈಟ್ ಮಾಸ್ಟರ್ ನಾನಾಗಿದ್ದರೂ.. ಪುನೀತ್ ಅವರ ಕಾಲ್ʻಶೀಟ್ ಒಂದೇ ಶೆಡ್ಯೂಲ್ ಇತ್ತು. ಆಗ ನನಗೆ ದರ್ಶನ್ ಅವರ ಚಿತ್ರವೊಂದರ ಕೆಲಸವೂ ಇದ್ದ ಕಾರಣ, ಆ ಎರಡು ಫೈಟ್ ಸೀನ್ʻಗಳನ್ನು ಡ್ಯಾನಿ ಅವರಿಂದ ಮಾಡಿಸಿದೆ. ಜಾಕಿ ಚಿತ್ರದ ಅಧಿಕೃತ ಸ್ಟಂಟ್ ಮಾಸ್ಟರ್ ನಾನೇ ಅಂತಾರೆ.
ಮಾಸ್ತಿಗುಡಿ ಚಿತ್ರದ ದುರಂತದ ಸಂದರ್ಭದಲ್ಲೂ ರವಿವರ್ಮ ಮತ್ತು ಡ್ಯಾನಿ ನಡುವಿನ ಜಗಳ ಬೀದಿಗೆ ಬಿದ್ದಿತ್ತು. ಈಗ ಮತ್ತೊಮ್ಮೆ ಬೀದಿ ರಂಪವಾಗಿದೆ.
ಹಾಗಾದರೆ.. ಮುಂದೇನಾಯ್ತು ಎಂದರೆ.. ರವಿವರ್ಮ ಅವರು ಡ್ಯಾನಿ ಅವರ ಅಸಿಸ್ಟೆಂಟ್ ಮಂಜು ಅವರಿಗೆ ಕಾಲ್ ಮಾಡಿ ಬೆದರಿಕೆ ಹಾಕಿದ್ದಾರಂತೆ. ಇನ್ನು ರವಿವರ್ಮ ಡ್ಯಾನಿ ಆರೋಪವನ್ನು ನಿರಾಕರಿಸಿದ್ಧಾರೆ.
ಜಾಕಿ ರಿ-ರಿಲೀಸ್ ಆಗ್ತಾ ಇದೆ. ಈ ಸಂದರ್ಭದಲ್ಲಿ ಏನೇನೋ ಮಾತನಾಡಿ ಪುನೀತ್ ಅವರಿಗೆ ಅಗೌರವ ತೋರುವುದಿಲ್ಲ ಎಂದಿರುವ ರವಿವರ್ಮ, ಎಲ್ಲ ಮುಗಿದ ಮೇಲೆ ಮಾತನಾಡುತ್ತೇನೆ. ಕಾನೂನಿನ ಮೂಲಕ ಉತ್ತರ ಕೊಡುತ್ತೇನೆ ಎಂದಿದ್ದಾರೆ.



