ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ದೇವೇಗೌಡ ಇಬ್ಬರೂ ಈಗ ರಾಜ್ಯಸಭೆಯಲ್ಲಿದ್ದಾರೆ. ಇಬ್ಬರೂ ಸೀನಿಯರ್. ದೇವೇಗೌಡರು 90+ ಇದ್ದರೆ, ಖರ್ಗೆಯವರು 80+. ಹತ್ತು ವರ್ಷ ಗ್ಯಾಪ್ ಅಷ್ಟೆ. ಕಾಂಗ್ರೆಸ್ಸಿನಲ್ಲಿ ಖರ್ಗೆಯವರಿಗಿಂತ ಸೀನಿಯರ್ ಲೀಡರ್ ಇನ್ನೊಬ್ಬರಿಲ್ಲ. ಅವರೀಗ ಎಐಸಿಸಿ ಅಧ್ಯಕ್ಷರೂ ಹೌದು. ಆದರೆ.. ಸಿಎಂ ಪಟ್ಟದ ಅಧಿಕಾರ ಅನ್ನೋದು ಖರ್ಗೆಯವರಿಗೆ ಸಿಕ್ಕಿಲ್ಲ. ಆದರೆ ದೇವೇಗೌಡರಿಗೆ ಸಿಎಂ ಹಾಗೂ ಪ್ರಧಾನಿ ಪಟ್ಟ ಎರಡೂ ಸಿಕ್ಕಿದೆ. ಆದರೆ.. ಅಲ್ಪಕಾಲದ ಪಟ್ಟಗಳು. ಹೀಗಿರುವಾಗ ಇಬ್ಬರೂ ರಾಜ್ಯಸಭೆಯಲ್ಲಿ ಪರಸ್ಪರ ಮಾತನಾಡಿದ್ಧಾರೆ.
ಖರ್ಗೆ : ದೇವೇಗೌಡರು ತಮ್ಮ ಇಡೀ ಜೀವನವನ್ನು ಜಾತ್ಯತೀತತೆ, ಸಮಾಜವಾದ ಮತ್ತು ರೈತರ ಪರವಾಗಿಯೇ ಕಳೆದರು. ಆದರೆ ಅವರು ಇಷ್ಟು ಮಾಗಿದ ವಯಸ್ಸಿನಲ್ಲಿ ಪ್ರಧಾನಿ (ನರೇಂದ್ರ) ಮೋದಿಯನ್ನು ಅಪ್ಪಿಕೊಂಡು ಏಕೆ ಹೊಗಳತೊಡಗಿದರು ಎಂದು ಗೊತ್ತಿಲ್ಲ. ದೇವೇಗೌಡರಿಗೆ ಸಹಜವಾಗಿಯೇ ಯಾರನ್ನೂ ಹೊಗಳುವ ಅಭ್ಯಾಸವಿಲ್ಲ. ಆದರೆ ಯಾವ ಕಾರಣವು ದೇವೇಗೌಡರ ಮನಃಪರಿವರ್ತನೆಗೆ ಕಾರಣವಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಜೀವನದ ಅಂತ್ಯ ಕಾಲದಲ್ಲಿ ರಾಜಕೀಯ ದಾರಿಯನ್ನೇ ದೇವೇಗೌಡರು ಬದಲಿಸಿದ್ದಾರೆ
ದೇವೇಗೌಡ : ಕೆಲವು ಕಾಂಗ್ರೆಸ್ಸಿಗರ ಧೋರಣೆಯ ಕಾರಣ ನಾನು ಬಿಜೆಪಿಗೆ ಬೆಂಬಲ ನೀಡಬೇಕಾಯಿತು. ಜೆಡಿಎಸ್ ಪಕ್ಷವನ್ನು ಕೆಲವು ಕಾಂಗ್ರೆಸ್ಸಿಗರು ನಾಶ ಮಾಡಲು ಮುಂದಾದರು. ಹೀಗಾಗಿ ಪಕ್ಷ ಉಳಿಸಿಕೊಳ್ಳಲು ಬಿಜೆಪಿಗೆ ಬೆಂಬಲ ನೀಡಿದ್ದೇನೆ. 2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕೆಲವು ಕಾಂಗ್ರೆಸ್ ನಾಯಕರೇ ಕಾರಣ. ತಮ್ಮ ಪುತ್ರನ ಬದಲಾಗಿ, ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ತಾವು ಸಲಹೆ ನೀಡಿದರೂ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿತ್ತು. ಆದರೆ 13 ತಿಂಗಳ ಒಳಗೆ ಅವರನ್ನು ಕೆಳಗಿಳಿಸಿದ್ದು ಯಾರು? ಅದು ಖರ್ಗೆ ಅವರಲ್ಲ. ಆದರೆ ಕಾಂಗ್ರೆಸ್ ನಾಯಕರು. ಅಂದೇ ನಾನು ಕುಮಾರಸ್ವಾಮಿ ಅವರಿಗೆ ಬಿಜೆಪಿ ಜತೆ ಹೋಗಲು ಸೂಚಿಸಿದೆ. ಕಾಂಗ್ರೆಸ್ ಬೆಳೆಯಲು ಬಿಡುವುದಿಲ್ಲ ಎಂದೂ ಹೇಳಿದೆ.
ಖರ್ಗೆ ಅವರೊಬ್ಬ ಶುದ್ಧ ವ್ಯಕ್ತಿ. ನನ್ನ ರಾಜಕೀಯ ಜೀವನದಲ್ಲಿ ಖರ್ಗೆ ಅವರು ಸಹಾಯ ಮಾಡಿದ್ದಾರೆ. ಆದರೆ ಪ್ರಧಾನಿ ಅಭ್ಯರ್ಥಿ ಸ್ಥಾನ ಅಥವಾ ನಾಯಕ ಹುದ್ದೆಗೆ ತಮ್ಮನ್ನು ಯಾರೋ ಒಬ್ಬರು ಸೂಚಿಸಿದಾಗ ಏನಾಯಿತು? ನಿಮ್ಮ ಸ್ನೇಹಿತರೇ ಅದಕ್ಕೆ ಆಕ್ಷೇಪ ಎತ್ತಿದರು. ನಾನು ನನ್ನ ರಾಜಕೀಯ ಜೀವನದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವೈಯಕ್ತಿಕ ಲಾಭದಾಸೆಗೆ ಜಿಗಿದವನಲ್ಲ. ಈಗ ಬಿಜೆಪಿ ಬೆಂಬಲಿಸುತ್ತಿರುವುದಕ್ಕೂ ವೈಯಕ್ತಿಕ ಲಾಭ ಏನಿಲ್ಲ. ಪ್ರಧಾನಿ ಮೋದಿ ಅವರ ಪ್ರೀತಿ ಹಾಗೂ ವಿಶ್ವಾಸವನ್ನಷ್ಟೇ ಲಾಭವಾಗಿ ಪಡೆದುಕೊಂಡಿದ್ದೇನೆ.
ಇದೆಲ್ಲವೂ ನಡೆದದ್ದು ರಾಜ್ಯಸಭೆ ಅವಧಿ ಮುಕ್ತಾಯವಾಗಿ ಮಾಜಿಯಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿದಾಯದ ವೇಳೆಯಲ್ಲಿ.



