ಮಂಡ್ಯದ ಹನಕೆರೆ ಈಗ ಪ್ರಕ್ಷುಬ್ಧ ಸ್ಥಿತಿಯಲ್ಲೇ ಇದೆ. ಮಂಡ್ಯ ತಾಲೂಕಿನ ಹನಕೆರೆ ಗ್ರಾಮದಲ್ಲಿ ವಿರೋಧದ ನಡುವೆಯೂ ದಲಿತರು ದೇಗುಲ ಪ್ರವೇಶ ಮಾಡಿದ್ದಾರೆ. ದೇವರ ವಿಗ್ರಹವನ್ನೇ ಹೊತ್ತುಕೊಂಡು ಹೋಗಿದ್ದಾರೆ. ಹನಕೆರೆಯ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಈಗ ವಿವಾದದ ಕೇಂದ್ರ ಬಿಂದು.
ಘಟನೆಯ ಹಿನ್ನೆಲೆ ಏನು..?
ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯಕ್ಕೆ ದಲಿತರು ಪ್ರವೇಶ ಮಾಡಲು ಅಧಿಕಾರಿಗಳು ಭಾನುವಾರ ಅವಕಾಶ ಕಲ್ಪಿಸಿದ್ದರು. ಆದರೆ ಇದು ಸವರ್ಣೀಯರಿಗೆ ಇಷ್ಟ ಇರಲಿಲ್ಲ. ಉತ್ಸವ ಮೂರ್ತಿಯನ್ನು ಬೇರೆ ದೇವಾಲಯಕ್ಕೆ ಸ್ಥಳಾಂತರಿಸಿ ತಮ್ಮ ಆಕ್ರೋಶ ಹೊರ ಹಾಕಿದರು. ತಹಸೀಲ್ದಾರ್ ಡಾ. ಶಿವಕುಮಾರ್ ಬಿರಾದಾರ್ ಹಾಗೂ ಮಾಜಿ ಶಾಸಕ ಎಂ.ಶ್ರೀನಿವಾಸ್ ನಡೆಸಿದ ಸಂಧಾನ ಪ್ರಯತ್ನವೂ ವಿಫಲವಾಯ್ತು. ಅಂದಹಾಗೆ ಇದು ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರ ಹುಟ್ಟೂರು.
ದೇವಸ್ಥಾನದ ಇತಿಹಾಸ
ಹನಕೆರೆ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವುಳ್ಳ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯ ಇದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನ ಶಿಥಿಲಗೊಂಡಿತ್ತು. ಗ್ರಾಮಸ್ಥರೆಲ್ಲರೂ ಸೇರಿ ಕೋಟ್ಯಂತರ ರೂ. ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದರು. ಇದರೊಂದಿಗೆ ಉತ್ಸವ ಮೂರ್ತಿಯನ್ನೂ ನಿರ್ಮಿಸಲಾಗಿತ್ತು. ಆದರೆ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ಇರಲಿಲ್ಲ.
ದಲಿತರ ವಾದ : ನಾವೂ ದೇವಸ್ಥಾನದ ಜೀರ್ಣೋದ್ಧಾರಕ್ಕೆ ದುಡ್ಡು ಕೊಟ್ಟಿದ್ದೇವೆ. ನಮ್ಮ ದೇವಸ್ಥಾನ, ನಮ್ಮ ಹಕ್ಕು
ಸವರ್ಣೀಯರ ವಾದ : ಮೊದಲಿನಿಂದಲೂ ದೇವಸ್ಥಾನದಲ್ಲಿ ದಲಿತರಿಗೆ ಪ್ರವೇಶ ಇರಲಿಲ್ಲ. ಈಗ ಏಕೆ? ಕೂಲಿ ನಾಲಿ ಮಾಡಿ, ಹಣ ಒಟ್ಟು ಮಾಡಿ ದೇವಸ್ಥಾನ ಕಟ್ಟಿಸಿದ್ದು ನಾವು. ದಲಿತರಿಗೆ ಎಂದೇ ಪ್ರತ್ಯೇಕವಾಗಿ ಚಿಕ್ಕಮ್ಮ ಮತ್ತು ಮಂಚಮ್ಮ ದೇವಸ್ಥಾನ ಕಟ್ಟಿಸಿಕೊಟ್ಟಿದ್ದೇವೆ. ಈಗ ಏಕಾಏಕಿ ನುಗ್ಗಿ ಇದು ನಮ್ಮ ದೇವಸ್ಥಾನ ಎಂದರೆ ಹೇಗೆ?
ಸರ್ಕಾರಿ ಅಧಿಕಾರಿಗಳ ವಾದ : ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ಇದು ಮುಜರಾಯಿಗೆ ಸೇರಿದ ದೇವಸ್ಥಾನ. ಇಲ್ಲಿ ಜಾತಿ ಭೇದ ಮಾಡುವುದಕ್ಕೆ ಬರುವುದಿಲ್ಲ.
ಅಂತಿಮವಾಗಿ.. ವಾದ ವಾಗ್ವಾದ ನಡೆದು ಪೊಲೀಸ್ ಭದ್ರತೆಯಲ್ಲಿ ದಲಿತರು ದೇವಸ್ಥಾನ ಪ್ರವೇಶ ಮಾಡಿ, ಇತಿಹಾಸದಲ್ಲೇ ಮೊದಲ ಬಾರಿಗೆ ಕಾಲಭ್ರವೇಶ್ವರ ಸ್ವಾಮಿಗೆ ಪೂಜೆಯನ್ನೂ ಸಲ್ಲಿಸಿದ್ರು. ಅದಾದ ಮೇಲೆ ಸವರ್ಣೀಯರು ಕಾಲಭೈರವೇಶ್ವರ ವಿಗ್ರಹವನ್ನೇ ದೇವಸ್ಥಾನದಿಂದ ಎತ್ತಿಕೊಂಡು ಹೋಗಿದ್ದಾರೆ.
ಮತ್ತೆ ಮತ್ತೆ ದೇವಸ್ಥಾನ ಪ್ರವೇಶ ಮಾಡುವ ಯತ್ನಕ್ಕೆ ವಿರೋಧ ವ್ಯಕ್ತಪಡಿಸಿರುವ ಸ್ಥಳೀಯ ಸವರ್ಣೀಯರು ದೇವಸ್ಥಾನವನ್ನೂ ನೀವೇ ಇಟ್ಟುಕೊಳ್ಳಿ, ಕೀ ಕೂಡಾ ನಮಗೆ ಬೇಡ ಎಂದು ಹಠ ಹಿಡಿದಿದ್ದಾರೆ.
ಎಲ್ಲರದ್ದೂ ವಿರೋಧ ಇಲ್ಲ : ಹೌದು, ದಲಿತರ ದೇಗುಲ ಪ್ರವೇಶಕ್ಕೆ ಎಲ್ಲ ಸವರ್ಣೀಯರೂ ವಿರೋಧ ವ್ಯಕ್ತಪಡಿಸಿಲ್ಲ. ಬಹುತೇಕರು ಸಮ್ಮತಿ ಸೂಚಿಸಿದ್ದಾರೆ. ಆದರೆ ಈ ನಿರ್ಧಾರಕ್ಕೆ ಒಪ್ಪದ ಒಂದು ಗುಂಪು , ”ಇನ್ನು ಮುಂದೆ ನಾವು ಈ ದೇಗುಲಕ್ಕೆ ಬರುವುದಿಲ್ಲ. ಆದರೆ, ನಾವು ಮಾಡಿಸಿಟ್ಟಿರುವ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತೇವೆ,” ಎಂದು ಉತ್ಸವ ಮೂರ್ತಿಯನ್ನು ಅಲ್ಲಿಂದ ತೆಗೆದುಕೊಂಡು ಹೋಗಿ ಬೇರೆ ದೇವಾಲಯದಲ್ಲಿರಿಸಿದ್ದಾರೆ.
ಹನಕೆರೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ.



