ಅಂಬರೀಷ್ ಅವರನ್ನು ತಂದೆಯಂತೆಯೇ ಗೌರವಿಸುತ್ತಿದ್ದ, ಸುಮಲತಾ ಅವರನ್ನು ಮದರ್ ಇಂಡಿಯಾ, ಅಮ್ಮ ಎಂದೆಲ್ಲ ಕರೆಯುತ್ತಿದ್ದ ದರ್ಶನ್.. ಮೊಮ್ಮಗನ ನಾಮಕರಣಕ್ಕೆ ಬರಲೇ ಇಲ್ಲ. ಅಭಿಷೇಕ್ ಅವರನ್ನು ತಮ್ಮ ಎಂದೇ ಹೇಳುತಿದ್ದ ದರ್ಶನ್, ಅಭಿಷೇಕ್-ಅವಿವಾ ಮದುವೆಯಲ್ಲಿ ಅವಿವಾ ಬಿದ್ದಪ್ಪಗೆ ಮನೆಯ ಸೊಸೆಯಾಗಿ ಹೇಗಿರಬೇಕು ಎಂದೆಲ್ಲ ಪಾಠ ಮಾಡಿದ್ದರು. ಅಭಿಷೇಕ್ ಅಂಬರೀಷ್ ಕೂಡಾ, ದರ್ಶನ್ ಅವರಿಗೆ ಅಣ್ಣ ಎಂಬ ಭಾವನೆಯಲ್ಲೇ ನೋಡುತ್ತಿದ್ದರು.
ಆದರೆ ಈಗ ಸುಮಲತಾ ಅಂಬರೀಷ್ ಅವರು ಮೊಮ್ಮಗನ ನಾಮಕರಣ ಮಾಡಿದ್ದಾರೆ. ಮೊಮ್ಮಗನಿಗೆ ರಾಣಾ ಅಮರ್ ಅಂಬರೀಷ್ ಎಂದು ಹೆಸರಿಟ್ಟಿದ್ದಾರೆ. ಆದರೆ ದರ್ಶನ್ ಬಂದಿಲ್ಲ. ದರ್ಶನ್ ಕುಟುಂಬದಲ್ಲಿರುವ ಯಾರೊಬ್ಬರೂ ಬಂದಿಲ್ಲ. ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ, ತಮ್ಮ ದಿನಕರ್ ಸೇರಿದಂತೆ ಯಾರೊಬ್ಬರೂ ನಾಮಕರಣಕ್ಕೆ ಬಂದಿಲ್ಲ. ಸಂಥಿಂಗ್ ಈಸ್ ರಾಂಗ್ ಎನ್ನುತ್ತಿದೆ ವಾತಾವರಣ.
ನಾಮಕರಣಕ್ಕೆ ಕರೆಯುತ್ತೇನೆ ಎಂದು ಸ್ಪಷ್ಟನೆ ಕೊಟ್ಟಿದ್ದ ಸುಮಲತಾ ಅವರು, ಮಗ ಬಂದೇ ಬರುತ್ತಾನೆ ಎಂಬ ನಿರೀಕ್ಷೆಯಲ್ಲೇನೋ ಇದ್ದರು. ಇತ್ತೀಚೆಗೆ ಸುಮಲತಾ, ಅಭಿಷೇಕ್, ಅವಿವಾ ಬಿದ್ದಪ್ಪ ಅವರನ್ನೂ ಸೇರಿಸಿ ಎಲ್ಲರನ್ನೂ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅನ್ ಫಾಲೋ ಮಾಡಿದ್ದು ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಕಾರಣ ಎಂದರೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸುಮಲತಾ ಅವರು, ತಮ್ಮ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬುದು ಎನ್ನಲಾಗ್ತಿದೆ. ಸುಮಲತಾ ಅವರು ಮನಸ್ಸು ಮಾಡಿದ್ದರೆ ದೊಡ್ಡ ಲಾಯರ್ ಹುಡುಕುವುದು, ಒಪ್ಪಿಸುವುದು ಕಷ್ಟವಾಗಿರಲಿಲ್ಲ. ಆದರೆ ವಿಜಯಲಕ್ಷ್ಮಿ ಅವರನ್ನು ಏಕಾಂಗಿಯಾಗಿ ಬಿಟ್ಟಿದ್ದರು ಎಂಬ ಅಸಮಾಧಾನ ದರ್ಶನ್ ಅವರ ಮೇಲಿದೆಯಂತೆ. ಅಲ್ಲದೆ ಕೆಲವರ ಬಳಿ ಸುಮಲತಾ ಅವರು ಈ ಬಾರಿಯಾದರೂ ಪಾಠ ಕಲಿತುಕೊಳ್ಳಲಿ ಎಂದು ಹೇಳಿರೋದು ಕೂಡಾ ಗೊತ್ತಾಗಿದೆಯಂತೆ. ಹೀಗಾಗಿಯೇ ಸುಮಲತಾ ಅವರು ಮನೆಗೆ ಬರುವುದಕ್ಕೆ, ನಾಮಕರಣಕ್ಕೆ ಕರೆಯುವುದಕ್ಕೆ ಅವಕಾಶವನ್ನೇ ಕೊಡದೆ ನಿಂತಿದ್ದ ಡೆವಿಲ್ ಚಿತ್ರೀಕರಣವನ್ನು ಪುನಾರಂಭ ಮಾಡಿಸಿ ಮೈಸೂರಿಗೆ ಹೋಗಿದ್ದಾರಂತೆ. ಒಟ್ಟಿನಲ್ಲಿ ತಾಯಿ-ಮಗನ ಬಾಂಧವ್ಯದಲ್ಲಿ ಬಿರುಕು ಮೂಡಿದೆ ಎನ್ನುವುದು ಸ್ಪಷ್ಟ.
ಇನ್ನು ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದ ನಾಮಕರಣಕ್ಕೆ ಬಹುತೇಕ ಚಿತ್ರರಂಗವೇ ಭಾಗವಹಿಸಿತ್ತು. ಕಿಚ್ಚ ಸುದೀಪ್, ಪ್ರಿಯಾ ದಂಪತಿ ಅಭಿ-ಅವಿವಾ ಪುತ್ರನಿಗೆ ವಿಶೇಷ ಗಿಫ್ಟ್ ಕೊಟ್ಟರು. ತೊಟ್ಟಿಲು ರೀತಿಯ ಬುಟ್ಟಿಯಲ್ಲಿ ಪುಟ್ಟ, ಪುಟ್ಟ ಟೆಡ್ಡಿ ಬೇರ್, ಮೊಲದ ಮರಿಗಳನ್ನ ಗಿಫ್ಟ್ ಆಗಿ ನೀಡಿದ್ದಾರೆ. ಗುರುಕಿರಣ್, ರಾಕ್ಲೈನ್ ವೆಂಕಟೇಶ್, ಕುಟುಂಬದ ಆಪ್ತರು ಬಂದು ಆಶೀರ್ವದಿಸಿದ್ದಾರೆ.
ಅಂಬರೀಷ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಷ್ ಎಂದು ಹೆಸರಿಡಲಾಗಿದೆ. ಇದರಲ್ಲಿ ಅಮರ್ ಎಂಬುದು ಅಂಬರೀಷ್ ಅವರ ಮೂಲ ಹೆಸರಾದರೆ, ಅಂಬರೀಷ್ ಎಂಬುದು ತೆರೆಯ ಮೇಲಿನ ಹೆಸರು. ಇನ್ನು ರಾಣಾ ಎಂದರೆ ರಾಜ, ಮಹಾಯೋಧ ಎಂಬ ಅರ್ಥವಿದೆ. ರಜಪೂತರಲ್ಲಿ ರಾಣಾ ಎಂದು ರಾಜರಿಗೆ ಕರೆಯಲಾಗುತ್ತಿತ್ತು. ಇನ್ನು ಅರೇಬಿಕ್ ಭಾಷೆಯಲ್ಲಿ ರಾಣಾ ಎಂದರೆ ಸುಂದರ ಎಂಬ ಅರ್ಥವಿದೆ.



