ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮದ ಆರೋಪ ಹಾಗೂ ಪ್ರಾಸಿಕ್ಯೂಷನ್ ಬೆನ್ನಲ್ಲೇ ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೆಐಎಡಿಬಿ ಜಮೀನು ವಿವಾದ ಸುತ್ತುಕೊಂಡಿದೆ. ಮುಡಾ, ವಾಲ್ಮೀಕಿ ನಿಗಮದ ಹಗರಣ, ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಬೇರೆ ಕೆಲಸಕ್ಕೆ ಬಳಕೆ ವಿಚಾರ ಮುನ್ನಲೆಯ ಇರುವ ಹೊತ್ತಿನಲ್ಲೇ, ಕೆಐಎಡಿಬಿ (Karnataka Industrial Areas Development Board) ನಿವೇಶನ ಹಂಚಿಕೆ ಧುತ್ತೆಂದು ಎದ್ದು ಕೂತಿದೆ. ಸ್ವಜನಪಕ್ಷಪಾತವೆಂದು, ಬಿಜೆಪಿಯು ರಾಜ್ಯಪಾಲರಿಗೆ ದೂರನ್ನು ನೀಡಿದೆ.
ವಿರೋಧ ಪಕ್ಷಗಳು ಈ ವಿಚಾರವನ್ನು ಮುಂದಿಟ್ಟುಕೊಂಡು ಖರ್ಗೆ ಕುಟುಂಬದ ವಿರುದ್ಧ ಮುಗಿಬಿದ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ನಿಯಮ ಉಲ್ಲಂಘನೆಯ ಜತೆಗೆ ತರಾತುರಿಯಲ್ಲಿ ಕೆಐಎಡಿಬಿಯಿಂದ 5 ಎಕರೆ ಸಿ.ಎ. ನಿವೇಶನ ಮಂಜೂರು ಮಾಡಲಾಗಿದೆ. ಇಲ್ಲಿ ನಿಯಮ ಉಲ್ಲಂಘನೆ ಹಾಗೂ ಅಧಿಕಾರದ ದುರುಪಯೋಗ ನಡೆದಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ದೇವನಹಳ್ಳಿಯ ಹರಳೂರು – ಮುದ್ದೇನಹಳ್ಳಿಯಲ್ಲಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್‌ನ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ಭೂಮಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆಗೆ ಹಂಚಿಕೆ ಮಾಡಲಾಗಿದೆ.
ಕಳೆದ ಫೆ. 8ರಿಂದ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ಪ್ರಕಟಿಸಿ ಡೌನ್‌ಲೋಡ್ ಮಾಡಿ ಫೆ. 23ರೊಳಗೆ ಸಲ್ಲಿಸಲು ಸೂಚಿಸಲಾಗಿದೆ. ಈ ಪ್ರಕ್ರಿಯೆಗೆ 1 ತಿಂಗಳ ಕಾಲಾವಕಾಶ ನೀಡಬೇಕಿತ್ತು. ಆದರೆ, ಉದ್ದೇಶಪೂರ್ವಕವಾಗಿ ಇದನ್ನು 14 ದಿನಕ್ಕೆ ಇಳಿಸಲಾಗಿದೆ. ಉದ್ದೇಶಪೂರ್ವಕವಾಗಿ ಖರ್ಗೆ ಕುಟುಂಬದವರಿಗೆ ಲಾಭ ಮಾಡಿಕೊಡಲು ರೂಲ್ಸ್ ಬ್ರೇಕ್ ಮಾಡಲಾಗಿದೆ ಎನ್ನವುದು ಛಲವಾದಿ ನಾರಾಯಣ ಸ್ವಾಮಿ ಆರೋಪ.
ಟ್ರಸ್ಟ್‌ನಲ್ಲಿ ಯಾವುದೇ ರೀತಿಯ ಪ್ರಭಾವ ತರಬಾರದು ಅಥವಾ ಸರಕಾರಿ ಅಧಿಕಾರ ಸ್ಥಾನದಲ್ಲಿ ಇರುವವರು ಇರಬಾರದೆಂಬ ನಿಯಮವಿದೆ. ಮಾ. 4ರಂದು ಏಕಗವಾಕ್ಷಿಯಲ್ಲಿ ಒಂದೇ ದಿನ ಅಷ್ಟೂ ಅರ್ಜಿ ಪರಿಶೀಲಿಸಿ ಮರು ದಿನ ಸಂಜೆ 5 ಗಂಟೆಗೆ ಕೈಗಾರಿಕಾ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ ಹಂಚಿಕೆಗೆ ತೀರ್ಮಾನಿಸಲಾಗಿದೆ. ಮಾ.6ರಂದು ಮಂಜೂರಾತಿ ಪತ್ರ ನೀಡಲಾಗಿದೆ ಎಂದಿದ್ದಾರೆ ಛಲವಾದಿ ನಾರಾಯಣ ಸ್ವಾಮಿ.
ವಿವಾದ ಏನು..?
ಸಿದ್ದಾರ್ಥ ವಿಹಾರ ಶಿಕ್ಷಣ ಟ್ರಸ್ಟ್ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಒಡೆತನದಲ್ಲಿ ಇದೆ. ಇದಕ್ಕೆ ಕೆಐಎಡಿಬಿಯಿಂದ ಐದು ಎಕರೆ ಜಮೀನು ನೀಡಲಾಗಿದೆ. ಕೈಗಾರಿಕಾ ನಿವೇಶನ ಪಡೆದುಕೊಳ್ಳುವ ಹಕ್ಕು ಎಲ್ಲರಿಗೂ ಇದೆಯಾದರೂ, ನಾಗರೀಕ ಸೌಲಭ್ಯ ( ಸಿಎ) ನಿವೇಶನ ಪಡೆಯಲು ಕೆಲವು ನಿಯಮಗಳು ಇವೆ. ಸಾಮಾಜಿಕ ಚಟುವಟಿಕೆ, ರಂಗಮಂದಿರ, ಆಸ್ಪತ್ರೆಗಳಿಗೆ ಜಮೀನು ನೀಡಲು ಅವಕಾಶ ಇದೆ. ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಸಿಎ ನಿವೇಶನ ಮಂಜೂರು ಮಾಡುವಾಗ ಮೊದಲು ಜಾಹೀರಾತು ನೀಡಬೇಕು. ಆದರೆ ಇಲ್ಲಿ ಆ ನಿಯಮಗಳನ್ನು ಪಾಲನೆ ಮಾಡಿಲ್ಲ. ಜಮೀನು ಪಡೆಯುವ ಟ್ರಸ್ಟ್‌ನ ಸದಸ್ಯರು ಮತ್ತವರ ಕುಟುಂಬದವರು ಸರ್ಕಾರದ ಪ್ರಭಾವ ಬೀರುವ ಸ್ಥಾನದಲ್ಲಿ ಇರಬಾರದು. ಅಲ್ಲಿಯೂ ನಿಯಮ ಗಾಳಿಗೆ ತೂರಲಾಗಿದೆ. ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಜಮೀನು ಪಡೆದುಕೊಳ್ಳಲಾಗಿದೆ ಎಂಬುದು ಖರ್ಗೆ ಕುಟುಂಬದ ವಿರುದ್ಧ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪ.
72 ದಲಿತ ಸಂಘಗಳಿಂದ ಲಕ್ಷಾಂತರ ರೂ. ವಸೂಲಿ ಮಾಡಿರುವ ಕೆಐಎಡಿಬಿ, ಖರ್ಗೆಯವರ ಕುಟುಂಬಕ್ಕಷ್ಟೇ ಭೂಮಿ ಹಂಚಿಕೆ ಮಾಡಿದೆ. ಕಲಬುರಗಿಯಲ್ಲೂ ಭೂಮಿ ಪಡೆದುಕೊಂಡಿರುವ ಖರ್ಗೆ ಕುಟುಂಬ ಅಲ್ಲಿಯೂ ಒಬ್ಬರಿಗೂ ತರಬೇತಿ ನೀಡಿಲ್ಲ. ಆದರೂ ಬೆಂಗಳೂರಿನಲ್ಲಿ ಸಿ.ಎ. ನಿವೇಶನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ದಲಿತರ ಕೋಟಾದಲ್ಲಿ ಭೂಮಿ ರಾಜಕಾರಣ ನಡೆಸಿ ಅರ್ಹ ದಲಿತರಿಗೆ ಪಂಗನಾಮ ಹಾಕಿದ್ದಾರೆ ಎಂದಿದ್ದಾರೆ ಛಲವಾದಿ ನಾರಾಯಣ ಸ್ವಾಮಿ.
ಪಿ.ರಾಜೀವ್ ಕೂಡಾ ಖರ್ಗೆ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದು ದಲಿತರ ಅಭಿವೃದ್ಧಿ ಮಾಡುವುದು ಎಂದರೆ ಖರ್ಗೆ ಅವರ ಕುಟುಂಬದ ಅಭಿವೃದ್ಧಿ ಮಾತ್ರವಾ ಎಂದು ಪ್ರಶ್ನೆ ಮಾಡಿದ್ದಾರೆ. ದಲಿತರ ಅಭಿವೃದ್ಧಿ ಬಗ್ಗೆ ಮಾತನಾಡುವ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರು ದಲಿತರು ಕೇವಲ ಇವರ ಕುಟುಂಬವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಇರುವ ಸಮೂಹವೆಂದು ತಿಳಿದುಕೊಂಡಿದ್ದಾರೆ. ಇದರಿಂದಾಗಿ ಬಡ ದಲಿತ ಉದ್ದಿಮೆದಾರರಿಗೆ ಸಿಗಬೇಕಾದ ಭೂಮಿಯನ್ನು ಖರ್ಗೆ ಕುಟುಂಬ ಕಿತ್ತುಕೊಂಡಿದೆ. ನೂರಾರು ದಲಿತ ಕುಟುಂಬಗಳು ಮತ್ತೆ ಬಡವರಾಗಿಯೇ ಉಳಿಯುವಂತೆ ಮಾಡಿದ್ದಾರೆ. ಅಭಿವೃದ್ಧಿ ಹೊಂದಬೇಕಿದ್ದ ನೂರಾರು ದಲಿತ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಉಳಿಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಎಂ ಸಿದ್ಧರಾಮಯ್ಯ, ಪ್ರಿಯಾಂಕ್ ಖರ್ಗೆ ಸಮರ್ಥನೆ :
ದೇವನಹಳ್ಳಿ ಸಮೀಪ ಏರೋಸ್ಪೇಸ್ ಪಾರ್ಕ್‌ನಲ್ಲಿ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಸಿ.ಎ. ನಿವೇಶನ ಮಂಜೂರಾತಿ ಕಾನೂನಾತ್ಮಕವಾಗಿ ನಡೆದಿದೆ ವಿವಾದ ಸೃಷ್ಟಿಸುವ ಅಗತ್ಯವಿಲ್ಲ,’’ ಎಂದು ಹೇಳಿದ್ದಾರೆ ಸಿಎಂ ಸಿದ್ಧರಾಮಯ್ಯ. ನಮ್ಮ ಕುಟುಂಬದ ಟ್ರಸ್ಟಿಗೆ ನಿವೇಶನ ಹಂಚಿಕೆ ಮಾಡಿದ್ದಕ್ಕೆ ಯಾಕಿಷ್ಟು ಸಿಟ್ಟು, ಹೊಟ್ಟೆಕಿಚ್ಚು ಎನ್ನುವುದು ಪ್ರಿಯಾಂಕ್ ಖರ್ಗೆ ಪ್ರಶ್ನೆ.
ಇದು ಸಿಎ ಜಮೀನು. ಎಂಬಿ ಪಾಟೀಲ್ ಅವರು ಇದರ ಬಗ್ಗೆ ಸ್ಪಷ್ಟ ಉತ್ತರ ಕೊಟ್ಟಿದ್ದಾರೆ. ಒಟ್ಟು 193 ಸಂಸ್ಥೆಗಳು ಅರ್ಜಿ ಹಾಕಿದ್ವು, 43 ಸಂಸ್ಥೆಗಳು ಮಾತ್ರ ಆಯ್ಕೆ ಆಗಿವೆ. ಇದರಲ್ಲಿ ಯಾವುದೇ ಪ್ರಭಾವ ಬೀರಿಲ್ಲ. ಬಿಜೆಪಿಯವರಿಗೆ ಕನಿಷ್ಟ ಜ್ಞಾನ ಇಲ್ಲ. ಇದು ವಾಣಿಜ್ಯ ಅಥವಾ ಕೈಗಾರಿಕಾ ಉದ್ದೇಶಕ್ಕೆ ಪಡೆದಿಲ್ಲ. ಸಿಎ ಸೈಟನ್ನು ಹರಾಜು ಹಾಕಲು ಹಾಗಲ್ಲ, ಅದನ್ನು ಖರಿದಿಯೇ ಮಾಡಬೇಕು. ಬಿಜೆಪಿಯವರು ಎಷ್ಟು ಜನ ಸಿಎ ನಿವೇಶನ ಪಡೆದಿಲ್ಲ ಎಂದು ಪ್ರಶ್ನೆ ಮಾಡಿದ್ಧಾರೆ.
ನನ್ನ ಅಣ್ಣ ರಾಹುಲ್ ಖರ್ಗೆ ಬಗ್ಗೆ ನಿಮಗೇನು ಗೊತ್ತು..? ಎಷ್ಟು ಗೊತ್ತು..? ಅವರು ಯುನಿವರ್ಸಿಟಿಯಲ್ಲಿ ಟಾಪ್ ಬಂದಿದ್ದವರು. ಐಐಎಸ್‌ಸಿಯಲ್ಲಿ ಕೆಲಸ ಮಾಡಿದವರು. ಅವರು ರಾಜಕೀಯದಲ್ಲಿ ಇಲ್ಲ, ಅವರ ಬಗ್ಗೆ ಮಾತಾಡೋದನ್ನು ನಿಲ್ಲಿಸಿ. ಸಿಎ ಜಮೀನು ಖರೀದಿಸುವುದು ತಪ್ಪು ಎಂದು ಎಲ್ಲಿದೆ ನಿಯಮ? ಎಷ್ಟು ಜನ ಬಿಜೆಪಿಯವರು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ತೆರೆದಿಲ್ಲ? ಅವರೆಲ್ಲ ಡಾಕ್ಟರ್, ಇಂಜಿನಿಯರ್ ಆಗಿದ್ದಾರಾ? ನಾವೇನು ಲೂಟಿ ಹೊಡೆಯಲು ಮಾಡಿದ್ದೀವಾ? ಸಿಎ ನಿವೇಶನ ಖರೀದಿ ಮಾಡಿದ್ದಕ್ಕೆ ಇಷ್ಟೊಂದು ಹೊಟ್ಟೆಕಿಚ್ಚೇಕೆ..? ನಾವು ನಮ್ಮ ಅರ್ಜಿಯಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ತೆರೆಯುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀವಿ. ಇಲ್ಲಿ ತಗೊಳ್ಳೋ ಬದಲು ಜವಳಿ ಪಾರ್ಕ್ ನಲ್ಲಿ ತಗೋಳ್ಳೋಕೆ ಆಗುತ್ತಾ? ಎಂದು ಉತ್ತರ ಕೊಟ್ಟಿದ್ದಾರೆ ಪ್ರಿಯಾಂಕ್ ಖರ್ಗೆ.



