ಡಿಕೆ ಶಿವಕುಮಾರ್ ಅವರು ಹೊರಗೆ ವಿಶೇಷವಾಗಿ ಬಹಿರಂಗವಾಗಿ ನಾನು ಮತ್ತು ಸಿದ್ದರಾಮಯ್ಯ ಇಬ್ಬರೂ ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್ ನಾಯಕರು ಏನು ಹೇಳುತ್ತಾರೋ ಅದರಂತೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾವಿಬ್ಬರೂ ಅಣ್ಣ ತಮ್ಮಂದಿರಂತೆ ಕೆಲಸ ಮಾಡುತ್ತೇವೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರೂ ಅಷ್ಟೇ, ನಮ್ಮಿಬ್ಬರ ಮಧ್ಯೆ ನೋ ಪ್ರಾಬ್ಲಂ ಎನ್ನುತ್ತಾರೆ. ಆದರೆ, ಡಿಕೆ ಶಿವಕುಮಾರ್ ಈಗ ಹೇಳ್ತಿರೋ ಮಾತುಗಳು ಸಿದ್ದರಾಮಯ್ಯ ಅವರಿಗೆ ಕೇಳಿಸುತ್ತಿರುವ ರೀತಿ ಬೇರೆ. ಸಿದ್ದರಾಮಯ್ಯ ಅವರಿಗಿಂತ ಹೆಚ್ಚಾಗಿ ಅವರ ಆಪ್ತರಿಗೆ ಕೇಳಿಸುತ್ತಿರುವುದು ಬೇರೆ ರೀತಿ.
ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ನೋಡಿ. ʻʻ ನಾನು ಜೀವನಪೂರ್ತಿ ಕಾಂಗ್ರೆಸ್ ಕಾರ್ಯಕರ್ತ. ನಾನು ಪಕ್ಷದ ಕೆಲಸಗಾರ. ಕಾರ್ಯಕನಾಗಿದ್ದಾಗಷ್ಟೇ ಅಲ್ಲ ಪಕ್ಷದ ಅಧ್ಯಕ್ಷನಾದಾಗಲೂ ಬಾವುಟ ಕಟ್ಟಿದ್ದೇನೆ. ಪೋಸ್ಟರ್ ಅಂಟಿಸಿದ್ದೇನೆ, ಕಸ ಗುಡಿಸಿದ್ದೇನೆ. ಪಕ್ಷಕ್ಕೆ ಏನೇನು ಬೇಕೋ ಅವೆಲ್ಲವನ್ನೂ ಮಾಡಿದ್ದೇನೆ. ಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿ ಹೋಗುವ ಕೆಲಸ ಮಾಡಿಲ್ಲʼʼ ಎಂದಿದ್ದಾರೆ.
ಕೊನೆಯ ಎರಡು ಲೈನ್ಸ್ ಇದ್ಯಲ್ಲ, ʻʻಸಮಯ ಬಂದಾಗ ವೇದಿಕೆಯಲ್ಲಿ ಕೂತು, ಭಾಷಣ ಮಾಡಿ ಹೋಗುವ ಕೆಲಸ ಮಾಡಿಲ್ಲʼʼ ಎಂಬ ಹೇಳಿಕೆಗೆ ಗರಂ ಆಗಿರುವುದು ಸಿದ್ದರಾಮಯ್ಯ ಆಪ್ತರು. ಸಿದ್ದರಾಮಯ್ಯ ಮೂಲತಃ ಕಾಂಗ್ರೆಸ್ಸಿಗರಲ್ಲ, ಸಂಘಟನೆ ವಿಷಯದಲ್ಲಿ ಸಿದ್ದರಾಮಯ್ಯ ದೊಡ್ಡ ಶ್ರಮ ಹಾಕಿಲ್ಲ. ಆದರೆ, ಸಿದ್ದರಾಮಯ್ಯ ಭಾಷಣ ಇದೆ ಎಂದರೆ ಜನ ಸೇರುತ್ತಾರೆ. ಸಿದ್ದರಾಮಯ್ಯ ಭಾಷಣ ಮುಗಿದರೆ ಕಾರ್ಯಕರ್ತರು ಖಾಲಿಯಾಗುತ್ತಾರೆ. ಇದು ಅವರಿಗೂ ಗೊತ್ತು. ಇವರಿಗೂ ಗೊತ್ತು. ಹೀಗಾಗಿಯೇ ಡಿಕೆಯ ಈ ಹೇಳಿಕೆ ಸಿದ್ದು ಬಣದವರಿಗೆ ಬೇರೆಯದೇ ರೀತಿಯಲ್ಲಿ ಕೇಳಿಸಿದ್ದರೆ ಆಶ್ಚರ್ಯ ಇಲ್ಲ.
ಇನ್ನು ಡಿಕೆ ಶಿವಕುಮಾರ್ ಅವರ ಪ್ರೀತಿಯ ತಮ್ಮ ಡಿಕೆ ಸುರೇಶ್ ‘ಗುರಿಯನ್ನ ಬೇಗ ತಲುಪಬೇಕು ಅನ್ನುವವರು ದಾರಿಯಲ್ಲಿ ವಿಶ್ರಮಿಸುತ್ತಾ ಕುಳಿತುಕೊಳ್ಳಬಾರದು’ ಎಂದು ಪೋಸ್ಟ್ ಹಾಕಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಕೊಟ್ಟು ಮಾತು ಎಂಬ ಹೇಳಿಕೆ ನೀಡಿ ಸೆನ್ಸೇಷನ್ ಹುಟ್ಟು ಹಾಕಿದ್ದರು ಡಿಕೆ ಸುರೇಶ್. ಆಮೇಲೆ ಸಿದ್ದರಾಮಯ್ಯ ಮಾತು ಕೊಟ್ಟಂತೆ ಗ್ಯಾರಂಟಿ ಜಾರಿಗೆ ತಂದಿದ್ದಾರೆ ಎಂದು ಮಾತು ತಿರುಗಿಸಿದ್ದರು. ಈಗ ಇದ್ದಕ್ಕಿದ್ದಂತೆ ಗುರಿ ಮತ್ತು ಮಾರ್ಗ ಹಾಗೂ ವಿಶ್ರಾಂತಿಯ ಸ್ಫೂರ್ತಿಯ ಹೇಳಿಕೆಯ ಮರ್ಮ ಯಾರಿಗೆ ತಲುಪಬೇಕೋ ಅವರಿಗೆ ತಲುಪಿದೆ. ಡಿಕೆ ಟೀಂ ತಣ್ಣಗೆ ಕುಳಿತಿಲ್ಲ.
ಕರ್ನಾಟಕದಲ್ಲಿ ಸಿಎಂ ಕುರ್ಚಿ ಕಸರತ್ತು ನಡೆಯುತ್ತಿರುವ ಹೊತ್ತಿನಲ್ಲೇ ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಡಿ.27 ರಂದು ಶನಿವಾರ ದೆಹಲಿಯ ಇಂದಿರಾಭವನದಲ್ಲಿ ನಡೆಯಲಿರುವ ಸಿಡಬ್ಲ್ಯುಸಿ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ‘ಸಿಡಬ್ಲ್ಯುಸಿ ಸಭೆಗೆ ನನಗೆ ಆಹ್ವಾನವಿಲ್ಲ’ ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮೂವರು ಸಿಎಂಗಳಲ್ಲಿ (ಸಿದ್ದರಾಮಯ್ಯ, ತೆಲಂಗಾಣದ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖ್ವಿಂದರ್ ಸಿಂಗ್ ಸುಖು) ಇವರೂ ಒಬ್ಬರು. ಹೀಗಾಗಿ ಮೂವರು ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ.
ಉಳಿದಂತೆ ರಾಜ್ಯದಿಂದ ಸಿಡಬ್ಲುಸಿ ಸದಸ್ಯರಾದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಶಾಶ್ವತ ಆಹ್ವಾನಿತರಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮತ್ತು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.



