ಹೆಚ್ ಡಿ ಕುಮಾರಸ್ವಾಮಿ ಕಳೆದ ಕೆಲವು ತಿಂಗಳಿಂದ ಮೌನವಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ‘ಆಂಗ್ರಿ ಯಂಗ್‌ಮ್ಯಾನ್’ರಂತೆ ಮುಗಿಬಿದ್ದಿದ್ದ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಮೌನವಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಕುರಿತು ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿಯವರೇ ಮಾಹಿತಿ ನೀಡಿದ್ದಾರಂತೆ.
ಕಳೆದ ವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಕೋರ್ ಕಮಿಟಿ ಸಭೆಗೆ ಹಾಜರಾದ ಕುಮಾರಸ್ವಾಮಿ ತಮ್ಮ ದೀರ್ಘಕಾಲದ ವಿಶ್ರಾಂತಿಗೆ ಕಾರಣ ನೀಡಿದ್ದಾರೆ. ದೇಹದ ತೂಕವನ್ನು ಇಳಿಸಲು ಹೋದಾಗ ಅನಿಮಲ್ ವೈರಸ್ ಅಟ್ಯಾಕ್ ಆಗಿದೆ ಎಂಬ ವಿಷಯ ಗೊತ್ತಾಯ್ತು. ಅದನ್ನು ಗುರುತಿಸಿದ್ದು ಲೇಟ್ ಆಗಿ. ಡಯಾಗ್ನೈಸ್ ಮಾಡಲು ವಿಳಂಬವಾಗಿದ್ದರಿಂದ ಸಮಸ್ಯೆ ಆಗಿ, ವೈದ್ಯರು ಕಡ್ಡಾಯವಾಗಿ ವಿಶ್ರಾಂತಿಗೆ ಸಲಹೆ ನೀಡಿದ್ದರು ಎಂದಿದ್ದರಂತೆ.
ಅನಿಮಲ್ ವೈರಸ್ ಬಹುತೇಕ ಬರುವುದು ಸೊಳ್ಳೆಗಳಿಂದ. ದೇಹಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಅದು ದೇಹದ ರಕ್ತಕಣಗಳನ್ನು ನಾಶ ಮಾಡುತ್ತಾ.. ದೇಹದ ತೂಕ ಕಡಿಮೆಯಾಗುವಂತೆ ಮಾಡುತ್ತದೆ. ಬಹುತೇಕ ಸಮಯಗಳಲ್ಲಿ ಈ ಅನಿಮಲ್ ವೈರಸ್ ಅಟ್ಯಾಕ್ ಆಗಿದೆ ಎನ್ನುವುದು ಗೊತ್ತೇ ಆಗುವುದಿಲ್ಲ. ಹೆಚ್ಚು ಬಾಯಾರಿಕೆ, ಸುಸ್ತು, ತಲೆನೋವು, ಅತಿಯಾದ ನಿದ್ರೆಗೆ ಒಳಪಡಿಸುತ್ತದೆ. ಸುಸ್ತು, ತಲೆನೋವು, ವಾಂತಿ.. ಇವುಗಳಿಗೆ ಟ್ರೀಟ್ ಮೆಂಟ್ ತೆಗೆದುಕೊಂಡರೂ.. ಅದು ನೇರವಾಗಿ ದೇಹಕ್ಕೆ ಹೊಕ್ಕ ಅನಿಮಲ್ ವೈರಸ್ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದಿಲ್ಲ. ಹೀಗಾಗಿ ಅನಿಮಲ್ ವೈರಸ್ ಬಂದ ನಂತರ ದೇಹ ಕ್ರಮೇಣ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಕುಮಾರಸ್ವಾಮಿ ಅವರಿಗೆ ಈ ರೀತಿಯ ಅನಿಮಲ್ ವೈರಸ್ ಆಗಿತ್ತಾ.. ಇರಬಹುದು.. ಕಾಯಿಲೆಯ ಬಗ್ಗೆ ಕುಮಾರಸ್ವಾಮಿ ಹೆಚ್ಚಿನ ಮಾಹಿತಿಯನ್ನೇನೂ ನೀಡಿಲ್ಲ.
ಕುಮಾರಸ್ವಾಮಿ ಏನಾಗಿದೆ ಎಂಬ ಕುರಿತು ಇತ್ತೀಚೆಗೆ ದೇವೇಗೌಡರೇ ಮಾತನಾಡಿದ್ದರು. . ಕಳೆದ ನಾಲ್ಕೈದು ತಿಂಗಳಿಂದ ಕುಮಾರಸ್ವಾಮಿಯವರು ಆರೋಗ್ಯದ ಕಾರಣದಿಂದ ರಾಜ್ಯ ಪ್ರವಾಸ ಮಾಡಿರಲಿಲ್ಲ. ಅವರಿಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆ ಎದುರಾಗಿತ್ತು. ಆದರೆ, ಈಗ ವೈದ್ಯರು ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುಮತಿ ನೀಡಿದ್ದಾರೆ ಎಂದಿದ್ದರು. ಅಕ್ಟೋಬರ್ ಅಂತ್ಯದವರೆಗೆ ಕುಮಾರಣ್ಣನವರು ವಿಶ್ರಾಂತಿ ಪಡೆಯಲಿ. ಅಲ್ಲಿಯವರೆಗೆ ಸುಮ್ಮನಿರಿ ಎಂದಿದ್ದ ದೇವೇಗೌಡರ ಮಾತು ನಿಜವಾಗಿದೆ. ಅಂದಹಾಗೆ ಅಕ್ಟೋಬರ್ ಮುಗಿಯಲು ಇನ್ನೂ ಕೆಲವು ದಿನ ಸಮಯಾವಕಾಶ ಇದೆ.
ಕುಮಾರಸ್ವಾಮಿ ಹೇಳುವಂತೆ ʻʻವೈದ್ಯರು ನೀಡಿದ ಸಲಹೆಯಂತೆ ನಡೆದುಕೊಂಡಿದ್ದರಿಂದ ನಾನೀಗ ಫುಲ್ಲು ಗುಣಮುಖನಾಗಿದ್ದೇನೆ. ಹೀಗಾಗಿ ಯಾರೂ ಆತಂಕಪಡುವ ಅಗತ್ಯವಿಲ್ಲ ಅಥವಾ ನನಗೇನೋ ಆಗುತ್ತದೆ ಅಂತ ಯೋಚಿಸ ಬೇಕಾದ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ಆಕ್ಟಿವ್ ಆಗಿ ಪ್ರವಾಸವನ್ನೂ ಮಾಡುತ್ತೇನೆʼʼ ಎಂದು ಸಿಗ್ನಲ್ ಕೊಟ್ಟಿದ್ದಾರೆ.
ಪಕ್ಷ ಸಂಘಟನೆಗೆ ಆದ್ಯತೆ ಕೊಡೋಣ. ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಕರ್ನಾಟಕದಲ್ಲಿ ನೆಲೆಸಿರುವ ಎಲ್ಲ ಭಾಷಿಕರಿಗೆ ರಾಜ್ಯ ಸರಕಾರದ ಹಗರಣಗಳ ಬಗ್ಗೆ ವಿವರಿಸೋಣ. ಅದಕ್ಕೆ ಅಗತ್ಯವಾದ ಹ್ಯಾಂಡ್ ಬಿಲ್ಲುಗಳನ್ನು ರೆಡಿ ಮಾಡೋಣ. ಮುಂಬರುವ ವಿಧಾನ ಸಭಾ ಚುನಾವಣೆಗೆ ನಾವು ಕೇಳಿರುವ ತೊಂಬತ್ತು ಸೀಟುಗಳ ಪೈಕಿ ಮಿನಿಮಮ್ ಎಪ್ಪತ್ತೈದು ಸೀಟುಗಳು ನಮಗೆ ಸಿಕ್ಕೇ ಸಿಗುತ್ತವೆ.
ಹೀಗಾಗಿ ಉಳಿದ ವಿಷಯಗಳ ಬಗ್ಗೆ ಚಿಂತೆ ಮಾಡದೆ ನಮ್ಮ ಪಕ್ಷವನ್ನು ಸಂಘಟಿಸಲು ಕೆಲಸ ಮಾಡಿ. ಮುಂದಿನ ತಿಂಗಳಿಂದ ರಾಜ್ಯ ಪ್ರವಾಸ ಮಾಡಲು ನಾನಂತೂ ರೆಡಿ ಅಂತ ವಿವರಿಸಿದ್ದಾರೆ. ಯಾವಾಗ ಅವರು ಈ ಮಾತು ಹೇಳಿದರೋ, ಆಗ ಕೋರ್ ಕಮಿಟಿಯಲ್ಲಿದ್ದವರು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.



