ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ತಾರಕಕ್ಕೇರಿರುವ ಈ ಹಂತದಲ್ಲಿ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಹೈಕಮಾಂಡ್ ಎಂಟ್ರಿ ಕೊಡ್ತಾ ಇದೆ. ಬಹುತೇಕ ಶನಿವಾರದ ಹೊತ್ತಿಗೆ ಎಲ್ಲವೂ ಕ್ಲಿಯರ್ ಆಗಬಹುದು. ಇದರ ನಡುವೆ ಸಿದ್ದರಾಮಯ್ಯ ಬಣದ ಕೆಲವು ನಾಯಕರನ್ನು ತಮ್ಮತ್ತ ಸೆಳೆಯಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಅವರೇ ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಮಾತಿನಲ್ಲಿ ಹೊರಬಂದಿರುವ ಒಂದಿಷ್ಟು ಮಾಹಿತಿಗಳು ಇಂಟ್ರೆಸ್ಟಿಂಗ್.
ಅಧಿಕಾರ ಹಸ್ತಾಂತರ ವಿಚಾರ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ಗಮನೀಯ ಬೆಳವಣಿಗೆಗಳು ನಡೆಯುತ್ತಲೇ ಇವೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಂತರ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈ ನಡುವೆ ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್ ಇಬ್ಬರೂ ದೆಹಲಿಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಇತ್ತ ಸಂಪರ್ಕ ಸಾಧ್ಯವಾಗದೇ ಇರುವುದು ರಾಹುಲ್ ಗಾಂಧಿ ಅವರಿಗೆ ಮಾತ್ರ. ಇದರ ನಡುವೆ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ ವೇಯ್ಟ್ ಮಾಡಿ.. ತಾಳ್ಮೆಯಿಂದ ಇರಿ ಎಂದು ಟೆಕ್ಸ್ಟ್ ಮೆಸೇಜ್ ಮಾಡಿರುವುದು ನಿಜ.
ಸತೀಶ್ ಜಾರಕಿಹೊಳಿ ಬೆಂಬಲ ಸಿದ್ದರಾಮಯ್ಯ ಅವರಿಗೆ :
ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಅಂತರಂಗದಲ್ಲಿ ವಿರೋಧಿಸುವ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ ತಡರಾತ್ರಿ ಪರಸ್ಪರ ಭೇಟಿಯಾಗಿದ್ದಾರೆ. ಮುಖ್ಯಮಂತ್ರಿಯಾಗುವ ಸಂದರ್ಭ ಬಂದರೆ ಬೆಂಬಲಕ್ಕೆ ನಿಲ್ಲುವಂತೆ ಸತೀಶ್ ಅವರಿಗೆ ನೇರ ಮನವಿ ಮಾಡಿದ್ದಾರಂತೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ ನೇರವಾಗಿಯೇ ತಾವು ಸಿದ್ದರಾಮಯ್ಯ ಅವರನ್ನು ಬಿಟ್ಟು ಬರುವುದಕ್ಕೆ ಆಗಲ್ಲ ಎಂದಿದ್ದಾರೆ. ಹಾಗಂತ ಬಂಡಾಯದ ಬಾವುಟ ಹಾರಿಸಿಲ್ಲ. ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ ಎನ್ನುತ್ತಲೇ ಜಾರಕಿಹೊಳಿ ತಾವು ಸಿದ್ದರಾಮಯ್ಯ ಪರವಾಗಿಯೇ ಇರುವುದಾಗಿ ಹೇಳಿದ್ದಾರೆ.
ಮೂಲಗಳ ಪ್ರಕಾರ ತಮ್ಮ ಬೆಂಬಲಕ್ಕೆ ನಿಂತರೆ ಮುಂದಿನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಮ್ಮ ಆಯ್ಕೆಗೆ ತಾವು ಬೆಂಬಲ ನೀಡುವ ಭರವಸೆಯನ್ನು ಶಿವಕುಮಾರ್ ಅವರು ಸತೀಶ್‌ಗೆ ನೀಡಿದರು ಎನ್ನಲಾಗುತ್ತಿದೆ. ಆದರೆ ಬಹಿರಂಗವಾಗಿ ಇಬ್ಬರೂ ಗುಟ್ಟಿನ ಮಾತುಗಳ ವಿವರ ಕೊಡ್ತಿಲ್ಲ.
ಜಮೀರ್ ಅಹ್ಮದ್ ಹೇಳಿದ್ದು ಏನು..?
ಇನ್ನು ಸತೀಶ್ ಜಾರಕಿಹೊಳಿ ಅವರ ಭೇಟಿಗೂ ಮುನ್ನ ಜಮೀರ್ ಅಹ್ಮದ್ ಅವರನ್ನೂ ಭೇಟಿ ಮಾಡಿದ್ದಾರೆ ಡಿಕೆ ಶಿವಕುಮಾರ್. ಈ ವೇಳೆ ತಾವು ಸಿದ್ದರಾಮಯ್ಯ ಜೊತೆಯಲ್ಲಿರುವುದು ನಿಜ. ಹಾಗೆಂದು ಪಕ್ಷದ ವಿರುದ್ಧ ಇಲ್ಲ. ಹೈಕಮಾಂಡ್ ಏನಾದರೂ ನಿಮ್ಮನ್ನು ಆಯ್ಕೆ ಮಾಡಿದರೆ ನನ್ನ ಬೆಂಬಲ ನಿಮಗೆ ಎಂದು ಪ್ರಾಮಿಸ್ ಮಾಡಿದ್ದಾರಂತೆ. ನಿರೀಕ್ಷೆಯಂತೆ ಸತೀಶ್ ಜಾರಕಿಹೊಳಿ ಅವರು ನೇರವಾಗಿ ನೋ ಎಂದಿದ್ದರೆ, ಜಮೀರ್ ಅವರು ನೇರವಾಗಿ ಹೈಕಮಾಂಡಿಗೆ ಜೈ ಎಂದಿದ್ದಾರೆ.



