ಮುಡಾ ಪ್ರಕರಣ ಮುಂದಿಟ್ಟುಕೊಂಡು ತಮ್ಮ ರಾಜೀನಾಮೆಗೆ ಪಟ್ಟುಹಿಡಿದಿರುವ ಜೆಡಿಎಸ್, ಬಿಜೆಪಿ ನಾಯಕರ ಎದುರು ಸಿಎಂ ಸಿದ್ದರಾಮಯ್ಯ ಮುಂದಿಟ್ಟಿರುವ ಪ್ರಶ್ನೆ ಇದು. ʻʻಯಾವತ್ತೂ ಮನೆಯಿಂದ ಆಚೆಗೆ ಬಂದವರಲ್ಲ. ರಾಜಕಾರಣದ ಕಡೆ ಮುಖ ಮಾಡಿದವಳಲ್ಲ. ಯಾವ ವಿಷಯಕ್ಕೂ ತಲೆ ಹಾಕದ ನನ್ನ ಪತ್ನಿಯನ್ನೂ ವಿಪಕ್ಷಗಳು ರಾಜಕಾರಣಕ್ಕೆ ಎಳೆದು ತಂದಿವೆ. ಆ ಪಕ್ಷಗಳನ್ನು ನೀವು ಕ್ಷಮಿಸ್ತೀರಾ?ʼʼ ಎಂದು ಪ್ರಶ್ನೆ ಮಾಡಿದ್ದಾರೆ ಸಿಎಂ ಸಿದ್ದರಾಮಯ್ಯ.
ರಾಯಚೂರಿನ ಮಾನ್ವಿಯಲ್ಲಿ ಆಯೋಜಿಸಿದ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ,ಭಾವುಕರಾಗಿದ್ದಾರೆ. ನನ್ನ ಪತ್ನಿ ಯಾವತ್ತೂ ರಾಜಕೀಯ ಬಂದಿಲ್ಲ. ಯಾವ ಕಾರ್ಯಕ್ರಮಗಳಲ್ಲೂ ಭಾಗಿಯಾಗಿಲ್ಲ. ಆದರೆ ವಿಪಕ್ಷಗಳು ನನ್ನ ಪತ್ನಿ ಹೆಸರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದೆ. ರಾಜಕೀಯದಿಂದ ದೂರವಿದ್ದ ಹೆಂಡತಿಯನ್ನು ಬೀದಿಗೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ? ಇದು ಬೇಸರ ತರಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಮುಡಾ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರಕ್ಕೆ ನನ್ನ ಹಾಗೂ ಕುಟುಂಬವನ್ನು ವಿಪಕ್ಷ ಬಳಸಿಕೊಂಡಿರುವುದು ಬೇಸರ ತರಿಸಿದೆ ಎಂದಿರುವ ಸಿದ್ದರಾಮಯ್ಯ ಒಂದು ಹಂತದಲ್ಲಿ ನನಗೂ ಬೇಸರವಾಗಿ ಸಾಕಾಗಿ ಹೋಗಿದೆ ಎಂದೂ ಹೇಳಿದ್ದಾರೆ. ಆದರೆ ನಿಮಗಾಗಿ ನಾನು ಹೋರಾಟ ಮಾಡುವೆ. ನನ್ನನ್ನು ಕೆಳಗಿಳಿಸುವ ಬಿಜೆಪಿ-ಜೆಡಿಎಸ್ ಷಡ್ಯಂತ್ರ ಸೋಲಿಸುವೆ ಎಂದರು. ಆತ್ಮಸಾಕ್ಷಿ ಎಲ್ಲ ನ್ಯಾಯಾಲಯಗಳಿಗಿಂದಲೂ ನ್ಯಾಯಾಲಯ ದೊಡ್ಡದು. ನಾನು ಪ್ರತಿಪಕ್ಷಗಳ ಬೆದರಿಕೆಗಳಿಗೆ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ ಎಂದಿರುವ ಸಿದ್ದರಾಮಯ್ಯ ನಾನು ಏನು ತಪ್ಪು ಮಾಡಿದ್ದೇನೆ? ಕುರಿ ಕಾಯುವವರ ಮಗ ಎರಡನೇ ಬಾರಿ ಮುಖ್ಯಮಂತ್ರಿ ಆಗಿದ್ದೇ ತಪ್ಪಾ? ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇ ತಪ್ಪಾ? ನನ್ನ ಮೇಲಿನ ಹೊಟ್ಟೆಕಿಚ್ಚಿಗೆ ನನ್ನ ಪತ್ನಿಯನ್ನು ಎಳೆಯಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಅವರ ವಿರುದ್ದ ಮುಡಾದಲ್ಲಿ 14 ಸೈಟುಗಳನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಎಂಬ ಆರೋಪಗಳಿವೆ. ಆದರೆ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಮಾಲೀಕತ್ವದ ಜಮೀನನ್ನು ಮುಡಾದವರು ವಶಪಡಿಸಿಕೊಂಡಿದ್ದರು. ಅದಕ್ಕೆ ಪರಿಹಾರವಾಗಿ 14 ಸೈಟು ಕೊಟ್ಟಿದ್ದಾರೆ ಎನ್ನುವುದು ಸಿದ್ದರಾಮಯ್ಯ ವಾದ. ಆದರೆ ಅಲ್ಲಿಯೇ ಅಕ್ರಮ ನಡೆದಿದೆ ಅನ್ನೋದು ಬಿಜೆಪಿ-ಜೆಡಿಎಸ್ ಆರೋಪ. ಪ್ರಕರಣ ಕೋರ್ಟಿಗೆ ಹೋದ ನಂತರ ಇಡಿ ಕೂಡಾ ವಿಚಾರಣೆಗೆ ಎಂಟ್ರಿ ಕೊಟ್ಟಿದೆ. ಇದರಿಂದ ನೊಂದಿರುವ ಪಾರ್ವತಿ ಸಿದ್ದರಾಮಯ್ಯ, ತಮಗೆ ಮುಡಾದವರು ಕೊಟ್ಟಿದ್ದ 14 ಸೈಟುಗಳನ್ನೂ ವಾಪಸ್ ಕೊಟ್ಟಿದ್ದಾರೆ. ಆ ಸೈಟುಗಳನ್ನು ಮುಡಾದವರು ಮತ್ತೆ ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾರೆ.
ಪಾರ್ವತಿ ಸಿದ್ದರಾಮಯ್ಯ, ತಮ್ಮ ಪತಿ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ ಯಾವತ್ತೂ ಬಹಿರಂಗವಾಗಿ ಕಾಣಿಸಿಕೊಂಡವರಲ್ಲ. ಮಗ ಯತೀಂದ್ರ ಶಾಸಕನಾಗಿದ್ದರೂ, ಅಂತರ ಕಾಯ್ದುಕೊಂಡಿದ್ದಾರೆ. ಪತಿ ಎರಡು ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೂ, ಕಾರ್ಯಕ್ರಮಕ್ಕೂ ಬಂದವರಲ್ಲ. ಅಪರೂಪಕ್ಕೆ ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ಪತಿಯನ್ನೂ ದೇವಸ್ಥಾನಕ್ಕೆ ಕರೆದುಕೊಂಡು ಹೋಗ್ತಾರೆ. ಬಿಟ್ಟರೆ, ಸಿದ್ದರಾಮಯ್ಯ ಅವರ ಖಾಸಗಿ ನಿವಾಸದಲ್ಲಿಯೂ ಹೊರಗಿನಿಂದ ಬಂದವರಿಗೆ ಪಾರ್ವತಿಯವರು ಕಾಣಿಸಿಕೊಳ್ಳೊದು ಅಪರೂಪ. ಅತ್ಯಾಪ್ತ ಮಿತ್ರರಷ್ಟೇ ಸಿದ್ದರಾಮಯ್ಯ ಪತ್ನಿಯವರ ಜೊತೆ ಮಾತಾಡುವಷ್ಟು ಸಲುಗೆ ಹೊಂದಿದ್ದಾರೆ. ಹೀಗಿರುವಾಗ ತಮ್ಮನ್ನು ಹಣಿಯುವ ಸಲುವಾಗಿ ತಮ್ಮ ಪತ್ನಿಯನ್ನು ಎಳೆದು ತಂದಿದ್ದು ಸಿದ್ದರಾಮಯ್ಯ ಅವರಿಗೆ ಬೇಸರ ತರಿಸಿದೆ.



