ಕಾಂತಾರ ಚಾಪ್ಟರ್ 01. ಸಿನಿಮಾ ನೋಡಿದ ಕೆಲವು ಪ್ರೇಕ್ಷಕರು ದೈವವೇ ಮೈಮೇಲೆ ಆವಾಹನೆ ಆದಂತೆ ಆಡ್ತಿದ್ದಾರೆ. ಹಾಗೆಲ್ಲ ಆಗಲ್ಲ.. ಅದು ಅಸಾಧ್ಯ ಎನ್ನುವುದನ್ನು ತುಳುನಾಡ ಅಕಾಡೆಮಿ, ದೈವ ನರ್ತಕರು ಹೇಳ್ತಿದ್ದಾರೆ. ಇದೆಲ್ಲದರ ನಡುವೆ ಒಂದು ಅಭಿಯಾನವೇ ಶುರುವಾಗಿದೆ. ಕಾಂತಾರದಲ್ಲಿ ದೈವ, ದೈವ ಸ್ಥಾನಗಳಿಗೆ ಅವಮಾನ ಮಾಡಲಾಗಿದೆ ಎಂಬ ವಿಚಿತ್ರ ವಾದ ಶುರುವಾಗಿದೆ. ಇಷ್ಟಕ್ಕೂ ಕಾಂತಾರದಲ್ಲಿ ದೈವಕ್ಕೆ ಅಪಚಾರವಾಗುವ ಯಾವ ದೃಶ್ಯ ಇದೆ. ಯಾವ ಸಂಭಾಷಣೆ ಇದೆ. ಹೋಗಲಿ.. ಇಡೀ ಕಥೆಯಲ್ಲಿ ಏನಾದರೂ.. ಅಂತಹ ಲೋಪ ಇದೆಯಾ.. ಎಂದು ನೋಡಿದರೆ.. ಹಾಗೇನೂ ಆಗಿಲ್ಲ. ಬದಲಿಗೆ.. ಚಿತ್ರದಲ್ಲಿ ದೈವವನ್ನು ವೈಭವೀಕರಿಸಲಾಗಿದೆ.
ಆದರೆ.. ಈಗ ಕೆಲವು ದೈವ ನರ್ತಕರು ಕಾಂತಾರ ಹಾಗೂ ಪ್ರೇಕ್ಷಕರ ವಿರುದ್ಧ ತಿರುಗಿಬಿದ್ದಿದ್ದಾರೆ. ಆದರೆ.. ಆ ದೈವ ನರ್ತಕರಲ್ಲಿಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎನ್ನುವುದಕ್ಕೆ ಸಂಭ್ರಮಿಸಬೇಕು. ವಿರೋಧಿಸುವುದು ಸರಿ ಅಥವಾ ತಪ್ಪು ಎಂಬ ಬಗ್ಗೆ ಭಿನ್ನಮತ ಕೇಳಿ ಬರುತ್ತಿವೆ. ಅದೂ ಒಳ್ಳೆಯದೇ.
ಮಂಗಳೂರಿನ ಬಜಪೆಯ ಶ್ರೀ ಕ್ಷೇತ್ರ ಪೆರಾರದಲ್ಲಿರುವ ಬ್ರಹ್ಮದೇವರು, ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವದ ಮುಂದೆ ದೈವಾರಾಧನ ಸಂರಕ್ಷಣಾ ವೇದಿಕೆಯ ದೈವ ನರ್ತಕರು ಮತ್ತು ದೈವಾರಾಧಕರು ಮಾಡಿದ ಮನವಿಗೆ ʻʻನನ್ನ ಹೆಸರಿನಲ್ಲಿ ಹಣ ಮಾಡುವವರನ್ನು ನೋಡಿಕೊಳ್ಳುತ್ತೇನೆ. ಹಣವೆಲ್ಲಾ ಆಸ್ಪತ್ರೆಗೆ ಸೇರುವಂತೆ ಮಾಡುತ್ತೇನೆ. ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ಇನ್ನು ಮುಂದೆ ದೈವ ಸ್ಥಾನಗಳಲ್ಲಿ ಚಿತ್ರೀಕರಣ ನಿಲ್ಲಿಸಿ. ಅನುಕರಣೆ, ಅಪಹಾಸ್ಯ, ಹಣ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲಾಗುವುದು. ನೀವು ನಿಮ್ಮ ಹೋರಾಟ ಮುಂದುವರೆಸಿ, ನಿಮ್ಮ ಜೊತೆಗೆ ನಾನಿದ್ದೇನೆʼʼ ಎಂದು ದೈವ ಹೇಳಿದೆಯಂತೆ.
ಕೆಲವು ದೈವ ನರ್ತಕರು ರಿಷಬ್ ಶೆಟ್ಟಿ ಮೇಲೂ ಅಸಮಾಧಾನ ವ್ಯಕ್ತಪಡಿಸಿದ್ದು ದೈವದ ಮೇಲೆ ಸಿನಿಮಾ ಮಾಡಬಾರದಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದರೆ, ದೈವ ನರ್ತಕರಲ್ಲಿಯೇ ಬಹುತೇಕರು ಇದನ್ನು ಒಪ್ಪಿಲ್ಲ. ರಿಷಬ್ ಶೆಟ್ಟಿ ಸಿನಿಮಾ ಮಾಡಿದ್ದರಿಂದ ನಮ್ಮ ಸಂಸ್ಕೃತಿ ಹೊರ ಜಗತ್ತಿಗೆ ತಿಳಿಯುವಂತಾಯ್ತು. ರಿಷಬ್ ಶೆಟ್ಟಿ ದೈವವನ್ನು ಅಪಹಾಸ್ಯ ಮಾಡಿಲ್ಲ. ನಂಬಿಕೆಗೆ ಅಪಚಾರ ಮಾಡಿಲ್ಲ. ಸಿನಿಮಾ ನೋಡಿದ ಕೆಲವು ಪ್ರೇಕ್ಷಕರಷ್ಟೇ ಹುಚ್ಚರಂತೆ ಆಡುತ್ತಿದ್ದಾರೆ. ಟೀಕೆ ಮಾಡುವವರು ನಮ್ಮ ದೈವ, ನಮ್ಮ ನಂಬಿಕೆಯನ್ನೇ ಪ್ರಶ್ನೆ ಮಾಡ್ತಿದ್ದಾರೆ. ರಿಷಬ್ ಶೆಟ್ಟಿ ಮೇಲೆ ಏಕೆ ಸಿಟ್ಟು ಎಂಬ ಮಾತೂ ಕೇಳಿ ಬರುತ್ತಿದೆ.
ದೈವಾರಾಧಕ ಶ್ರೀಧರ್ ಕವತ್ತಾರ್ ಅವರು ಅಸಮಾಧಾನಗೊಂಡಿರುವುದು ಕಾಂತಾರ ಸಿನಿಮಾದ ಮೇಲೆ ಅಲ್ಲ. ಕೆಲವು ಪ್ರೇಕ್ಷಕರ ಮೇಲೆ. ʻʻದೈವದ ಅಪಹಾಸ್ಯದಿಂದ ನಮಗೆ ತುಂಬಾ ಬೇಸರ ಆಗಿದೆ. ನಮ್ಮ ಹೋರಾಟಕ್ಕೆ ದೈವವು ಸಂಪೂರ್ಣ ಬೆಂಬಲ ನೀಡಿದೆ. ಈ ರೀತಿಯ ತಪ್ಪನ್ನು ತುಳುವರು ಮಾಡಬೇಡಿ. ದೈವಕ್ಕೆ ಯಾರೇ ಅಪಹಾಸ್ಯ ಮಾಡಿದರೂ ನಾವು ಅದನ್ನು ವಿರೋಧಿಸುತ್ತೇವೆʼʼ ಎಂದಿದ್ದಾರೆ. ಇನ್ನೂ ಕೆಲವು ದೈವನರ್ತಕರು ತುಳುನಾಡಿನ, ಕರಾವಳಿಯ ಹೆಮ್ಮೆಯನ್ನು ತೋರಿಸಿದ್ದಾರೆ. ತುಳುನಾಡಿನ ಜನಪದ ವಿಧ್ವಾಂಸರೂ ಆಗಿರುವ ವಿಶ್ರಾಂತ ಕುಲಪತಿ ಡಾ.ಕೆ ಚಿನ್ನಪ್ಪಗೌಡ ಹಾಗೂ ಜನಪದ ತಜ್ಞರು ಕಾಂತಾರ ವಿರೋಧಿಸುವುದು ಸರಿಯಲ್ಲ. ರಿಷಬ್ ಶೆಟ್ಟಿ ಕರಾವಳಿಯ ಜನ ತಲೆ ಎತ್ತಿ ನಡೆಯುವಂತಹ ಸಿನಿಮಾ ಮಾಡಿದ್ದಾರೆ ಎಂದು ಪ್ರಶಂಸೆ ಮಾಡಿದ್ದಾರೆ.
ಹಾಗೆ ನೋಡಿದ್ರೆ.. 2022ರ ಕಾಂತಾರ ಶರುವಾಗುವುದೇ ಒಂದು ಎಚ್ಚರಿಕೆಯ ದೃಶ್ಯದಿಂದ. ದೈವ ಹೇಳಿದ ಮಾತನ್ನು ವಿಲನ್ ʻಇದು ದೈವ ಹೇಳ್ತಾ ಇರೋದಾ.. ದೈವ ನರ್ತಕ ಹೇಳ್ತಾ ಇರೋದಾ..ʼ ಎಂದು ಪ್ರಶ್ನೆ ಮಾಡ್ತಾನೆ. ದೈವ ನರ್ತಕ ಹೇಳಿದ್ದಾದರೆ.. ನಿನಗೆ ಸಿಗುವಂತಾಗಲಿ.. ದೈವವೇ ಆದರೆ.. ಎನ್ನುತ್ತಾ ಕಾಂತಾರದೊಳಗೆ ಹೋಗುವ ದೈವ ನರ್ತಕ ಕಣ್ಮರೆಯಾಗುತ್ತಾನೆ. ಕಾಂತಾರ ಕಥೆ ಶುರುವಾಗುವುದೇ ದೈವ ನರ್ತಕನಿಂದ.ದೈವ ನರ್ತಕನೇ ದೈವವಾಗುವ ಕಥೆ 2022ರ ಕಾಂತಾರದಲ್ಲಿದ್ದರೆ, ಕಾಂತಾರ ಚಾಪ್ಟರ್ 01ನಲ್ಲಿ ದೈವದ ಕಥೆಯೇ ಇದೆ.



