ರಾಜ್ಯದಲ್ಲೀಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಬೆಂಗಳೂರಿಗೆ ರಾಜಸ್ತಾನದಿಂದ ಬಂದಿದ್ದು ಕುರಿ ಮಾಂಸನಾ..? ನಾಯಿ ಮಾಂಸನಾ..? ಅನ್ನೋದು. ಪುನೀತ್ ಕೆರೆಹಳ್ಳಿ ಅರೆಸ್ಟ್ ಆಗಿ ಜೈಲಲ್ಲಿದ್ದಾರೆ. ರಜಾಕ್ ವ್ಯವಹಾದ ಬಗ್ಗೆ ಸಂಶಯಗಳಿವೆ. ಆದರೆ, ಬೆಂಗಳೂರಿನಲ್ಲಿ ಜಪ್ತಿ ಮಾಡಲಾದ ಮಾಂಸ ಕುರಿ ಮಾಂಸ ಅನ್ನೋದನ್ನು ಹೋಮ್ ಮಿನಿಸ್ಟರ್ ಸ್ಪಷ್ಟವಾಗಿ ಹೇಳಿಬಿಟ್ಟಿದ್ದಾರೆ.
ರಾಜಸ್ಥಾನದಿಂದ ಬೆಂಗಳೂರಿಗೆ ತಂದು ನಾಯಿ ಮಾಂಸ ಮಾರಾಟ ಮಾಡುತ್ತಿದ್ದಾರೆಂದು ಕೆಲವರು ದುರುದ್ದೇಶದಿಂದ ಗಲಾಟೆ ಮಾಡಿದ್ದಾರೆ. ಆ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಲಾಗಿದ್ದು, ಅದು ನಾಯಿ ಮಾಂಸವಲ್ಲ, ಮೇಕೆ ಮಾಂಸ ಎಂಬುದಾಗಿ ವರದಿ ಬಂದಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ಧಾರೆ. ರಾಜಸ್ಥಾನದಿಂದ ಪ್ರತಿ ವಾರ ಅಥವಾ 15 ದಿನಗಳಿಗೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಆದರೆ, ಕೆಲವರು ಅದು ನಾಯಿ ಮಾಂಸ ಎಂದು ಆರೋಪಿಸಿದ್ದರು. ದುರುದ್ದೇಶದಿಂದ ಗಲಾಟೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಉದ್ದ ಬಾಲದ ಕಥೆ : ರೈಲು ಸಂಖ್ಯೆ 1796 ಜೈಪುರ-ಮೈಸೂರು ಎಕ್ಸ್‌ಪ್ರೆಸ್‌ನಲ್ಲಿ 2500 ಕೆಜಿ ಕುರಿ ಮಾಂಸ ವನ್ನು ಬೆಂಗಳೂರು ಶಿವಾಜಿನಗರದ ಅಬ್ದುಲ್ ರಜಾಕ್ ತರಿಸಿಕೊಂಡಿದ್ದರು. ಸುಮಾರು 12 ಹೋಟೆಲ್ಲುಗಳಿಗೆ ಮಾಂಸ ಸಪ್ಲೈ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ.. ಈ ವೇಳೆ ದಾಳಿ ಮಾಡಿದವರು ʻಮಾಂಸವನ್ನು ಎತ್ತಿ ತೋರಿಸಿದಾಗ ಉದ್ದನೆಯ ಬಾಲʼ ಕಂಡಿತ್ತು. ಸಾಮಾನ್ಯವಾಗಿ ಕುರಿಗಳಿಗೆ ಇಷ್ಟು ಉದ್ದನೆಯ ಬಾಲ ಇರೋದಿಲ್ಲ. ಹೀಗಾಗಿ ಇದು ನಾಯಿ ಮಾಂಸವೇ ಇರಬೇಕು ಎಂದು ನಂಬಿದ್ದರು ನೋಡಿದ್ದ ಜನ. ಈಗ ಇದು ಕುರಿ ಮಾಂಸ ಅನ್ನೋದು ಸಾಬೀತಾಗಿದೆ.
ಹಾಗಾದರೆ.. ಕುರಿಗಳಿಗೆ ಉದ್ದನೆಯ ಬಾಲ ಇರುತ್ತದಾ..? ಹೀಗೊಂದು ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಕುರಿ ಅಥವಾ ಮೇಕೆಯ ಬಾಲ ಚಿಕ್ಕದೇ ಇರುತ್ತಾದರೂ.. ಉದ್ದನೆಯ ಬಾಲದ ಕುರಿ/ಮೇಕೆಗಳೂ ಇವೆ. ಸುಮಾರು 100ಕ್ಕೂ ಹೆಚ್ಚು ಜಾತಿಯ ಕುರಿಗಳಿಗೆ ಉದ್ದ ಬಾಲ ಇರುತ್ತೆ. ಇಂತಹ ಉದ್ದ ಬಾಲದ 10 ತಳಿಗಳು ಭಾರತದಲ್ಲಿವೆ. ಆ 10 ತಳಿಗಳಲ್ಲಿ ಒಂದು ದಮಾರಾ.
ಈ ದಮಾರಾ ಅನ್ನೋ ಜಾತಿಯ ಕುರಿ ಇದ್ಯಲ್ಲ, ಇದನ್ನು ಹೆಚ್ಚಾಗಿ ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಸಾಕುತ್ತಾರೆ. ಇದು ಕುರಿಯೇನೋ ಹೌದು, ನೋಡುವುದಕ್ಕೆ ನಾಯಿಯಂತೆ ಕಾಣುತ್ತೆ. ಬಾಲ ಉದ್ದ ಇರುತ್ತೆ. ಆದರೆ ಈ ತಳಿಯ ಕುರಿಗಳ ಮಾಂಸ ಇಲ್ಲಿನ ಹಾಗೆ ಟೇಸ್ಟ್ ಇರುವುದಿಲ್ಲವಂತೆ. ಹೀಗಾಗಿ ಅಲ್ಲಿ ಸಾಕ್ತಾರೇನೋ ನಿಜ, ಆದರೆ ಮಾರ್ಕೆಟ್ಟಿಲ್ಲ.
ಟೇಸ್ಟ್ ಇಲ್ಲದ ಮಾಂಸವನ್ನು ಈ ರೀತಿ ಬೇರೆ ರಾಜ್ಯಗಳಿಗೆ ಮಾರಾಟ ಮಾಡ್ತಾರೆ. ಟೇಸ್ಟ್ ಇಲ್ಲದ ಕುರಿಗಳನ್ನೇಕೆ ಸಾಕ್ತಾರೆ ಅಂದ್ರೆ, ಈ ಕುರಿಗಳಿಗೆ ಸಣ್ಣ ಪುಟ್ಟ ರೋಗಗಳನ್ನು ತಡೆದು ಬದುಕೋ ಶಕ್ತಿ ಇವೆ. ಇಲ್ಲಿ ಮಾಮೂಲಾಗಿ ಸಿಗೋ ಕುರಿಗಳಿವ್ಯಲ್ಲ, ಆ ಕುರಿಗಳು ಬಿಸಿಲು, ಮಳೆಯನ್ನ ತಡ್ಕೊಳ್ಳೊದಿಲ್ಲ. ಈ ದಮಾರಾ ಕುರಿಗಳು ಇದ್ಯಲ್ಲ, ಇವು ಸಿಡಿಲನ್ನೂ ತಡ್ಕೊಳ್ತವಂತೆ. ಆದರೆ, ನಮ್ಮಲ್ಲಿ ಸಿಗೋ ಕುರಿಗಳು ಸಿಡಿಲು, ಮಿಂಚು ಹೊಡ್ದಾಗ್ಲೆಲ್ಲ ಪ್ರಾಣ ಬಿಡೋದು ಹೆಚ್ಚು.
ಹೀಗಾಗಿ ಲಾಭ ಕಡಿಮೆ ಇರಬಹುದು, ಲಾಸ್ ಇರಲ್ಲ ಅನ್ನೋ ಕಾರಣಕ್ಕೆ ಈ ದಮಾರಾ ಜಾತಿಯ ಕುರಿಗಳನ್ನ ರಾಜಸ್ಥಾನ, ಗುಜರಾತಿನ ಜನ ಹೆಚ್ಚು ಸಾಕ್ತಾರೆ. ಈಗ ಬೆಂಗಳೂರಿನಲ್ಲಿ ಸಿಕ್ಕಿರೋದು ಅಂತಹ ಕುರಿ ಮಾಂಸ, ಅಷ್ಟೆ.
ಅಂದಹಾಗೆ ಅಲ್ಲಿಂದ ಸಪ್ಲೈ ಆಗಿರೋದು ಕುರಿ ಮಾಂಸನೇನೋ ಹೌದು, ಆದರೆ.. ಸೇಫ್ ಆಗಿಲ್ಲ. ಕೊಳೆತದ್ದು ಕಣ್ಣಿಗೆ ಕಾಣೋ ರೀತಿ ಇತ್ತು. ಆದರೆ.. ಲ್ಯಾಬ್ ರಿಪೋರ್ಟ್ ಏನ್ ಹೇಳುತ್ತೋ.. ಅದೇ ಫೈನಲ್ ಅಲ್ವಾ..



