2019ರ ಲೋಕಸಭೆ ಎಲೆಕ್ಷನ್`ನ್ನು ಕರ್ನಾಟಕ ಮರೆಯುವಂತಿಲ್ಲ. ಕರ್ನಾಟಕದಲ್ಲಿ ಬಿಜೆಪಿ 25 ಎಂಪಿ ಸೀಟು ಗೆದ್ದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸೀಟು ಗೆದ್ದು, ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿತ್ತು. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಅವರನ್ನೆಲ್ಲ ಸೋಲಿಸಿದ್ದ ಎಲೆಕ್ಷನ್ ಅದು. ಈಗ ಅದೇ ಚುನಾವಣೆಯಲ್ಲಿ ಗೆದ್ದಿದ್ದ ಹಾಸನ ಲೋಕಸಭ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಅನರ್ಹಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಕೆಲವು ಮಾಹಿತಿಗಳನ್ನು ಆಯೋಗದಿಂದ ಮುಚ್ಚಿಟ್ಟಿರುವುದು ಹಾಗೂ ಅಕ್ರಮ ಎಸಗಿರುವುದು ಸಾಬೀತಾದ ಹಿನ್ನಲೆಯಲ್ಲಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
ಪ್ರಜ್ವಲ್ ರೇವಣ್ಣ ಮಾಡಿಕೊಂಡಿದ್ದ ಎಡವಟ್ಟುಗಳೇನು? ಮುಚ್ಚಿಟ್ಟಿದ್ದಾದರೂ ಏನನ್ನು..?
2019ರ ಲೋಕಸಭೆ ಚುನಾವಣೆಗೆ ಪ್ರಜ್ವಲ್ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿದ್ದರು. ಒಟ್ಟು ಆಸ್ತಿ 8,13,622 ಆಗಿದ್ದು, ಇದರಲ್ಲಿ 4,89,15,029 ಮೌಲ್ಯದ ಸ್ಥಿರಾಸ್ತಿ, .1,68,86,632 ಮೌಲ್ಯದ ಚರಾಸ್ತಿಗಳಿದ್ದವು. ಪ್ರಜ್ವಲ್ ಅವರು .3.72 ಕೋಟಿ ಖಾಸಗಿ ಸಾಲದ ಲೆಕ್ಕ ತೋರಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತಂದೆ ರೇವಣ್ಣ, ತಾಯಿ ಭವಾನಿ, ಅನಸೂಯ, ಸಿ.ಎನ್. ಪಾಂಡು, ಸಿ.ಎನ್. ಪುಟ್ಟಸ್ವಾಮಿಗೌಡ, ಜಯರಾಂ, ಡಿ.ಕೆ.ನಾಗರಾಜ್, ಕಾಳೇಗೌಡ, ಬೋರೇಗೌಡ, ಶೈಲ ಅವರಿಂದ ಈ ಸಾಲ ಪಡೆದಿದ್ದಾರೆ. ಪ್ರಜ್ವಲ್ ಹೆಸರಲ್ಲಿ ಒಟ್ಟು 36 ಎಕರೆ ಕೃಷಿ ಭೂಮಿಯೂ ಇದೆ. ಜತೆಗೆ, ಪ್ರಜ್ವಲ್ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 15.58 ಲಕ್ಷ ನಗದೂ ಇದೆ. ಒಟ್ಟು 37.31 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನೂ ಅವರು ಹೊಂದಿದ್ದಾರೆ. 18 ಹಸುಗಳು, 2 ಎತ್ತುಗಳನ್ನೂ ಪ್ರಜ್ವಲ್ ಸಾಕಿಕೊಂಡಿದ್ದರು. ಆದರೆ..ಕೆಲವು ಮಾಹಿತಿಗಳನ್ನು ಕೊಟ್ಟೇ ಇರಲಿಲ್ಲ.
ಮುಚ್ಚಿಟ್ಟ ಸತ್ಯ ನಂ.1 : ಮೆಸರ್ಸ್ ಅಧಿಕಾರ ವೆಂಚರ್ಸ್ ಎಲ್`ಎಲ್`ಪಿ ಹಾಗೂ ದ್ರೋಣ ವರ್ಕ್‍ಫೋರ್ಸ್ ಎಲ್`ಎಲ್`ಪಿ ಕಂಪೆನಿಗಳಲ್ಲಿ ಪಾಲುದಾರಿಕೆ ಮಾಲೀಕತ್ವ ಇತ್ತು. ಆಯೋಗಕ್ಕೆ ಅದರ ಮಾಹಿತಿ ಕೊಟ್ಟಿರಲಿಲ್ಲ.
ಮುಚ್ಚಿಟ್ಟ ಸತ್ಯ ನಂ.2 : 2008ರಿಂದ 2018ರವರೆಗೆ ವ್ಯವಹಾರ ನಡೆಸುತ್ತಿದ್ದರು. ಆದರೆ ನಾಮಪತ್ರ ಸಲ್ಲಿಕೆ ವೇಳೆ ಕೇವಲ 2018-19ನೇ ಸಾಲಿನ ಆದಾಯ ತೆರಿಗೆ ಮಾಹಿತಿ ಕೊಟ್ಟಿದ್ದರು.
ಮುಚ್ಚಿಟ್ಟ ಸತ್ಯ ನಂ.3 : ತಮ್ಮ ಬಳಿ ಇರುವ ಎಲ್ಲ ಸ್ಥಿರಾಸ್ಥಿ ಮತ್ತು ಚರಾಸ್ಥಿಗಳ ಬಗ್ಗೆ ಸೂಕ್ತ ವಿವರ ಹಾಗೂ ದಾಖಲೆ ಕೊಟ್ಟಿರಲಿಲ್ಲ. ಒಂದಷ್ಟು ಕೊಟ್ಟು, ಒಂದಷ್ಟು ಬಿಟ್ಟು ಅಸಮರ್ಪಕ ಮಾಹಿತಿ ನೀಡಿದ್ದರು.
ಮುಚ್ಚಿಟ್ಟ ಸತ್ಯ ನಂ.4 : ತಂದೆ ಹೆಚ್.ಡಿ.ರೇವಣ್ಣ ಅವರಿಂದ 1.26 ಕೋಟಿ ಸಾಲ ಪಡೆದಿದ್ದೇನೆ ಎಂದು ದಾಖಲೆ ನೀಡಿದ್ದರು. ಆದರೆ ಶಾಸಕರೂ ಆಗಿರುವ ರೇವಣ್ಣ ಲೋಕಾಯುಕ್ತಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಪ್ರಜ್ವಲ್ ಅವರಿಗೆ 47.36 ಲಕ್ಷ ಕೊಟ್ಟಿದ್ದೇನೆ ಎಂದು ಹೇಳಿದ್ದರು. ಎರಡಕ್ಕೂ ಪ್ರಮಾಣ ಪತ್ರಗಳಿಗೆ ಹೋಲಿಕೆಯಾಗಲಿಲ್ಲ. ತಾಳೆ ಆಗಲಿಲ್ಲ.
ಮುಚ್ಚಿಟ್ಟ ಸತ್ಯ ನಂ.5 : ಪ್ರಜ್ವಲ್ ರೇವಣ್ಣ ತಮಗೆ 7.48 ಲಕ್ಷ ವ್ಯಾಪಾರದ ಆದಾಯ ಎಂದು ಘೋಷಿಸಿಕೊಂಡಿದ್ದರು. ಆದರೆ ಯಾವ ವ್ಯಾಪಾರ ಎಂದು ಆದಾಯ ಮೂಲ ತಿಳಿಸಿರಲಿಲ್ಲ.
ಮುಚ್ಚಿಟ್ಟ ಸತ್ಯ ನಂ.6 : ನಾಮಪತ್ರ ಸಲ್ಲಿಕೆ ವೇಳೆ 2019ರ ಮಾರ್ಚ್ 22ಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಲೆಕ್ಕ ಎಂದು 5.78 ಲಕ್ಷದ ಅಫಿಡವಿಟ್ ನೀಡಲಾಗಿತ್ತು. ಆದರೆ ವಾಸ್ತವದಲ್ಲಿ ಅದು 5.78 ಲಕ್ಷ ಅಲ್ಲ, 49.09 ಲಕ್ಷ ರೂ. ಆಗಿತ್ತು.
ಮುಚ್ಚಿಟ್ಟ ಸತ್ಯ ನಂ.7 : ಪ್ರಜ್ವಲ್ ರೇವಣ್ಣ, ಕುಪೇಂದ್ರ ರೆಡ್ಡಿ ಅವರಿಂದ 50 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಆದರೆ ಅದನ್ನು ಉಲ್ಲೇಖ ಮಾಡಿರಲಿಲ್ಲ.
ಇದು ಪ್ರಜ್ವಲ್ ರೇವಣ್ಣ (Prajwalrevanna) ಮಾಡಿದ್ದ ತಪ್ಪುಗಳಾದರೆ, ತಂದೆ ಹೆಚ್.ಡಿ.ರೇವಣ್ಣ(H.D Revanna) ತಪ್ಪುಗಳೂ ಪ್ರಜ್ವಲ್ ಅನರ್ಹತೆಗೆ ಕಾರಣವಾದವು.
ಹೆಚ್.ಡಿ.ರೇವಣ್ಣ ಮಾಡಿದ ಎಡವಟ್ಟು ನಂ.1 : ಮಗನ ಅಫಿಡವಿಟ್‍ನಲ್ಲಿ 1.26 ಕೋಟಿ ಸಾಲ ಕೊಟ್ಟಿರುವ ಲೆಕ್ಕ ಇರುವಾಗ, ಲೋಕಾಯುಕ್ತಕ್ಕೆ ತಾವು ನೀಡಿದ ವರದಿಯಲ್ಲಿ 47.36 ಲಕ್ಷ ಸಾಲ ಎಂದು ತೋರಿಸಿದ್ದು. ಲೆಕ್ಕ ತಾಳೆಯಾಗಲಿಲ್ಲ.
ಹೆಚ್.ಡಿ.ರೇವಣ್ಣ ಮಾಡಿದ ಎಡವಟ್ಟು ನಂ.2 : ಪಡವಲಹಿಪ್ಪೆ ಗ್ರಾಮದ ಬೂತಿನಲ್ಲಿ (ಬೂತ್ ನಂ.244) ಮತಗಟ್ಟೆಯಲ್ಲಿ ಕುಳಿತು ವೋಟು ಹಾಕಿಸಿದ್ದು. ಇದು ನೇರವಾಗಿ ಮತದಾರರ ಮೇಲೆ ಪ್ರಭಾವ ಬೀರಿದ, ಬೆದರಿಕೆ ಹಾಕಿದ ಅಕ್ರಮಕ್ಕೆ ಬರುತ್ತೆ. ಒಂದು ವೋಟು ಅಕ್ರಮವಾದರೂ ಶಿಕ್ಷೆ ಹೀಗೆಯೇ ಇರುತ್ತೆ.
ಕುಮಾರಸ್ವಾಮಿ (HD.Kumarswamy) ಮಾಡಿದ್ದ ತಪ್ಪುಗಳೂ ಸಾಬೀತಾದವು. ಚುನಾವಣೆ ವೇಳೆ ಕುಮಾರಸ್ವಾಮಿ ಸಿಎಂ ಆಗಿದ್ದರು. ರೇವಣ್ಣ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗ ಕುಮಾರಸ್ವಾಮಿ ಸಿಎಂ ಹಾಗೂ ಕಾವೇರಿ ನಿಗಮದ ಅಧ್ಯಕ್ಷರೂ ಆಗಿದ್ದರು. ಆಗ ಕಾವೇರಿ ನಿಗಮದ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಿ, ಪ್ರಜ್ವಲ್ ರೇವಣ್ಣ ಗೆಲುವಿಗೆ ಸಹಕಾರ ನೀಡಿದ್ದಾರೆ ಎಂಬ ಆರೋಪವೂ ಕೋರ್ಟಿನಲ್ಲಿ ಸಾಬೀತಾಯಿತು.
ಇನ್ನು 6 ವರ್ಷ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವಂತಿಲ್ಲ : ಒಮ್ಮೆ ಸಂಸದ ಅಥವಾ ಶಾಸಕ ಯಾರೇ ಆಗಿರಲಿ, ಜನಪ್ರತಿನಿಧಿ ಅನರ್ಹಗೊಂಡರೆ 6 ವರ್ಷ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತಿಲ್ಲ. ಆದರೆ ಪ್ರಜ್ವಲ್ ರೇವಣ್ಣ ಮೇಲ್ಮನವಿ ಸಲ್ಲಿಸಿದರೆ, ಅದು ವಿಚಾರಣೆಗೆ ಅಂಗೀಕಾರವಾಗಿ, ತೀರ್ಪಿಗೆ ತಡೆ ಕೊಟ್ಟರೆ ಪ್ರಜ್ವಲ್ ರೇವಣ್ಣ ಸಂಸದರಾಗಿಯೇ ಮುಂದುರೆಯುತ್ತಾರೆ. ಅಲ್ಲದೆ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣ ಕ್ರಿಮಿನಲ್ ಕೇಸ್ ಅಲ್ಲದೇ ಇರುವುದರಿಂದ 6 ವರ್ಷದ ಅನರ್ಹತೆ ಸಾಧ್ಯವಿಲ್ಲ ಎಂಬ ವಾದಗಳೂ ಇವೆ. ಆದರೆ ಸದ್ಯಕ್ಕೆ ಅಕ್ರಮ ಈಸ್ ಅಕ್ರಮ. ಎ.ಮಂಜು, ಹೆಚ್.ಡಿ.ರೇವಣ್ಣ, ಸೂರಜ್ ರೇವಣ್ಣಗೂ ಕಂಟಕ ತಪ್ಪಿದ್ದಲ್ಲ. ಶಾಸಕ ಸ್ಥಾನ ರದ್ದಾದರೂ ಆಗಬಹುದು.
ಕಾಮಿಡಿಯಲ್ಲ.. ಪಾಲಿಟಿಕ್ಸ್ ಇರೋದೇ ಹೀಗೆ..
ವಿಚಿತ್ರವೆಂದರೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಎದುರಾಳಿಯಾಗಿದ್ದವರು ಎ.ಮಂಜು. ಈಗ ಅರಕಲಗೂಡು ಶಾಸಕ. ದೂರು ಕೊಟ್ಟಾಗ ಬಿಜೆಪಿಯಲ್ಲಿದ್ದರು. ಅಲ್ಲಿ ಸೋತಿದ್ದಾಗ ಕೋರ್ಟ್ ಮೊರೆ ಹೋಗಿದ್ದರು. ಅದಾದ ಮೇಲೆ ಈ ವರ್ಷ ನಡೆದ ವಿಧಾನಸಭೆ ಎಲೆಕ್ಷನ್ ಹೊತ್ತಿಗೆ ಜೆಡಿಎಸ್‍ಗೆ ಬಂದರು. ಇದೇ ಪ್ರಜ್ವಲ್ ರೇವಣ್ಣ, ಹೆಚ್.ಡಿ.ರೇವಣ್ಣ, ಸೂರಜ್ ರೇವಣ್ಣ, ಹೆಚ್.ಡಿ.ಕುಮಾರಸ್ವಾಮಿ ನಿಂತು ಎ.ಮಂಜು (A.Manju) ಅವರನ್ನು ಗೆಲ್ಲಿಸಿಕೊಂಡರು. ಈಗ ಅದೇ ಜೆಡಿಎಸ್‍ನಲ್ಲಿರುವ ಎ.ಮಂಜು, ಅದೇ ಜೆಡಿಎಸ್`ನ ದೊಡ್ಡಮನೆಯ ಕುಡಿಯ ಸಂಸದ ಸ್ಥಾನಕ್ಕೆ ಕಂಟಕವಾಗಿದೆ. ಹೆಚ್.ಡಿ.ರೇವಣ್ಣ, ಸೂರಜ್ ರೇವಣ್ಣ ಅಷ್ಟೇ ಏಕೆ, ಸ್ವತಃ ಎ.ಮಂಜು ಸ್ಥಾನಕ್ಕೇ ಕಂಟಕ ತಂದಿಟ್ಟಿದೆ.



