ಕಾವೇರಿ (kaveri) ವಿಷಯದಲ್ಲಿ ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾರೆಲ್ಲ ಎಡವಿದ್ದಾರೆ, ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD kumaraswamy) ಪಟ್ಟಿಯನ್ನೇ ಮಾಡಿದ್ದಾರೆ.
ಒಗ್ಗಟ್ಟಿನ ಮಂತ್ರ ಸಭೆಗೆ ಮಾತ್ರ.. ಲಾಭವಿಲ್ಲ : ಸಂಸದರ ಸಭೆ ಕರೀತಾರೆ. ಭಾಷಣ ಮಾಡ್ತಾರೆ. ಸಭೆ ಮುಗಿಸಿ ಹೊರಬಂದು ನಾವೆಲ್ಲ ಒಗ್ಗಟ್ಟಾಗಿದ್ದೇವೆ ಅಂತಾರೆ. ಆಮೇಲೆ.. ಮತ್ತದೇ ರಾಜಕೀಯದ ಹೇಳಿಕೆ ಕೊಡ್ತಾರೆ.
ಉಪ ಮುಖ್ಯಮಂತ್ರಿಗಳು ದೆಹಲಿಯಲ್ಲಿ ಏನು ಚರ್ಚೆ ಮಾಡಿದರು, ಇವರೇನು ಹೇಳಿದರು ಎನ್ನುವ ಮಾಹಿತಿಯೂ ನನಗೆ ಇದೆ. ಹೊರ ನೋಟಕ್ಕೆ ನಾವು ಒಗ್ಗಟ್ಟಾಗಿದ್ದೇವೆ ಎಂದು ಬರೀ ಹೇಳಿಕೆ ಕೊಟ್ಟರೆ ಪ್ರಯೋಜನ ಏನಿದೆ? ಅಲ್ಲಿ ಸಂಸದರನ್ನು ಕೂರಿಸಿಕೊಂಡು ಭಾಷಣ ಮಾಡಲಿಕ್ಕೆ ಹೋಗಿದ್ದರಾ?
ಸುಪ್ರೀಂಕೋರ್ಟಿಗೆ (Supreme court) ಹೋಗ್ತೀವಿ ಅಂತಾನೇ ಕಾಲಹರಣ : ಸುಪ್ರೀಂಕೋರ್ಟಿಗೆ ಹೋಗ್ತೀವಿ ಅಂತಾರೆ. ಹಾಗೆ ಹೇಳಿಕೊಂಡೇ ಕಾಲಹರಣ ಮಾಡಿ, ನೀರು ಬಿಟ್ಟರು. ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಹಾಕಿ, ರಾಜ್ಯ ವಾಸ್ತವ ಪರಿಸ್ಥಿತಿಯನ್ನು ವಿವರಿಸುವುದು ಬಿಟ್ಟು, ಆ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವುದು ಬಿಟ್ಟು, ಅರ್ಜಿ ಸಲ್ಲಿಸುವುದಕ್ಕೆ ಆಲೋಚನೆ ಮಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ತಮಿಳುನಾಡಿಗೆ ನೀರು ಹರಿದು ಹೋಗುತ್ತಿದೆ. ಅಣೆಕಟ್ಟೆಯಲ್ಲಿ ನೀರೆಲ್ಲ ಖಾಲಿಯಾದ ಮೇಲೆ ಇವರು ಕ್ರಮ ಕೈಗೊಳ್ಳುತ್ತಾರೆಯೇ?
ಕೇವಲ ಹೇಳಿಕೆಗಳಿಗೆ ಸೀಮಿತ. ಕೆಲಸ ಆಗ್ತಿಲ್ಲ : ಬರದ ವಿಷಯಕ್ಕೆ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ಕೇಂದ್ರಕ್ಕೆ ಅರ್ಜಿ ಕೊಡುತ್ತೇವೆ ಅಂತಾರೆ. ಆದರೆ ಕಳೆದ ಒಂದು ತಿಂಗಳಿಂದಲೂ ಇದೇ ಕಾಲಹರಣದ ಹೇಳಿಕೆ ಕೊಡ್ತಿದ್ದಾರೆ.
ರಾಜ್ಯದಲ್ಲಿ ಸರಕಾರ ಬರ ಇದೆ, 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ ಎಂದು ಸ್ವತಃ ಕಂದಾಯ ಸಚಿವರೇ ಹೇಳಿದ್ದಾರೆ. ಆದರೆ ಇಷ್ಟು ದಿನ ಸರಕಾರ ಮಾಡಿದ್ದೇನು? ಕಳೆದ ಒಂದು ತಿಂಗಳಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ, ಕೇಂದ್ರ ಸರಕಾರಕ್ಕೆ ಅರ್ಜಿ ಕೊಡುತ್ತೇವೆ, ನಿಯೋಗ ಕರೆದುಕೊಂಡು ಹೋಗುತ್ತೇವೆ ಎಂದೆಲ್ಲಾ ಎಂದು ಕಾಲಹರಣ ಮಾಡಿಕೊಂಡು ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಅಷ್ಟೇ. ಆದರೆ, ಬರ ಮಾತ್ರ ಹಾಗೆಯೇ ಇದೆ, ಅದಕ್ಕೆ ಪರಿಹಾರ ಮಾತ್ರ ಸಿಕ್ಕಿಲ್ಲ. 6 ಸಾವಿರ ಕೋಟಿ ಮೌಲ್ಯದ ಬೆಳೆ ನಾಶ ಅಂದರೆ ಹುಡುಗಾಟವೇ?
ಸಮಯ ಪೋಲು ಮಾಡುವುದು ಬಿಟ್ಟು ದೆಹಲಿಗೆ ರಾಜ್ಯದ ನಿಯೋಗವನ್ನು ಕರೆದುಕೊಂಡು ಹೋಗಿ ಅರ್ಜಿ ಕೊಡಬೇಕಿತ್ತು. ಕೇಂದ್ರ ತಂಡವನ್ನು ಕರೆಸಿ ಪರಿಶೀಲನೆ ನಡೆಸಬೇಕಿತ್ತು. ಕೇಂದ್ರದಿಂದ ನೆರವು ಪಡೆಯಬೇಕಿತ್ತು. ಅದು ಬಿಟ್ಟು ಇವರ ಕಾರ್ಯಗಳೆಲ್ಲ ಕೇವಲ ಮಾತಿಗೆ ಸೀಮಿತ ಆಗಿವೆ. 195 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ಹೇಳಿಕೊಂಡು ಇನ್ನೂ ಮಾಹಿತಿ ತರಿಸಿಕೊಳ್ಳುವುದರಲ್ಲಿಯೇ ಸಮಯ ಹಾಳು ಮಾಡುತ್ತಿದ್ದಾರೆ.
ಅವರು ದೆಹಲಿಗೇ ಹೋಗ್ತಾರೆ.. ನಮ್ಮವರು ವರ್ಚುವಲ್ ಮೀಟಿಂಗ್ ಮಾಡ್ತಾರೆ. ದಾಖಲೆಗಳೂ ಇರಲ್ಲ :
ನಮ್ಮ ಅಧಿಕಾರಿಗಳ ಕೆಲಸವೋ ದೇವರಿಗೆ ಪ್ರೀತಿ. ದೆಹಲಿಯಲ್ಲಿ ನಡೆಯುವ ಸಭೆಗಳಿಗೆ ಮಾಹಿತಿ, ಅಂಕಿ ಅಂಶಗಳ ಸಮೇತ ಹೋಗಿ ಕೂತು ಚರ್ಚೆ ಮಾಡುವುದು ಬಿಟ್ಟು ಇಲ್ಲಿಂದಲೇ ವರ್ಚುಯಲ್ ಆಗಿ ಹಾಜರಾಗುತ್ತಾರೆ. ತಮಿಳುನಾಡಿನಿಂದ ಹದಿನೈದು ಜನ ಅಧಿಕಾರಿಗಳು ಹೋಗುತ್ತಾರೆ. ಇದರಿಂದ ರಾಜ್ಯಕ್ಕೆ ನ್ಯಾಯ ಸಿಗಲು ಸಾಧ್ಯವೇ?
ಈ ಎಲ್ಲವನ್ನೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಆದರೆ, ಸರ್ಕಾರದ ಉತ್ತರ ಎಂದಿನಂತೆ ಇದೆ.



