ಟೀಂ ಇಂಡಿಯಾ ಕೋಚ್ ಆದ ಮೇಲೆ ಭಾರತ ಕ್ರಿಕೆಟ್ ತಂಡ ಉನ್ನತಿ ಕಂಡಿದ್ದಕ್ಕಿಂತ ಹೆಚ್ಚಾಗಿ ಪತನದ ಹಾದಿಯಲ್ಲೇ ಇದೆ. ಭಾರತ ಕ್ರಿಕೆಟ್ ಟೀಂಗೆ ಇನ್ನೊಬ್ಬ ಗ್ರೆಗ್ ಚಾಪೆಲ್ ಆಗ್ತಿದ್ದಾರೆ ಗೌತಮ್ ಗಂಭೀರ್. ಕೇವಲ ಒಂದು ವರ್ಷದ ಹಿಂದೆ ನಂಬರ್ ಒನ್ ಆಗಿದ್ದ ಟೀಂ ಇಂಡಿಯಾ, ಸೋತು ಸೊರಗುತ್ತಿದೆ. ಆಡುವುದು ಅಂತಾರಾಷ್ಟ್ರೀಯ ಆಟಗಾರರು, ಅವರೇನು ಚಿಕ್ಕ ಹುಡುಗರಾ.. ಕೋಚ್ ಆದವರೇನು ಬ್ಯಾಟು, ಬಾಲು ಹಿಡಿದು ಪ್ರಾಕ್ಟಿಸ್ ಮಾಡಿಸ್ತಾರಾ.. ಗೈಡ್ ಮಾಡ್ತಾರೆ ಅಷ್ಟೇ ಎಂದು ವಾದಿಸುವವರಿಗೆ ಇಲ್ಲಿ ಉತ್ತರ ಇದೆ. ಗೌತಮ್ ಗಂಭೀರ್ ಕೋಚ್ ಆದ ನಂತರ.. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯವರೆಗೂ ಮಾಡಿರುವ ತಪ್ಪುಗಳೇನು ಎಂದು ದೊಡ್ಡ ಪಟ್ಟಿಯೇ ಇದೆ.
ಟಿ-20 ಕ್ರಿಕೆಟ್ʻನಲ್ಲಿ ಒಂದು ಹಂತಕ್ಕೆ ಓಕೆ ಆದರೂ, ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಅವರನ್ನು ಬೆಂಚು ಕಾಯಿಸಿದ್ದು, ಇತ್ತೀಚೆಗೆ ಅರ್ಶ್‌ದೀಪ್ ಸಿಂಗ್ ಅವರನ್ನೇ ಹೊರಗಿಟ್ಟಿದ್ದು, ಬೂಮ್ರಾಗೆ ವಿನಾಕಾರಣ ವಿಶ್ರಾಂತಿ ನೀಡಿದ್ದನ್ನು ಅಭಿಮಾನಿಗಳೇ ನೆನಪಿಸಿಕೊಳ್ತಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ಟಿನಲ್ಲಂತೂ ಗಂಭೀರ್ ಮೊದಲು ಮಾಡಿದ ಪ್ರಮಾದ ಎಂದರೆ ದಿಗ್ಗಜ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್ ಅಶ್ವಿನ್ ಅವರು ಬಲವಂತವಾಗಿ ರಿಟೈರ್‌ಮೆಂಟ್ ತೆಗೆದುಕೊಳ್ಳುವಂತೆ ಮಾಡಿದ್ದು. ಸೀನಿಯರ್ಸ್ ಇರುವಂತೆಯೇ ಹಂತ ಹಂತವಾಗಿ ಹೊಸಬರಿಗೆ ಚಾನ್ಸ್ ಕೊಡುತ್ತಾ ಹೋಗುವುದು ಹಿಂದಿನ ದ್ರಾವಿಡ್, ರವಿ ಶಾಸ್ತ್ರಿ ಹಾಕಿಕೊಟ್ಟಿದ್ದ ಸಂಪ್ರದಾಯ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್ ಟೀಂಗಳೂ ಇದನ್ನೇ ಫಾಲೋ ಮಾಡುವುದು. ಎಲ್ಲ ಸೀನಿಯರ್ಸ್ ಒಟ್ಟಿಗೇ ನಿವೃತ್ತಿ ಆಗುವುದಕ್ಕೆ ಬಿಡಲ್ಲ.
ಇನ್ನು ತಂಡದ ಕ್ರಮಾಂಕದಲ್ಲಿ ಬೇಕಾಬಿಟ್ಟಿ ಬದಲಾವಣೆ ಮಾಡುವುದು. ಉದಾಹರಣೆಗೆ ಕಳೆದ ಒಂದು ವರ್ಷದಲ್ಲಿ ಭಾರತ ಆಡಿರುವ ಟೆಸ್ಟ್‌ಗಳಲ್ಲಿ ಕೇವಲ 3ನೇ ಕ್ರಮಾಂಕವನ್ನೇ ತೆಗೆದುಕೊಂಡರೆ.. ಆ ಸ್ಥಾನದಲ್ಲಿ ಸಾಯಿ ಸುದರ್ಶನ್, ಶುಭಮನ್ ಗಿಲ್, ನಿತೀಶ್ ಕುಮಾರ್ ರೆಡ್ಡಿ, ಕರುಣ್ ನಾಯರ್, ವಾಷಿಂಗ್ಟನ್ ಸುಂದರ್.. ಹೀಗೆ ಒಟ್ಟು 8 ಜನ ಆಡಿದ್ದಾರೆ. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರ್ಡರ್ ಬೇರೆ. 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಆರ್ಡರ್ ಬೇರೆ.
ಇನ್ನು ಬೌಲಿಂಗಿನಲ್ಲೂ ಅಷ್ಟೇ. ವೇಗಕೆಕ ನೆರವಾಗುವ ಪಿಚ್ಚುಗಳಲ್ಲಿ ಸ್ಪಿನ್ನರ್ ಆಯ್ಕೆ ಮಾಡುವುದು, ಸ್ಪಿನ್ನರ್ಸ್‌ಗೆ ನೆರವು ನೀಡುವ ಪಿಚ್ಚಿನಲ್ಲಿ ಆಲ್ ರೌಂಡರ್ಸ್ ಆಡಿಸುವ ಎಡವಟ್ಟು ರಾಜ. ತಂಡಕ್ಕೆ ತೆಗೆದುಕೊಂಡ ಆಲ್ ರೌಂಡರುಗಳಿಗೆ ಬೌಲಿಂಗ್ ಕೊಡದ ಮೇಲೆ ಆಲ್ ರೌಂಡರ್ಸ್ ಆಯ್ಕೆ ಮಾಡೋದು ಏಕೆ..? ಈ ಪ್ರಶ್ನೆಗೆ ಉತ್ತರ ಇಲ್ಲ.
ಹೊಸ ತಂಡವನ್ನು ಕಟ್ಟುವವರು ಆಟಗಾರರಿಗೆ ಕನಿಷ್ಠ ಐದಾರು ಟೆಸ್ಟ್ ಆಡುವ ಅವಕಾಶ ನೀಡಬೇಕು. ಒಂದು ಮ್ಯಾಚ್ ನೋಡಿ ನಿರ್ಧಾರಕ್ಕೆ ಬರುವುದಲ್ಲ. ಗಂಭೀರ್ ಬಂದ ಮೇಲೆ 23 ಆಟಗಾರರು ಬಂದು ಹೋಗಿದ್ದಾರೆ. ಬಹುತೇಕರಿಗೆ ಆಡುವ ಅವಕಾಶವೇ ಸಿಕ್ಕಿಲ್ಲ. ಸಿಕ್ಕವರಿಗೆ ಒಂದು ಮ್ಯಾಚ್ ಅಷ್ಟೇ.
ತಮ್ಮದು ಹೊಸಬರ ತಂಡ ಎನ್ನುವ ನೆಪ ಕೊಟ್ಟಿದ್ದಾರೆ ಗಂಭೀರ್. ಆದರೆ, ತಂಡದಲ್ಲಿ ಜಡೇಜಾ, ಕೆಎಲ್ ರಾಹುಲ್, ಬೂಮ್ರಾ, ಪಂತ್, ಶುಭಮನ್ ಗಿಲ್, ಸಿರಾಜ್.. ಅನುಭವಿಗಳೇ. ಕುಲದೀಪ್ ಯಾದವ್ ಟೆಸ್ಟ್ ಆಡಿರುವುದು ಕಡಿಮೆ ಆದರೂ.. ಅಂತಾರಾಷ್ಟ್ರೀಯ ಏಕದಿನ, ಟಿ-20 ಅನುಭವಕ್ಕೆ ಕೊರತೆ ಇಲ್ಲ.
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ, ನ್ಯೂಜಿಲೆಂಡಿನ ಬೌನ್ಸಿ ಪಿಚ್ಚುಗಳಲ್ಲಿ ಸ್ಪಿನ್ನರುಗಳನ್ನು ಆಯ್ಕೆ ಮಾಡುವ ಪ್ರತಿಭೆ ಗೌತಮ್ ಗಂಭೀರ್. ಗಂಭೀರ್ ಬಂದ ಮೇಲೆ ದುರ್ಬಲ ಶ್ರೀಲಂಕಾ ಕೂಡಾ ಭಾರತವನ್ನು ಸೋಲಿಸ್ತಾ ಇದೆ. ಭಾರತದಲ್ಲಿ ಹುಲಿಯಂತೆ ಇದ್ದ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಭಾರತದಲ್ಲೂ ಸೋತಿದೆ. ಸದ್ಯಕ್ಕೆ ಗೆದ್ದಿರೋದು, ಗೆಲ್ತಿರೋದು ಬಾಂಗ್ಲಾದೇಶ, ಅಫ್ಘಾನಿಸ್ತಾನಗಳ ವಿರುದ್ಧ ಮಾತ್ರ.
ಗಂಭೀರ್ ಹಠ ಸ್ವಭಾವ, ದೂರದೃಷ್ಟಿಯ ಯೋಜನೆಗಳ ಕೊರತೆಯಿಂದಾಗಿಯೇ ತಂಡ ಸೋಲ್ತಿದೆ. ಭಾರತಕ್ಕೆ ಇನ್ನೊಬ್ಬ ಗ್ರೆಗ್ ಚಾಪೆಲ್ ಆಗ್ತಿದ್ದಾರೆ ಗೌತಮ್ ಗಂಭೀರ್.



