ಡಿಕೆ ಶಿವಕುಮಾರ್ ಅವರದ್ದು ಯಾವಾಗಲೂ ಎರಡು ಸೂತ್ರ. ಒಂದೋ ಕನ್ವಿನ್ಸ್ ಮಾಡುವುದು. ಇಲ್ಲವೇ ಕನ್ʻಫ್ಯೂಸ್ ಮಾಡುವುದು. ಈ ಬಾರಿಯೂ ಹಾಗೆಯೇ ಆಗಿದೆ. ಡಿಕೆ ಗೇಮ್ ಪ್ಲಾನ್ ಸಕ್ಸಸ್ ಆಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸಕ್ಕೆ ಕಾರ್ಕಳ ಬಿಜೆಪಿ ಶಾಸಕ ಸುನಿಲ್ ಕುಮಾರ್, ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಸುನಿಲ್ ಕುಮಾರ್ ಅವರು ಕಟ್ಟಾ ಆರೆಸ್ಸೆಸ್ಸಿಗ. ಪ್ರಖರ ಹಿಂದುತ್ವವಾದಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಷ್ಟೇ ಅಲ್ಲ, ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಈಶ್ವರಪ್ಪ ಕೂಡಾ ಡಿಕೆ ಶಿವಕುಮಾರ್ ಅವರಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ʻʻಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭ ಮೇಳದಲ್ಲಿ ಮಿಂದ, ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ, ಹಿಂದುವಾಗಿ ಹುಟ್ಟಿ ಹಿಂದುವಾಗಿಯೇ ಸಾಯುವೆ ಎಂದ, ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತʼʼ ಇದು ಸುನಿಲ್ ಕುಮಾರ್ ಅವರ ಪೋಸ್ಟರ್. ಇಲ್ಲಿ ಖರ್ಗೆಯವರು ವಿರೋಧಿಸಿದರೂ ಎನ್ನುವ ಲೈನ್ ಇದೆಯಾದರೂ.. ಈ ರೀತಿಯ ಸ್ವಾಗತವನ್ನು ಡಿಕೆಶಿ ನಿರೀಕ್ಷೆ ಮಾಡಿರಲಿಲ್ಲವೇನೋ..
ಅಂದಹಾಗೆ ಡಿಕೆ ಈ ರೀತಿಯ ಮೆಸೇಜ್ ಕೊಟ್ಟಿರುವುದು ಯಾರಿಗೆ ಎನ್ನುವ ಕುತೂಹಲವಂತೂ ಇದೆ. ಏಕೆಂದರೆ ಡಿಕೆ ಇಬ್ಬರಿಗೆ ಸಂದೇಶ ರವಾನಿಸಿದ್ದಾರೆ.
ಡಿಕೆ ಶಿವಕುಮಾರ್ ಬಿಜೆಪಿಗೆ ಹೋಗಿಬಿಡ್ತಾರೆ ಎನ್ನುವ ಅತಿರೇಕಿಗಳು ಕಾಂಗ್ರೆಸ್ಸಿನಲ್ಲೂ, ಬಿಜೆಪಿಗೆ ಬರ್ತಾರೆ ಎನ್ನುವ ಹುಚ್ಚಾಟಗಳು ಬಿಜೆಪಿಯಲ್ಲೂ ನಡೆಯುತ್ತಿವೆ. ಇವು ಅತಿರೇಕದ ಹೇಳಿಕೆಗಳೇ ಹೊರತು ಬೇರೇನಲ್ಲ. ಆದರೆ ಡಿಕೆ ಶಿವಕುಮಾರ್ ಅವರ ಈ ವರ್ತನೆ ಹೈಕಮಾಂಡ್ ಹಾಗೂ ಕಾಂಗ್ರೆಸ್ಸಿನ ಡಿಕೆಶಿ ವಿರೋಧಿಗಳು ಮುಟ್ಟಿ ನೋಡಿಕೊಳ್ಳುವ ಹಾಗೆ ಮಾಡಿದೆ ಎಂದರೆ ತಪ್ಪೇನಿಲ್ಲ.
ಡಿಕೆ ಹೆಜ್ಜೆಗಳೇನಿದ್ದವು..?
1.ಕುಂಭಮೇಳಕ್ಕೆ ಕುಟುಂಬ ಸಮೇತ ಹೋಗಿದ್ದು
2.ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದು
3.ಶಿವರಾತ್ರಿಯಂದು ಈಶಾ ಫೌಂಡೇಷನ್ ಶಿವರಾತ್ರಿಯಲ್ಲಿ ಭಾಗವಹಿಸಿದ್ದು (ಸದ್ಗುರು ರಾಹುಲ್ ಗಾಂಧಿಯವರನ್ನು ಅಪಹಾಸ್ಯ ಮಾಡಿದ್ದ ವಿಚಾರವನ್ನು ಮರೆತು)
4.ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು (ಕಾಂಗ್ರೆಸ್ ನಾಯಕರು ಪ್ರೋಟೋಕಾಲ್ ಇರುವ ವೇದಿಕೆ ಹೊರತುಪಡಿಸಿ ಬೇರೆ ವೇದಿಕೆಗಳಲ್ಲಿ ಬಿಜೆಪಿ ನಾಯಕರ ವೇದಿಕೆ ಹಂಚಿಕೊಳ್ಳೋದಿಲ್ಲ)
5.ಹಿಂದೂ ಆಗಿ ಹುಟ್ಟಿದ್ದೇನೆ. ಹಿಂದೂ ಆಗಿಯೇ ಸಾಯುತ್ತೇನೆ ಎಂಬ ಹೇಳಿಕೆ
ಈ ಎಲ್ಲವೂ ಹೈಕಮಾಂಡಿಗೆ ಕೊಟ್ಟ ವಾರ್ನಿಂಗು ಹಾಗೆಯೇ ಪಕ್ಷದಲ್ಲೇ ಇರುವ ತಮ್ಮ ವಿರೋಧಿಗಳಿಗೂ ಕೊಟ್ಟಿರುವ ಡೈರೆಕ್ಟ್ ಮೆಸೇಜ್ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇನ್ನು ಡಿಕೆ ಶಿವಕುಮಾರ್ ಬಿಜೆಪಿಗೆ ಬರುವುದಕ್ಕೆ ಸಿದ್ಧರಾಗಿದ್ದಾರೆ ಎಂಬ ಬಿಜೆಪಿಯ ಶ್ರೀರಾಮುಲು ಮೊದಲಾದವರ ಹೇಳಿಕೆಗಳು ರಾಜಕೀಯ ಅಪ್ರಬುದ್ಧತೆಯ ಸಂಕೇತವೇ ಹೊರತು, ಮತ್ತೇನಲ್ಲ. ಇದು ಕೇವಲ ಪೊಲಿಟಿಕಲ್ ಗೇಮ್. ಅಷ್ಟೇ. ಬಾಣ ಎಲ್ಲಿಗೆ ತಲುಪಬೇಕೋ.. ಅಲ್ಲಿಗೆ ತಲುಪಿದೆ.



