ರೈತ ಸಂಘದವರು (Raitha Sangha) ಇಂತಹ ಹೇಳಿಕೆ ಕೊಡೋಕೆ ಸಾಧ್ಯವಾ..? ಇಂತಹ ಹೇಳಿಕೆ ಕೊಡೋದು ತಪ್ಪಲ್ಲವಾ.. ಎಂದೆಲ್ಲ ವಿನಾಕಾರಣ ಪ್ರಶ್ನೆಗಳೇನೂ ಬೇಡ. ಇಂತಹ ಹೇಳಿಕೆಗೆ ಕಾರಣವಾಗಿರೋದು ಸಚಿವ ಶಿವಾನಂದ ಪಾಟೀಲ್ (Ministre Shivananda Patil) ಅವರ ವಿವಾದಾತ್ಮಕ ಹೇಳಿಕೆಯೇ.
ಇತ್ತೀಚೆಗೆ ರೈತರ (Riots suicide) ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ರೈತರ ಆತ್ಮಹತ್ಯೆಗೆ ಕಾರಣ ಸರ್ಕಾರ ಕೊಡುತ್ತಿರುವ ಹಣ ಎನ್ನುವ ಶಿವಾನಂದ ಪಾಟೀಲರ (Shivananda patil) ಹೇಳಿಕೆಯೇ ರೈತ ಸಂಘದವರು (Raitha Sangha) ಈ ಮಟ್ಟಿಗೆ ತಿರುಗಿ ಬೀಳೋಕೆ ಕಾರಣ.
ರೈತರ ಆತ್ಮಹತ್ಯೆ ಪ್ರಕರಣಗಳು 2015ಕ್ಕೂ ಮೊದಲು ಕಡಿಮೆಯಿದ್ದವು. ಆದರೆ ಸರ್ಕಾರ .5 ಲಕ್ಷ ಪರಿಹಾರ ಕೊಡಲು ಆರಂಭಿಸಿದ ನಂತರ ಪ್ರಕರಣಗಳು ವರದಿಯಾಗುವುದು ಹೆಚ್ಚಾಗುತ್ತಿದೆ. ವೀರೇಶ್ ಸಮಿತಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು .2 ಲಕ್ಷ ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಸೇರಿ ಎಲ್ಲವನ್ನೂ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ. ಆತ್ಮಹತ್ಯೆ ಎಂದು ಎಫ್ಐಆರ್ ದಾಖಲಾದ ಎಲ್ಲ ಪ್ರಕರಣಗಳು ರೈತ ಆತ್ಮಹತ್ಯೆಗಳಲ್ಲ. ನಿಜವಾದ ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಕೊಡಲು ಸರ್ಕಾರ ಸಿದ್ಧವಿದೆ. ರೈತ ಆತ್ಮಹತ್ಯೆ ಎಂದು ಎ.ಸಿ. ಸಮಿತಿಯಲ್ಲಿ ತೀರ್ಮಾನ ಮಾಡಬೇಕಾಗುತ್ತದೆ. ಎಫ್ಎಸ್ಎಲ್ ವರದಿ ಬಂದ ಮೇಲೆಯೇ ಅದು ದೃಢಪಡುತ್ತದೆ. ರಾಜ್ಯದಲ್ಲಿ 2020ರಲ್ಲಿ 500, 2021ರಲ್ಲಿ 595, 2022ರಲ್ಲಿ 651 ಹಾಗೂ 2023ರಲ್ಲಿ 412 ರೈತ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ ಎಂದಿದ್ದಾರೆ ಶಿವಾನಂದ ಪಾಟೀಲ್.
ಸಚಿವರ ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಹಾವೇರಿಯ ಗುರುಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಮುಗಿಸಿ ಹೊರಬರುವಾಗ ಶಿವಾನಂದ ಪಾಟೀಲ ಅವರಿಗೆ ಮುತ್ತಿಗೆ ಹಾಕಿದರು. ನಿಮ್ಮ ಹೇಳಿಕೆಯನ್ನು ತಕ್ಷಣ ವಾಪಸ್ ಪಡೆದು ರೈತರಲ್ಲಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು. ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಸಚಿವ ಶಿವಾನಂದ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳಲಿ. ರೈತ ಸಂಘದಿಂದ .50 ಲಕ್ಷ ಪರಿಹಾರ ಕೊಡುತ್ತೇವೆ. ಸಚಿವರು ಈ ರೀತಿ ಲಘುವಾಗಿ ಹೇಳಿಕೆ ನೀಡಿದ್ದು ಖಂಡನೀಯ. ಯಾವುದೇ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.
ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಚಿವ ಶಿವಾನಂದ ಪಾಟೀಲ್ ಹೆಚ್ಚಿನ ಪರಿಹಾರ ಸಿಗುತ್ತೆ ಎಂಬ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದು ನಾನು ಹೇಳಿಯೇ ಇಲ್ಲ. ಈ ಬಗ್ಗೆ ಯಾರೂ ತಪ್ಪು ಗ್ರಹಿಕೆ ಮಾಡಿಕೊಳ್ಳುವುದು ಬೇಡ. ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿಯಿಂದ ರೈತರು ಆತಂಕಕ್ಕೆ ಒಳಗಾಗುತ್ತಾರೆ. ಇದರ ಪರಿಣಾಮ ವ್ಯತಿರಿಕ್ತವಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ವಿವಾದವಾಗುತ್ತಿದ್ದಂತೆಯೇ ತಾವು ಹಾಗೆ ಹೇಳಿಲ್ಲ. ಮಾಧ್ಯಮಗಳು ತಿರುಚಿ ಹೇಳಿವೆ ಎನ್ನುವುದು ರಾಜಕಾರಣಿಗಳ ಅಭ್ಯಾಸ. ಶಿವಾನಂದ ಪಾಟೀಲರೂ ಅದನ್ನೇ ಮಾಡಿದ್ದಾರೆ.



