ನಾಯಕ ತನ್ನ ಕೊಲೆಗೆ ತಾನೇ ಹಣ ಕೊಟ್ಟು ಸುಪಾರಿ ಕೊಡ್ತಾನೆ. ಶಶಿಕುಮಾರ್, ಸಿಲ್ಕ್ ಸ್ಮಿತಾ ಅಭಿನಯದ ಸಿನಿಮಾ ಅದು. ತಾನು ಆತ್ಮಹತ್ಯೆ ಮಾಡಿಕೊಂಡರೆ, ಇನ್ಷೂರೆನ್ಸ್ ಹಣ ಸಿಗುವುದಿಲ್ಲ. ಆದರೆ ಕೊಲೆಯಾದರೆ ಸಿಗುತ್ತದೆ ಎನ್ನುವ ಕಾರಣಕ್ಕೆ, ತನ್ನ ಕೊಲೆಗೆ ತಾನೇ ಸುಪಾರಿ ಕೊಡ್ತಾನೆ ಹೀರೋ. ನಾಯಕ.. ಯಾವುದೋ ಲಾಭಕ್ಕಾಗಿ, ತೊಂದರೆಯಿಂದ ತಪ್ಪಿಸಿಕೊಳ್ಳೋಕೆ ತನ್ನ ಕೊಲೆಗೆ ತಾನೇ ಸುಪಾರಿ ಕೊಟ್ಟುಕೊಳ್ಳೋ ಸಿನಿಮಾ. ಇಂತಹ ಸಿನಿಮಾಗಳು ಹಲವಾರು ಬಂದಿವೆ. ಅದು ಸಿನಿಮಾ. ಇಲ್ಲಿ ನಿಜವಾಗಿಯೂ ನಡೆಯುತ್ತಿದೆ. ಟರ್ಕಿ, ಅಜರ್ ಬೈಜಾನ್ ಮಾಡುತ್ತಿರುವುದು ಇದನ್ನೇ. ನಮ್ಮ ಕೊಲೆಗೆ ನಾವೇ ಸುಪಾರಿ ಕೊಡ್ತಿದ್ದೇವೆ. ಹೇಗೆ.. ವಿವರವಾಗಿ ನೋಡಿ.
ಟರ್ಕಿ, ಅಜರ್ ಬೈಜಾನ್.. ದೊಡ್ಡ ದೇಶಗಳೇನಲ್ಲ. ಆದರೆ ಒಳ್ಳೆಯ ಪ್ರವಾಸಿ ತಾಣಗಳಿವೆ. ಸಿನಿಮಾ ಚಿತ್ರೀಕರಣವೂ ಸರಳ. ಹೀಗಾಗಿ ಬಹುತೇಕ ಸಿನಿಮಾಗಳು ಇಲ್ಲಿ ಶೂಟಿಂಗ್ ಆಗುತ್ತಿದ್ದವು. ಮೊದಲು ಬಾಲಿವುಡ್ ಚಿತ್ರಗಳನ್ನಷ್ಟೇ ಶೂಟಿಂಗ್ ಆಗುತ್ತಿದ್ದ ದೇಶಗಳಲ್ಲಿ ಭಾರತದ ಎಲ್ಲ ಭಾಷೆಗಳ ಚಿತ್ರಗಳೂ ಚಿತ್ರೀಕರಣವಾಗುತ್ತಿದ್ವು. ಇದೀಗ ಅವುಗಳಿಗೆ ಬ್ರೇಕ ಹಾಕುವುದಕ್ಕೆ ಚಿತ್ರರಂಗ ನಿರ್ಧಾರ ಮಾಡಿದೆ. ಕಾರಣ, ಆಪರೇಷನ್ ಸಿಂದೂರ.
ಕಾರಣ, ಇಷ್ಟೇ. ನಾವು ಅಲ್ಲಿಗೆ ಪ್ರವಾಸ ಹೋಗುತ್ತೇವೆ. ನಮ್ಮ ಹಣ ಖರ್ಚು ಮಾಡಿ, ಟರ್ಕಿಗೆ ಲಾಭ ಮಾಡುತ್ತೇವೆ. ಹಾಗೆ ನಮ್ಮ ಹಣದಿಂದ ಲಾಭ ಪಡೆದವರು, ಕೊನೆಗೆ ನಮ್ಮನ್ನು ಕೊಲ್ಲೋದಕ್ಕೆ ಪಾಕಿಸ್ತಾನಕ್ಕೆ ಆಯುಧ ಕೊಡ್ತಾರೆ. ಸೈನಿಕರನ್ನೂ ಕೊಡ್ತಾರೆ. ಅಂದರೆ ಅರ್ಥ, ಸಿಂಪಲ್.. ನಮ್ಮನ್ನು ಕೊಲ್ಲುವುದಕ್ಕೆ ನಾವೇ ಸುಪಾರಿ ಕೊಟ್ಟಿದ್ದೇವೆ.
ಪಹಲ್‌ಗಾಂ ಅಟ್ಯಾಕ್ ನಂತರ ಭಾರತ ನಡೆಸಿದ ಪ್ರತೀಕಾರ ದಾಳಿಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರ ಬೇಟೆ ಆಗಿದೆ. ಈ ವೇಳೆ ಪಾಕ್ ನಡೆಸಿದ ಕೌಂಟರ್ ದಾಳಿಯಲ್ಲಿ ಭಾರತ ಹೆಚ್ಚೂ ಕಡಿಮೆ ಸಾವಿರ ಡ್ರೋಣ್, ಮಿಸೈಲುಗಳನ್ನು ಹೊಡೆದು ಹಾಕಿದೆ. ಈ ವೇಳೆ ಟರ್ಕಿ, ಅಜರ್ ಬೈಜಾನ್ ನೆರವು ನೀಡಿರುವುದು ಗೊತ್ತಾಗಿದೆ. ಟರ್ಕಿಯ ಡ್ರೋಣ್‌ಗಳೂ ಸಿಕ್ಕಿವೆ. ಅಷ್ಟೇ ಅಲ್ಲ, ಭಾರತದ ದಾಳಿಯಲ್ಲಿ ಟರ್ಕಿಯ ಇಬ್ಬರು ಸೈನಿಕರೂ ಸತ್ತಿದ್ದಾರೆ. ಭಾರತದ ವಿರುದ್ಧ ದಾಳಿ ಮಾಡುವುದಕ್ಕೆಂದೇ ಟರ್ಕಿ ಕಳಿಸಿದ್ದ ಸೈನಿಕರು ಅವರು. ಇದು ಬಹಿರಂಗವಾಗುತ್ತಿದ್ದಂತೆಯೇ ಟರ್ಕಿಯನ್ನು ಎಲ್ಲ ವ್ಯಾಪಾರದಿಂದ ಬ್ಯಾನ್ ಮಾಡಲು ಮುಂದಾಗಿದ್ದಾರೆ ಭಾರತೀಯರು.
ಟರ್ಕಿಯಿಂದ ಆಮದಾಗುತ್ತಿದ್ದ ಆಪಲ್, ಡ್ರೈಫ್ರೂಟ್ಸ್ʻಗಳನ್ನು ವ್ಯಾಪಾರಿಗಳು ಬ್ಯಾನ್ ಮಾಡಿದ್ದಾರೆ. ಇನ್ನು ಟರ್ಕಿ, ಅಜರ್ ಬೈಜಾನ್‌ಗೆ ಹೋಗುತ್ತಿದ್ದ ಪ್ರವಾಸಿಗರು ಪ್ರವಾಸ ರದ್ದು ಮಾಡಿದ್ದಾರೆ. ಟೂರಿಂಗ್ ಪ್ರಮೋಷನ್ ಆಪ್ʻಗಳು ಆಪ್ ಪ್ರಮೋಷನ್ ನಿಲ್ಲಿಸಿವೆ. ಉದ್ಯಮಿಗಳು, ಟರ್ಕಿ ಜೊತೆಗಿನ ವ್ಯಾಪಾರ ರದ್ದು ಮಾಡುವ ಪ್ರಕ್ರಿಯೆ ಶುರು ಮಾಡಿದ್ದಾರೆ.
ಇದಕ್ಕೆಲ್ಲ ಕಾರಣ ಇಷ್ಟೇ. ನಮ್ಮನ್ನು ಕೊಲ್ಲೋದಕ್ಕೆ ನಾವೇ ಸುಪಾರಿ ಕೊಟ್ಟಂತೆ ಆಗುತ್ತದೆ ಎನ್ನುವುದು. ಅಂದರೆ ಟರ್ಕಿ, ಅಜರ್ ಬೈಜಾನ್ ಜೊತೆ ಮಾಡಿದ ವ್ಯಾಪಾರದಿಂದ ಬರುವ ಲಾಭವನ್ನು ಅವರು ಭಾರತದ ವಿರುದ್ಧವೇ ಬಳಸುತ್ತಾರೆ. ಅದರರ್ಥ.. ನಮ್ಮನ್ನು ಕೊಲ್ಲಿ ಎಂದು ನಾವೇ ಸುಪಾರಿ ಕೊಟ್ಟಂತೆ ಎನ್ನುವುದು. ಎರಡನೆಯದ್ದು ಉಗ್ರರ ವಿರುದ್ಧ ಸೈನಿಕರು ಹೋರಾಡುತ್ತಾರೆ, ನಾಗರಿಕರಾದ ನಮ್ಮ ಪಾಲಿನ ಹೋರಾಟವೂ ಇರಲಿ ಎನ್ನುವುದಷ್ಟೇ.
ಅಂದಹಾಗೆ ಎಲ್ಲವೂ ಬಹಿರಂಗವಾದ ಮೇಲೆ ಟರ್ಕಿ ಅದು ನಾವಲ್ಲ ನಾವಲ್ಲ ಎನ್ನುತ್ತಿದೆ. ಮಾನವೀಯತೆಯ ಭಾಷಣ ಬಿಗಿಯುತ್ತಿದೆ. ಮಾನವೀಯತೆಗೆ ಶರಣಾದರೆ.. ಮರಣ ಫಿಕ್ಸ್ ಎನ್ನುವುದು ಸತ್ಯ.
‘ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿಯ ಜೊತೆ ಚಿತ್ರರಂಗ ನಂಟು ಇಟ್ಟುಕೊಂಡರೆ ಇದರಿಂದ ಭಾರತದ ಭದ್ರತೆಗೆ ತೊಂದರೆ ಆಗುತ್ತದೆ. ಈ ಸಂದರ್ಭದಲ್ಲಿ ಟರ್ಕಿಯನ್ನು ಬಹಿಷ್ಕರಿಸಬೇಕು ಎಂದು ಎಲ್ಲ ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಕಲಾವಿದರಿಗೆ ಒತ್ತಾಯಿಸುತ್ತೇವೆ’ ಎಂದು ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ ಪತ್ರ ಬರೆದಿದೆ. ಈಗಾಗಲೇ ಪಾಕ್ ಕಲಾವಿದರನ್ನು ಹಾಗೂ ತಂತ್ರಜ್ಞರನ್ನು ಭಾರತೀಯ ಚಿತ್ರರಂಗದಿಂದ ಹೊರಗೆ ಇಡಲಾಗಿದೆ. ಪಾಕಿಸ್ತಾನದಿಂದ ನಿರ್ಮಾಣವಾದ ಯಾವುದೇ ಮನರಂಜನಾ ಕಂಟೆಂಟ್ಗಳನ್ನು ಭಾರತದಲ್ಲಿ ಪ್ರಸಾರ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಮೊದಲೇ ಆದೇಶ ಹೊರಡಿಸಿದೆ.
ಇದೆಲ್ಲದರ ಮಧ್ಯೆ ಅಮೀರ್ ಖಾನ್, ಸಲ್ಮಾನ್ ಖಾನ್ ತಗ್ಲಾಕ್ಕೊಂಡಿದ್ದಾರೆ. ಆಗಿದ್ದೇನಂದರೆ ಅಮೀರ್ ಖಾನ್ ಅವರು 2020ರಲ್ಲಿ ಟರ್ಕಿಯ ಅಧ್ಯಕ್ಷರನ್ನು ಭೇಟಿ ಮಾಡಿ, ಟರ್ಕಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಟ್ಟಿದ್ದರು. ಟರ್ಕಿಯನ್ನು ಹಾಡಿಹೊಗಳಿದ್ದರು. ಇನ್ನು ಸಲ್ಮಾನ್ ಖಾನಾ ಅವರೂ ಟರ್ಕಿ ಜೊತೆ ವಿಶೇಷ ಸಂಬಂಧ ಇಟ್ಟುಕೊಂಡವರು. ಅಷ್ಟೇ ಅಲ್ಲ, ಇತ್ತೀಚೆಗೆ ಕದನ ವಿರಾಮ ಘೋಷಣೆಯಾದಾಗ ಸಂತಸ ವ್ಯಕ್ತಪಡಿಸಿದ್ದರು. ಶಾರೂಕ್ ಕೂಡಾ ಇದರಿಂದ ಹೊರತಲ್ಲ. ಬೇರೆ ನಟರೂ ನಟಿಸಿದ್ದಾರೆ. ಆದರೆ ಯಾರೂ ಕೂಡಾ ಖಾನ್ʻಗಳಂತೆ ಟರ್ಕಿಯನ್ನು ಅದ್ಭುತ ದೇಶ ಎಂದು ಪ್ರಮೋಟ್ ಮಾಡಿಲ್ಲ. ಹೀಗಾಗಿ ಈ ನಟರ ಚಿತ್ರಗಳನ್ನೂ ಬಾಯ್ಕಾಟ್ ಮಾಡಿ ಎಂದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.