ರಾಜ್ಯದಾದ್ಯಂತ ವಕ್ಫ್ ಆಸ್ತಿ ಯಾವುದು.. ರೈತರ ಆಸ್ತಿ ಯಾವುದು.. ಎಂಬ ಗೊಂದಲದಲ್ಲಿರುವಾಗಲೇ ಸಚಿವ ಜಮೀರ್ ಅಹ್ಮದ್ ನೋಟಿಸ್ ಕೊಟ್ಟಿದ್ದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ನೋಟಿಸ್ ಕೊಟ್ಟಿರುವುದು ಕೇವಲ ವಿಜಯಪುರದಲ್ಲಿ ಅಲ್ಲ, ಬೀದರ್, ದಾವಣಗೆರೆ, ಚಿತ್ರದುರ್ಗ, ಹೊನ್ನಾಳಿ, ಚಳ್ಳಕೆರೆ, ಧಾರವಾಡ.. ಹೀಗೆ ಬಹುತೇಕ ಕಡೆ ರೈತರಿಗೆ ನೋಟಿಸ್ ಕೊಡಲಾಗಿದೆ. ಕೆಲವು ಕಡೆ ಒಬ್ಬನೇ ಒಬ್ಬ ಮುಸ್ಲಿಂ ಇಲ್ಲದ ಕಡೆಯೂ ನೋಟಿಸ್ ಕೊಡಲಾಗಿದೆ. ಚಿತ್ರದುರ್ಗದಲ್ಲಿ ಮಾದಿಗ ಸಮುದಾಯದವರ ಭೂಮಿ, ವಕ್ಫ್‌ಗೆ ಸೇರಿದ್ದು ಎನ್ನಲಾಗುತ್ತಿದೆ. ಬೀದರಿನಲ್ಲಿ ಕೇಂದ್ರ ಸರ್ಕಾರದ ಯೋಜನೆಗೆ ತೆಗೆದುಕೊಂಡಿರುವ ಭೂಮಿಯ ವಾರಸುದಾರರಾಗಿ ವಕ್ಫ್ʻನವರು ಬಂದಿದ್ದಾರೆ. ರೈತರಿಗೆ ಅಲ್ಲಿ ಹಣವೂ ಇಲ್ಲ. ಪರಿಹಾರವೂ ಇಲ್ಲ. ಅಷ್ಟೆಲ್ಲ ಯಾಕೆ.. ವಿಜಯಪುರದ ಸಿಂಧಗಿಯಲ್ಲಿರುವ ವಿರಕ್ತ ಮಠದ ಆಸ್ತಿಯೂ ನಮ್ಮದು ಎಂದು ವಕ್ಫ್ʻನವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲೆಡೆ ಗೊಂದಲವೋ ಗೊಂದಲ. ಇದರ ನಡುವೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯಪುರದ ಹೊನವಾಡು ಗ್ರಾಮದಲ್ಲಿ ಆಗಿರುವ ವಕ್ಫ್ ವಿವಾದದ ಬಗ್ಗೆಯಷ್ಟೇ ಮಾತನಾಡಿರುವ ಜಮೀರ್ ಅಹ್ಮದ್ ನಾವು ವಕ್ಫ್ ಕಾನೂನು ಪ್ರಕಾರ ಮಾಡುತ್ತಿದ್ದೇವೆ ಅಷ್ಟೇ ಎಂದಿದ್ದಾರೆ.
ʻʻಬೇರೆಯವರ ಆಸ್ತಿ ತಗೋಳೋಕೆ ನಾವು ಯಾರು? ರೈತರ ಆಸ್ತಿ ಮುಟ್ಟೋಕೆ ಸಾಧ್ಯ ಇಲ್ಲ. ರೈತರು ಅನ್ನದಾತರು. ನಾವು ಅವರ ಆಸ್ತಿ ಮುಟ್ಟಿಸೋಕೆ ಸಾಧ್ಯನಾ.? ವಕ್ಫ್ ಆಸ್ತಿ ಒಂದು ಲಕ್ಷ 12 ಸಾವಿರ ಎಕರೆ ಇದೆ. ನಮ್ಮ ಬಳಿ ದಾಖಲೆ ಇದೆ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ನಮಗೆ ಒಂದು ಲಕ್ಷ 12 ಸಾವಿರ ಎಕರೆ ದಾನ ಮಾಡಿದ್ದಾರೆ. ನಾನು 11 ಜಿಲ್ಲೆಯಲ್ಲಿ ವಕ್ಫ್ ಅದಾಲತ್ ಮಾಡಿದ್ದೇನೆ. ಅಧಿಕಾರಿಗಳ ಸಭೆ ಮಾಡಿದ್ದೇನೆ. ರೈತರ ಆಸ್ತಿ ತಗೋಳೊಕೆ ಸಾಧ್ಯನಾ..? ಅಧಿಕಾರಿ ಅಷ್ಟು ಸುಲಭವಾಗಿ ಮಾಡ್ತಾರಾ.? ರೈತರ ಆಸ್ತಿಯನ್ನು ಮುಟ್ಟೋಕೆ ಆಗಲ್ಲ, ಇದೊಂದು ರಾಜಕೀಯ ಪಿತೂರಿ ಎಂದಿದ್ದಾರೆ.
ವಿಜಯಪುರದಲ್ಲಿಯೂ ವಕ್ಫ್ ಸಭೆ ಮಾಡಿದ್ದರಂತೆ. ಆ ಸಭೆಗೆ ಯತ್ನಾಳ್ ಅವರನ್ನೂ ಕರೆದಿದ್ದರಂತೆ. ವಿಜಯಪುರ ಜಿಲ್ಲೆಯಲ್ಲಿ 1200 ಎಕರೆ ಇಲ್ಲವೇ ಇಲ್ಲ. ಕೇವಲ ಇರೋದು ಕೇವಲ 12 ಎಕರೆ. ಅಲ್ಲಿ 11 ಎಕರೆ ಸ್ಮಶಾನ ಇದೆ. ನಾವು ಒಂದಿಂಚೂ ಜಾಗ ತಗೆದುಕೊಂಡಿಲ್ಲ. ನಮ್ಮ ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ. ಬೇರೆಯವರು ಆಸ್ತಿ ತೆಗೆದುಕೊಳ್ಳುವುದಕ್ಕೆ ನಾವು ಯಾರು? ರೈತರ ಆಸ್ತಿ ಮುಟ್ಟೋಕೆ ಸಾಧ್ಯ ಇಲ್ಲ ನಮ್ಮ. ಆಸ್ತಿಗೆ ನಾವು ನೋಟಿಸ್ ಕೊಟ್ಟಿದ್ದೇವೆ.. ತಪ್ಪೇನಿದೆ ಅನ್ನೋದು ಜಮೀರ್ ಅಹ್ಮದ್ ಪ್ರಶ್ನೆ.
ಮುಜರಾಯಿ, ವಕ್ಫ್ ಎರಡು ಒಂದೇ. ನಾವು ಅಲ್ಲಾ ಅಂತೀವಿ,ನೀವು ದೇವರು ಅಂತೀರಿ. ಅಲ್ಲಾ ನಮ್ಮ ನಂಬಿಕೆ. ಯಾರು ಏನಾದರೂ ಹೇಳಲಿ. ನಾನು ಮೊದಲು ಹಿಂದೂಸ್ತಾನಿ. ಆಮೇಲೆ ಮುಸ್ಲಿಂ ಎಂದು ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಬಿಜೆಪಿಯವರದು ಬರೀ ಹಿಂದೂ ಮುಸ್ಲಿಂ. ಸಾಧನೆ ಸೊನ್ನೆ. ರಾಜಕೀಯ ಬೇಳೆ ಬೇಯಸೋಕೆ ಇವರು ಮಾತಾಡುತ್ತಿದ್ದಾರೆ. ನಾವು ಯಾವ ರೈತರಿಗೂ ಕಾನೂನು ಬಾಹಿರವಾಗಿ ನೋಟಿಸ್ ಕೊಟ್ಟಿಲ್ಲ ಎಂದಿರುವ ಜಮೀರ್ ಅಹ್ಮದ್ ಇದು ಬಿಜೆಪಿಯ ಹುನ್ನಾರ. ಬಿಜೆಪಿಯವರ ಕಾಲದಲ್ಲಿ ನೋಟಿಸ್ ಕೊಟ್ಟಿದ್ದಾರೆ. ನಾನು ದಾಖಲೆ ಕೊಡುತ್ತೇನೆ ಎಂದು ಗುಡುಗಿದ್ದಾರೆ.
ವಿಜಯಪುರ ಜಿಲ್ಲಾಧಿಕಾರಿ ಹೇಳಿದ್ದೇನು..?
ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಸಚಿವ ಜಮಿರ್ ಅಹಮ್ಮದ್ ಖಾನ್ ಅವರ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ ಎಂದು ಹೇಳಿದ್ದಾರೆ. ವಕ್ಫ್ ಸಚಿವರು ಒತ್ತುವರಿ ಜಾಗ ತೆರವುಗೊಳಿಸುವಂತೆ ಹೇಳಿದ್ದರು. ಸಚಿವ ಜಮೀರ್ ಸೂಚನೆ ಮೇರೆಗೆ ಒತ್ತುವರಿ ತೆರವು ಮಾಡಿದ್ದೇವೆ. ಇಂದೀಕರಣ ಅಂದರೆ ಗಣಕೀಕರಣ ಸತತವಾಗಿ ನಡೆಯುತ್ತೆ. ಪ್ರತಿ ವರ್ಷವೂ ಗಣಕೀಕರಣ ಆಗಿವೆ. ನೋಟಿಸ್ ಕೊಡದೆಯೂ ಇಂದೀಕರಣ ಆದ ಉದಾಹರಣೆ ಇವೆ ನೋಟಿಸ್ ಕೊಟ್ಟ ತಕ್ಷಣ ಖಾತಾ ಬದಲಾವಣೆ ಆಗುವುದಿಲ್ಲ. ಭೂಮಾಲೀಕರು ಹಾಗೂ ವಕ್ಫ್‌ಗೆ ನಾವು ನೊಟೀಸ್ ಕೊಟ್ಟಿದ್ದೇವೆ. ಎರಡೂ ಪಾರ್ಟಿಗಳಿಗೆ ಕರೆದು ವಿಚಾರಣೆ ನಡೆಸುತ್ತೇವೆ. ಕಾಲಂ ನಂ.9ರಲ್ಲಿ ಹಾಗೂ ಮಾಲೀಕತ್ವ ಜಾಗದಲ್ಲಿ ವಕ್ಫ್ ಹೆಸರು ಹಾಕಿಲ್ಲ, 44 ಆಸ್ತಿಗಳಿಗೆ ನೋಟಿಸ್ ಕೊಡದೆ ಇಂದೀಕರಣ ಮಾಡಿದ್ದೇವೆ. ಆದರೆ ಅವರ ಮಾಲೀಕತ್ವ ಬದಲಾಗಲ್ಲ. ಇಂಡಿ ತಹಶೀಲ್ದಾರ್ ನೋಟಿಸ್ ಕೊಡದೆ ಗಣಕೀಕರಣ ಮಾಡಿದ್ದಾರೆ. 41 ಖಾತೆಗಳಿಗೆ ನೋಟಿಸ್ ಕೊಡದೆ ಗಣಕೀಕರಣ ಮಾಡಿದ್ದಾರೆ. 41 ಗಣಕೀಕರಣಗಳನ್ನೂ ಕ್ಯಾನ್ಸಲ್ ಮಾಡಿದ್ದೇವೆ ಅನ್ನೋದು ಜಿಲ್ಲಾಧಿಕಾರಿ ಕೊಟ್ಟಿರುವ ಸ್ಪಷ್ಟನೆ.



