ದರ್ಶನ್ ಜೊತೆ ಸಂಧಾನ ಅಸಾಧ್ಯ ಎನ್ನುತ್ತಿರುವ ರೇಣುಕಾಸ್ವಾಮಿಯವರ ತಂದೆ ಅಕಸ್ಮಾತ್ ದರ್ಶನ್ ಮನೆಗೆ ಬಂದರೆ ಊಟ ಮಾಡು ಅಂತಾರಂತೆ. ನಾವು ಜಂಗಮರು, ಯಾರನ್ನೂ ಹೊರಗೆ ಕಳಿಸುವ ಮಾತೇ ಇಲ್ಲ. ಶತ್ರುಗಳು ಬಂದರೂ ಅಷ್ಟೆ, ಊಟ ಮಾಡಿಸಿ ಕಳಿಸ್ತೇವೆ. ಹಾಗಂತ ಕಾನೂನು ಹೋರಾಟ ನಿಲ್ಲಲ್ಲ ಎಂದಿದ್ದಾರೆ ರೇಣುಕಾಸ್ವಾಮಿ ತಂದೆ ಕಾಶೀನಾಥ್.
ಚಿತ್ರದುರ್ಗದ ರೇಣುಕಾಸ್ವಾಮಿ ದರ್ಶನ್ & ಗ್ಯಾಂಗ್ʻನಿಂದ ಕೊಲೆಯಾಗಿದ್ದಾರೆ. ಅರೆಸ್ಟ್ ಆಗಿದ್ದಾರಾದರೂ.. ಕಾನೂನಿನಲ್ಲಿ ಕೋರ್ಟಿನಲ್ಲಿ ಅದು ಸಾಬೀತಾಗಿಲ್ಲ. ಈ ನಡುವೆ ದರ್ಶನ್ ಮತ್ತು ರೇಣುಕಾಸ್ವಾಮಿ ಅವರ ಕುಟುಂಬದ ಮಧ್ಯೆ ರಾಜೀ ಸಂಧಾನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಕೇಸಿನಿಂದ ಬಚಾವ್ ಆಗಲು ದರ್ಶನ್ ಯತ್ನಿಸುತ್ತಿದ್ದಾರೆ ಎಂಬ ಮಾತುಗಳೂ ಇವೆ. ಇವುಗಳಿಗೆ ಉತ್ತರ ಕೊಟ್ಟಿದ್ದಾರೆ ಕಾಶೀನಾಥ್.
’ದರ್ಶನ್ ಜೊತೆ ರಾಜಿ ಸಂಧಾನ ಅಸಾಧ್ಯ’ ಅನ್ನೋದು ರೇಣುಕಾಸ್ವಾಮಿ ಕುಟುಂಬದವರ ಮಾತು. ಹಾಗಂತ ದರ್ಶನ್ ಮನೆಗೆ ಬಂದ್ರೆ ಬರಬೇಡ ಅನ್ನೋಕಾಗಲ್ಲ. ದರ್ಶನ್ ಮನೆಗೆ ಬಂದರೆ ಅವರಿಗೆ ಗೌರವ ಕೊಟ್ಟೇ ಕೊಡುತ್ತೇವೆ ಎಂದಿದ್ದಾರೆ ಕಾಶೀನಾಥ್.
ʻನಾವು ಜಂಗಮರು. ನಮ್ಮ ಮನೆಗೆ ಯಾರೇ ಬಂದರೂ ಬರಲಿ. ನಾವು ಯಾರನ್ನೂ ದ್ವೇಷ ಮಾಡಲ್ಲ. ಗೌರವ ಕೊಡ್ತೀವಿ. ದರ್ಶನ್ ಮನೆಗೆ ಬಂದಾಗ ನೋಡೋಣ. ಎಲ್ಲರಿಗೂ ಗೌರವ ಕೊಡುವುದು ನಮ್ಮ ಧರ್ಮʼ ಎಂದಿದ್ದಾರೆ ರೇಣುಕಾಸ್ವಾಮಿ.
ಆದರೆ.. ‘’ದರ್ಶನ್ ಜೊತೆ ಸಂಧಾನ ಅಸಾಧ್ಯ. ಮಗನನ್ನ ಕಳೆದುಕೊಂಡು ನಮ್ಮ ಸಂಕಟ ನಮಗೆ. ಕಾನೂನು ಹೋರಾಟ ನಡೆಯುತ್ತಿದೆ. ನ್ಯಾಯದ ಪರವಾಗಿ ಹೋರಾಡುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಕಠಿಣ ಶಿಕ್ಷೆ ಆಗಬೇಕು. ನಾವು ಯಾರನ್ನೂ ದ್ವೇಷ ಮಾಡಲ್ಲ. ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಬೇಕು ’’ ಎಂದು ಆಗ್ರಹಿಸಿದ್ದಾರೆ. ಆದರೆ.. ದರ್ಶನ್ ಏನಾದರೂ.. ರೇಣುಕಾಸ್ವಾಮಿ ಮನೆಗೆ ಹೋಗಿ, ಸಹಾಯ ಮಾಡಿದರೆ.. ಅದು ಅವರಿಗೆ ಅನುಕೂಲವಾಗುವುದಕ್ಕಿಂತ ಪ್ರತಿಕೂಲವೇ ಆಗಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಪೊಲೀಸರು ಆಗಸ್ಟ್ ತಿಂಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸುವ ಸಾಧ್ಯತೆ ಇದೆ. ಚಾರ್ಜ್‌ಶೀಟ್ ಹಾಕಿದ ಮೇಲೆ ದರ್ಶನ್ ಪರ ವಕೀಲರು ಜಾಮೀನು ಪಡೆಯುವ ಸಾಧ್ಯತೆ ಹೆಚ್ಚು. ಇದುವರೆಗೆ ಜಾಮೀನು ಅರ್ಜಿ ಸಲ್ಲಿಸಿಲ್ಲ. ಆದರೆ.. ಇಲ್ಲಿ ಇನ್ನೊಂದು ಟ್ವಿಸ್ಟ್ ಕೂಡಾ ಇದೆ. ಈ ಹಿಂದೆ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರು. ಆ ಪ್ರಕರಣದಲ್ಲಿ 25 ದಿನ ಜೈಲು ಶಿಕ್ಷೆ ಅನುಭವಿಸಿದ್ದ ದರ್ಶನ್ ನಂತರ ಪತ್ನಿ ವಿಜಯಲಕ್ಷ್ಮಿ ಕ್ಷಮಿಸಿದ ಮೇಲೆ ಬಚಾವ್ ಆಗಿದ್ದರು. ಅಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಯೇ ಸಂತ್ರಸ್ತೆಯಾಗಿದ್ದರು.
ಆದರೆ.. ಇಲ್ಲಿ ನಡೆದಿರುವುದು ಕೊಲೆ. ಹಲ್ಲೆಯಲ್ಲ, ಹೊಡೆದಾಟ ಅಲ್ಲ. ಆಕಸ್ಮಿಕವೂ ಅಲ್ಲ. ವ್ಯವಸ್ಥಿತ ಸಂಚು ಮಾಡಿಯೇ ಮಾಡಿರೋ ಕೊಲೆ. ಒಂದು ಜೀವ ಹೋಗಿದೆ. ಇಲ್ಲಿ ರಾಜೀ ಸಂಧಾನ ನಡೆದರೆ.. ಅದು ದರ್ಶನ್ ಅವರಿಗೆ ಸಹಕಾರಿಯಾಗಲಿದೆ ಎಂದು ಹೇಳುವುದು ಸಾಧ್ಯವೇ ಇಲ್ಲ. ರಾಜೀ ಸಂಧಾನ ಮಾಡಿಕೊಂಡಿದ್ದೇವೆ ಎಂಬ ಮಾತುಗಳನ್ನು ಕಾನೂನು, ಕೋರ್ಟ್ ಲೆಕ್ಕಕ್ಕೇ ತೆಗೆದುಕೊಳ್ಳವುದಿಲ್ಲ. ಇನ್ನೂ ಒಂದು ವಿಷಯವೆಂದರೆ.. ದರ್ಶನ್ ಹಾಗೇನಾದರೂ.. ರೇಣುಕಾಸ್ವಾಮಿಯವರ ಮನೆಗೆ ಹೋಗಿ ಸಾಂತ್ವನ ಹೇಳುವ, ನೆರವು ನೀಡುವ ಮಾತನ್ನಾಡಿದರೆ.. ಅದು ದರ್ಶನ್ ವಿರುದ್ಧ ಮತ್ತೊಂದು ಪ್ರಬಲ ಸಾಕ್ಷಿಯಾಗುತ್ತದೆ. ಏಕೆಂದರೆ ದರ್ಶನ್ & ಗ್ಯಾಂಗ್ ಬಚಾವ್ ಆಗಬೇಕು ಎಂದರೆ.. ತಾವು ಕೊಲೆಯನ್ನು ಮಾಡಿಲ್ಲ ಎಂದೇ ವಾದಿಸಿ ಗೆಲ್ಲಬೇಕು. ಈ ಸಂದರ್ಭದಲ್ಲಿ ಇನ್ನೊಂದು ಸಾಕ್ಷಿಯನ್ನು ತಾವೇ ಪೊಲೀಸರಿಗೆ ಕೊಡುವ ತಪ್ಪನ್ನಂತೂ ಮಾಡುವುದಿಲ್ಲ ಎನ್ನುವ ಮಾತುಗಳೂ ಇವೆ. ಏಕೆಂದರೆ ಅದೊಂದು ಘಟನೆ ನಡೆದುಬಿಟ್ಟರೆ ಕೊಲೆ ಮಾಡಿದ್ದೇನೆ ಎಂದು ಸ್ವತಃ ಒಪ್ಪಿಕೊಂಡಂತೆ ಆಗುತ್ತದೆ. ಅಂತಹ ಎಡವಟ್ಟಿಗೆ ದರ್ಶನ್ ಆಗಲೀ, ಆತನ ಪರ ವಕೀಲರಾಗಲಿ ಬಿಡುತ್ತಾರೆ ಎಂದು ನಂಬುವುದು ಕಷ್ಟ.



