ಧರ್ಮಸ್ಥಳದಲ್ಲೀಗ ತಲೆಬುರುಡೆಯದ್ದೇ ಸುದ್ದಿ. ಅಲ್ಲೀಗ ಭಕ್ತರಿಗಿಂತ ಹೆಚ್ಚಾಗಿ ಅನಾಮಿಕ ಭೀಮನದ್ದೇ ಆಕರ್ಷಣೆ. ಎಸ್‌ಐಟಿ, ಧರ್ಮಸ್ಥಳದಲ್ಲೇ ಬೀಡುಬಿಟ್ಟಿರುವ ಕಾರಣ, ಬಹುತೇಕ ಭಕ್ತರು ಧರ್ಮಸ್ಥಳದಿಂದ ದೂರ ಉಳಿದಿದ್ದಾರೆ. ಈ ನಡುವೆ ಅನಾಮಿಕನ ತಲೆಬುರುಡೆ ಕೇಸ್ʻನಲ್ಲಿ ಗಟ್ಟಿತನ ಇಲ್ಲ. ಅದೊಂದು ಬುರುಡೆ ಎಂಬ ಸೂಚನೆ ಸಿಗುತ್ತಿದ್ದಂತೆಯೇ ಕಾಂಗ್ರೆಸ್ ಸಡನ್ ಯುಟರ್ನ್ ತೆಗೆದುಕೊಂಡಿದೆ.
ಸಿಎಂ ಸಿದ್ಧರಾಮಯ್ಯ ಎಸ್‌ಐಟಿ ರಚಿಸಿ, ತನಿಖೆಗೆ ಆದೇಶ ಕೊಟ್ಟರೇನೋ ಸರಿ. ಆದರೆ.. ತನಿಖೆಯಲ್ಲಿ ಏನೂ ಸಿಗದೆ ಉಲ್ಟಾ ಹೊಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಸೈಲೆಂಟ್ ಆಗಿದ್ದ ಬಹುತೇಕ ಕಾಂಗ್ರೆಸ್ಸಿಗರು ಸಡನ್ ಹಿಂದುತ್ವ ಜಪ ಮಾಡೋದಕ್ಕೆ ಮುಂದಾದ್ರು. ಡಿಸಿಎಂ ಡಿಕೆ ಶಿವಕುಮಾರ್ ʻಇದರ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ಯʼ ಇದೆ ಎಂದರೆ, ಸಚಿವ ದಿನೇಶ್ ಗುಂಡೂರಾವ್ ಅವರು ʻಎಡಪಂಥೀಯರ ಒತ್ತಡಕ್ಕೆ ಮಣಿದು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕಾಯ್ತುʼ ಎಂದರು. ಅಷ್ಟೇ ಅಲ್ಲ, ನಾನು ವೀರೇಂದ್ರ ಹೆಗ್ಗಡೆಯವರನ್ನೂ ಗೌರವಿಸುತ್ತೇನೆ ಎಂದುಬಿಟ್ಟರು.
ನಂತರ ನೋಡ ನೋಡುತ್ತಲೇ.. ರಾಮಲಿಂಗಾ ರೆಡ್ಡಿ, ಗೃಹ ಸಚಿವ ಪರಮೇಶ್ವರ್, ಬೇಳೂರು ಗೋಪಾಲಕೃಷ್ಣ, ಶಿವಲಿಂಗೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್.. ಮೊದಲಾದವರೆಲ್ಲ ಬಿಜೆಪಿಗಿಂತಲೂ ತೀವ್ರವಾಗಿ ಮಾತನಾಡುವುದಕ್ಕೆ ಶುರು ಮಾಡಿದರು. ಅದನ್ನು ನೋಡಿ ಈಗ ಬಿಜೆಪಿಯೇ ಕಕ್ಕಾಬಿಕ್ಕಿಯಾಗಿರುವುದಂತೂ ಸತ್ಯ.
ಈಗ ಬಿಜೆಪಿಯವರು ಧರ್ಮಸ್ಥಳಕ್ಕೆ ಕಾರ್ ಯಾತ್ರೆ ಹೋಗಿದ್ದಾರೆ. ವಿಜಯೆಂದ್ರ, ಆರ್ ಅಶೋಕ್, ಎಸ್ ಆರ್ ವಿಶ್ವನಾಥ್, ಚಲವಾದಿ ನಾರಾಯಣ ಸ್ವಾಮಿ, ಸುನಿಲ್ ಕುಮಾರ್, ವಸಂತ್ ಬಂಗೇರ,.. ಸೇರಿದಂತೆ ಬಿಜೆಪಿಯ ಬಹುತೇಕ ಶಾಸಕರು, ಅವರ ಬೆಂಬಲಿಗರು ಧರ್ಮಸ್ಥಳ ಪ್ರವೇಶ ಮಾಡುತ್ತಿದ್ದಾರೆ. ರಾತ್ರಿಯಿಡೀ ಅಲ್ಲಿದ್ದು, ಬೆಳಗ್ಗೆ ಮಂಜುನಾಥನ ದರ್ಶನ ಮಾಡಿ ವಾಪಸ್ ಆಗುವುದು ಅವರ ಉದ್ದೇಶ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣದ ತನಿಖೆಯ ಬಗ್ಗೆ ಸ್ಪಷ್ಟನೆ ನೀಡಿದ್ದು, ತನಿಖೆ ನಿಸ್ಪಕ್ಷಪಾತವಾಗಿ ನಡೆಯುತ್ತಿದೆ, ಯಾವುದೇ ಒತ್ತಡ ಹೇರಿಲ್ಲ. ಪ್ರಕರಣ ರಾಜಕೀಯ ತಿರುವನ್ನು ಹಾಗೂ ಧಾರ್ಮಿಕ ತಿರುವು ಪಡೆದುಕೊಳ್ಳಬಾರದು. ಧರ್ಮಸ್ಥಳದ ಬಗ್ಗೆ ಭಕ್ತಿ ಇದೆ. ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರನ್ನು ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದೆ. ಅವರು ಇಸ್ಲಾಂ ಧರ್ಮದವರು ಎಂದು ಅವರನ್ನು ಅಲ್ಲಿ ಬೇರೆ ರೀತಿಯಲ್ಲಿ ನೋಡಿರಲಿಲ್ಲ. ಪದ್ಮಶ್ರೀ ಗೌರವ ವೀರೇಂದ್ರ ಹೆಗ್ಡೆ ಅವರಿಗೆ ಸುಮ್ಮನೆ ಕೊಟ್ರಾ? ಹೆಣ್ಣು ಮಕ್ಕಳಿಗೆ ಜೀವನ ಕೊಡುವ ಕೆಲಸ ಮಾಡಿದ್ದಾರೆ. ಶಿಕ್ಷಣ ಕೊಡುವ ಕೆಲಸ ಮಾಡಿದ್ದಾರೆ. ಆದರೆ ಆರೋಪದ ಬಗ್ಗೆ ಸತ್ಯ ಹೊರಬರಬಾರದಾ? ಈ ನಿಟ್ಟಿನಲ್ಲಿ ಎಸ್‌ಐಟಿ ರಚನೆ ಮಾಡಲಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಸಮರ್ಥನೆ ಏನು..?
ಧರ್ಮಸ್ಥಳದ ಮೇಲೆ ಪದೇ ಪದೇ ಆರೋಪ ಬರುತ್ತಿದೆ. ಆರೋಪಮುಕ್ತರಾಗುವುದಕ್ಕೆ ಇರುವ ಅವಕಾಶ ಎಂದರೆ, ಅದು ಸುಳ್ಳು ಎಂದು ಸಾಬೀತು ಮಾಡುವುದು. ತನಿಖೆಯನ್ನೇ ನಡೆಸದೆ.. ಏನೇ ಮಾಡಿದರೂ.. ಆರೋಪಗಳು ಶಾಶ್ವತವಾಗಿ ಉಳಿಯುತ್ತಿದ್ದವು. ಈಗ ಅವುಗಳಿಗೆ ಮುಕ್ತಿ ಸಿಕ್ಕಂತಾಗಿದೆ ಎನ್ನುವುದು ಕಾಂಗ್ರೆಸ್ ವಾದ. ಅಂದಹಾಗೆ ಎಸ್‌ಐಟಿ ರಿಪೋರ್ಟ್ ಕೊಟ್ಟ ಮೇಲೆ, ಅನಾಮಿಕ ಹಾಗೂ ಆತನ ಹಿಂದಿರುವವರ ತನಿಖೆಯೂ ನಡೆಯಲಿದೆಯಂತೆ.



